2nd ಫೆಬ್ರವರಿ ೨೦೧೮

ತಮಿಳುನಾಡಿನಲ್ಲಿ ರಂಗೇರಿದ ರಾಜಕೀಯದ ಬೆಳ್ಳಿಪರದೆ

ಆಶ್ಚರ್ಯವೆಂದರೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳೂ ವಿಜಯೋತ್ಸವವನ್ನು ಆಚರಿಸುತ್ತಿವೆ. ಎಡಪ್ಪಾಡಿ ಪಳನಿಸ್ವಾಮಿ ಮತ್ತು ಓ.ಪನ್ನೀರ್‍ಸೆಲ್ವಂರವರ ಸರ್ಕಾರ ಜಯಲಲಿತಾ ಇಲ್ಲದೆಯೂ ಒಂದು ವರ್ಷ ಪೂರೈಸಿದ ಯಶಸ್ಸಿನ ಸಂಭ್ರಮದಲ್ಲಿದ್ದರೆ, 2ಜಿ ಪ್ರಕರಣಗಳಲ್ಲಿ ಖುಲಾಸೆಗೊಂಡ ಸಂಭ್ರಮದಲ್ಲಿ ಡಿಎಮ್‍ಕೆಯ ರಾಜಾ ಮತ್ತು ಕನಿಮೋಳಿ ಸಿಹಿ ಹಂಚುತ್ತಿದ್ದಾರೆ. ಅತ್ತ ಆರ್.ಕೆ.ನಗರದ ಚುನಾವಣೆಯನ್ನು ಭಾರೀ ಬಹುಮತದಲ್ಲಿ ಗೆದ್ದು ಚುನಾವಣಾ ಆಯೋಗಕ್ಕೇ ಚಳ್ಳೆಹಣ್ಣು ತಿನ್ನಿಸಿದ ಖುಷಿಯಲ್ಲಿ ಟಿಟಿವಿ ದಿನಕರನ್ ಬೀಗುತ್ತಿದ್ದಾರೆ. ತನ್ನ ಟ್ವಿಟರ್ ಉಲಿಗಳಿಗೆ ಸಿಕ್ಕಿರುವ ಪ್ರಚಾರವನ್ನು ಕಂಡು ಕಮಲಹಾಸನ್ ಉಬ್ಬಿಹೋಗಿದ್ದರೆ, ರಾಜಕೀಯ ಸೇರಿದ ಹೊಸ ಉಮೇದಿನಲ್ಲಿ ತಲೈವರ್ ರಜನೀಕಾಂತ್ ತಮ್ಮ ಅಭಿಮಾನಿಗಳಿಗೆ ಸೆಲ್ಫಿ ನೀಡುವುದರಲ್ಲಿ ಮುಖ ಅರಳಿಸಿದ್ದಾರೆ. ರಜನೀಕಾಂತ್ ರಾಜಕೀಯ ಪ್ರವೇಶದಿಂದ ಡಿಎಮ್‍ಕೆ ಪಕ್ಷದ ಜಯ ಸುಲಭವೆಂಬ ಮೀಡಿಯಾ ಸರ್ವೆ ಫಲಿತಾಂಶ ನೋಡಿ ಸ್ಟಾಲಿನ್ ಕೂಡಾ ಪುಳಕಿತರಾಗಿದ್ದಾರೆ.

ಇದುವೇ ತಮಿಳುನಾಡಿನ ಅಸಂಗತ ರಾಜಕೀಯದ ಬೆಳ್ಳಿಪರದೆಯಲ್ಲಿ ಕಾಣಿಸುತ್ತಿರುವ ತರಹೇವಾರಿ ವಿದ್ಯಮಾನಗಳು. ಜಯಲಲಿತಾ ಸಾವಿನ ನಂತರ ಉಂಟಾಗಿರುವ ರಾಜಕೀಯ ಶೂನ್ಯತೆಯ ಸನ್ನಿವೇಶದಲ್ಲಿ ಎಲ್ಲಾ ಪಕ್ಷಗಳೂ ಮತ್ತು ಎಲ್ಲಾ ನೇತಾರರೂ ಅಖಾಡಕ್ಕೆ ಧುಮುಕಿದ್ದಾರೆ. ಎಲ್ಲರಿಗೂ ಕೈಕುಲುಕಿ ಕರೆಯುತ್ತಿರುವಂತಿರುವ ತಮಿಳುನಾಡು ಮತದಾರರು ಕಡೆಯಲ್ಲಿ ಯಾರ ಕೊರಳಿಗೆ ಜಯಮಾಲೆ ಹಾಕುವರೆಂಬ ಊಹಾಪೋಹ ಶುರುವಾಗಿದೆ. ಮುಂದಿನ 2019ರ ಲೋಕಸಭೆಯ ಚುನಾವಣೆಯನ್ನು ಸೆಮಿಫೈನಲ್‍ನಂತೆ ನೋಡಬಯಸುತ್ತಿರುವ ರಾಜಕೀಯ ಪಕ್ಷಗಳು ನಂತರದ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಬಲಪ್ರದರ್ಶನಕ್ಕೆ ಸಜ್ಜಾಗುತ್ತಿವೆ.

ಆರ್.ಕೆ.ನಗರದ ಮರುಚುನಾವಣೆಯಲ್ಲಿ 89,000 ಮತ ಪಡೆದ ಟಿಟಿವಿ ದಿನಕರನ್ ತಮ್ಮ ಸಮೀಪ ಸ್ಪರ್ಧಿ ಎಐಡಿಎಮ್‍ಕೆಯ ಮಧುಸೂದನನ್‍ಗಿಂತ ಸುಮಾರು ನಲವತ್ತು ಸಾವಿರ ಮತಗಳ ಅಂತರದಲ್ಲಿ ಭಾರಿ ಜಯಗಳಿಸಿದರು. ಡಿಎಮ್‍ಕೆ ಅಭ್ಯರ್ಥಿ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಬೇಕಾಯಿತು. ಯಥೇಚ್ಛ ಹಣಚೆಲ್ಲಿದ ಟಿಟಿವಿ ದಿನಕರನ್ ಪಡೆದ ಮತಗಳು ಪ್ರಜಾಪ್ರಭುತ್ವದ ಘನತೆಯನ್ನೇ ಹಾದಿಬೀದಿಗಳಲ್ಲಿ ಎಳೆದಾಡಿದ ಹಾಗಾಯಿತು. ಹಣಚೆಲ್ಲಿ ಯಾರಾದರೂ ಎಲ್ಲಿಯಾದರೂ ಚುನಾವಣೆ ಗೆಲ್ಲಬಹುದಾದ ಪರಿಸ್ಥಿತಿಯಲ್ಲಿ ನಾವೆಲ್ಲರೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಹೊಂದಿರುವ ಗೌರವವನ್ನೇ ಅಣಕಿಸುವಂತಾಯಿತು. ಇದು ಕೇವಲ ಒಂದು ಕ್ಷೇತ್ರದ ಮರುಚುನಾವಣೆಯಲ್ಲಿ ಮಾತ್ರ ನಡೆಯಬಹುದಾದ ಚಮತ್ಕಾರ ಎಂದು ನಾವು ನಮಗೆ ಸಮಾಧಾನ ಮಾಡಿಕೊಂಡರೂ, ಪ್ರಜಾಪ್ರಭುತ್ವದ ಬಗ್ಗೆ ಕೆಲವು ಮತದಾರರ ಅಸಡ್ಡೆ ಮತ್ತು ನಿರ್ಲಿಪ್ತತೆ ಕಂಡು ಗಾಭರಿಯುಂಟಾಗುತ್ತಿದೆ.

2ಜಿ ಹಗರಣದ ಮೇಲಿನ ತೀರ್ಪು ಕೂಡಾ ನಾವೆಲ್ಲರೂ ಅಪೇಕ್ಷಿಸಿದ್ದ ಫಲಿತಾಂಶಕ್ಕೆ ವ್ಯತಿರಿಕ್ತವಾಗಿದೆ. ಈ ಹಗರಣವು ಸಾರ್ವಜನಿಕ ಚರ್ಚೆಗೆ ಮೊದಲು ಒಳಗಾದಾಗ ದೇಶದ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಿ, ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಸದೇ ನೀಡಿದ್ದ 122 2ಜಿ ಲೈಸೆನ್ಸ್‍ಗಳನ್ನು ರದ್ದು ಮಾಡಿದ್ದು ಕಂಡು ತುಸುವಾದರೂ ನೆಮ್ಮದಿ ಸಿಕ್ಕಿತ್ತು. ಆದರೆ ಈ ತೀರ್ಪಿನಲ್ಲಿ 2ಜಿ ಲೈಸೆನ್ಸ್ ನೀಡಿರುವ ಪ್ರಕ್ರಿಯೆಯಲ್ಲಿ ಕಣ್ಣಿಗೆ ಕಾಣುವ ಯಾವುದೇ ಭ್ರಷ್ಟಾಚಾರ ನ್ಯಾಯಾಲಯದ ದೃಷ್ಟಿಗೆ ನಿಲುಕದೇ ಇರುವುದು ಅತ್ಯಂತ ಆಘಾತಕಾರಿ ಸಂಗತಿ. ಈ ತೀರ್ಪಿಗೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲಾಗುತ್ತಿದೆಯಾದರೂ ಈ ಪ್ರಕರಣದ ಚರಮಗೀತೆಯನ್ನು ನಾವು ಈಗಲೇ ಹಾಡಿದರೂ ತಪ್ಪೇನಿಲ್ಲ ಎಂದು ಎಲ್ಲರಿಗೂ ಅನ್ನಿಸುತ್ತಿದೆ.

ಕಮಲಾಹಸನ್ ರಾಜಕೀಯ ಪ್ರವೇಶವನ್ನು ತಮಿಳುನಾಡಿನಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ತಮ್ಮ ಟ್ವೀಟ್‍ಗಳಿಂದ ಇಂಗ್ಲೀಷ್ ದೃಶ್ಯಮಾಧ್ಯಮದ ಗಮನ ಸೆಳೆದಿರುವ ಕಮಲ್, ಈಗ ಸಿಕ್ಕಿರುವ ಪ್ರಚಾರದ ಯಶಸ್ಸನ್ನು ಆಚರಿಸಿ ಸುಮ್ಮನಾಗಿಬಿಡುವುದು ಲೇಸು. ಆದರೆ ಒಮ್ಮೆ ಅಗ್ಗದ ಪ್ರಚಾರ ದೊರೆತ ‘ಸಮಾಜ ಸೇವಕ’ನಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರಲು ಸಾಧ್ಯವಾಗುವುದಿಲ್ಲ. ಕಮಲ್ ಇನ್ನಷ್ಟು ಪ್ರಚಾರ ಪಡೆಯುತ್ತ ಖುಷಿಪಟ್ಟರೂ, ಅವರು ತಮಿಳುನಾಡಿನ ರಾಜಕೀಯದಲ್ಲಿ ಯಾವುದೇ ಪ್ರಭಾವ ಹೊಂದಿಲ್ಲದಿರುವುದು ಸ್ಪಷ್ಟವಾಗಿದೆ.

ಆದರೆ ರಜನೀಕಾಂತ್‍ರವರ ರಾಜಕೀಯ ಪ್ರವೇಶ (ಕ್ಷಮಿಸಿ, ರಾಜಕೀಯದ ರಜನಿ ಪ್ರವೇಶ!) ಎಲ್ಲರ ನಿದ್ದೆ ಕೆಡಿಸಿದೆ. ಮುಖ್ಯವಾಗಿ ಅಣ್ಣಾ ಡಿಎಮ್‍ಕೆಯ ಎರಡೂ ಬಣಗಳಿಗೆ ತಮ್ಮ ಕಾಲಬುಡದಲ್ಲಿಯೇ ಮರಳು ಕುಸಿಯುತ್ತಿರುವ ಅನುಭವವಾಗುತ್ತಿದೆ. ಪರಂಪರಾಗತವಾಗಿ ಡಿಎಮ್‍ಕೆ ಪಕ್ಷಕ್ಕೆ ಗ್ರಾಮೀಣ ಬಲಾಢ್ಯರ ಬೆಂಬಲ ದೊರೆತಿದ್ದರೆ, ಅಣ್ಣಾ ಡಿಎಮ್‍ಕೆ ಪಕ್ಷಕ್ಕೆ ಅಮಾಯಕ-ಅಸಹಾಯಕ ವರ್ಗಗಳ ಬೆಂಬಲ ದೊರೆಯುತ್ತಿತ್ತು. ಬಹುತೇಕ ದಲಿತ ಮತ್ತು ಹಿಂದುಳಿದ ಜಾತಿಗಳ ಈ ವರ್ಗ, ವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟಕ್ಕೆ ‘ಕ್ರಾಂತಿಕಾರಿ ನಾಯಕ’ ಎಂಜಿಆರ್ ಮತ್ತು ಪುರಚ್ಚಿ ತಲೈವಿ ಜಯಲಲಿತಾ ದನಿಯಾಗುವರೆಂದು ನಂಬಿತ್ತು. ಎಮ್‍ಜಿಆರ್ ಮತ್ತು ಜಯಲಲಿತಾ ಇಬ್ಬರೂ ಈ ನಂಬಿಕೆ ಹುಸಿಯಾಗದಂತೆ ದೀನದಲಿತ ವರ್ಗಗಳ ಪರವಾಗಿ ಜನಪ್ರಿಯ ಕಾರ್ಯಕ್ರಮಗಳನ್ನು ಮತ್ತು ಶಿಸ್ತುಬದ್ಧ ಪೊಲೀಸ್ ರಕ್ಷಣೆಯನ್ನೂ ನೀಡಿದ್ದರು. ಆದರೆ ಈಗ ಈ ವರ್ಗಗಳಿಗೆ ಪಳನಿಸ್ವಾಮಿ ಮತ್ತು ಪನ್ನೀರ್‍ಸೆಲ್ವಂರವರ ನಾಯಕತ್ವದಲ್ಲಿ ತಮ್ಮ ಹಿತರಕ್ಷಣೆಯಾಗದೇನೋ ಎಂಬ ಅಳುಕು ಕಾಡುತ್ತಿದೆ. ಹಾಗಾಗಿ ಶೇಕಡಾ ನಲವತ್ತಕ್ಕೂ ಹೆಚ್ಚಿರುವ ಈ ಮತದಾರರು ನಾಯಕನ ಹುಡುವಿಕೆಯಲ್ಲಿರುವಂತೆ ಭಾಸವಾಗುತ್ತದೆ. ಈ ಕೊರತೆಯನ್ನು ತುಂಬಲೇ ಈಗ ತಮಿಳುನಾಡಿನಲ್ಲಿ ಭರ್ಜರಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ರಜನೀಕಾಂತ್‍ರವರು ಸದ್ಯದಲ್ಲಿಯೇ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಗಳನ್ನು ಘೋಷಿಸಿ ಪೂರ್ಣಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕಬಹುದು. ಆದರೆ ತಲೈವರ್ ರಜನಿಯ ಮುಂದೆ ಹಲವಾರು ಗಂಭೀರ ಸವಾಲುಗಳಿವೆ.

  1. ತಮ್ಮ ಅಭಿಮಾನಿ ಸಂಘಗಳನ್ನು ಪಕ್ಷದ ಕಛೇರಿಗಳನ್ನಾಗಿಸಿಕೊಳ್ಳುವಲ್ಲಿ ಮತ್ತು ಈ ಅಭಿಮಾನಿ ಸಂಘಗಳ ಪದಾಧಿಕಾರಿಗಳನ್ನು ಸ್ಥಳೀಯ ಮಟ್ಟದಲ್ಲಿ ಮುಖಂಡರನ್ನಾಗಿ ಮಾಡುವ ಗೋಜಲಿದೆ. ಈ ಸಂದರ್ಭದಲ್ಲಿ ರಜನಿ ಸ್ಥಳೀಯ ಜಾತಿ ಸಮೀಕರಣ ಮತ್ತು ಸ್ಥಳೀಯ ಮುಖಂಡರಿಗೆ ಮಣೆ ಹಾಕಬೇಕಾಗುತ್ತದೆ.
  2. ತಮ್ಮ ಅಭಿಮಾನಿ ಬಳಗವನ್ನು ಚುನಾವಣೆಯಲ್ಲಿ ಮತದಾರ ಬಳಗವನ್ನಾಗಿ ಪರಿವರ್ತನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ರಜನಿ ಅಭಿಮಾನಿಗಳಲ್ಲಿ ಅನೇಕರು ಬೇರೆ ಪಕ್ಷಗಳ ಕಟ್ಟಾ ಬೆಂಬಲಿಗರಾದ್ದಿರಬಹುದು.
  3. ‘ದುಡ್ಡೇ ದೊಡ್ಡಪ್ಪ’ನಾಗಿರುವ ತಮಿಳುನಾಡಿನ ರಾಜಕೀಯದಲ್ಲಿ ಹೊಸದಾಗಿ ಪಕ್ಷ ಕಟ್ಟುವ ದಿನಗಳಲ್ಲಿ ಹಣ ಚೆಲ್ಲುವ ಬಗ್ಗೆ ರಜನಿಯ ನಿಲುವು ಮತ್ತು ಉದಾರತೆಯನ್ನು ಕಾದುನೋಡಬೇಕಾಗಿದೆ. ಹೊಸ ಪಕ್ಷದ ಹುರಿಯಾಳುಗಳಾಗುವ ಹಲವರಲ್ಲಿ ಹಣದ ಕೊರತೆ ಸ್ವಾಭಾವಿಕವಾಗಿಯೇ ಇರಬಹುದಾಗಿದ್ದು ಆ ಸಂದರ್ಭದಲ್ಲಿ ರಜನಿಯ ರಣತಂತ್ರವಿನ್ನೂ ಹೊರಬರಬೇಕಿದೆ.
  4. ಭ್ರಷ್ಟಾಚಾರಮುಕ್ತ ಸರ್ಕಾರವು ತನ್ನ ಗುರಿಯೆಂದು ರಜನಿ ಘೋಷಣೆ ಮಾಡಿದ್ದರೂ ತಮಿಳುನಾಡಿನ ಜನಮಾನಸದ ಕಲ್ಪನೆಯನ್ನು ಆಕರ್ಷಿಸುವ ಚುನಾವಣಾ ಸೂತ್ರವನ್ನು ರಜನಿ ಕಂಡುಕೊಳ್ಳಬೇಕಾಗಿದೆ. ‘ಒಳ್ಳೆಯ ಆಡಳಿತ’ವೆಂಬ ಮರೀಚಿಕೆಯನ್ನು ಜನ ನಂಬಲಾಗದೆ ಆಮಿಷಗಳಿಗೆ ಬಲಿಯಾಗುತ್ತಿರುವ ಸನ್ನಿವೇಶದಲ್ಲಿ ಜನರನ್ನು ಹೇಗೆ ಒಳ್ಳೆಯ ರಾಜಕೀಯದ ಸಾಧ್ಯತೆಗಳ ಬಗ್ಗೆ ನಂಬಿಕೆ ಹುಟ್ಟಿಸಿ ಸಜ್ಜುಗೊಳಿಸುವುದು ಎಂಬ ಸವಾಲು ಕೂಡಾ ರಜನಿಯ ಮುಂದಿದೆ.
  5. ಎರಡು ರಾಷ್ಟ್ರೀಯ ಪಕ್ಷಗಳು, ಮೂರು ಮುಖ್ಯ ಪ್ರಾದೇಶಿಕ ಪಕ್ಷಗಳು ಹಾಗೂ ಹತ್ತಾರು ಸಣ್ಣ ರಾಜಕೀಯ ಪಕ್ಷಗಳಿರುವ ತಮಿಳುನಾಡಿನಲ್ಲಿ ರಜನಿ ಯಾವ ರಾಜಕೀಯ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. ಯಾರೊಡನೆಯೂ ಹೋಗದಿದ್ದರೆ ಏಕಾಂಗಿಯಾಗಿಬಿಡುವ ಮತ್ತು ಯಾರ ಜೊತೆ ಹೋದರೂ ಆ ಪಕ್ಷಗಳ ಜೊತೆ ‘ಬ್ರಾಂಡ್’ ಆಗಿಬಿಡುವ ಅಪಾಯದಲ್ಲಿ ರಜನಿ ಇದ್ದಾರೆ. ರಾಜಕೀಯದಲ್ಲಿ ಆಧ್ಯಾತ್ಮಿಕತೆ ಬೇಕೆಂದು ರಜನಿ ಹೇಳಿದ್ದರೂ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿಲ್ಲ. ಅಸೆಂಬ್ಲಿ ಚುನಾವಣೆಯವರೆಗೂ ಒಬ್ಬಂಟಿಯಾಗಿಯೇ ಹೋಗುವ ಅನಿವಾರ್ಯತೆಯಲ್ಲಿ ರಜನಿಯ ಜನಪ್ರಿಯತೆಯ ಅಗ್ನಿಪರೀಕ್ಷೆ ಮುಂದಿನ ದಿನಗಳಲ್ಲಿ ನಡೆಯಲಿದೆ.

ಉಳಿದ ಚಿತ್ರವನ್ನು ತಮಿಳು ಬೆಳ್ಳಿಪರದೆಯ ಮೇಲೇ ನೋಡಬೇಕಿದೆ. ಬೆಂಗಳೂರಿನ ನಮ್ಮ ರಜನಿಗೆ ‘ರೈಟ್’ ಎಂದು ಹೇಳುತ್ತಾ ತಮಿಳುನಾಡಿಗೆ ಶುಭ ಹಾರೈಸೋಣ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮