2nd February 2018

ಬಿಟ್ ಬೈ ಬಿಟ್ ಕಾಯಿನ್ ಆದ ‘ತಂತ್ರಗುಪ್ತ ಹಣ’

—ಮೋಹನದಾಸ

ಭಾರತದಲ್ಲಿ ಈ ಹಣದ ವಿನಿಮಯಕ್ಕೆ ತಾನು ಪರವಾನಗಿ ನೀಡಿಲ್ಲವೆಂದು ಹೇಳಿರುವ ಆರ್‍ಬಿಐ, ಈ ತಂತ್ರಗುಪ್ತ ಹಣದ ವಿನಿಮಯ ದೇಶದ ಕಾನೂನಿಗೆ ವಿರುದ್ಧವೆಂದೂ ಘೋಷಿಸಿದೆ.

ದಿನೇದಿನೇ ಪ್ರಚಾರ ಪಡೆಯತ್ತಾ ವಿಶ್ವದೆಲ್ಲೆಡೆ ಜನಪ್ರಿಯವಾಗುತ್ತಿರುವ ಬಿಟ್ ಕಾಯಿನ್ ಎಂಬ ತಂತ್ರಗುಪ್ತ ಹಣ (ಕ್ರಿಪ್ಟೋ ಕರೆನ್ಸಿ) ಎಲ್ಲಾ ದೇಶಗಳ ಸರ್ಕಾರಗಳ, ಕೇಂದ್ರೀಯ ಬ್ಯಾಂಕುಗಳ ಮತ್ತು ತೆರಿಗೆ ಇಲಾಖೆಗಳ ನಿದ್ದೆ ಕೆಡಿಸಿದೆ. ಸಾಂಪ್ರದಾಯಿಕ ಬ್ಯಾಂಕುಗಳ ಮತ್ತು ಸ್ಥಾಪಿತ ಆರ್ಥಿಕ ವ್ಯವಸ್ಥೆಗಳ ಹೊರಗೆ ಸೇವೆ-ಸರಕುಗಳ ವಿನಿಮಯಕ್ಕೆ ಪರ್ಯಾಯವಾಗಿ ಹೊರಹೊಮ್ಮುತ್ತಿರುವ ಈ ಹಣ ಯುವಜನರನ್ನು ಆಕರ್ಷಸಿದೆ. ಬಿಟ್ ಕಾಯಿನ್, ಎಥಿರಿಯಮ್, ರಿಪಲ್, ಡ್ಯಾಶ್, ಲೈಟ್ ಕಾಯಿನ್ ಮತ್ತಿತರ ಹಲವಾರು ಹೆಸರುಗಳಲ್ಲಿ ಈಗಾಗಲೇ ಅರವತ್ತಕ್ಕೂ ಹೆಚ್ಚು ತಂತ್ರಗುಪ್ತ ಹಣದ ವಿನಿಮಯ ಸಾರ್ವಭೌಮತ್ವ ಹೊಂದಿದ ದೇಶಗಳ ಹಣಗಳ ಜೊತೆಗೆ ಆಗುತ್ತಿದೆ. ಮುಂದೊಂದು ದಿನ ಡಾಲರ್, ಯೂರೋ, ಯೆನ್, ರೂಬಲ್, ರೂಪಾಯಿ ತರಹದ ಹಣಗಳಿಗಿಂತ ಈ ಹೊಸ ಹಣಗಳೇ ಹೆಚ್ಚು ಜನಪ್ರಿಯವಾದರೆ ಏನೆಂಬ ಆತಂಕ ಕಾಡುತ್ತಿದೆ.

ಸಾಂಪ್ರದಾಯಿಕವಾಗಿ ನಮಗೆ ಗೊತ್ತಿರುವ ಹಣವನ್ನು ಆಯಾ ದೇಶಗಳ ಕೇಂದ್ರೀಯ ಬ್ಯಾಂಕುಗಳು ಹೊರಡಿಸುತ್ತವೆ. ಹೀಗೆ ತಾವು ಹೊರಡಿಸಿದ ಹಣದ ಮೌಲ್ಯಕ್ಕೆ ತಕ್ಕಂತೆ ದ್ರವ್ಯರೂಪದಲ್ಲಿ ಚಿನ್ನ, ಬಾಂಡುಗಳು ಮತ್ತಿತರ ಆಸ್ತಿಗಳನ್ನು ಒತ್ತೆಯಾಗಿ ಈ ಬ್ಯಾಂಕುಗಳು ಹೊಂದಿರುತ್ತವೆ. ತಾವು ಹೊರಡಿಸಿದ ಹಣವನ್ನು ಬೆಂಬಲಿಸುವ ಮತ್ತು ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯುವ ಹೊಣೆಗಾರಿಕೆಯನ್ನು ಈ ಬ್ಯಾಂಕುಗಳು ಹೊಂದಿರುತ್ತವೆ. ಬ್ಯಾಂಕುಗಳು ಹೊರಡಿಸಿದ ಹಣಕ್ಕೆ ಆಯಾ ದೇಶಗಳ ಸರ್ಕಾರಗಳು ಖಾತರಿ ನೀಡುತ್ತವೆ. ಒಂದು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಮೊತ್ತ ಹಾಗೂ ಆ ಹಣದಿಂದ ಕೊಳ್ಳಬಹುದಾದ ಸೇವೆ-ಸಾಮಾನುಗಳ ಆಧಾರದ ಮೇಲೆ ಬೇರೆ ದೇಶದ ಹಣದ ಜೊತೆಯಲ್ಲಿ ಆ ಹಣದ ವಿನಿಮಯ ದರ ನಿಗದಿಯಾಗುತ್ತದೆ.

ಆದರೆ ಈ ತಂತ್ರಗುಪ್ತ ಹಣಕ್ಕೆ ಯಾವುದೇ ಕೇಂದ್ರೀಯ ಬ್ಯಾಂಕುಗಳ ಮತ್ತು ಸರ್ಕಾರಗಳ ಖಾತರಿಯಿಲ್ಲ. ಇದು ನಾವು ಕೈಯಲ್ಲಿ ಹಿಡಿಯುವ ಅಥವಾ ತಿಜೋರಿಯಲ್ಲಿ ಕೂಡಿಡುವ ರೂಪದಲ್ಲಿ ಕೂಡಾ ಇರುವುದಿಲ್ಲ. ತಂತ್ರಾಂಶದಿಂದ ಬರೆಯಲ್ಪಟ್ಟ ಹಾಗೂ ಕಂಪ್ಯೂಟರ್‍ನಲ್ಲಿ ಅಥವಾ ಪೆನ್‍ಡ್ರೈವ್‍ನಂತಹ ಡಿಜಿಟಲ್ ಕಡತವನ್ನು ಕಾಪಾಡುವ ಸಾಧನಗಳಲ್ಲಿಯೇ ಈ ತಂತ್ರಗುಪ್ತ ಹಣ ಇರುತ್ತದೆ. ಇದನ್ನು ಕಂಪ್ಯೂಟರ್ ಮತ್ತು ಅಂತರ್ಜಾಲದ ಮುಖಾಂತರ ಇನ್ನೊಬ್ಬರಿಗೆ ವರ್ಗಾವಣೆ ಮಾಡಿ ವಿನಿಮಯ ಮಾಡಬಹುದು. ಈ ತಂತ್ರಗುಪ್ತ ಹಣವನ್ನು ಈಗಾಗಲೇ ವಿಶ್ವದ ಹಲವಾರು ಖ್ಯಾತ ಬ್ಯಾಂಕುಗಳು ಮತ್ತು ಲಕ್ಷಾಂತರ ಸಂಸ್ಥೆಗಳು ಮಾನ್ಯತೆ ನೀಡಿ ತಮ್ಮ ಸೇವೆ ಸರಕುಗಳಿಗೆ ಬೆಲೆಯಾಗಿ ಪಡೆಯುತ್ತಿವೆ.

2009ರಲ್ಲಿ ಜಪಾನಿನ ಸಟೋಶಿ ನಕಾಮೋಟೋ ಎಂಬ ವ್ಯಕ್ತಿ ಅಥವಾ ಗುಂಪು ‘ಬಿಟ್ ಕಾಯಿನ್’ ಎಂಬ ತಂತ್ರಗುಪ್ತ ಹಣವನ್ನು ಮೊದಲಿಗೆ ಜಾರಿಗೆ ತಂದಿತು. ಮೊಟ್ಟಮೊದಲಿಗೆ ಕೇವಲ 50 ಬಿಟ್ ಕಾಯಿನ್‍ಗಳನ್ನು ‘ಗಣಿಗಾರಿಕೆ’ ಮಾಡಿದ ನಕಾಮೋಟೋ ಈ ಬಿಟ್ ಕಾಯಿನ್‍ನ ದಾಖಲೆಗೆ ‘ಬ್ಲಾಕ್ ಚೈನ್’ ಎಂಬ ಸಾರ್ವಜನಿಕವಾಗಿ ವಿತರಿಸಲ್ಪಟ್ಟ ಖಾತೆಯನ್ನು ತೆರೆದನು. ಈ ಖಾತೆಯು ಮುಕ್ತ ತಂತ್ರಾಂಶವನ್ನು ಹೊಂದಿದ್ದು ಬಿಟ್ ಕಾಯಿನ್ ಹಣದ ಖಾತರಿಯನ್ನು ಯಾವುದೇ ಕೇಂದ್ರೀಯ ಬ್ಯಾಂಕ್ ಮಾಡುವುದರ ಬದಲಿಗೆ ಪರಸ್ಪರ ಬಳಕೆದಾರರೇ ಮಾಡುವ ವ್ಯವಸ್ಥೆ ಹೊಂದಿದೆ. ಒಟ್ಟಾರೆ 210 ಲಕ್ಷ ಬಿಟ್ ಕಾಯಿನ್‍ಗಳ ಬಿಡುಗಡೆ ಮಾಡುವ ಗುರಿಯಿದ್ದು ಈ ಬಿಟ್ ಕಾಯಿನ್‍ಗಳ ಚಿಲ್ಲರೆ ರೂಪವಾಗಿ ಮಿಲಿಬಿಟ್ ಕಾಯಿನ್ ಹಾಗೂ ಸಟೋಶಿ ಇರುತ್ತವೆ. ಒಂದು ಬಿಟ್ ಕಾಯಿನ್‍ಗೆ ಒಂದು ಸಾವಿರ ಮಿಲಿಬಿಟ್ ಕಾಯಿನ್‍ಗಳು ಹಾಗೂ ಒಂದು ಲಕ್ಷ ಸಟೋಶಿಗಳು ದೊರೆಯುತ್ತವೆ.

ಈ ಬಿಟ್ ಕಾಯಿನ್‍ನ ಇಲ್ಲಿಯವರೆಗಿನ ಪಯಣ ಅತ್ಯಂತ ಕುತೂಹಲಕಾರಿಯಾಗಿದೆ. 2009ರಲ್ಲಿ 10,000 ಬಿಟ್ ಕಾಯಿನ್ ನೀಡಿ ಎರಡು ಪಿಜ್ಜಾಗಳನ್ನು ಖರೀದಿಸಲಾಗಿತ್ತು. ಕೇವಲ ಎಂಟು ವರ್ಷಗಳ ನಂತರ 2017ರ ನವೆಂಬರ್‍ನಲ್ಲಿ ಒಂದು ಬಿಟ್ ಕಾಯಿನ್ ವಿನಿಮಯದರ 19,000 ಅಮೆರಿಕನ್ ಡಾಲರ್‍ಗಳಾಗಿತ್ತು. ಈಗ ಬಿಟ್ ಕಾಯಿನ್‍ನ ವಿನಿಮಯದರ 13,000 ಅಮೆರಿಕನ್ ಡಾಲರ್‍ಗಳಾಗಿದೆ. ಕಳೆದ ಕೆಲವು ವರ್ಷಗಳಲ್ಲಿ 60ಕ್ಕೂ ಹೆಚ್ಚು ಬಿಟ್ ಕಾಯಿನ್ ತದ್ರೂಪಿ ತಂತ್ರಗುಪ್ತ ಹಣದ ಪರ್ಯಾಯಗಳು ಹೊರಬಿದ್ದಿವೆ. ಹೊಸದಾಗಿ ಬಿಡುಗಡೆಯಾಗಿರುವ ಹಲವು ಹಣ ಅತ್ಯಂತ ಕಡಿಮೆ ದರದಲ್ಲಿಯೇ ಸಿಗುತ್ತವೆ. ಕ್ರಮೇಣ ಈ ಹಣದ ಮೌಲ್ಯಗಳೂ ವೃದ್ಧಿಸುವುದೆಂಬ ನಂಬಿಕೆಯಲ್ಲಿ ಜನ ತಮ್ಮ ಡಾಲರ್ ಯೂರೋಗಳನ್ನು ನೀಡಿ ಈ ತಂತ್ರಗುಪ್ತ ಹಣವನ್ನು ಖರೀದಿಸಿ ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ.

2017ರ ಮಾರ್ಚ್‍ನಲ್ಲಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಕೆದಾರರು ಮತ್ತು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ ಈ ತಂತ್ರಗುಪ್ತ ಹಣದ ಸಂಭವನೀಯ ಹಣಕಾಸಿನ, ಕಾನೂನಿನ ಹಾಗೂ ರಕ್ಷಣೆಯ ಅಪಾಯಗಳನ್ನು ವಿವರಿಸಿ ಹೇಳಿತ್ತು. ಭಾರತದಲ್ಲಿ ಈ ಹಣದ ವಿನಿಮಯಕ್ಕೆ ತಾನು ಪರವಾನಗಿ ನೀಡಿಲ್ಲವೆಂದೂ ಹೇಳಿರುವ ಆರ್‍ಬಿಐ, ಈ ತಂತ್ರಗುಪ್ತ ಹಣದ ವಿನಿಮಯ ದೇಶದ ಕಾನೂನಿಗೆ ವಿರುದ್ಧವೆಂದೂ ಹೇಳಿದೆ. ಆದರೂ ಈ ಹಣದ ಶೇಖರಣೆ ಮತ್ತು ವಿನಿಮಯದಿಂದ ಉಂಟಾದ ಲಾಭವನ್ನು ತೆರಿಗೆಗೆ ಒಳಪಡಿಸಲು ಹಣಕಾಸು ಸಚಿವ ಜೇಟ್ಲಿ ಮುಂದಾಗಿದ್ದಾರೆ.

ಇಷ್ಟೆಲ್ಲಾ ಆದರೂ ಈ ತಂತ್ರಗುಪ್ತ ಹಣದ ಆಕರ್ಷಣೆ ಕಡಿಮೆಯಾಗಿಲ್ಲ. ಈ ಹಣದ ವಿನಿಮಯದಿಂದ ಉಳಿತಾಯವಾಗುವ ವಿನಿಮಯ ಖರ್ಚು ಹಾಗೂ ಗೌಪ್ಯತೆ ಇದರ ಆಕರ್ಷಣೆಗೆ ಕಾರಣಗಳಾಗಿವೆ. ನಿಯಂತ್ರಣ ಮೀರಿ ಈ ತಂತ್ರಗುಪ್ತ ಹಣ ಬೆಳೆದದ್ದೇ ಆದರೆ ಇದು ಅಪರಾಧಿ ಕೃತ್ಯಗಳ ಹಾಗೂ ದೇಶದ್ರೋಹಿ ಭಯೋತ್ಪಾದಕರ ಬಳಕೆಯಲ್ಲಿ ಅಪಾಯಕಾರಿ ಅಸ್ತ್ರವಾಗಬಹುದು. ಆದರೆ ದೇಶಗಳ ಗಡಿಮೀರಿ ಬೆಳೆಯುತ್ತಿರುವ ಅಂತರ್ಜಾಲದ ವಾಣಿಜ್ಯ ವ್ಯವಸ್ಥೆಯಲ್ಲಿ ಇಂತಹ ವಿನಿಮಯ ಸಾಧನಗಳು ಗಡಿಯಲ್ಲಿ ಗೋಡೆ ಕಟ್ಟಿ ಸಾರ್ವಭೌಮತ್ವ ಮೆರೆಯಬಯಸುವ ಸರ್ಕಾರಗಳಿಗೆ ತೀವ್ರ ಸವಾಲೊಡ್ಡಿವೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

July 2018

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

April 2018

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

March 2018

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

February 2018

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

February 2018