2nd ಫೆಬ್ರವರಿ ೨೦೧೮

ಇಂದು ಕರ್ನಾಟಕದ ಮುಂದಿರುವ ಸವಾಲುಗಳು

ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಎರಡು ವಿಶಿಷ್ಟವಾದ ಕ್ಷಣಗಳಿವೆ. ಮೊದಲನೆಯದು, ಎಸ್. ನಿಜಲಿಂಗಪ್ಪನವರ ನಾಯಕತ್ವದಲ್ಲಿ ಹಲವರ ಭಾಗವಹಿಸುವಿಕೆಯಿಂದ ಸಾಧ್ಯವಾದ ಕರ್ನಾಟಕದ ಏಕೀಕರಣ. ಎರಡನೆಯದು, ದೇವರಾಜ ಅರಸು ಅವರ ಆಡಳಿತದ ಸಂದರ್ಭದಲ್ಲಿ ರಾಜ್ಯದ ಸಾಮಾಜಿಕ ಸಂಬಂಧಗಳನ್ನು ಮೂಲಭೂತವಾಗಿ ಬದಲಿಸಲು ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಪ್ರಬಲವಾದ ಸಾಮಾಜಿಕ ತಳಪಾಯವನ್ನು ಹಾಕಲು ಮಾಡಿದ ಪ್ರಯತ್ನ. ಈ ಎರಡೂ ಸಾಹಸಿ ಕ್ರಮಗಳು ರಾಜ್ಯದ ರೂಪುರೇಷೆಗಳನ್ನು (appearance) ಮಾತ್ರ ನಿರೂಪಿಸಲಿಲ್ಲ. ಜೊತೆಗೆ ಕರ್ನಾಟಕದ ಸಂಬಂಧವನ್ನು ನೆರೆಹೊರೆಯ ರಾಜ್ಯಗಳು ಮತ್ತು ಇಡಿಯಾಗಿ ಭಾರತದೊಡನೆಯೆ ಸ್ಪಷ್ಟವಾಗಿ ಗುರುತಿಸಿದವು. ಈ ಎರಡೂ ಕ್ರಮಗಳಿಗೆ ಆ ಕಾಲದ ಪ್ರಬಲ ಹಿತಾಸಕ್ತಿಗಳಿಂದ ವಿರೋಧವಿದ್ದರೂ ಸಹ ವ್ಯಾಪಕವಾದ ಜನಬೆಂಬಲವೂ ಇತ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ನಾವು ನೋಡುವ ಐಟಿ ಕ್ಷೇತ್ರದ ವಿಸ್ತರಣೆ, ಕರ್ನಾಟಕದ ವಿಶಿಷ್ಟವಾದ ದಲಿತ ಚಳುವಳಿ, ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿವಲಯದ ಇರುವಿಕೆ ಇತ್ಯಾದಿ ಇತರೆ ಕ್ರಮಗಳು ಸಾಮಾಜಿಕ ವಲಯದಿಂದ ಮೂಡಿಬಂದವು. ಇಂತಹ ಕ್ರಮಗಳು ಕರ್ನಾಟಕದ ರಾಜಕೀಯದ ಮೇಲೆ ಪ್ರಭಾವ ಬೀರಿರಬಹುದು. ಆದರೆ ಇವುಗಳು ರಾಜಕಾರಣ ಕ್ಷೇತ್ರದಿಂದ ಮೂಡಿಬಂದವುಗಳಲ್ಲ. ಆದುದರಿಂದ ಕರ್ನಾಟಕದ ರಾಜಕಾರಣವು ಬಹುಮಟ್ಟಿಗೆ ನಾನು ಮೇಲೆ ಗುರುತಿಸಿದ ಎರಡು ರಾಜಕೀಯ ಕ್ರಮಗಳ ಉತ್ಪನ್ನಗಳ ಮೂಲಕವೇ ರೂಪುಗೊಂಡಿದೆ.

ಇಂದು ಸಮಗ್ರ ಕರ್ನಾಟಕದ ಮುಂದಿರುವುದು ದೊಡ್ಡ ಸವಾಲುಗಳ ಪಟ್ಟಿಯೊಂದು. ಅವುಗಳನ್ನು ಹೇಗೆ ಪರಿಹರಿಸುತ್ತೇವೆ ಎನ್ನುವುದು ರಾಜ್ಯದ ಮುಖ್ಯ ಸಾಮಾಜಿಕ ಮತ್ತು ಅರ್ಥಿಕ ಕಾಳಜಿಗಳಿಗೆ ಉತ್ತರಗಳನ್ನೂ ಒದಗಿಸುತ್ತದೆ. ಅಲ್ಲದೆ ಭಾರತದೊಳಗೆ ಕರ್ನಾಟಕದ ವಿಶಿಷ್ಟ ಪಥವೇನು ಎನ್ನುವುದನ್ನು ಸಹ ತೀರ್ಮಾನಿಸುತ್ತದೆ.

ಸಾಂಸ್ಕೃತಿಕ ಅನನ್ಯತೆ

ಕರ್ನಾಟಕದಲ್ಲಿ ಇಂದಿನ ಪ್ರಾಥಮಿಕ ರಾಜಕೀಯ ಸ್ಪರ್ಧೆಯನ್ನು ಜಾತ್ಯಾತೀತತೆ ಮತ್ತು ಹಿಂದುತ್ವಗಳ ನಡುವಿನದು ಎಂದಷ್ಟೆ ಹೇಳುವುದು ತಪ್ಪಾಗುತ್ತದೆ. ಇಲ್ಲಿನ ನಿಜವಾದ ಸ್ಪರ್ಧೆಯು ರಾಜ್ಯದ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಬಹುಸಾಂಸ್ಕೃತಿಕತೆ (ಪ್ಲೂರಲಿಸಮ್) ಮತ್ತು ಹಿಂದುತ್ವದ ಅಥವಾ ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಏಕರೂಪತೆಯನ್ನು ಕರ್ನಾಟಕದೊಳಗೆ ತರುವ ಪ್ರಯತ್ನಗಳ ನಡುವೆಯಿದೆ. ನಾನು ಗುರುತಿಸುತ್ತಿರುವ ಬಹುಸಾಂಸ್ಕೃತಿಕತೆಯು ವಿಭಿನ್ನ ಮತ್ತು ಸಂಕೀರ್ಣ ಧಾರ್ಮಿಕ ಎಳೆಗಳಿಂದ ಕೂಡಿದೆ. ಹಲವು ಸಂದರ್ಭಗಳಲ್ಲಿ ಈ ಧಾರ್ಮಿಕ ಪರಂಪರೆಗಳು ಪರಸ್ಪರರನ್ನು ಪ್ರಭಾವಿಸಿವೆ. ಅವುಗಳ ಸಂಕೀರ್ಣ ಮಂಥನ ಮತ್ತು ಮರುವ್ಯಾಖ್ಯಾನಗಳು, ಅವುಗಳು ಪ್ರೇರೇಪಿಸಿರುವ ಹಲವಾರು ದಾರ್ಶನಿಕ ಮತ್ತು ಸಾಂಸ್ಥಿಕ ರೂಪಗಳು ಹಾಗೂ ಅವುಗಳು ನಿರಂತರವಾಗಿ ಉಳಿಸಿಕೊಂಡುಬಂದಿರುವ ಜೀವನಕ್ರಮಗಳು ಇವೆಲ್ಲವೂ ಈ ಬಹುಸಾಂಸ್ಕೃತಿಕತೆಯ ಆಯಾಮಗಳು. ಧಾರ್ಮಿಕ ಅಲ್ಪಸಂಖ್ಯಾತರು ಎಂದು ಕರೆಯಲ್ಪಡುವ ಸಮುದಾಯಗಳು ಸಹ ಅವುಗಳದ್ದೆ ಆದ ಬಹುಸಾಂಸ್ಕೃತಿಕತೆಯನ್ನು ಅಭಿವ್ಯಕ್ತಿಸಿವೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದ ಸಮುದಾಯಗಳು ಈ ರಾಜ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವ ಆದರ್ಶವಾದ ಬಹುಸಾಂಸ್ಕೃತಿಕತೆಯನ್ನು ಒಪ್ಪಿಕೊಂಡು ಇಲ್ಲಿ ಉಳಿದುಬಂದಿದ್ದಾರೆ. ತಮ್ಮ ಅನುಯಾಯಿಗಳು ನಿರ್ದಿಷ್ಟ ರೀತಿಯಲ್ಲಿ ನಂಬಿಕೆಗಳು ಮತ್ತು ಕ್ರಿಯೆಗಳನ್ನು ನಿರ್ವಹಿಸಬೇಕು ಎನ್ನುವ ಕೆಲವು ಧಾರ್ಮಿಕ ಸಂಸ್ಥೆಗಳ ಮುಖಂಡರು ಅಥವಾ ಧಾರ್ಮಿಕಪಂಗಡಗಳು ಇರಬಹುದು. ಇಂತಹವರು ತಮ್ಮ ಅನುಯಾಯಿಗಳು ಧರ್ಮಾಂಧರಾಗಿರಬೇಕು ಎಂದೆ ನಿರೀಕ್ಷಿಸಬಹುದು. ಆದರೆ ಬಹುತೇಕರು (ಇದರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೂ ಸೇರುತ್ತಾರೆ) ಇಂತಹ ನಿರ್ದೇಶನಗಳು ಮತ್ತು ಎಚ್ಚರಿಕೆಗಳಿಗಿಂತ ಬಹಳ ಭಿನ್ನವಾಗಿ ತಮ್ಮ ಬದುಕನ್ನು ನಿರ್ವಹಿಸಿದ್ದಾರೆ.

ಕರ್ನಾಟಕದ ಈ ಬಹುಸಾಂಸ್ಕೃತಿಕತೆಯು ಆಯ್ಕೆಯ ಸ್ವಾತಂತ್ರ್ಯದ ಸಂದರ್ಭದಲ್ಲಿ ಹುಟ್ಟುವ ಬಹುಸಾಂಸ್ಕೃತಿಕತೆಗಿಂತ ಬಹಳ ಭಿನ್ನವಾದುದು. ಎರಡನೆಯ ಬಗೆಯ ಬಹುಸಾಂಸ್ಕೃತಿಕತೆಯೂ ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿದೆ. ಆದರೆ ರಾಜ್ಯದಲ್ಲಿ ಕಾಣುವ ಬಹುಸಾಂಸ್ಕೃತಿಕತೆಯ ಪ್ರಮುಖ ರೂಪವೆಂದರೆ ಇಲ್ಲಿನ ವಿಭಿನ್ನ ಜೀವನಕ್ರಮಗಳಲ್ಲಿ ಸ್ಪಷ್ಟವಾಗಿ ಕಾಣುವ ವೈವಿಧ್ಯಮಯ ಮೌಲ್ಯಗಳು ಮತ್ತು ನಂಬಿಕೆಗಳು, ಸಂಸ್ಥೆಗಳು ಮತ್ತು ಆಚರಣೆಗಳು, ಹಾಗೂ ಇವುಗಳ ಮೇಲೆ ಕಾಲಾನುಕ್ರಮದಲ್ಲಿ ನಡೆದುಬಂದಿರುವ ಸಾಮುದಾಯಿಕ ಚಿಂತನೆಗಳು. ಈ ಜೀವನಕ್ರಮಗಳು ನಮ್ಮ ಪ್ರದೇಶಗಳಲ್ಲಿನ ಈ ಕೆಳಗಿನ ವಿದ್ಯಮಾನಗಳಿಂದ ರೂಪುಗೊಂಡಿವೆ: ಮಾನವ—ಪ್ರಕೃತಿ ಸಂಬಂಧಗಳು; ಇಲ್ಲಿನ ಜಾನಪದ ಸಂಸ್ಕೃತಿಗಳು; ಜೈನ, ಬೌದ್ಧ, ಬ್ರಾಹ್ಮಣ, ತಂತ್ರ, ನಾಥಪಂಥಿ, ಶೈವ, ವೈಷ್ಣವ, ವಚನ, ಭಕ್ತಿ, ಅರಬ್ ಮತ್ತು ಪರ್ಶಿಯನ್ ಇಸ್ಲಾಮಿನ ಪರಂಪರೆಗಳು; ವ್ಯಾಪಾರಿ ಮತ್ತು ಮಿಶಿನರಿ ಉದ್ದಿಮೆಗಳು; ಹಾಗೂ ಭಾರತದ ಇತರ ಪರಂಪರೆಗಳ ಜೊತೆಗಿನ ವಿಶಾಲ ಅನುಸಂಧಾನಗಳು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಯೂ ಸಹ ವಿಭಿನ್ನವಾದ ಪಥವನ್ನು ಕಟ್ಟಿಕೊಂಡಿತು. ಕನ್ನಡ ಭಾಷೆಯೂ ಸಹ ಈ ಬಹುಸಾಂಸ್ಕೃತಿಕತೆಯ ಸ್ಪಷ್ಟ ಅಭಿವ್ಯಕ್ತಿ ಮಾತ್ರವಲ್ಲ ಅದನ್ನು ಕಾಲಾನುಕ್ರಮದಲ್ಲಿ ಉಳಿಸಿಕೊಂಡುಬಂದಿರುವ ಮತ್ತು ರೂಢಿಯಾಗಿಸಿರುವ ಸಾಧನ ಸಹ.

ಕರ್ನಾಟಕದ ಸಮಾಜವನ್ನು ನಿರ್ದೇಶಿಸುವ ತತ್ವಗಳು ಈ ಜೀವನಕ್ರಮಗಳನ್ನು ಪರಸ್ಪರರೊಡನೆ ಮಾತನಾಡಲು ತೊಡಗಿಸುವ ಮೂಲಕ ಹುಟ್ಟಬೇಕು. ಇಂತಹ ಸಂಭಾಷಣೆಯನ್ನು ಸಾಧ್ಯವಾಗಿಸುವ ಬದಲು, ಇಂದು ಒಂದು ನಿರ್ದಿಷ್ಟ ಚಿಂತನಕ್ರಮ ಅಥವಾ ಜೀವನಕ್ರಮವು ತನ್ನನ್ನು ತಾನೆ ಎಲ್ಲರಿಗೂ ಸೂಕ್ತವಾದದ್ದು ಮತ್ತು ಪ್ರಸಕ್ತವಾದುದು ಎಂದು ಘೋಷಿಸಿಕೊಳ್ಳುತ್ತಿದೆ. ಆ ಪ್ರಕ್ರಿಯೆಯಲ್ಲಿ ಇತರ ಜೀವನಕ್ರಮಗಳ ಇರುವಿಕೆಯನ್ನೆ ನಿರಾಕರಿಸುತ್ತ ಅಥವಾ ಪರಸ್ಪರರನ್ನು ಅಪರಿಚಿತರನ್ನಾಗಿ ಮಾಡುತ್ತಿವೆ. ಇಂತಹ ಕ್ರಿಯೆಗಳು ರಾಜಕೀಯವಾಗಿ ಫಲ ನೀಡಿವೆ.

ಕರ್ನಾಟಕದಲ್ಲಿ ಇಂದು ಮಾಡಬಹುದಾಗಿರುವ ಅತ್ಯುತ್ತಮ ಕೆಲಸವೆಂದರೆ ಇಲ್ಲಿನ ಬಹುಸಾಂಸ್ಕೃತಿಕತೆಯನ್ನು ಮಾತನಾಡಲು ಬಿಡುವುದು. ಇದಕ್ಕೆ ಸೂಕ್ತವಾದ ವಾತಾವರಣವನ್ನು ರಾಜಕಾರಣವು ಸೃಷ್ಟಿಸಬೇಕು.

ಆರ್ಥಿಕ ನೀತಿಗಳು

‘ಯಾರೊಬ್ಬರ ಅನುಕೂಲಕ್ಕಲ್ಲ, ಬದಲಿಗೆ ಎಲ್ಲರನ್ನೂ ಸಬಲರನ್ನಾಗಿಸುವುದು’ ಎನ್ನುವುದು ಕರ್ನಾಟಕದ ಬಹುಸಾಂಸ್ಕೃತಿಕತೆಯ ಅನನ್ಯ ಪ್ರಸ್ತಾವನೆ. ಅದೇ ಆಶಯದ ಸಾರ್ವಜನಿಕ ನೀತಿಗಳನ್ನು ರೂಪಿಸುವುದು ರಾಜ್ಯದ ಭವಿಷ್ಯವನ್ನು ದೃಢಪಡಿಸಲು ಅನಿವಾರ್ಯ.

  1. ಕರ್ನಾಟಕವು ಗುಣಮಟ್ಟದ ಶಿಕ್ಷಣವನ್ನು ಎಲ್ಲ ಹಂತಗಳಲ್ಲಿಯೂ ಎಲ್ಲರಿಗೂ ದೊರಕುವಂತೆ ಮಾಡಬೇಕಿದೆ. ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹುಕಾಲದಿಂದ ಇರುವ ಭಾಷಾಮಾಧ್ಯಮದ ಮತ್ತು ಶಿಕ್ಷಣದ ಖಾಸಗೀಕರಣದ ಸಮಸ್ಯೆಗಳು ಕಠಿಣವಾದವು ಎನ್ನುವುದೇನೊ ನಿಜ ಆದರೆ ಬಗೆಹರಿಸಲಾಗದವುಗಳಲ್ಲ. ಕರ್ನಾಟಕದಲ್ಲಿ ಕಲಿಯುವ ಪ್ರತಿಯೊಂದು ಮಗುವೂ ಮೊದಲ ಹತ್ತು ವರ್ಷಗಳ ಕಾಲ ಕನ್ನಡವನ್ನು ಚೆನ್ನಾಗಿ ಕಲಿಯಲೇಬೇಕು ಎನ್ನಲು ಮುಖ್ಯವಾದ ಕಾರಣವೊಂದಿದೆ. ಕನ್ನಡಭಾಷೆಯ ಮೂಲಕವೆ ರಾಜ್ಯದ ಬಹುಸಾಂಸ್ಕೃತಿಕ ಸಂಪ್ರದಾಯಗಳಿಗೆ ಪ್ರವೇಶ ದೊರಕುತ್ತದೆ. ಇಂಗ್ಲೀಷ್ ಸೇರಿದಂತೆ ಉಳಿದ ಭಾಷೆಗಳಿಂದ ಈ ಸಂಪ್ರದಾಯಗಳ ಕೆಲವು ಎಳೆಗಳು ಮಾತ್ರ ಪರಿಚಯವಾಗುತ್ತವೆ. ಇತರೆ ಭಾಷೆಗಳನ್ನು ಕಲಿಯುವುದರಿಂದ ಸಂಪನ್ಮೂಲಗಳು ಮತ್ತು ಅವಕಾಶಗಳು ಸಿಗಬಹುದು ಆದರೆ ಕನ್ನಡ ಮಾತ್ರ ರಾಜ್ಯದ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ಬಹುಸಾಂಸ್ಕೃತಿಕತೆಯನ್ನು ನೀಡುತ್ತದೆ. ಈ ಉದ್ದೇಶಸಾಧನೆಗೆ ಸರ್ಕಾರವು ತನ್ನ ಅಡಿಯಲ್ಲಿರುವ ಶೈಕ್ಷಣಿಕ ಸಂಸ್ಥೆಗಳನ್ನು ಮಾದರಿಯ ಸಂಸ್ಥೆಗಳಾಗಿಸಬೇಕು. ಈ ಶಾಲೆಗಳಲ್ಲಿ ಕನ್ನಡದ ಮೂಲಕ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವುದರಿಂದ ಈಗ ಖಾಸಗಿ ಶಾಲೆಗಳ ಮೇಲೆಯೇ ನಿರ್ಭರರಾಗಬೇಕಿರುವ ದೊಡ್ಡಸಂಖ್ಯೆಯ ಬಡವರ್ಗಗಳ ಮತ್ತು ಅಂಚಿನ ಸಮುದಾಯಗಳ ವಿದ್ಯಾರ್ಥಿಗಳ ಸಬಲೀಕರಣವಾಗುತ್ತದೆ. ಹಾಗೆಂದ ಮಾತ್ರಕ್ಕೆ ಖಾಸಗಿ ಶಾಲೆಗಳನ್ನು ನಿಗ್ರಹಿಸಬೇಕಿಲ್ಲ. ಆದರೆ ಅವುಗಳನ್ನು ಪ್ರೋತ್ಸಾಹಿಸುತ್ತಲೆ, ಅವುಗಳನ್ನು ನಿಯಂತ್ರಿಸಬೇಕಾದ ಅಗತ್ಯವೂ ಇದೆ. ಈ ಖಾಸಗಿ ಶಾಲೆಗಳು ತಮ್ಮ ಬಡಾವಣೆಯ ಮಕ್ಕಳ ಅಗತ್ಯಗಳನ್ನು ಪೂರೈಸಬೇಕು. ಅವುಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಬ್ಬರಿಗೂ ಅನ್ವಯವಾಗುವಂತೆ ಸ್ಥಳೀಯ ವೈವಿಧ್ಯತೆಗೆ ಆದ್ಯತೆ ನೀಡಬೇಕು. ಶಾಲಾಶುಲ್ಕ ಕನಿಷ್ಠವಿರಬೇಕು. ಅನುಕೂಲರಹಿತರಿಗೆ ಪ್ರಾತಿನಿಧ್ಯ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಶಾಲೆಗಳು ಕನ್ನಡಪರವಾಗಿರಬೇಕು.
  2. ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ದುಸ್ಥಿತಿಯಲ್ಲಿದೆ. ಸಾರ್ವಜನಿಕ ಆಸ್ಪತ್ರೆಗಳು ಸಾಮಾನ್ಯ ಜನರಿಗೆ ಮೊದಲ ಮತ್ತು ಅತ್ಯುತ್ತಮ ಆಯ್ಕೆಗಳಾಗಬೇಕಿತ್ತು. ಆದರೆ ಅವರು ದಿನಗಳೆದಂತೆ ಅವುಗಳಿಂದ ದೂರ ಸರಿಯಲೇಬೇಕಾಗಿದೆ. ಈ ವ್ಯವಸ್ಥೆಯನ್ನು ಸುಧಾರಿಸಲು ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ. ಜೊತೆಗೆ ಖಾಸಗಿ ಆರೋಗ್ಯವ್ಯವಸ್ಥೆಯ ನಿಯಂತ್ರಣವೂ ಅಗತ್ಯವಾಗಿದೆ. ಬಹುಮುಖ್ಯವಾಗಿ ಆರೋಗ್ಯಸೇವೆಗಳ ಕಾರ್ಪೊರೇಟೀಕರಣ ಮಾಡಲು ಪ್ರಯತ್ನಿಸುತ್ತಿರುವ ಲಾಬಿಗಳು ಮತ್ತು ಹಿತಾಸಕ್ತಿಗಳನ್ನು ತಡೆಯಬೇಕು.
  3. ಕರ್ನಾಟಕದ ಪ್ರಾದೇಶಿಕ ಅಸಮಾನತೆಯು ಅದರ ಬಹುಸಾಂಸ್ಕೃತಿಕ ಅನನ್ಯತೆಗೆ ಅಪಾಯಕಾರಿಯಾದುದು. ಪ್ರಾದೇಶಿಕ ಅಸಮಾನತೆಯು ಒಂದೆಡೆ ಅತಿಶಯದ ದೇಶಭಕ್ತಿಯನ್ನು ಮತ್ತು ಇನ್ನೊಂದೆಡೆ ಹತಾಶೆಯನ್ನು ಸೃಷ್ಟಿಸುತ್ತದೆ. ಇದನ್ನು ತೊಡೆಯಲು ನೀರಾವರಿ, ಕೈಗಾರಿಕೀಕರಣ, ಸಂಪರ್ಕಮಾಧ್ಯಮಗಳು, ಅರಣ್ಯೀಕರಣ, ಉತ್ತಮ ಶಿಕ್ಷಣವ್ಯವಸ್ಥೆ ಮತ್ತು ನಗರೀಕರಣವೂ ಸೇರಿದಂತೆ ಹಲವಾರು ಪರಿಹಾರಗಳಿರುವ ನೀತಿಯನ್ನು ರೂಪಿಸಬೇಕಾಗುತ್ತದೆ.
  4. ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆಯಾಗಲೇಬೇಕು. ಅಲ್ಲಿನ ರಸ್ತೆಗಳಿಗೆ ವಾಹನದಟ್ಟಣೆಯ ಒತ್ತಡವನ್ನು ನಿರ್ವಹಿಸಲು ಆಗುತ್ತಿಲ್ಲ. ನಗರದ ಕಸವನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನ ಅಪರಾಧಗತಿ ಹೆಚ್ಚುತ್ತಿದೆ. ಈಗ ಮಾಡುತ್ತಿರುವಂತೆ ಈ ಸಮಸ್ಯೆಗಳಿಗೆ ಪ್ರತ್ಯೇಕವಾಗಿ ಪರಿಹಾರಗಳನ್ನು ಹುಡುಕಿ ಜಾರಿಗೊಳಿಸುತ್ತಿರುವುದರ ಬದಲು ಹಲವಾರು ವಿನೂತನ ಪರಿಹಾರಗಳನ್ನು ಕಂಡುಕೊಳ್ಳಬೇಕು. ಇಂತಹ ಕ್ರಮಗಳಲ್ಲಿ ನಗರದ ಕೇಂದ್ರಭಾಗಗಳಿಂದ ಖಾಸಗಿ ವಾಹನಗಳನ್ನು ನಿಷೇಧಿಸುವುದು, ಸಾರ್ವಜನಿಕ ಸೌಕರ್ಯಗಳನ್ನು ಒದಗಿಸುವ ಸಂಸ್ಥೆಗಳನ್ನು ನಗರದಿಂದಾಚೆಗೆ ವರ್ಗಾಯಿಸುವುದು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ಸ್ಥಾಪಿಸುವುದು ಇತ್ಯಾದಿಗಳು ಮುಖ್ಯವಾದವು.
  5. ಕರ್ನಾಟಕಕ್ಕೆ ಪ್ರವಾಸೋದ್ಯಮವನ್ನು ಬೆಳೆಸುವ ಸಾಮಥ್ರ್ಯವಿದೆ. ಆದರೆ ಅದಕ್ಕೆ ಅಗತ್ಯವಾದ ಮೂಲಭೂತಸೌಕರ್ಯಗಳಿಲ್ಲ. ರಾಜ್ಯದ ಅತ್ಯುತ್ತಮ ಐತಿಹಾಸಿಕ ತಾಣಗಳು ದುಸ್ಥಿತಿಯಲ್ಲಿವೆ ಮತ್ತು ಅವುಗಳನ್ನು ತಲುಪುವುದು ಕಷ್ಟ. ಕರಾವಳಿ ಪ್ರದೇಶಗಳನ್ನು ಸರಿಯಾಗಿ ಅಭಿವೃದ್ಧಿ ಮಾಡಲಾಗಿಲ್ಲ. ಅಲ್ಲದೆ ಈ ಭಾಗದ ನೈತಿಕ ಪೋಲಿಸಗಿರಿ ಮತ್ತು ಮೂಲಭೂತವಾದಿ ರಾಜಕಾರಣವು ಜನರನ್ನು ಅಲ್ಲಿನ ಬೆರಗುಗೊಳಿಸುವ ಪ್ರಾಕೃತಿಕ ಸೌಂದರ್ಯವಿರುವ ಸ್ಥಳಗಳನ್ನು ತಲುಪಲು ಸಹ ಸಾಧ್ಯವಾಗದಂತೆ ಮಾಡಿದೆ.
  6. ಎಲ್ಲದಕ್ಕಿಂತ ಮುಖ್ಯವಾಗಿ, ರಾಜ್ಯದ ವೈವಿಧ್ಯತೆಯಿಂದ ಆರ್ಥಿಕ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುವ ಬಗ್ಗೆ ಯೋಚಿಸಬೇಕಿದೆ. ಈಗಾಗಲೆ ಕರ್ನಾಟಕದ ಒಣಕೃಷಿಪ್ರದೇಶಗಳಲ್ಲಿ ಹೆಚ್ಚುನೀರನ್ನು ಕೇಳದ ಆದರೆ ಹೆಚ್ಚು ಬೇಡಿಕೆಯಿರುವ ಬೆಳೆಗಳನ್ನು ಬೆಳೆಯುವ ಪ್ರಯೋಗಗಳು ನಡೆಯುತ್ತಿವೆ. ಇದೇ ಮಾತನ್ನು ರಾಜ್ಯದ ಜಾನುವಾರುಗಳ ಬಗ್ಗೆ ಕೂಡ ಹೇಳಬಹುದು. ಅಲ್ಲದೆ ಕರ್ನಾಟಕದ ಮುಖ್ಯ ರಾಜಮನೆತನಗಳಾದ ವಿಜಯನಗರ, ಬಹಮನಿ ಇತ್ಯಾದಿಗಳು ಕುಶಲಕರ್ಮಿಗಳು ದೊಡ್ಡಸಂಖ್ಯೆಯಲ್ಲಿ ಇದ್ದರು ಎನ್ನುವುದನ್ನು ನೆನಪಿಸಿಕೊಳ್ಳಬೇಕು.

ಸಾಮಾಜಿಕ ವಿಷಯಗಳು

ವಚನ ಸಾಹಿತ್ಯವು ಸೇರಿದಂತೆ ಕನ್ನಡದ ಸಾಹಿತ್ಯಪರಂಪರೆಗಳು ಹುಟ್ಟಿಗಿಂತ ಸಾಮಥ್ರ್ಯ ಮತ್ತು ಪ್ರಯತ್ನಗಳನ್ನು ಮುಖ್ಯವೆಂದು ಪರಿಗಣಿಸಿದವು. ಇವುಗಳು ಪರಿಪೂರ್ಣತೆಯ ಕಡೆಗಿನ ಚಲನೆಯನ್ನು ಅದಕ್ಕೆ ಅಗತ್ಯವಾಗಿರುವ ಸ್ವಾತಂತ್ರ್ಯ ಮತ್ತು ಸಮಾನತೆಗಳ ಬಗೆಗಿನ ಪರಿಗಣನೆಗಳನ್ನು ಸೃಜಿಸಿವೆ.

  1. ಇಂತಹ ಕರ್ನಾಟಕದಲ್ಲಿ ಇಂದು ಬಹುಸಾಂಸ್ಕೃತಿಕತೆಗೆ ಅತ್ಯಂತ ದೊಡ್ಡ ಶತ್ರುವಾಗಿರುವುದು ಸಾಮಾಜಿಕ ಜೀವನದ ಎಲ್ಲ ಆಯಾಮಗಳನ್ನು ಕುಗ್ಗಿಸಿ, ತನ್ನ ಸಮುದಾಯ ಮತ್ತು ಅದು ಕಲ್ಪಿಸಿಕೊಂಡಿರುವ ಸತ್ಯಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡುವ ಕೋಮುವಾದ. ಈ ಶತ್ರುವು ಇತ್ತೀಚಿನ ವರ್ಷಗಳಲ್ಲಿ ಬೆಳೆದಿದೆ ಮತ್ತು ಬಹುಸಂಖ್ಯಾತವಾದ, ರಾಷ್ಟ್ರೀಯತೆ, ಧರ್ಮ, ಸಂಸ್ಕೃತಿ ಇತ್ಯಾದಿ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ: . ಕರ್ನಾಟಕದ ಕೆಲವು ಭಾಗಗಳ ಮೇಲೆ, ಅದರಲ್ಲಿಯೂ ಕರಾವಳಿ ಪ್ರದೇಶಗಳು, ಈ ವೈರಸಿನ ಪ್ರಭಾವವಾಗಿದೆ. ಇಲ್ಲಿ ವಿಷವನ್ನು ಹರಡುವ ಮತ್ತು ಯುವಕರ ಜೀವಗಳನ್ನು ಬಲಿನೀಡುವ ಪ್ರವೃತ್ತಿಯೂ ಹೆಚ್ಚಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ತಕ್ಷಣದಲ್ಲಿ ಕಾಪಾಡಲು ಕೆಲವು ನಿರ್ದಿಷ್ಟ ಪೊಲೀಸ್ ಮತ್ತು ಕಣ್ಗಾವಲು ಕ್ರಮಗಳು ಅಗತ್ಯವಿದ್ದರೂ, ಈ ವೈರಿಸಿನ ವಿರುದ್ಧ ದೀರ್ಘಾವಧಿಯಲ್ಲಿ ಇವುಗಳೆ ಪರಿಣಾಮಕಾರಿಯಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಕೋಮುವಾದವು ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಪಿತೃಪ್ರಧಾನವ್ಯವಸ್ಥೆಯನ್ನು ಶಕ್ತಿಶಾಲಿಯಾಗಿಸುತ್ತದೆ ಮತ್ತು ಮಹಿಳೆಯರ ಅವಕಾಶಗಳನ್ನು ಕಡಿಮೆಮಾಡುತ್ತದೆ.
  2. ಕರ್ನಾಟಕವು ಜಾತಿ ಸಾರ್ವಜನಿಕ ವಲಯದಲ್ಲಿ ಬಹಿರಂಗ ಉಪಸ್ಥಿತಿಯನ್ನು ಹೊಂದಿರುವ ಭಾರತದ ರಾಜ್ಯಗಳಲ್ಲೊಂದು. ಇದಕ್ಕೆ ಹಲವಾರು ಐತಿಹಾಸಿಕ ಕಾರಣಗಳಿವೆ. ಅರಸು ಸರ್ಕಾರವು ಜಾರಿಗೊಳಿಸಿದ ಹಲವು ಸುಧಾರಣೆಗಳು ರಾಜ್ಯದಲ್ಲಿನ ಸಾಮಾಜಿಕ ಪ್ರಾಬಲ್ಯವನ್ನು ಕುಗ್ಗಿಸಿದರೂ ಸಹ, ಅದು ಬಳಸಿದ ತಂತ್ರಗಳು ಜಾತಿಯ ಕ್ರೋಡೀಕರಣಕ್ಕೆ ದಾರಿಮಾಡಿಕೊಟ್ಟವು. ಇದನ್ನು ತೊಡೆದುಹಾಕುವುದು ಸುಲಭ ಸಾಧ್ಯವಲ್ಲದಿದ್ದರೂ, ಜಾತಿ ಮತ್ತು ಧರ್ಮಗಳ ನಡುವೆ ಸಮತಲದ ಸಂಬಂಧಗಳನ್ನು ಕಟ್ಟಬಹುದು. ಇಂದು ಜಾತಿ ಮತ್ತು ಸಮುದಾಯಗಳ ನಾಯಕರುಗಳು ಮತ್ತು ಪೋಷಕರು ಅವುಗಳನ್ನು ದೂರವಿಡಲೆ ಪ್ರಯತ್ನಿಸುತ್ತಿದ್ದಾರೆ.
  3. ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಮುಸ್ಲಿಮರನ್ನು ಇತರರ ಸಮಕ್ಕೆ ತರಲು ಇನ್ನೂ ಸಾಕಷ್ಟು ಮಾಡಬೇಕಿದೆ. ಇದನ್ನು ಸಾಧಿಸಲು ಭೂಸುಧಾರಣೆ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಇತ್ಯಾದಿ ವಲಯಗಳಲ್ಲಿ ಪ್ರಗತಿಯಾಗಬೇಕು. ಕರ್ನಾಟಕದಲ್ಲಿ ಒಂದು ಸರ್ವೆ ಮತ್ತು ಪುನರ್ವಸತಿಯ ಯೋಜನೆಯನ್ನು ತಕ್ಷಣವೆ ಜಾರಿಗೊಳಿಸಬೇಕಾಗಿದೆ. ನಗರಗಳಲ್ಲಿನ ಭೂಹಿಡುವಳಿಗಳೂ ಸೇರಿದಂತೆ ಎಲ್ಲ ಅಕ್ರಮ ಮತ್ತು ಬೇನಾಮಿ ಆಸ್ತಿಗಳನ್ನು ದಾಖಲು ಮಾಡಿ, ವಶಪಡಿಸಿಕೊಳ್ಳಬೇಕು.
  4. ಸಾರ್ವಜನಿಕ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಅಧಿಕವಾಗಿ ಕೇಳಿಬರುತ್ತಿವೆ. ರಾಜ್ಯವು ಖಂಡಿತವಾಗಿಯೂ ದುರ್ಬಲವಾದ ಗಣರಾಜ್ಯದ ಮನಸ್ಥಿತಿಯನ್ನು ಹೊಂದಿದೆ ಮತ್ತು ಕಾನೂನಿನ ಅಧಿಪತ್ಯವನ್ನು ಬದುಕಿನ ಒಂದು ವಿಧಾನವಾಗಿ ಮಾಡುವುದರಲ್ಲಿ ದುರ್ಬಲವಾಗಿದೆ. ರಾಜ್ಯದ ಸಾರ್ವಜನಿಕ ಸಂಸ್ಥೆಗಳ ಸಮಗ್ರತೆಯನ್ನು ರಕ್ಷಿಸಲು ತಕ್ಷಣದ ಕ್ರಮಗಳು ಅಗತ್ಯವಿದೆ.

ಪರಿಸರದ ವಿಷಯಗಳು

ಕರ್ನಾಟಕವು ರಾಜಾಸ್ಥಾನದ ನಂತರ ಕರ್ನಾಟಕವು ದೇಶದಲ್ಲಿ ಅತ್ಯಂತ ಹೆಚ್ಚು ಶುಷ್ಕ ಪ್ರದೇಶಗಳನ್ನು ಹೊಂದಿರುವ ರಾಜ್ಯ. ಅದರ ಅರಣ್ಯಗಳು ಕಡಿಮೆಯಾಗುತ್ತಿವೆ ಮತ್ತು ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಒಮ್ಮೆ ವಿಶಿಷ್ಟವಾದ ವಾಸ್ತುಶಿಲ್ಪದ ಪರಂಪರೆಗಳಿಗೆ ಹೆಸರಾಗಿದ್ದ ಈ ರಾಜ್ಯವು ಇಂದು ಕಬ್ಬಿಣ ಮತ್ತು ಸಿಮೆಂಟುಗಳ ಕಾಂಕ್ರೀಟ್ ಅರಣ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯವು ಪರಿಸರದ ಸವಾಲುಗಳಿಗೆ ತಕ್ಷಣವೆ ಪರಿಹಾರ ಹುಡುಕಲು ಆರಂಭಿಸಬೇಕಿದೆ.

* ಮಂಗಳೂರು ಮೂಲದ ಪ್ರೊ. ವಲೇರಿಯನ್ ರಾಡ್ರಿಗ್ಸ್ ಅವರು ಜವಾಹರಲಾಲ್ ನೆಹ್ರೂ ವಿಶ್ವವಿದ್ಯಾನಿಲಯದ ರಾಜಕೀಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು. ಸದ್ಯದಲ್ಲಿ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಪೀಠದಲ್ಲಿ ಪ್ರಾಧ್ಯಾಪಕರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮