2nd February 2018

ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ

ಸವಾಲು: ಬೆಂಗಳೂರಿನ ರಸ್ತೆಗಳಲ್ಲಿನ ಸಂಚಾರದ ವೇಗವನ್ನು ಹೆಚ್ಚಿಸುವ ಮೂಲಕ, ಉತ್ಪಾದಕತೆ ಮತ್ತು ಪ್ರತಿದಿನದ ಬದುಕಿನ ಗುಣಮಟ್ಟಗಳನ್ನು ಹೆಚ್ಚಿಸುವುದು.

ಬೆಂಗಳೂರಿನ ರಸ್ತೆಗಳಲ್ಲಿನ ವಾಹನ ದಟ್ಟಣೆ ಮತ್ತು ಬಂಪರ್ ಟು ಬಂಪರ್ ರಸ್ತೆಸಂಚಾರ ಇಂದು ವಿಶ್ವದೆಲ್ಲೆಡೆ ಕುಖ್ಯಾತಿ ಪಡೆದಿದೆ. ನಗರಕ್ಕೆ ಹೊಸದಾಗಿ ಬರುವ ಯಾರಾದರೂ ಮೊದಲು ಈ ಟ್ರಾಫಿಕ್ ಸಮಸ್ಯೆಯನ್ನು ನೋಡಿ, ಹೇಗಾದರೂ ಜನರು ಈ ನಗರದಲ್ಲಿ ವಾಸ ಮಾಡುತ್ತಿರಬಹುದೋ ಎಂದು ಅಚ್ಚರಿಗೊಳಗಾಗುತ್ತಾರೆ. ಬೆಂಗಳೂರಿನ ಹೊರಗಿರುವ ಕನ್ನಡಿಗರು ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆಯನ್ನು ಶಪಿಸುತ್ತಾ ಆದಷ್ಟು ಬೇಗ ತಮ್ಮ ಊರು ಸೇರಬೇಕೆಂಬ ಹವಣಿಕೆಯಲ್ಲಿರುತ್ತಾರೆ. ಹಾಗಾಗಿ ಬೆಂಗಳೂರಿನ ಈ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಹುಡುಕಬೇಕಾದ ಅಗತ್ಯವನ್ನು ವಿವರಿಸಿ ಹೇಳಬಾಕಾಗಿಲ್ಲ. ಆದರೂ...

 • ಬೆಂಗಳೂರು ಕರ್ನಾಟಕವೆಂಬ ರೈಲುಗಾಡಿಯ ಎಂಜಿನ್. ಕರ್ನಟಕದ ಶೇಕಡಾ 60ಕ್ಕೂ ಮಿಗಿಲಾದ ಆದಾಯ ಹಾಗೂ ತೆರಿಗೆ ಸಂಗ್ರಹ ಬೆಂಗಳೂರಲ್ಲಿ ಆಗುತ್ತದೆ. ಕರ್ನಾಟಕದಲ್ಲಿ ಸೃಷ್ಟಿಯಾಗುವ ಮೂರು ಉದ್ಯೋಗಗಳಲ್ಲಿ ಎರಡು ಕೇವಲ ಬೆಂಗಳೂರಿನ ಪರಿಸರದಲ್ಲೇ ಆಗುತ್ತದೆ.
 • ಬೆಂಗಳೂರಿನ ಆರ್ಥಿಕತೆಯ ಪ್ರಗತಿಗೆ ಜನರ ಮತ್ತು ಸರಕುಗಳ ಕ್ಷಿಪ್ರ ಯಾತಾಯಾತ ಮುಖ್ಯ. ಇದು ನಿಧಾನವಾದಲ್ಲಿ ಇದಕ್ಕೆ ಸಂಬಂಧಿತ ಖರ್ಚುಗಳು ಮೇಲೇರುತ್ತವೆ. ಇದರಿಂದ ಬೆಂಗಳೂರಿನಲ್ಲಿರುವ ವಾಣಜ್ಯಗಳ ಸ್ಪರ್ಧಾತ್ಮಕತೆ ಕುಂಟುತ್ತದೆ.
 • ಸಂಚಾರ ದಟ್ಟಣೆಯಲ್ಲಿ ವ್ಯಯವಾದ ಸಮಯದಿಂದಾಗಿ ಬೆಂಗಳೂರಿಗರ ಜೀವನದ ಗುಣಮಟ್ಟ ಕುಸಿದಿದೆ. ಸಂಚಾರದಲ್ಲಿಯೇ ವ್ಯಯಿಸಿದ ಘಂಟೆಗಳನ್ನು ತಮ್ಮತಮ್ಮ ಕುಟುಂಬಗಳಿಗೆ ಅಥವಾ ಮನರಂಜನೆಗೆ ನೀಡಿದರೆ ಬೆಂಗಳೂರಿಗರ ಮಾನಸಿಕ ಸ್ವಾಸ್ಥ್ಯ ಸುಧಾರಿಸುತ್ತದೆ.
 • ಉದ್ಯಮಗಳನ್ನು ಹಾಗೂ ಉದ್ಯೋಗಗಳನ್ನು ಬೆಂಬಲಿಸಬಲ್ಲ ಬೆಂಗಳೂರಿನ ಹೊರುವ ಸಾಮಥ್ರ್ಯ ಬಹುತೇಕ ಮುಗಿದುಬಂದಿದೆ. ಹೀಗಾಗಿ ನಿಧಾನವಾಗಿ ಉದ್ದಿಮೆಗಳು ಬೆಂಗಳೂರಿನಿಂದ ಹೊರಗೆ ನಡೆಯುವ ಸಿದ್ಧತೆಯಲ್ಲಿವೆ. ಇದರಿಂದ ಬೆಂಗಳೂರಿಗೆ ಮತ್ತು ಕನ್ನಡಿಗರಿಗೆ ಪ್ರತಿಕೂಲ ಪರಿಣಾಮವಾಗುತ್ತದೆ.

ಆಶ್ಚರ್ಯದ ಸಂಗತಿಯೆಂದರೆ, ಈ ಸಂಚಾರ ದಟ್ಟಣೆಯ ಸಮಸ್ಯೆಯ ಪರಿಹಾರಕ್ಕಾಗಿ ಹೆಚ್ಚಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪ್ರಪಂಚದ ಎಲ್ಲಾ ಪ್ರಮುಖ ನಗರಗಳೂ ಇದೇ ಸಮಸ್ಯೆಯನ್ನು ಎದುರಿಸಿ ಗೆದ್ದಿವೆ ಹಾಗೂ ಗೆಲ್ಲುತ್ತಿವೆ. ಈ ಸಮಸ್ಯೆಗೆ ಪರಿಹಾರಗಳು ಕಳೆದ ಕೆಲವಾರು ದಶಕಗಳಿಂದ ಸಾರ್ವಜನಿಕ ಜ್ಞಾನವಲಯದಲ್ಲಿ ಮುಕ್ತವಾಗಿ ದೊರೆಯುತ್ತಿವೆ. ಆದರೆ ಈ ಸಮಸ್ಯೆಗಳನ್ನು ಪರಿಹರಿಸುವ ಅನಿವಾರ್ಯತೆ, ರಾಜಕೀಯ ಬದ್ಧತೆ ಮತ್ತು ನಾಯಕತ್ವದ ಕೊರತೆಯಿಂದಾಗಿ ಸಮಸ್ಯೆ ಜಟಿಲವೆಂಬಂತೆ ಕಾಣುತ್ತಿದೆ. ಮೇಲಾಗಿ ಪ್ರಸಕ್ತ ಕರ್ನಾಟಕದ ಕಾರ್ಯಾಂಗ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯ ನೇರ ಒಳಗೊಳ್ಳುವಿಕೆಯ ಹೊರತಾಗಿ ಈ ಸಮಸ್ಯೆಗೆ ಪರಿಹಾರ ಇಲ್ಲವಾಗಿದೆ. ಏಕೆಂದರೆ ಸಮಸ್ಯೆಯ ಪರಿಹಾರದ ಆಯಾಮಗಳು ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿವೆ. ಮುಖ್ಯಮಂತ್ರಿಯ ನಾಯಕತ್ವದ ಮತ್ತು ದೈನಂದಿನ ಮೇಲ್ವಿಚಾರಣೆಯ ಹೊರತಾಗಿ ಈ ಸಮಸ್ಯೆಗೆ ಸೂಕ್ತ ಪರಹಾರ ಸಿಗುವ ಅವಕಾಶವೇ ಇಲ್ಲವಾಗಿದೆ. ಮುಖ್ಯಮಂತ್ರಿಯ ಈ ತಂಡಕ್ಕೆ ಸಮಗ್ರ ಶಾಶ್ವತ ಪರಿಹಾರದ ಸೂತ್ರ ಈ ಕೆಳಕಂಡಂತಿದೆ.

 1. ಎಲ್ಲರಿಗೂ ಗೊತ್ತಿರುವಂತೆ, ಸಾರ್ವಜನಿಕ ಸಂಚಾರ ಹಳಿಗಳ ಮೇಲೆ ಆಗಬೇಕೇ ಹೊರತು ರಸ್ತೆಗಳ ಮೇಲಲ್ಲ. ಹಾಗಾಗಿ ಮೆಟ್ರೋ ಯೋಜನೆಯ ಎರಡು—ಮೂರು—ನಾಲ್ಕನೆಯ ಹಂತಗಳನ್ನು ಅತ್ಯಂತ ಜಾಣ್ಮೆಯಿಂದ ಶೀಘ್ರದಲ್ಲಿಯೇ ವಿನ್ಯಾಸ ಮಾಡಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ಮೆಟ್ರೋಗೆ ಪೂರಕವಾಗಿ ಬಸ್ ಮಿನಿಬಸ್ ವ್ಯವಸ್ಥೆಯಿಂದ ಮೆಟ್ರೋ ಸೇವೆಯ ಪರಿಣಾಮವನ್ನು ಹೆಚ್ಚಿಸಬೇಕು. ಎಲ್ಲಾ ಮೆಟ್ರೋ ನಿಲ್ದಾಣಗಳ ಬಳಿಯಲ್ಲಿ ಕನಿಷ್ಠವೆಂದರೂ ಐದುನೂರು ಕಾರುಗಳನ್ನು ನಿಲ್ಲಿಸಬಲ್ಲ ಬಹುಮಹಡಿಯ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
 2. ಬೆಂಗಳೂರಿನೆಲ್ಲೆಡೆ ಮತ್ತು ಮೊದಲಿಗೆ ರಿಂಗ್ ರೋಡ್ ಒಳಗಡೆಯ ಪ್ರದೇಶದಲ್ಲಿ ಸಂಪೂರ್ಣವಾಗಿ ಸಿಗ್ನಲ್ ರಹಿತ ಸಂಚಾರ ವ್ಯವಸ್ಥೆ ಮಾಡಬೇಕು. ಇದಕ್ಕೆ ಈಗಿನ ಟ್ರಾಫಿಕ್ ವೃತ್ತಗಳು ಮತ್ತು ಟಿ—ಜಂಕ್ಷನ್‍ಗಳನ್ನು ಮರುವಿನ್ಯಾಸ ಮಾಡಬೇಕು. ರಸ್ತೆಗಳಲ್ಲಿ ಯು ಟರ್ನ್ ಮತ್ತು ಎಲಿವೇಟೆಡ್ ಯು ಟರ್ನ್‍ಗಳನ್ನು ನಿರ್ಮಿಸಿ ವಾಹನಗಳು ಯವುದೇ ವೃತ್ತದಲ್ಲಿ ಹಸಿರು ದೀಪಕ್ಕೆ ಕಾಯಬೇಕಾದ ಅನಿವಾರ್ಯತೆ ತಪ್ಪಿಸಬೇಕು. ಅಗತ್ಯವಿದ್ದರೆ ಏಕಮುಖ ಸಂಚಾರವನ್ನು ಮತ್ತು ಆರ್ಟಿರಿಯಲ್ ರಸ್ತೆಗಳೆಲ್ಲದರಲ್ಲಿ ಫ್ಲೈಓವರ್—ಅಂಡರ್‍ಪಾಸ್‍ಗಳನ್ನು ನಿರ್ಮಿಸಿ ಸಂಚಾರ ಸುಗಮಗೊಳಿಸಬೇಕು.
 3. ಬೆಂಗಳೂರಿನ ಹಲವೆಡೆ ಪಾದಚಾರಿ ರಸ್ತೆಗಳು, ಮೋರಿಗಳು, ರಾಜಕಾಲುವೆಗಳನ್ನು ಸಮರೋಪಾದಿಯಲ್ಲಿ ಪುನರ್ ನಿರ್ಮಿಸಿ ಪಾದಚಾರಿಗಳಿಗೆ ರಸ್ತೆಯಲ್ಲಿ ಪ್ರಾಥಮಿಕತೆ ದೊರಕಿಸಿಕೊಡಬೇಕು. ಹಲವೆಡೆ ಪ್ರತ್ಯೇಕ ಸೈಕಲ್ ಮಾರ್ಗ ಸಾಧ್ಯವಿಲ್ಲವಾದರೂ ಬೆಂಗಳೂರಿನೆಲ್ಲೆಡೆ ಸೈಕಲ್ ನಿಲ್ದಾಣಗಳಿಗೆ ಜಾಗ ನೀಡಿ ಈ ಸೈಕಲ್ ಸಾರಿಗೆಗೆ ಪುನರ್ಜೀವನ ನೀಡಬೇಕು. ಓಲಾ, ಊಬರ್, ಟ್ಯಾಕ್ಸಿ ಸೇವೆಗಳನ್ನು ಅಂಕುಶಕ್ಕೆ ಒಳಪಡಿಸುವ ಗೋಜಿಗೆ ಹೋಗದೆ ಶ್ರೀಮಂತರೂ ಕೂಡಾ ಸರ್ವಜನಿಕ ಸಾರಿಗೆಯೆಡೆಗೆ ಹೊರಳುವಂತೆ ಉತ್ತೇಜನ ನೀಡಬೇಕು.
 4. ಬೆಂಗಳೂರಿನ ಹಲವೆಡೆ ಭೂಸ್ವಾಧೀನಕ್ಕೆ ರಕ್ಷಣಾ ಇಲಾಖೆ ಹಾಗೂ ಮತ್ತಿತರಿಂದ ಅಡಚಣೆಯಾಗಿ ಚಿಕನ್ಸ್ ನೆಕ್ ಸಮಸ್ಯೆಯುಂಟಾಗಿದೆ. ಅಗತ್ಯಬಿದ್ದಲ್ಲಿ ಮುಖ್ಯಮಂತ್ರಿಯವರು ದೆಹಲಿಯ ರಕ್ಷಣಾ ಸಚಿವಾಲಯದ ಮುಂದೆ ಸತ್ಯಾಗ್ರಹ ಮಾಡಿಯಾದರೂ ಸರಿಯೇ, ಈ ಕ್ಷುಲ್ಲಕ ಸಮಸ್ಯೆಗೆ ಪರಿಹಾರ ಕಾಣಿಸಬೇಕು.
 5. ರಸ್ತೆಗಳ ಮಧ್ಯೆ ಮತ್ತು ಎಡಬಲಗಳಲ್ಲಿ ತೋರಿಕೆಗೆ ಅಲಂಕಾರಿಕ ಉದ್ಯಾನಗಳನ್ನು ಮಾಡುವ ನೆಪದಲ್ಲಿ ಮಾಡುವ ಭ್ರಷ್ಟಾಚಾರವನ್ನು ನಿಲ್ಲಿಸಿ ವೈಜ್ಞಾನಿಕವಾಗಿ ಮರಬೆಳೆಸುವ ಮತ್ತು ಉದ್ಯಾನಗಳನ್ನು ನಿರ್ಮಿಸುವ ಜವಾಬ್ದಾರಿಕೆ ತೋರಬೇಕು. ಗಿಡಗಳ ಸುತ್ತಲಿನ ತೆರೆದ ಜಾಗದಲ್ಲಿ ಮರದ ಹೊಟ್ಟು ಹರಡಿ ಧೂಳು ಮೇಲೇಳದಂತೆ ತಡೆಯಬೇಕು. ಹೀಗೆ ರಿಂಗ್ ರೋಡ್ ಒಳಗಡೆಯ ಬೆಂಗಳೂರಿನಲ್ಲಾದರೂ ಮೊದಲು ಧೂಳುರಹಿತ ವಾತಾವರಣ ನಿರ್ಮಿಸುವಲ್ಲಿ ಸುಲಭಸಾಧ್ಯ ಕ್ಷಮತೆ ಪ್ರದರ್ಶಿಸಬೇಕು.
 6. ಎಲ್ಲಾ ವಾಣಿಜ್ಯ ಕಟ್ಟಡಗಳಲ್ಲಿ ಕಡ್ಡಾಯವಾಗಿ ಪಾರ್ಕಿಂಗ್ ಸೌಲಭ್ಯದ ಅನುಷ್ಠಾನ ಮಾಡಬೇಕು. ಸಾಧ್ಯವಾದೆಲ್ಲೆಡೆ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನೀಡಬೇಕು. ಇದಕ್ಕೆ ಅಗತ್ಯವಿರುವ ‘ಬೆಂಗಳೂರು ಪಾರ್ಕಿಂಗ್ ಇನ್‍ಫ್ರಾಸ್ಟ್ರಕ್ಚರ್ ಕಾರ್ಪೊರೇಶನ್’ ಸ್ಥಾಪಿಸಿ ಎಲ್ಲೆಡೆ ಶೀಘ್ರವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಿಸಬೇಕು. ಖಾಸಗಿ ಕಟ್ಟಡಗಳಲ್ಲಿ ಪಾರ್ಕಿಂಗ್ ಜಾಗವಿಲ್ಲದೆ ರಾತ್ರಿಯ ಹೊತ್ತಿನಲ್ಲಿ ರಸ್ತೆಯ ಮೇಲೆಯೇ ವಾಹನ ಪಾರ್ಕಿಂಗ್ ಮಾಡುವ ದ್ವಿಚಕ್ರ—ನಾಲ್ಕುಚಕ್ರದ ವಾಹನಗಳಿಗೆ ತಿಂಗಳಿಗೆ ರೂ.500/5,000 ದಂತೆ ಶುಲ್ಕ ವಿಧಿಸಬೇಕು.
 7. ರಿಂಗ್ ರೋಡ್‍ನ ಒಳಗಡೆಯಿರುವ ಸರ್ಕಾರಿ ಜಮೀನಿನ ಸಂಪೂರ್ಣ ಆಡಿಟ್ ಮಾಡಬೇಕು. ಈ ಸರ್ಕಾರಿ ಜಮೀನಿನ ಮರುಬಳಕೆಯ ಬಗ್ಗೆ ಕಾರ್ಯಯೋಜನೆ ರೂಪಿಸಬೇಕು. ಈ ಜಮೀನಿನಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಯ ಜೊತೆಗೆ ಎಲ್ಲಾ ಸರ್ಕಾರಿ ಕಛೇರಿಗಳನ್ನು ಒಂದೆಡೆ ಕೇಂದ್ರೀಕರಣವಾಗುವಂತೆ ರೂಪಿಸಬೇಕು. ನ್ಯಾಯಾಲಯಗಳೆಲ್ಲ ಒಂದೆಡೆ ಅಕ್ಕಪಕ್ಕದಲ್ಲಿದ್ದರೆ ವಕೀಲರ ಮತ್ತು ಕಕ್ಷಿದಾರರ ಅನಗತ್ಯ ಸಂಚಾರ ತಪ್ಪುತ್ತದೆ. ಹೀಗೆಯೇ ಸೋದರ ಇಲಾಖೆಗಳನ್ನು ಒಂದೆಡೆ ಸ್ಥಾಪಿಸಿ ಸರ್ಕಾರಿ ಖರ್ಚುವೆಚ್ಚ ಹಾಗೂ ಅನಗತ್ಯ ಸಂಚಾರ ತಪ್ಪಿಸಬೇಕು.
 8. ಸಂಚಾರ ನಿರ್ವಹಣೆಯ ಮತ್ತು ಸಂಚಾರಿ ಪೋಲೀಸ್ ವಿಭಾಗದ ಆಧುನಿಕ ತಂತ್ರಜ್ಞಾನ ಆಧಾರಿತ ಸಂಪೂರ್ಣ ಯಾಂತ್ರೀಕರಣ ಮಾಡಬೇಕು. ಇದೆಲ್ಲದರ ಜೊತೆಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು. ಸಂಚಾರಿ ಅಪರಾಧಗಳ ಸಂಪೂರ್ಣ ಡಿಜಿಟಲೀಕರಣದ ಸಹಾಯದಿಂದ ಪದೇಪದೇ ಅಪರಾಧ ಮಾಡುವವರ ಚಾಲನ ಲೈಸೆನ್ಸ್ ರದ್ದುಪಡಿಸಬೇಕು. ತಮ್ಮ ಅಜಾಗರೂಕತೆಯಿಂದ ಬೇರೊಬ್ಬರ ಪ್ರಾಣಕ್ಕೆ ಹಾನಿಮಾಡುವವರನ್ನು ದಂಡಿಸಲು ‘ಟ್ರಾಫಿಕ್ ಅಫೆನ್ಸಸ್ ಕೋರ್ಟ್’ ಪ್ರಾರಂಭಿಸಿ ಸಂಚಾರಿ ನಿಯಮಗಳ ಬಗ್ಗೆ ಎಲ್ಲರಲ್ಲಿ ಗೌರವಯುಕ್ತ ಹೆದರಿಕೆ ಮೂಡಿಸಬೇಕು.
  ಮೇಲಿನ ಕಾರ್ಯಯೋಜನೆಗಳೆಲ್ಲವನ್ನೂ ದೂರದ ಬೆಟ್ಟ ಎನ್ನಬೇಡಿ. ನೀವೇ ಪ್ರವಾಸಕ್ಕೆಂದು ಹೋದಾಗ ವಿಶ್ವದ ಹಲವಾರು ನಗರಗಳಲ್ಲಿ ಈ ಪರಿಹಾರ ಸೂತ್ರಗಳನ್ನು ಅಳವಡಿಸಿರುವುದನ್ನು ಕಣ್ಣಾರೆ ನೋಡಿದ್ದೀರಿ. ಹಾಗಾದರೆ ಅಲ್ಲಿ ಸಾಧ್ಯವಾದದ್ದು ಇಲ್ಲಿ ಏಕೆ ಸಾಧ್ಯವಾಗದು? ನಮ್ಮ ಸಿಸ್ಟಮ್ಮೇ ಬೇರೆ ಎಂದಿರಾ? ನಮ್ಮ ರಾಜಕೀಯವೇ ಗಬ್ಬು ಎಂದಿರಾ? ಹೌದು, ಆದರೆ ಅದನ್ನೂ ಬದಲಿಸುವ ಅಗತ್ಯವಿದೆ. ಮೊದಲು ನೀವು ಬದಲಾಗಿ, ನಂತರ ವ್ಯವಸ್ಥೆಯನ್ನೂ ಬದಲಿಸಲು ದನಿಯೆತ್ತಿ. ಜೊತೆಗೆ ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರವಿಲ್ಲವಿನ್ನಬೇಡಿ.
 9. ಕಡೆಯದಾಗಿ ಮತ್ತು ಬಹುಮುಖ್ಯವಾಗಿ, ಮೇಲಿನ ಎಲ್ಲ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಿದ ನಂತರವೂ, ವಾಹನದಟ್ಟಣೆಯನ್ನು ಕಡಿಮೆ ಮಾಡಲು ಖಾಸಗಿವಾಹನಗಳ ಬಳಕೆಗೆ ಕೆಲವು ಅಡಚಣೆಗಳನ್ನು ಸರ್ಕಾರವು ಪ್ರಜ್ಞಾಪೂರ್ವಕವಾಗಿಯೆ ಪರಿಚಯಿಸಬೇಕಿದೆ. ಇಂತಹ ಕ್ರಮಗಳನ್ನು ಜಗತ್ತಿನ ಎಲ್ಲ ಮಹಾನಗರಗಳು ಸಹ ಅನುಷ್ಠಾನಗೊಳಿಸಿವೆ. ಉದಾಹರಣೆಗೆ, ಲಂಡನ್ನಿನಲ್ಲಿರುವಂತೆ ನಗರದ ಕೇಂದ್ರಭಾಗಗಳನ್ನು ಪ್ರವೇಶಿಸಲು ಖಾಸಗಿ ವಾಹನಗಳು ವಿಶೇಷ ಶುಲ್ಕವೊಂದನ್ನು ನೀಡಬೇಕಾಗುತ್ತದೆ. ಅಲ್ಲದೆ ಈ ಭಾಗಗಳಲ್ಲಿನ ಪಾರ್ಕಿಂಗ್ ಶುಲ್ಕ ಹೆಚ್ಚಿನ ಮೊತ್ತದ್ದಾಗಿರಬೇಕು. ಬೀಜಿಂಗ್ ನಗರದಲ್ಲಿ ನಿರ್ದಿಷ್ಟ ಸಂಖ್ಯೆಯ ವಾಹನಗಳು ರಸ್ತೆಯ ಮೇಲೆ ವಾರದಲ್ಲಿ ಕೆಲವು ದಿನಗಳು ಚಲಿಸುವಂತಿಲ್ಲ. ಸಿಂಗಾಪುರದಲ್ಲಿ ಖಾಸಗಿ ವಾಹನಗಳನ್ನು ಕೊಳ್ಳುವ ಮೊದಲು ಸರ್ಕಾರದಿಂದ ಪರ್ಮಿಟ್ ಸಹ ಕೊಳ್ಳಬೇಕು. ಈ ಪರ್ಮಿಟ್ಟಿನ ಬೆಲೆ ವಾಹನದ ಬೆಲೆಗಿಂತಲೂ ಹೆಚ್ಚಿರುತ್ತದೆ. 2018ರಲ್ಲಿ ಪರ್ಮಿಟ್ಟುಗಳ ವಿಲೇವಾರಿಯನ್ನು ಸಹ ಸರ್ಕಾರವು ನಿಲ್ಲಿಸಿದೆ. ಇಂತಹ ಅಡಚಣೆಗಳು ನಮ್ಮ ಸ್ವಾತಂತ್ರ್ಯದ ಹರಣವಲ್ಲ, ಬದಲಿಗೆ ದುರ್ಲಭ ಸಂಪನ್ಮೂಲವೊಂದನ್ನು ಎಲ್ಲರ ಒಳಿತನ್ನೂ ಗಮನದಲ್ಲಿರಿಸಿಕೊಂಡು ಬಳಸುವ ಸಾಧನಗಳು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018