2nd February 2018

ಮುಖ್ಯಚರ್ಚೆಗೆ ಪ್ರವೇಶ

ಐತಿಹಾಸಿಕವಾಗಿ ಮತ್ತು ವರ್ತಮಾನದಲ್ಲಿ ಕರ್ನಾಟಕವು ಭಾರತದಲ್ಲಿಯೇ ವಿಶಿಷ್ಟವಾದ ರಾಜ್ಯವೆಂದರೆ ಉತ್ಪ್ರೇಕ್ಷೆಯೇನಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಭೌಗೋಳಿಕ ವೈವಿಧ್ಯತೆಯ ಜೊತೆಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಗಳನ್ನು ಕಾಣಬಹುದು. ಇಲ್ಲಿರುವುದು ಸಹನೀಯವಾದ ಉತ್ತಮ ಹವಾಮಾನ ಮಾತ್ರವಲ್ಲ, ಬಹುಸಾಂಸ್ಕೃತಿಕತೆ (ಪ್ಲೂರಲಿಸಂ) ಮತ್ತು ಸಹಿಷ್ಣುತೆಗಳನ್ನು ಮೂಲಮೌಲ್ಯಗಳಾಗಿ ಹೊಂದಿರುವ ಸಾಮಾಜಿಕ ವ್ಯವಸ್ಥೆ. ಕನ್ನಡ ಭಾಷೆ ಮತ್ತು ಅದರ ಭಾಷಿಕ ಹಾಗೂ ಸಾಹಿತ್ಯಿಕ ಸಂಸ್ಕೃತಿಗಳು ಕರ್ನಾಟಕದ ಬಹುಸಾಂಸ್ಕೃತಿಕತೆಯ ಕೇಂದ್ರದಲ್ಲಿವೆ. ನೈಸರ್ಗಿಕ ಸಂಪನ್ಮೂಲಗಳು ಗಣನೀಯ ಪ್ರಮಾಣದಲ್ಲಿರುವ ನಮ್ಮ ರಾಜ್ಯದಲ್ಲಿ ಸಮೃದ್ಧಿಯ ಸಾಧ್ಯತೆಗಳು ಎಲ್ಲೆಡೆ ಎದ್ದುಕಾಣುತ್ತವೆ. ಇಷ್ಟಾದರೂ ಮತ್ತು ಕರ್ನಾಟಕವು ಕಳೆದ ಏಳು ದಶಕಗಳಲ್ಲಿ ಗಣನೀಯ ಅಭಿವೃದ್ಧಿಯನ್ನು ಕಂಡಿದ್ದರೂ, ಸುಭದ್ರ ಮತ್ತು ಘನತೆಯ ಬದುಕನ್ನು ಎಲ್ಲ ಕನ್ನಡಿಗರಿಗೆ ಕಟ್ಟಿಕೊಡಲು ಸಾಧ್ಯವಾಗಿಲ್ಲ.

ಇಂದು ಕರ್ನಾಟಕವು ಒಂದು ಐತಿಹಾಸಿಕ ಕವಲುದಾರಿಯಲ್ಲಿದೆ. ಅದಕ್ಕೆ ಕಾರಣ ರಾಜ್ಯದ ವಿಧಾನಸಭೆಗೆ ಸದ್ಯದಲ್ಲಿಯೇ ಚುನಾವಣೆಗಳು ನಡೆಯಲಿವೆ ಎನ್ನುವುದಲ್ಲ. ಇಂದಿನ ಕ್ಷಿಪ್ರವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ನಮ್ಮ ಆದ್ಯತೆಗಳು ಏನಿರಬೇಕು ಎನ್ನುವುದರ ಬಗ್ಗೆ ಗಂಭೀರವಾದ ಚರ್ಚೆಯನ್ನು ಪ್ರಾರಂಭಿಸಬೇಕಿರುವ ಅನಿವಾರ್ಯತೆ ನಮ್ಮ ಮುಂದಿದೆ. ಏಕೀಕರಣದ ನಂತರದ ಆರು ದಶಕಗಳಲ್ಲಿ ನಾವು ಕಟ್ಟಿಕೊಂಡಿರುವ ಪ್ರಗತಿಪರತೆಯ ಪರಿಕಲ್ಪನೆಗಳು ಸವಕಲಾಗಿವೆ. ಕಳೆದ ನಾಲ್ಕು ದಶಕಗಳಲ್ಲಿ ವ್ಯಾಪಕವಾಗಿ ಹರಡಿರುವ ಹಲವು ಬಗೆಯ ಐಡೆಂಟಿಟಿ ರಾಜಕಾರಣದ ಮಾದರಿಗಳನ್ನು ಇಂದು ಮೀರಬೇಕಿದೆ. ಇತ್ತೀಚಿನ ದಶಕಗಳಲ್ಲಿ, ಅದರಲ್ಲೂ ಉದಾರೀಕರಣ ಮತ್ತು ಜಾಗತೀಕರಣದ ನಂತರದ ವರ್ಷಗಳಲ್ಲಿ ರಾಜ್ಯವು ಅನುಸರಿಸುತ್ತಿರುವ ಆರ್ಥಿಕ ಅಭಿವೃದ್ಧಿಯ ಮಾದರಿಗಳು ಖಚಿತ ಆದ್ಯತೆಗಳ ಹಿನ್ನೆಲೆಯಲ್ಲಿ ರೂಪಿಸಿದವು ಎನ್ನಿಸುತ್ತಿಲ್ಲ. ಬದಲಿಗೆ ಆಕಸ್ಮಿಕ ಬೆಳವಣಿಗೆಗಳು ಒಂದು ಪ್ರತಿಕ್ರಿಯಾತ್ಮಕವಾದ ಅಭಿವೃದ್ಧಿ ಮಾದರಿಯು ಬೆಳೆಯಲು ಕಾರಣವಾಗಿದೆ ಎನ್ನುವುದೆ ಎದ್ದುಕಾಣುತ್ತಿದೆ. ಇದಕ್ಕೆ ಬಹುದೊಡ್ಡ ಉದಾಹರಣೆಯಾಗಿ ಬೆಂಗಳೂರಿನಲ್ಲಿ ಕಳೆದ ಮೂರು ದಶಕಗಳಲ್ಲಿ ಬೆಳೆದಿರುವ ಐ.ಟಿ.ಉದ್ಯಮವೇ ಸಾಕ್ಷಿ.

ಪ್ರತಿಯೊಂದು ಪೀಳಿಗೆಯ ಕನ್ನಡಿಗರೂ ತಮ್ಮ ಭವಿಷ್ಯದ ಕರ್ನಾಟಕ ಹೇಗಿರಬೇಕು ಎನ್ನುವ ವಿವೇಚನೆಯನ್ನು ಮಾಡುವ ಹಕ್ಕು ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ನಮ್ಮ ಪರಂಪರೆಯಲ್ಲಿರುವ ಉತ್ತಮ ಅಂಶಗಳನ್ನು ಉಳಿಸಿಕೊಳ್ಳುತ್ತಲೇ ನಮ್ಮ ವರ್ತಮಾನದ ವಾಸ್ತವಕ್ಕೆ ಸ್ಪಂದಿಸುವುದು, ಹೊಸ ಕನಸುಗಳನ್ನು ಕಾಣುವುದು ಮತ್ತು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವುದು ನಮ್ಮ ತಲೆಮಾರಿನ ಹೊಣೆಗಾರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಭವಿಷ್ಯವನ್ನು ರೂಪಿಸುವ ಚರ್ಚೆಯೊಂದನ್ನು ಇಲ್ಲಿ ಪ್ರಾರಂಭಿಸುತ್ತಿದ್ದೇವೆ. ನಮ್ಮ ಭವಿಷ್ಯದ ಕಾರ್ಯಸೂಚಿಯು ಏನಿರಬೇಕು ಎನ್ನುವಾಗ ಒಂದು ಅಂಶವನ್ನು ಸ್ಪಷ್ಟಪಡಿಸಬೇಕು. ಇಂದಿರುವ ಉದಾರವಾದಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಖಾಸಗಿ ವಲಯಕ್ಕೂ ಅವಕಾಶವಿರುವ ಆರ್ಥಿಕತೆ — ಇವುಗಳೊಳಗೆ ಇರುವ ಸಾಧ್ಯತೆಗಳನ್ನು ಅನ್ವೇಷಿಸುವುದು ನಮ್ಮ ಉದ್ದೇಶ. ಅಂದರೆ ವ್ಯವಸ್ಥೆಯನ್ನು ಬದಲಿಸುವುದರ ಮೂಲಕವೇ ಬದಲಾವಣೆ ಸಾಧ್ಯವೆಂದು ನಾವು ಹೇಳುತ್ತಿಲ್ಲ. ಸೈದ್ಧಾಂತಿಕ ಕಣ್ಕಟ್ಟುಗಳಿಂದ ರೂಪುಗೊಂಡಿರುವ ಪರಿಹಾರಗಳನ್ನು ನಿಮ್ಮ ಮುಂದಿಡುತ್ತಿಲ್ಲ. ನಮ್ಮ ದೃಷ್ಟಿ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಕುಡಿಯುವ ನೀರು, ಶಿಕ್ಷಣ, ಉದ್ಯೋಗ, ಶುದ್ಧ ಪರಿಸರ ಇತ್ಯಾದಿ ಮೂಲಭೂತ ಅಗತ್ಯಗಳನ್ನು ಹೇಗೆ ನಾವು ಪೂರೈಸಬಹುದು ಎನ್ನುವುದರ ಕಡೆಗಿದೆ.

ಮುಂದಿನ ತಿಂಗಳುಗಳಲ್ಲಿ ನಿಮ್ಮ ಮುಂದೆ ಬರುವ ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ನೂರಾರು ಪ್ರಸ್ತಾವನೆ - ಭರವಸೆಗಳನ್ನು ಹೊಂದಿರುತ್ತವೆ. ಇವುಗಳು ಸಾಮಾನ್ಯವಾಗಿ ರಾಜ್ಯದ ವಿವಿಧ ಗುಂಪುಗಳಿಗೆ ಒದಗಿಸುವ ಆಮಿಷಗಳ ರೀತಿಯಲ್ಲಿ ಇರುತ್ತವೆ. ಇದಕ್ಕೆ ಪ್ರತಿಯಾಗಿ ಎಲ್ಲ ಕನ್ನಡಿಗರ ಪ್ರತಿದಿನದ ಬದುಕನ್ನು ಬದಲಿಸಬಲ್ಲ 10 ಪರಿವರ್ತಿಕ (ಟ್ರಾನ್ಸಫ಼ಾರ್ಮೇಟಿವ್) ವಿಚಾರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇವುಗಳ ಮೂಲಕ ಕನ್ನಡಿಗರ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ, ಎಲ್ಲ ಕ್ಷೇತ್ರಗಳನ್ನೂ ಗಮನಿಸಿದ್ದೇವೆ ಎನ್ನುತ್ತಿಲ್ಲ. ಈ ಕಾರ್ಯಸೂಚಿಯನ್ನು ಸಿದ್ಧಪಡಿಸುವಾಗ, ಕೃಷಿ ಮತ್ತು ಉತ್ಪಾದನಾ ಕ್ಷೇತ್ರದ ಸಮಸ್ಯೆಗಳು ಎಷ್ಟು ಸಂಕೀರ್ಣವಾದವುಗಳು ಎನ್ನುವುದು ನಮ್ಮಲ್ಲಿ ವಿನಯ — ನಮ್ರತೆಗಳನ್ನು ಮೂಡಿಸಿವೆ.

ಇಷ್ಟಿದ್ದರೂ ಮುಂದಿನ ಐದು ವರ್ಷಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರವು ಈ ಕೆಳಗಿನ ಆದ್ಯತೆಗಳನ್ನು ಪರಿಗಣಿಸಬೇಕು ಎಂದು ನಾವು ಭಾವಿಸುತ್ತೇವೆ. ಇವುಗಳೆಂದರೆ ಕುಡಿಯುವ ನೀರು, ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ರೀತಿ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟತೆಯನ್ನು ಕಡಿಮೆ ಮಾಡುವ ದಾರಿಗಳು, ಗುಣಮಟ್ಟದ ಶಿಕ್ಷಣ, ಉದ್ಯೋಗಸೃಷ್ಟಿ, ಮೂಲಭೂತ ಸೌಕರ್ಯಗಳ ಸೃಷ್ಟಿ, ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಅದನ್ನೊಂದು ವಿಶ್ವಮಟ್ಟದ ಸುಸ್ಥಿರ ನಗರವಾಗಿ ಪುನರ್ನಿರ್ಮಾಣ ಮಾಡುವುದು. ಪ್ರತಿಯೊಂದು ಆದ್ಯತೆಯ ಬಗ್ಗೆಯೂ ಮುಂದಿನ ಹತ್ತು ಪುಟಗಳಲ್ಲಿ ಸವಾಲು, ವಿಶ್ಲೇಷಣೆ ಮತ್ತು ಸಂಭಾವ್ಯ ಪರಿಹಾರಗಳನ್ನು ಪಟ್ಟಿಮಾಡುತ್ತಿದ್ದೇವೆ. ಇವುಗಳನ್ನು ಸಿದ್ಧಪಡಿಸುವಾಗ, ಸಮಾಜಮುಖಿ ತಂಡವು ಆಯಾ ಕ್ಷೇತ್ರಗಳ ಪರಿಣತರೊಡನೆ ಸಮಾಲೋಚನೆ ನಡೆಸಿದೆ ಮತ್ತು ಸ್ವತಂತ್ರ ಅಧ್ಯಯನವನ್ನೂ ಕೈಗೊಂಡಿದೆ. ಜೊತೆಗೆ ಈ ಪ್ರಸ್ತಾವನೆಗಳಿಗೆ ಸಾಮಾನ್ಯ ತಿಳುವಳಿಕೆಯ ಲೇಪವಿದೆ. ಹಾಗಾಗಿ ಅನುಷ್ಠಾನಗೊಳಿಸಲು ಸಾಧ್ಯವಾದವುಗಳು ಎಂದು ನಾವು ನಂಬಿದ್ದೇವೆ.

ಇಲ್ಲಿರುವ ಪ್ರಸ್ತಾವನೆಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುವ ಮೂಲಕ ಭವಿಷ್ಯದ ಕರ್ನಾಟಕದ ಬಗೆಗಿನ ಚರ್ಚೆಯನ್ನು ಮುಂದೆ ಕೊಂಡೊಯ್ಯಲು ಬಯಸುತ್ತೇವೆ.

ಜೊತೆಗೆ ನಮ್ಮ ಚರ್ಚೆಯನ್ನು ಮುಂದುವರೆಸುವ ಮತ್ತೊಂದು ಪ್ರಬಂಧವನ್ನು ಕರ್ನಾಟಕದ ಹಿರಿಯ ರಾಜಕೀಯ ಚಿಂತಕ ಪ್ರೊ. ವಲೇರಿಯನ್ ರಾಡ್ರಿಗ್ಸ್ ಬರೆದಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ ನಮ್ಮ ಇಂದಿನ ಆದ್ಯತೆಗಳೇನಿರಬೇಕು ಎನ್ನುವ ವಿಷಯದ ಬಗ್ಗೆ ಪ್ರೊ. ರಾಡ್ರಿಗ್ಸ್ ಅವರ ಆಲೋಚನೆಗಳು ಇವೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018