2nd ಫೆಬ್ರವರಿ ೨೦೧೮

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಡಾ. ವಾಸು ಎಚ್. ವಿ

ಸಮಸ್ತ ಗ್ರಾಮೀಣ ಸಮುದಾಯದ ಸಮಸ್ಯೆಯನ್ನೂ ಕೃಷಿ ಬಿಕ್ಕಟ್ಟನ್ನೂ ಜೊತೆಯಾಗಿ ಅಡ್ರೆಸ್ ಮಾಡಬಲ್ಲ ಆಂದೋಲನ, ಎಲ್ಲಾ ಬಗೆಯ ಗುತ್ತಿಗೆ ಹಾಗೂ ಅಸಂಘಟಿತ ಕಾರ್ಮಿಕರನ್ನು ಜೊತೆಗೂಡಿಸಬಲ್ಲ ಚಳವಳಿ ಮತ್ತು ನಿರುದ್ಯೋಗದ ಸಮಸ್ಯೆಯನ್ನು ಇವೆರಡರ ಜೊತೆಗೆ ಬೆಸೆಯಬಲ್ಲ ಹೋರಾಟವೊಂದರ ಅಗತ್ಯ ಇಂದು ದೇಶಕ್ಕಿದೆ.

ಪರ್ಯಾಯ ರಾಜಕಾರಣ ಎಂಬ ಪರಿಕಲ್ಪನೆ ಹುಟ್ಟಿರುವುದೇ, ನಮ್ಮ ‘ಮುಖ್ಯವಾಹಿನಿ’ ರಾಜಕಾರಣ ನೆಟ್ಟಗಿಲ್ಲ ಎಂಬ ಕಾರಣಕ್ಕೆ. ಹಾಗಾಗಿ ಮುಖ್ಯವಾಹಿನಿ ರಾಜಕಾರಣಕ್ಕಿಂತ ಮೂಲಭೂತವಾಗಿ ಭಿನ್ನವಾದ ರಾಜಕೀಯ ಪ್ರಕ್ರಿಯೆಯಾಗಿ ಪರ್ಯಾಯ ರಾಜಕಾರಣ ಮೂಡಿ ಬರಬೇಕು. ಕಾಲದಿಂದ ಕಾಲಕ್ಕೆ ಪರ್ಯಾಯ ರಾಜಕಾರಣದ ರೀತಿ — ನೀತಿಗಳು ಭಿನ್ನವಾಗಿರಲೇಬೇಕು. ಮೂಲಭೂತವಾಗಿ ಪ್ರಜಾತಂತ್ರವನ್ನು ಒಪ್ಪದ, ಈ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅಜೆಂಡಾ ಹೊಂದಿರುವ ಪರಿವಾರವೊಂದು ರಾಜಕಾರಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಿದೆ. ಹೀಗಿರುವ ಹೊತ್ತಿನಲ್ಲಿ ಪರ್ಯಾಯ ರಾಜಕಾರಣ ಯಾವುದು ಎಂಬುದು ತೀವ್ರವಾಗಿ ಚರ್ಚೆಗೊಳಪಡಬೇಕಿತ್ತು.

ಆದರೆ, ಅಂತಹ ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆ ಕಾಣುತ್ತಿಲ್ಲ. ಯಾವ ಕಾಂಗ್ರೆಸ್ ಭಾರತದ ಪ್ರಜಾತಂತ್ರವನ್ನು ಹಳ್ಳ ಹಿಡಿಸಿತು ಎಂದು ಭಾವಿಸಲಾಗಿತ್ತೋ, ಅದೇ ಕಾಂಗ್ರೆಸ್ ಮಾತ್ರವೇ ಸದ್ಯಕ್ಕೆ ದೇಶವನ್ನು ಆವರಿಸಿರುವ ಮತೀಯವಾದಿ ಫ್ಯಾಸಿಸಂ ವಿರುದ್ಧ ನಮ್ಮನ್ನು ಕಾಪಾಡಬಲ್ಲುದು ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಇವರಲ್ಲಿ ಹಲವರು ಇದೇ ಕಾಂಗ್ರೆಸ್ಸನ್ನು ತಮ್ಮ ಜೀವಮಾನಪೂರ್ತಿ ವಿರೋಧಿಸಿಕೊಂಡು ಬಂದಿರುವವರು. ಹೀಗಿದ್ದೂ ಈಗಿನ ರಾಜಕಾರಣದಲ್ಲಿ ಕಾಂಗ್ರೆಸ್ಸೇ ‘ಪರ್ಯಾಯ’ ಎಂದು ಹೇಳುತ್ತಿದ್ದಾರೆಂದರೆ ಇದು ಭಾರತದ ದುರಂತವಲ್ಲದೇ ಮತ್ತೇನು?

ಇದರರ್ಥ, ಬಿಜೆಪಿಯಿಂದ ದೇಶಕ್ಕೆ ಅಂತಹ ಅಪಾಯವೇನಿಲ್ಲ ಎಂದಲ್ಲ. ಭಾರತವೆಂಬ ದೇಶದ ಪರಿಕಲ್ಪನೆಗೇ ಅದು ಅಪಾಯ ತಂದೊಡ್ಡಿದೆ. ನಿಯೋಜಿತ ಡೆತ್ ಸ್ಕ್ವಾಡ್ಸ್ ಜೊತೆಗೆ, ದಿಢೀರಾಗಿ ಯಾರನ್ನೋ ತಲೆಯ ಮೇಲಿನ ಟೊಪ್ಪಿಯ ಕಾರಣಕ್ಕೆ ಕೊಂದುಬಿಡಬಲ್ಲ ದಿಢೀರ್ ಡೆತ್ ಗ್ಯಾಂಗ್‍ಗಳು ದೇಶದಲ್ಲಿ ಅಲ್ಲಲ್ಲಿ ತಯಾರಾಗುತ್ತಿರುವುದಷ್ಟೇ ಅಪಾಯಕಾರಿಯಲ್ಲ. ಅದಕ್ಕಿಂತ ಆತಂಕಕಾರಿಯಾದದ್ದು, ಇಂತಹ ಕೊಲೆಗಳನ್ನು ಸುತ್ತಲಿನ ಜನರು ಯಾವುದೇ ಮಧ್ಯಪ್ರವೇಶ ಮಾಡದೇ ನೋಡುತ್ತಿರುವುದು. ಜುನೈದ್‍ನ ಕೊಲೆ ಅಂತಹದ್ದು. ಹಾಗೆಯೇ ದೇಶವೆಂಬ ದೇಶವೇ ಇಂತಹ ಎಷ್ಟೋ ‘ನಿತ್ಯ ಸಂಗತಿ’ಗಳನ್ನು ಬಹಳ ಸಲೀಸಾಗಿ ತೆಗೆದುಕೊಳ್ಳುತ್ತಿದೆ. ಇವೆಲ್ಲವೂ ಪ್ರಜಾತಂತ್ರದ ಸಂವೇದನೆ ಮಾತ್ರವಲ್ಲದೇ ಮಾನವೀಯ ಸಂವೇದನೆಯೂ ತೆಳುವಾಗುತ್ತಿರುವ ದ್ಯೋತಕ. ಈ ಎಲ್ಲಾ ಅಪಾಯಗಳೂ ನಮ್ಮ ಕಣ್ಣೆದುರಿಗಿವೆ.

ಆದರೆ, ಕಾಂಗ್ರೆಸ್ ಇದರಿಂದ ನಮ್ಮನ್ನು ಕಾಪಾಡಬಲ್ಲುದೇ? ಗುಜರಾತ್‍ನಲ್ಲಿ ತನ್ನನ್ನು ಕಾಪಾಡಲು, ಶತಮಾನ ದಾಟಿದ ಇದೇ ಪಕ್ಷವು ಮೂವರು ಯುವಕರ ಮೊರೆ ಹೋದದ್ದು ನಮ್ಮ ಕಣ್ಣೆದುರಿಗಿದೆ. ಕಾಂಗ್ರೆಸ್ ತನ್ನಂತೆ ತಾನೇ ಯಾರನ್ನೂ ಕಾಪಾಡುವುದು ಅಸಾಧ್ಯ. ಹೆಚ್ಚೆಂದರೆ, ಪರ್ಯಾಯ ರಾಜಕಾರಣದಲ್ಲಿ ಅದೂ ಸಹಾ ಒಂದು ತಕ್ಷಣದ ಟೂಲ್ ಆಗಬಹುದು ಅಷ್ಟೇ. ಪರಿಸ್ಥಿತಿ ಹೀಗಿರುವಾಗ, ಕಾಂಗ್ರೆಸ್‍ಗಿಂತ ಭಿನ್ನವಾದ, ಹೊಸ ತಲೆಮಾರನ್ನು ತಟ್ಟಬಲ್ಲ ಹೊಸ ರೀತಿಯ ಪರ್ಯಾಯ ರಾಜಕಾರಣ ಎಲ್ಲಿಂದ ಹೇಗೆ ಮೂಡಿಬರಬೇಕು ಎಂಬುದರ ಕುರಿತು ನಾವೆಲ್ಲರೂ ತಲೆಕೆಡಿಸಿಕೊಳ್ಳಬೇಕು. Every country gets the fascism it deservers ಎಂಬಂತೆಯೇ Every time produces its own anti fascist form of organisation and form of struggle. ಇಲ್ಲಿ ಸಮಸ್ಯೆಯಿರುವುದು ಇದನ್ನು ಗುರುತಿಸಿಲ್ಲದಿರುವಲ್ಲಿ ಮತ್ತು ಅದಕ್ಕಾಗಿ ಬೇಕಾದ ಕಸರತ್ತು ಮಾಡದಿರುವುದರಲ್ಲಿ. ಕಾಂಗ್ರೆಸ್ ಈ ಸಂಗ್ರಾಮದಲ್ಲಿ ಏಕೆ ಗೆಲ್ಲುವುದಿಲ್ಲ? ಏಕೆಂದರೆ ಅದು ಒಂದು ಪಕ್ಷ ಅಷ್ಟೇ. ಬಿಜೆಪಿ ಎಂಬುದು ಒಂದು ಪಕ್ಷ ಮಾತ್ರವಲ್ಲ. ಪರ್ಯಾಯ (ನಮಗೆ ಒಪ್ಪಿಗೆ ಇರದಿರಬಹುದಾದ) ನಾಗರಿಕತೆಯ ಪರಿಕಲ್ಪನೆಯನ್ನು ಮುಂದಿಡುತ್ತಾ, ಮನೆ ಮನೆಗಳ ಒಳಹೊಕ್ಕಿರುವ ಒಂದು ಬೃಹತ್ ಪರಿವಾರದ ಭಾಗ ಬಿಜೆಪಿ.

ಆ ರೀತಿಯ ಪರ್ಯಾಯ ಕೊಡಬಹುದಾಗಿದ್ದ ಎಲ್ಲ ಬ್ರಾಂಡ್‍ಗಳ ಎಡಪಕ್ಷಗಳು ರಷ್ಯನ್ ಕ್ರಾಂತಿಯ 100 ವರ್ಷಗಳ ಹೊತ್ತಿಗೂ ಈ ಕಾಲ ದೇಶಕ್ಕೆ ಹೊಂದಿಕೊಳ್ಳುವ ಪರ್ಯಾಯವನ್ನು ಶೋಧಿಸಲು ಯಶಸ್ವಿಯಾಗಲಿಲ್ಲ. ರಷ್ಯನ್ ಕ್ರಾಂತಿಯ ಅಪೂರ್ವ ಸಾಧನೆಯ ನಂತರ ಕಮ್ಯುನಿಸ್ಟ್ ದೇಶಗಳೊಳಗೆ ಸಮಾಜವಾದವು ಉದುರಿ ಹೋದದ್ದಕ್ಕೆ ಸರಿಯಾದ ವಿವರಣೆ ಈ ಹೊತ್ತಿನವರೆಗೂ ಲಭ್ಯವಿಲ್ಲ. ನಿಜವಾದ ಪರ್ಯಾಯ ಕಟ್ಟಬಯಸುವವರು ಇದಕ್ಕಾಗಿ ಕಮ್ಯುನಿಸ್ಟರನ್ನು ದೂರುತ್ತಾ ಕೂರುವುದೂ ತಪ್ಪೆನಿಸುತ್ತದೆ. ಈ ಹೊತ್ತಿನ ಪರ್ಯಾಯದ ಹುಡುಕಾಟವನ್ನು ಹೊಸದಾಗಿ ಆರಂಭಿಸುವ ಅಗತ್ಯವೇನೂ ಇಲ್ಲ. ಕೆಲವು ಸಮಸ್ಯೆಗಳ ನಡುವೆಯೂ ಕೇರಳ ರಾಜ್ಯವು ಕಮ್ಯುನಿಸ್ಟರ ಕಾರಣಕ್ಕೂ ಒಂದು ಮಟ್ಟಿಗಿನ ಮಾದರಿ ರಾಜ್ಯವೇ ಆಗಿದೆ. ಅದರ ಜೊತೆಗೆ ಇದುವರೆಗೆ ದೇಶದಲ್ಲಿ ನಡೆದ ವಿವಿಧ ‘ಪರ್ಯಾಯ’ಗಳನ್ನು ಗಮನಿಸಿ, ನಂತರ ಈ ಕಾಲಕ್ಕೆ ಬರುವ ಅಗತ್ಯವಿದೆ.

ಒಂದು ಕೋನದಿಂದ ಮಾತ್ರ ನೋಡಿದರೆ ಜನತಾಪಕ್ಷವು ಆ ಕಾಲಕ್ಕೆ ಪರ್ಯಾಯ ರಾಜಕಾರಣದ ಒಂದು ಪ್ರಯೋಗ. ಇನ್ನೊಂದು ಕೋನದಿಂದ ಅದು ಕಾಂಗ್ರೆಸ್ ಪಕ್ಷದ ಬಿ ಟೀಂ. ಅಂತಹ ಬಿ ಟೀಂಗಳನ್ನು ಹೊರತುಪಡಿಸಿದರೆ, ಅಸ್ಸಾಂ ಗಣಪರಿಷತ್‍ನಿಂದ ಆಮ್ ಆದ್ಮಿ ಪಕ್ಷದವರೆಗೆ ಹಲವು ಪ್ರಯೋಗಗಳು ನಡೆದಿವೆ. ಎಜಿಪಿಯು ಅಲ್ಲಿಂದ ಸಾಗಿ ಈಗ ಬಿಜೆಪಿಯ ಬಿ ಟೀಂ ಆಗುವಲ್ಲಿಗೆ ಬಂದು ನಿಂತಿದೆ. ಆಮ್‍ಆದ್ಮಿ ಪಕ್ಷದ ಬಗ್ಗೆ ಅಂತಿಮ ಷರಾ ಈಗಲೇ ಬರೆಯಬಾರದು ಎನಿಸುತ್ತದೆ. ಏಕೆಂದರೆ, ಈ ಕಾಲದ ಪರ್ಯಾಯ ರಾಜಕಾರಣವು ಈ ಕಾಲದ ಹೋರಾಟದಿಂದಲೇ ಮೂಡಿಬರಬೇಕಿದೆ. ತನ್ನೆಲ್ಲಾ ಮಿತಿಗಳು ಮತ್ತು ಸಮಸ್ಯೆಗಳ ನಡುವೆಯೂ ಆಮ್‍ಆದ್ಮಿ ಪಕ್ಷ ಅಂತಹದೊಂದು ದಿಟ್ಟ ಪ್ರಯೋಗ. ಬಿಎಸ್‍ಪಿ ‘ಹೋರಾಟವನ್ನು ನಿರಾಕರಿಸಿ’ ರಾಜಕೀಯ ಅಧಿಕಾರ ಮಾತ್ರವೇ ಮುಖ್ಯವೆಂದು ಹೇಳುತ್ತಾ ಅಧಿಕಾರ ರಾಜಕಾರಣದ ಇದುವರೆಗಿನ ವರಸೆಗಳನ್ನು ತಿರುಗು ಮುರುಗಾಗಿ ಮಾಡಿ, ‘ಅವಕಾಶವಾದ’ವನ್ನು ಸಿದ್ಧಾಂತದ ಭಾಗವಾಗಿಸಿದ ಪ್ರಯತ್ನ. ಅದರ ಮಿತಿಗಳ ಹೊರತಾಗಿ, ‘ಅಜನ್ಮ ಹೋರಾಟಗಾರ’ರಿಗೆ ಅಗತ್ಯವಿದ್ದ ಒಂದು ಷಾಕ್‍ಅನ್ನು ಬಿಎಸ್‍ಪಿ ನೀಡಿದ್ದಕ್ಕಾದರೂ ಅಭಿನಂದನಾರ್ಹ. ಜನತಾಪಕ್ಷಕ್ಕಿಂತ ಮುಂಚೆ ಕಾಂಗ್ರೆಸ್ ಹೊರಗಿದ್ದ ಲೋಹಿಯಾ ಮತ್ತು ಇನ್ನಿತರ ಸೋಷಿಯಲಿಸ್ಟರು ಹಾಗೂ ಕಾಂಗ್ರೆಸ್‍ನೊಳಗೇ ಇದ್ದ ಯಂಗ್‍ಟರ್ಕ್‍ಗಳು ಚುನಾವಣಾ ಯಶಸ್ಸನ್ನು ನಿರಂತರವಾಗಿ ಕಾಯ್ದುಕೊಳ್ಳದಿದ್ದರೂ, ಆ ಕಾಲದ ಕಿರು ಪರ್ಯಾಯಗಳಾಗಿ ಗುಡುಗುತ್ತಿದ್ದರು ಎಂಬುದನ್ನು ಮರೆಯಲಾಗದು.

ಸ್ಥೂಲವಾಗಿ ಈ ರೀತಿಯ ಹಲವು ಬಗೆಯ ಪರ್ಯಾಯಗಳಿಂದ ಕಲಿತುಕೊಂಡು, ಹೊಸ ಕಾಲಕ್ಕೆ ಬೇಕಾದ ಪರ್ಯಾಯವನ್ನು ರೂಪಿಸುವುದು ಹೇಗೆ ಎಂಬ ಸವಾಲನ್ನು ನಾವೆಲ್ಲರೂ ಕೈಗೆತ್ತಿಕೊಳ್ಳಬೇಕಿದೆ. ಆಮ್‍ಆದ್ಮಿ ಪಕ್ಷದಿಂದ ಹೊರಬಂದು ಸ್ವರಾಜ್ ಅಭಿಯಾನ ಕಟ್ಟುವಾಗ ಯೋಗೇಂದ್ರ ಯಾದವ್ ಅವರು ಆ ರೀತಿ ಹೊಸ ಸವಾಲನ್ನು ಕೈಗೆತ್ತಿಕೊಂಡ ಭರವಸೆ ಮೂಡಿಸಿದ್ದರು. ಎರಡನೇ ಸ್ವರಾಜ್ ಸಂವಾದವನ್ನು ಬೆಂಗಳೂರಿನಲ್ಲಿ ನಡೆಸಿದಾಗ ಅವರು ಮಾತನಾಡಿದ ಪ್ರಕಾರ ರಾಜಕಾರಣವು ಈ ಯುಗಧರ್ಮ. ಅದರಲ್ಲಿ ಐದು ಅವಿಭಾಜ್ಯ ಅಂಗಗಳಿರುತ್ತವೆ. ಒಂದು, ಚಳವಳಿ. ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಳ್ಳುವವರೆಲ್ಲರೂ ಇದನ್ನೂ ಮಾಡಬೇಕು. ಎರಡು, ಚುನಾವಣಾ ರಾಜಕಾರಣ; ಇದನ್ನು ಬಿಡಲಾಗದು — ಆದರೆ ಇದಕ್ಕೆ ಗಡಿಬಿಡಿ ಮಾಡಿಕೊಳ್ಳಬಾರದು. ಮೂರು, ರಚನಾತ್ಮಕ ಚಟುವಟಿಕೆಗಳು. ಈ ಸದ್ಯ ಎನ್‍ಜಿಓಗಳಿಗೆ ಹಾಗೂ ಸರ್ಕಾರೀ ಸ್ಕೀಮುಗಳಿಗೆ ಇದನ್ನು ಗುತ್ತಿಗೆಗೆ ಬಿಡಲಾಗಿದೆ. ನಾಲ್ಕು, ಸೃಜನಶೀಲ ಆಲೋಚನೆಗಳನ್ನು ಸೃಷ್ಟಿಸುವುದೂ ರಾಜಕೀಯದ ಭಾಗ. ಆ ಕೆಲಸವನ್ನು ಮಾಡಬೇಕಾದ ವಿಶ್ವವಿದ್ಯಾಲಯಗಳು ದಿನೇ ದಿನೇ ಕಳಪೆಯಾಗುತ್ತಿವೆ. ಐದನೆಯದ್ದನ್ನು ನೀವು ಆಧ್ಯಾತ್ಮಿಕತೆಯೆಂದೋ, ವ್ಯಕ್ತಿತ್ವ ನಿರ್ಮಾಣವೆಂದೋ ನಿಮ್ಮಿಷ್ಟಕ್ಕೆ ಬಂದ ಪದದಿಂದ ಕರೆದುಕೊಳ್ಳಬಹುದು.

ಬದಲಾವಣೆ ಮರೀಚಿಕೆಯೇ?

ಒಂದು ಉತ್ತಮ, ಪ್ರಬುದ್ಧ, ಜನಪರ ಪ್ರಜಾಪ್ರಭುತ್ವದಲ್ಲಿ ಚುನಾವಣೆಯಿಂದ ಚುನಾವಣೆಗೆ ಸಕಾರಾತ್ಮಕ ಬದಲಾವಣೆಗಳು ಕಾಣಿಸಬೇಕು. ಹಾಗಿದ್ದಲ್ಲಿ, ಬದಲಾವಣೆಗಳೇನೂ ಇರುವುದಿಲ್ಲ, ಇದ್ದರೂ ಅವು ನಕಾರಾತ್ಮಕ ಎನ್ನುವುದು ಯಾವ ರೀತಿಯ ಬೆಳವಣಿಗೆ? ಹಾಗಿದ್ದಲ್ಲಿ ಪ್ರಜಾಪ್ರಭುತ್ವದ ವಾರಸುದಾರರಾದ ಜನತೆ ಏನು ಮಾಡಬೇಕು? ಇದು ಇಂದು ಚುನಾವಣಾ ರಾಜಕಾರಣದಲ್ಲಿಲ್ಲದ, ಆದರೆ ಕರ್ನಾಟಕದ ಸಾಮಾಜಿಕ—ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆ.

ಸ್ಪಷ್ಟವಾಗಿ ಮತ್ತು ಸರಳವಾಗಿ ಹೇಳಬೇಕೆಂದರೆ, ಹಿಂದಿನ ಭಾಜಪ ಸರ್ಕಾರದ ಅನಿಯಂತ್ರಿತ ಮತ್ತು ಹೇವರಿಕೆ ಹುಟ್ಟಿಸುವಷ್ಟು ತೀವ್ರವಾಗಿದ್ದ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ದುರಾಡಳಿತ, ಒಳಜಗಳ, ಕರಾವಳಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಆಪರೇಷನ್ ಕಮಲದಂತಹ ನೀತಿಗೆಟ್ಟ ರಾಜಕಾರಣ, ಇತ್ಯಾದಿಗಳ ವಿರುದ್ಧದ ಜನಾಕ್ರೋಶವೇ 2013 ರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬಂದ ತೀರ್ಪು. ಆದರೆ, ಅಧಿಕಾರಕ್ಕೆ ಬಂದ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ? ಪಕ್ಷದೊಳಗೆ ಒಳಜಗಳ ಮತ್ತು ಹೇಸಿಗೆ ಹುಟ್ಟುವ ರೀತಿಯ ಪಕ್ಷಾಂತರಗಳು ಇಲ್ಲ, ಹಾಗೆಯೇ ಭ್ರಷ್ಟಾಚಾರ ಅಷ್ಟೇನೂ ಮುಕ್ತವಾಗಿ ನಡೆಯುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಭಾಜಪ ಸರ್ಕಾರದ ಮುಂದುವರಿಕೆಯ ಆಡಳಿತವನ್ನೇ ಜನ ನೋಡುತ್ತಿರುವುದು. ಜನಸಾಮಾನ್ಯರ ವಿಷಯಕ್ಕೆ ಬಂದರೆ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಿದೆ. ಅದಕ್ಕೆ ಬಹುಮುಖ್ಯ ಕಾರಣ ಇಂದು ಯಾವುದೇ ಸರ್ಕಾರಿ ನೌಕರನಿಗೆ ಲೋಕಾಯುಕ್ತದ ಮತ್ತು ಶಿಕ್ಷೆಯ ಭಯ ಇಲ್ಲದೇ ಇರುವುದು. ಈ ಸರ್ಕಾರದ ನಿರ್ಧಾರದಿಂದಾಗಿ ಲೋಕಾಯುಕ್ತ ಇಂದು ನಿಷ್ಕ್ರಿಯವಾಗಿದೆ. ಹಾಗೆಯೇ, ಭ್ರಷ್ಟಾತಿಭ್ರಷ್ಟರನ್ನು ಹುಡುಕಿಹುಡುಕಿ ಸರ್ಕಾರ ಉನ್ನತ ಸ್ಥಾನಗಳಿಗೆ ನೇಮಿಸುತ್ತಿದೆ. ಈ ಕ್ರಮಗಳು ಭ್ರಷ್ಟಾಚಾರವನ್ನು ಪೋಷಿಸುತ್ತಿವೆ. ಇದಕ್ಕೆಲ್ಲ ಒಗ್ಗಿಹೋಗಿರುವ ಜನ ಹಾಗಾಗಿ ಎಂದಿನಂತೆ ಸಹಿಸಿಕೊಂಡು ಬದುಕುತ್ತಿದ್ದಾರೆ. ಬಹುತೇಕ ಸರ್ಕಾರಿ ಸೇವೆಗಳೂ ಖಾಸಗೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಇದರಿಂದ ರೋಸತ್ತಿರುವ ಜನ ಎಷ್ಟು ಮತ್ತು ಅವರ ತೀರ್ಮಾನ ಏನು ಎನ್ನುವುದು ಈಗ ಊಹಿಸಲಾಗದ ವಿಷಯ.

ಮುಂದಿನ ದಿನಗಳಲ್ಲಿ ಗುಣಾತ್ಮಕ ರಾಜಕೀಯ ಬದಲಾವಣೆಗಳು ನಮ್ಮ ರಾಜ್ಯದಲ್ಲಿ ಸಾಧ್ಯವೇ ಎನ್ನುವುದು ಇಂದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ರಾಜಕೀಯದ ಬಗ್ಗೆ ಮಾತನಾಡುವ ಬಹುತೇಕ ಎಲ್ಲಾ ಜನಸಾಮಾನ್ಯರೂ ’ಡುಡ್ಡಿಲ್ಲದೆ ಚುನಾವಣೆ ಸಾಧ್ಯವಿಲ್ಲ’ ಎನ್ನುವ ನಿರಾಶಾದಾಯಕ ಮಾತುಗಳನ್ನೇ ಆಡುತ್ತಾರೆ ಮತ್ತು ಆ ಮೂಲಕ ದುಡ್ಡಿರುವ ಜನರನ್ನು ಚುನಾವಣಾ ರಾಜಕಾರಣದಲ್ಲಿ ಸಕ್ರಿಯರಾಗಲು ಹುರಿದುಂಬಿಸುತ್ತಾರೆ. ವ್ಯಕ್ತಿ ಅಥವ ಗುಂಪು ಅಥವ ಪಕ್ಷದ ಜನಪರ ಕಾಳಜಿ, ಹೋರಾಟಗಳು, ತತ್ವಗಳು ಚುನಾವಣೆಗೆ ಸಲ್ಲದು ಎಂದು ಪರೋಕ್ಷವಾಗಿ ಜನರೇ ಸಾಬೀತು ಮಾಡುತ್ತಾರೆ. ಅವರು ಗೆಲ್ಲಿಸುವ ಜನಪ್ರತಿನಿಧಿಗಳು ಈಗ ಯಾವ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೋ ಅದನ್ನೇ ಮುಂದುವರೆಸಲಿ, ಆದರೆ ಮಾಧ್ಯಮಗಳು ಮತ್ತು ಹೋರಾಟಗಾರರು ಮಾತ್ರ ಭ್ರಷ್ಟರ ವಿರುದ್ಧ ಮಾತನಾಡಬೇಕು ಮತ್ತು ಹೋರಾಡುತ್ತಿರಬೇಕು ಎಂದು ಅಪೇಕ್ಷಿಸುತ್ತಾರೆ. ಹೋರಾಟಗಾರರು ಅಕಸ್ಮಾತ್ ಆಗಿ ಚುನಾವಣಾ ರಾಜಕಾರಣಕ್ಕೆ ಬಂದರೆ ಅವರ ಕೈ ಹಿಡಿಯುವ ಮಾತೇ ಇಲ್ಲ. ಮತ್ತು ನಮ್ಮ ಇತ್ತೀಚಿನ ದಿನಗಳ ಇತಿಹಾಸದಲ್ಲಿ ಹಾಗೆ ಚುನಾವಣೆಗೆ ನಿಲ್ಲುವ ಸಾಮಾಜಿಕ ಹೋರಾಟಗಾರರಲ್ಲಿ ಬಹುತೇಕರು ಸೋತ ನಂತರ ಚುನಾವಣಾ ರಾಜಕಾರಣದಲ್ಲಿ ಇರುವುದೂ ಇಲ್ಲ. ಹಾಗಾಗಿ ಜನರಿಗೆ ಅವರ ಬದ್ಧತೆ ಮತ್ತು ಕಾಳಜಿಯ ಬಗ್ಗೆಯೂ ಸಕಾರಣವಾದ ಸಂಶಯಗಳು ಇದ್ದೇ ಇರುತ್ತವೆ.

-ರವಿ ಕೃಷ್ಣಾರೆಡ್ಡಿ

ಸ್ವತಃ ಯೋಗೇಂದ್ರ ಯಾದವ್‍ರು 20ನೇ ಶತಮಾನದ ಸಿದ್ಧಾಂತಗಳ ಕುರಿತು ನಕಾರಾತ್ಮಕವಾಗಿ ಮಾತನಾಡಿದರೂ, ಈ ಹೊಸ ಸೂತ್ರವನ್ನು 20ನೇ ಶತಮಾನದ ಅನುಭವದಿಂದ ಭಟ್ಟಿ ಇಳಿಸಿ, ಹೊಸ ಶತಮಾನದ ಚಳವಳಿಗೆಂದೇ ತಯಾರಿಸಿದಂತಿತ್ತು. ಈ ರೀತಿಯ ರಾಜಕಾರಣದ ತಳಮಟ್ಟದ ಘಟಕವೇ ಸ್ವರಾಜ್ ಕೇಂದ್ರ. ಅಂತಹ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿತ್ತು. ಸ್ವಲ್ಪ ಮಟ್ಟಿಗೆ ನಿರಾಶೆ ಮೂಡಿಸಿದ ಸಂಗತಿಯೆಂದರೆ, ಗಡಿಬಿಡಿಯಲ್ಲಿಯೇ ಸ್ವರಾಜ್ ಇಂಡಿಯಾ ಪಕ್ಷವು ಸ್ಥಾಪನೆಯಾಯಿತು ಮತ್ತು ಈಗ ಚುನಾವಣೆಗೆ ಹೋಗುತ್ತಿರುವ ಸಂದರ್ಭದಲ್ಲಿ ಬಹುಶಃ ಕರ್ನಾಟಕದಲ್ಲಿ ಒಂದು ಸ್ವರಾಜ್ ಕೇಂದ್ರವೂ ಸಕ್ರಿಯವಾಗಿಲ್ಲ.

ಇರಲಿ, ಇಂತಹದೊಂದು ಸೂತ್ರೀಕರಣ ಮಾಡಿ ಪರ್ಯಾಯ ರಾಜಕಾರಣದ ಚರ್ಚೆಗೆ ಬೇಕಾದ ತಳಹದಿ ಹಾಕಿದ್ದಕ್ಕೆ ಯೋಗೇಂದ್ರ ಯಾದವ್‍ರನ್ನು ನಾವು ಮೆಚ್ಚಿಕೊಳ್ಳಲೇಬೇಕು. ಆ ಸೂತ್ರವು, ಪ್ರಜಾತಂತ್ರವನ್ನು ಗಟ್ಟಿಗೊಳಿಸಬಲ್ಲ ಹಲವು ಬಗೆಯ ಕ್ರಿಯಾಶೀಲ ಪ್ರಕ್ರಿಯೆಗಳನ್ನು ಒಳಗೊಳ್ಳುವ ವಿಧಾನದಂತೆ ತೋರುತ್ತದೆ. ಅದನ್ನು ಆರಂಭಿಸುವ ಮುನ್ನ ಸ್ವತಃ ಯೋಗೇಂದ್ರ ಯಾದವ್‍ರೇ ಬಹಳ ಹಿಂದೆ ‘ಸೆಮಿನಾರ್’ ನಿಯತಕಾಲಿಕಕ್ಕೆ ಬರೆದುಕೊಟ್ಟ ಪ್ರಜಾತಾಂತ್ರಿಕ ಮತ್ತು ಚುನಾವಣಾ ಸುಧಾರಣೆಗಳ ಲೇಖನಗಳತ್ತ ನಾವೊಮ್ಮೆ ಕಣ್ಣು ಹಾಯಿಸಬೇಕಾಗುತ್ತದೆ. ಅದರೊಂದಿಗೆ ಸಂಸದೀಯ ಪ್ರಜಾತಂತ್ರದ ಮಿತಿಗಳ ಕುರಿತು ಅತ್ಯಂತ ಮೌಲಿಕವಾದ ಮಾತುಗಳನ್ನು 70 ವರ್ಷಗಳ ಹಿಂದೆ ಬರೆದಿರುವುದು ಯಾರು ಗೊತ್ತೇ? ಡಾ.ಬಿ.ಆರ್. ಅಂಬೇಡ್ಕರ್. ಬಹುಶಃ ಮಾಕ್ರ್ಸ್‍ವಾದಿಗಳನ್ನು ಬಿಟ್ಟರೆ ಅದರ ಬಗ್ಗೆ ಅಷ್ಟು ಸ್ಪಷ್ಟವಾದ ವ್ಯಾಖ್ಯಾನ ಅವರಿಂದಲೇ ಬಂದಿದೆ. 21ನೇ ಶತಮಾನದ ಪರ್ಯಾಯ ರಾಜಕಾರಣವನ್ನು ಆರಂಭಿಸುವ ಯಾರಿಗೇ ಆದರೂ, ಯಾದವ್‍ರ ಸೂತ್ರದ ಜೊತೆಗೆ ಇವೆರಡು ಸಿದ್ಧಾಂತಗಳ ಕಣ್ಣೋಟವೂ ಇರಲೇಬೇಕು.

ಹಣ, ಆಮಿಷ, ಜಾತಿ, ಧರ್ಮಗಳನ್ನು ಬೇರೆ ಬೇರೆ ರೀತಿಯಲ್ಲಿ ಎಲ್ಲಾ ಪಕ್ಷಗಳೂ ರಾಜಕಾರಣಕ್ಕೆ ಬಳಸುತ್ತಿರುವ ಹೊತ್ತಿನಲ್ಲಿ, ಜನರ ಬದುಕಿನ ಸಮಸ್ಯೆಗಳನ್ನು ಚುನಾವಣಾ ವಿಷಯವನ್ನಾಗಿಸುವ ಆಂದೋಲನದಿಂದಲೂ ಪರ್ಯಾಯ ರಾಜಕಾರಣವನ್ನು ಶುರು ಮಾಡಬಹುದು. ದೇಶದ ಜನಸಮೂಹ, ಅದರಲ್ಲೂ ಹೊಸ ತಲೆಮಾರಿನ ಯುವಜನತೆ (Millenials ಎಂದು ಕರೆಯಲ್ಪಡುತ್ತಿರುವ ಹೊಸ ಸಹಸ್ರಮಾನದ ಯುವಜನ)ಯ ಅಂತಃಶಕ್ತಿಯ ಮೇಲೆ ವಿಶ್ವಾಸವಿಟ್ಟು ಅದನ್ನು ಆರಂಭಿಸಬೇಕು. ಅವರು ಬಾಬ್ರಿ ಮಸೀದಿ ಬಿದ್ದದ್ದನ್ನು ನೋಡಿಲ್ಲ. ಸರ್ಕಾರಗಳನ್ನು ನಡುಗಿಸಿದ ಯಾವ ಬೃಹತ್ ಚಳವಳಿಗಳನ್ನೂ ಅವರು ನೋಡಿಲ್ಲ. ಹಾಗಾಗಿ 15 ವರ್ಷದ ಹಿಂದಿದ್ದ ಸಿನಿಕತನ ಅವರಲ್ಲಿ ಅಷ್ಟಾಗಿ ಇಲ್ಲ. ಆದರೆ, ಜಾತಿ ಹೋಗಬೇಕು ಎಂದರೆ ಮೀಸಲಾತಿ ಹೋಗಬೇಕು ಎಂದು ಅತೀ ಮಾತನಾಡುವ ಅವರ ತೆಳು ತಿಳುವಳಿಕೆ ನಮ್ಮೊಳಗೆ ಅಸಹನೆ ಮೂಡಿಸಬಾರದು. ಅದೇ ಸಂದರ್ಭದಲ್ಲಿ ರೋಹಿತ್ ವೇಮುಲನಂತಹ ತಳಸಮುದಾಯದ ಇನ್ನೊಬ್ಬ ಅಸಾಧಾರಣ ವ್ಯಕ್ತಿ ನೊಂದುಕೊಳ್ಳದಂತಹ ಸಂವೇದನೆಯನ್ನೂ ನಮ್ಮ ಚಳವಳಿ ರೂಪಿಸಬೇಕು. ಶೋಷಿತ ಸಮುದಾಯಗಳ ಹಕ್ಕುಗಳು ಯಾರಪ್ಪನ ಮನೆಯಿಂದ ನೀಡಲಾಗುತ್ತಿರುವ ಕೊಡುಗೆಯೂ ಅಲ್ಲವೆಂಬುದು ಕಾಮನ್‍ಸೆನ್ಸ್ ಆಗಬೇಕು.

ಆದರೆ, ಧ್ರುವೀಕರಣದ ರಾಜಕಾರಣವೇ ವಿಜೃಂಭಿಸುತ್ತಿದೆ. ಒಳಮೀಸಲಾತಿಯ ಪ್ರಶ್ನೆಯನ್ನೆತ್ತಿಕೊಂಡು ನಡೆಯುತ್ತಿರುವ ‘ಹೋರಾಟ’ ನಮ್ಮ ಕಣ್ಣೆದುರಿಗೇ ಇದೆ. ಯಾವುದೇ ಮಾನದಂಡ ಅನುಸರಿಸಿದರೂ, ಒಳ ಮೀಸಲಾತಿಯು ಅತ್ಯಂತ ಪ್ರಜಾತಾಂತ್ರಿಕವಾದ ಬೇಡಿಕೆ. ಆದರೆ, ಅದು ಅತ್ಯಂತ ಶೋಷಿತ ಸಮುದಾಯದೊಳಗೇ ಬಿರುಕು ಹುಟ್ಟಿಸುತ್ತಿರುವ ಪರಿ ಆಘಾತಕಾರಿಯಾಗಿದೆ. ಯಾರು ಮೀಸಲಾತಿಯೆಂಬ ಪರಿಕಲ್ಪನೆಗೇ ವಿರುದ್ಧವಿದ್ದಾರೋ, ಅವರೂ ಅದನ್ನು ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ.

ಈ ಧ್ರುವೀಕರಣದ ರಾಜಕಾರಣವನ್ನು ಮೆಟ್ಟಿ ನಿಲ್ಲುವ, ಒಳಗೊಳ್ಳುವ ಸಾಮಾಜಿಕ ರಾಜಕೀಯ ಆರ್ಥಿಕ ಆಂದೋಲನವೊಂದರ ಮೂಲಕ ಪರ್ಯಾಯ ರಾಜಕಾರಣ ಹುಟ್ಟಿ ಬರಬೇಕು. ಇಲ್ಲದಿದ್ದರೆ ಅತ್ಯಂತ ಸುಸಂಬದ್ಧವಾದ ನಮ್ಮ ತರ್ಕವೂ ಇಲ್ಲಿ ಕೆಲಸ ಮಾಡುವುದಿಲ್ಲ. ಕಳೆದ ವಾರದ ಬೆಳವಣಿಗೆಯನ್ನೇ ನೋಡಿ. ದೇಶವನ್ನು ಬೆಚ್ಚಿ ಬೀಳಿಸಬೇಕಿದ್ದ ನ್ಯಾಯಮೂರ್ತಿ ಚಲಮೇಶ್ವರ್ ಮತ್ತಿತರ ಮೂವರು ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ಜನಸಾಮಾನ್ಯರ ನಡುವೆ ಅಂತಹ ಆತಂಕವನ್ನೇನೂ ಉಂಟು ಮಾಡಲಿಲ್ಲ. ಅದರಲ್ಲೂ ಸುಶಿಕ್ಷಿತ ಜನರ ನಡುವೆ ಅದೊಂದು ಇಶ್ಯೂ ಅಂತಲೂ ಅನ್ನಿಸಲಿಲ್ಲ. ಭ್ರಷ್ಟಾಚಾರದ ಆರೋಪವನ್ನೂ ಸೇರಿದಂತೆ ಹಲವು ಬಗೆಯ ಕಳಂಕದ ಆರೋಪ ಹೊತ್ತಿರುವ ನ್ಯಾಯಾಂಗದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸಮರ್ಥಿಸುವ ವಾದ ಸರಣಿಗಳು ಕೆಲವೇ ಗಂಟೆಗಳಲ್ಲಿ ತಯಾರಾದವು. ಸುಳ್ಳಿನ ಫ್ಯಾಕ್ಟರಿಗಳಿಂದ ಹೊರಬಂದ ಥೀಸಿಸ್ಸುಗಳು ವಾಟ್ಸಾಪ್ ವಿಶ್ವವಿದ್ಯಾಲಯದಲ್ಲಿ ಕೆಲವು ನಿಮಿಷಗಳಲ್ಲಿ ಸರ್ವವ್ಯಾಪಿಯಾದವು. ಚಲಮೇಶ್ವರ್ ಮತ್ತು ಇತರ ಮೂವರು ನ್ಯಾಯಾಧೀಶರ ವಿರುದ್ಧ ಅಲ್ಲಿ ತೀರ್ಪು ಕೊಡಲಾಗಿತ್ತು. ಅವುಗಳಲ್ಲಿ ಒಂದು ಆರೋಪವೇನು ಗೊತ್ತೇ? ಈ ನ್ಯಾಯಮೂರ್ತಿಗಳನ್ನು ಸಮರ್ಥಿಸುತ್ತಿರುವ ಒಬ್ಬ ವಕೀಲರು ಉಗ್ರವಾದದ ಆರೋಪ ಹೊತ್ತಿದ್ದ ಮುಸ್ಲಿಂ ವ್ಯಕ್ತಿಯ ಪರ ನ್ಯಾಯಾಲಯದಲ್ಲಿ ವಾದಿಸಿದ್ದರು ಎಂಬುದು!

ಆದರೆ, ಕಡು ಭ್ರಷ್ಟಾಚಾರದ ಆರೋಪಿಗಳ ಮತ್ತು ದೇಶವನ್ನು ಕೊಳ್ಳೆ ಹೊಡೆದ ಸಂಸ್ಥೆಗಳ ಪರ ದೇಶದ ಹಾಲಿ ಹಣಕಾಸು ಮಂತ್ರಿ ವಾದಿಸಿದ್ದರು ಎಂಬ ತರ್ಕದ ಮುಖಾಂತರ ಇದನ್ನು ಎದುರಿಸಲಾಗದು. ಏಕೆಂದರೆ, ಧ್ರುವೀಕರಣದ ಪಾಲಿಟಿಕ್ಸಿನಲ್ಲಿ ಭ್ರಷ್ಟಾಚಾರ ಅಷ್ಟು ದೊಡ್ಡ ವಿಚಾರ ಅಲ್ಲ. ಜರ್ನಲಿಸಮ್ಮಿನ ಲವಲೇಶವೂ ಇರದ ಮಾಧ್ಯಮಗಳ ಅರಚಾಟವು ಯಾರ ಪರ ನಿಂತಿದೆಯೆಂಬುದನ್ನು ನೋಡಿದರೆ, ಇದರ ಸಂಕೀರ್ಣತೆ ಅರ್ಥವಾಗುತ್ತದೆ.

ಈ ರೀತಿಯ ಧ್ರುವೀಕರಣವನ್ನು ಎದುರಿಸಬಲ್ಲ ‘ಒಳಗೊಳ್ಳುವ ಆಂದೋಲನ’ ಕಟ್ಟುವ ನಿಟ್ಟಿನಲ್ಲಿ ‘ಉದ್ಯೋಗಕ್ಕೇ ಓಟು’ ಆಂದೋಲನವೊಂದು ಸಣ್ಣ ಪ್ರಯತ್ನ. ಈ ಬರಹ ಬರೆಯುತ್ತಿರುವ ನಾನೂ ಅದರ ಜೊತೆಗಾರನೆಂಬ ಕಾರಣಕ್ಕೆ ಇದನ್ನು ಹೇಳುತ್ತಿಲ್ಲ. ಸಮಸ್ತ ಗ್ರಾಮೀಣ ಸಮುದಾಯದ ಸಮಸ್ಯೆಯನ್ನೂ ಕೃಷಿ ಬಿಕ್ಕಟ್ಟನ್ನೂ ಜೊತೆಯಾಗಿ ಅಡ್ರೆಸ್ ಮಾಡಬಲ್ಲ ಆಂದೋಲನ, ಎಲ್ಲಾ ಬಗೆಯ ಗುತ್ತಿಗೆ ಹಾಗೂ ಅಸಂಘಟಿತ ಕಾರ್ಮಿಕರನ್ನು ಜೊತೆಗೂಡಿಸಬಲ್ಲ ಚಳವಳಿ ಮತ್ತು ನಿರುದ್ಯೋಗದ ಸಮಸ್ಯೆಯನ್ನು ಇವೆರಡರ ಜೊತೆಗೆ ಬೆಸೆಯಬಲ್ಲ ಹೋರಾಟವೊಂದರ ಅಗತ್ಯ ಇಂದು ದೇಶಕ್ಕಿದೆ. ತನ್ನೊಳಗೆ ಜಾತಿ, ಲಿಂಗ ತಾರತಮ್ಯ ಮತ್ತು ಎಲ್ಲ ಬಗೆಯ ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ ನ್ಯಾಯದ ಅಂಶವನ್ನೂ ಒಳಗೊಂಡು ಅದು ನಡೆಯಬೇಕು. ನೇರವಾಗಿ ಓಟಿನ ರಾಜಕಾರಣವನ್ನು ಅದು ಮುಖಾಮುಖಿಯಾಗಬೇಕು. ಇದುವರೆಗಿನ ಪರ್ಯಾಯ ರಾಜಕಾರಣದ ಪ್ರಯತ್ನಗಳಿಂದ ಪಾಠಗಳನ್ನು ಕಲಿತುಕೊಂಡಿರಬೇಕು.

ಅಂತಹದೊಂದು ಪರ್ಯಾಯ ರಾಜಕಾರಣದ ಮಾದರಿಗಾಗಿ ನನ್ನಂತಹವರು ಎದುರು ನೋಡುತ್ತಿದ್ದೇವೆ.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮