2nd ಫೆಬ್ರವರಿ ೨೦೧೮

ಮಹದಾಯಿ ನದಿ ಯೋಜನೆ ಪಕ್ಷ ರಾಜಕಾರಣಕ್ಕೆ ಮಾನವೀಯತೆಯ ಬಲಿ!

ಬಸವರಾಜ ಭೂಸಾರೆ

ಈ ವಿವಾದ ಮಾತುಕತೆ ಮೂಲಕ ಇತ್ಯರ್ಥವಾಗುವುದು ಕನಸಿನ ಮಾತು. ನ್ಯಾಯಮಂಡಳಿ ನೀಡಲಿರುವ ತೀರ್ಪಿಗೆ ಕಾಯುವುದು ಅನಿವಾರ್ಯ. ಸರಕಾರ ರಾಜ್ಯಕ್ಕೆ ಅನ್ಯಾಯ ಆಗದಂತೆ ಸಮರ್ಥ ವಾದ ಮಂಡಿಸಬೇಕಷ್ಟೇ.

ಮಹದಾಯಿ ನದಿ ನೀರು ಹಂಚಿಕೆ ವಿವಾದ ಈಗ ಜಟಿಲಗೊಂಡಿದೆ. ಈ ನದಿ ನೀರು ಪಡೆಯುವುದಕ್ಕಾಗಿ ಧಾರವಾಡ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಿಂದ ರೈತರ ಹೋರಾಟ ತೀವ್ರಗೊಂಡಿದೆ. ವಿಶೇಷವಾಗಿ ಗದಗ ಜಿಲ್ಲೆ ನರಗುಂದದಲ್ಲಿ ರೈತರು ಕರ್ನಾಟಕ ರೈತ ಸೇನಾ ಸಂಘಟನೆ ಅಡಿಯಲ್ಲಿ 900ಕ್ಕೂ ಹೆಚ್ಚು ದಿನಗಳಿಂದ ಅನಿರ್ದಿಷ್ಟ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ಅವಧಿಯಲ್ಲಿ ಬಿಜಾಪುರ—ಹುಬ್ಬಳ್ಳಿ ಮಾರ್ಗದಲ್ಲಿರುವ ನರಗುಂದ ಹಾಗೂ ನವಲಗುಂದ ಪಟ್ಟಣಗಳಲ್ಲಿ ನೂರಾರು ಬಾರಿ ರಸ್ತೆತಡೆ, ಬಂದ್ ಆಚರಿಸಲಾಗಿದೆ. ಇದೇ ಕಾರಣಕ್ಕಾಗಿ ಹಲವು ಬಾರಿ ರಾಜ್ಯ ಬಂದ್ ಕೂಡ ನಡೆಸಲಾಗಿದೆ. ಕೆಲವೊಮ್ಮೆ ಹೋರಾಟ ಹಿಂಸಾರೂಪ ಪಡೆದು ಕೆಲವು ರೈತರು ಜೀವವನ್ನೂ ಕಳೆದುಕೊಂಡಿದ್ದಾರೆ.

ಹುಬ್ಬಳ್ಳಿ—ಧಾರವಾಡ ಅವಳಿ ನಗರಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಪರಿಣಾಮವಾಗಿ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ. ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ ಎಂದೇ ಕರೆಯಲ್ಪಡುವ ಹುಬ್ಬಳ್ಳಿ ಮಹಾನಗರದ ಆರ್ಥಿಕ ವ್ಯವಹಾರ ಬಹಳಷ್ಟು ಕುಸಿದಿದೆ. ಕೈಗಾರಿಕೋದ್ಯಮಗಳು ರೋಸಿ ಹೋಗಿವೆ.

ಆದಾಗ್ಯೂ ರಾಜಕೀಯ ಪಕ್ಷಗಳು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಹಲವು ಬಾರಿ ಸರ್ವಪಕ್ಷ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದರೂ ಒಮ್ಮತ ಮೂಡಿಲ್ಲ. ಒಂದೆರಡು ಬಾರಿ ರಾಜ್ಯದ ನಿಯೋಗ ದೆಹಲಿಗೆ ತೆರಳಿ, ವಿವಾದ ಬಗೆಹರಿಸಲು ಪ್ರಧಾನಿ ಅವರ ಮಧ್ಯಸ್ಥಿಕೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಯಾವ ಪಕ್ಷದವರೂ ರೈತರಿಗೆ ವಾಸ್ತವ ತಿಳಿಸುತ್ತಿಲ್ಲ. ಮಾತುಕತೆ ಮೂಲಕ ಇತ್ಯರ್ಥವಾಗಿ ತ್ವರಿತಗತಿಯಲ್ಲಿ ಜಾರಿಗೊಳ್ಳಬೇಕಿದ್ದ ಅಭಿವೃದ್ಧಿ ಯೋಜನೆಯೊಂದು ಪಕ್ಷ ರಾಜಕಾರಣಕ್ಕೆ ಬಲಿಯಾದ ತಾಜಾ ಉದಾಹರಣೆಯಿದು.

ಮೂಲ ಉದ್ದೇಶದಂತೆ ಈ ಯೋಜನೆ ಜಾರಿಗೊಂಡಿದ್ದರೆ ಮುಂಬೈಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ 13 ತಾಲ್ಲೂಕುಗಳ ಜನರಿಗೆ ಪ್ರತಿದಿನ ಶುದ್ಧ ಕುಡಿಯುವ ನೀರು ಪೂರೈಸಬಹುದಿತ್ತು. ಸದಾ ಬರಗಾಲಕ್ಕೆ ತುತ್ತಾಗುವ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರೆ ಆತ್ಮಹತ್ಯೆಗೆ ಶರಣಾದ ಎಷ್ಟೋ ರೈತರ ಜೀವ ಉಳಿಯುತ್ತಿತ್ತು.

ಗೋವಾದ ಮಿಥ್ಯಾರೋಪ

ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ಹರಿಸುವುದರಿಂದ ಪಶ್ಚಿಮಘಟ್ಟ ಪರಿಸರಕ್ಕೆ ಹಾನಿಯಾಗಲಿದೆ ಮತ್ತು ಸಮುದ್ರದಲ್ಲಿ ಮೀನು ಉತ್ಪತ್ತಿಗೆ ತೊಡಕಾಗಲಿದೆ. ಮಹದಾಯಿ ನದಿಕಣಿವೆಯಲ್ಲಿ ನೀರಿನ ಕೊರತೆಯಿದ್ದು, ಇದರಿಂದ ಮಲಪ್ರಭಾ ನದಿಗೆ ನೀರು ತಿರುಗಿಸುವುದು ಸೂಕ್ತವಲ್ಲ. ಮಹದಾಯಿ ಒಂದು ಪ್ರತ್ಯೇಕ ನದಿ ಕಣಿವೆಯಾಗಿದ್ದು, ಒಂದು ಕಣಿವೆಯಿಂದ ಮತ್ತೊಂದು ನದಿಕಣಿವೆಗೆ ನೀರು ಹರಿಸುವಂತಿಲ್ಲ. ಬೇಕಿದ್ದರೆ ಮಹದಾಯಿ ನದಿಕಣಿವೆಯಲ್ಲೇ ಕರ್ನಾಟಕ ನೀರು ಬಳಸಿಕೊಳ್ಳಲಿ.

ಛೋಟಾ ಮುಂಬೈ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ ಮಹಾನಗರದ ನಾಗರಿಕರಿಗೆ ಸಧ್ಯ 5 ದಿನಕ್ಕೊಮ್ಮೆ ಕುಡಿಯುವ ನೀರು ಕೊಡಲಾಗುತ್ತಿದೆ. ಜಿಲ್ಲಾ ಕೇಂದ್ರ ಧಾರವಾಡದಲ್ಲೂ ಇದೇ ಪರಿಸ್ಥಿತಿ. ತಾಲ್ಲೂಕು ಕೇಂದ್ರಗಳಾದ ನರಗುಂದ, ರೋಣ, ನವಲಗುಂದ ಪಟ್ಟಣಗಳಲ್ಲಿ 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಸ್ಥಿತಿಯೇ ಹೀಗಾದರೆ ಗ್ರಾಮೀಣ ಜನರನ್ನು ಕೇಳುವವರಾರು? ಮಹದಾಯಿ ನದಿ ನೀರು ಹಂಚಿಕೆ ವಿವಾದವಾಗದಿದ್ದರೆ, ಕಳಸಾ—ಬಂಡೂರಿ ನಾಲಾ ಯೋಜನೆ ಜಾರಿಗೊಂಡಿದ್ದರೆ ಈ ಸಮಸ್ಯೆಗಳೇ ಇರುತ್ತಿರಲಿಲ್ಲ. ಇಂತಹ ಅವಕಾಶವನ್ನೆಲ್ಲ ಪಕ್ಷ ರಾಜಕಾರಣ ನುಂಗಿಹಾಕಿದೆ. ಈ ವಿಷಯದಲ್ಲಿ ಎಲ್ಲಾ ಪಕ್ಷಗಳು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ರಾಜಕಾರಣ ಮಾಡಿವೆ; ಎರಡೂ ರಾಷ್ಟ್ರೀಯ ಪಕ್ಷಗಳು ಸ್ಪರ್ಧೆಗಿಳಿದಿವೆ. ಗೋವಾದ ರಾಜಕೀಯ ಮುಖಂಡರಿಗಂತೂ ಈ ನದಿ ವಿವಾದವೇ ಚುನಾವಣಾ ರಾಜಕಾರಣದ ಪ್ರಮುಖ ಅಸ್ತ್ರ.

ಮಹದಾಯಿ ನದಿ ಇತಿಹಾಸ

ಮಹದಾಯಿ ನದಿ ಕರ್ನಾಟಕದ ಬೆಳಗಾವಿ ಜಿಲ್ಲೆ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಉಗಮವಾಗಿದೆ. ಸಹ್ಯಾದ್ರಿ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 914 ಮೀ. ಎತ್ತರದಲ್ಲಿ ಹುಟ್ಟಿದ ಈ ನದಿ ಕರ್ನಾಟಕದಲ್ಲಿ 35 ಕಿ.ಮೀ. ಕ್ರಮಿಸಿ ಮಹಾರಾಷ್ಟ್ರ ದಾಟಿ, ಗೋವಾ ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ ‘ಮಾಂಡೋವಿ’ ಎಂದು ಹೆಸರು. ಮಹದಾಯಿ ನದಿಯು ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ, ದೂದಸಾಗರ ಹೀಗೆ ಅನೇಕ ಉಪನದಿ, ಹಳ್ಳ ಹಾಗೂ ತೊರೆಗಳಿಂದ ಕೂಡಿದ ಪ್ರತ್ಯೇಕ ನದಿಕಣಿವೆಯೇ ಆಗಿದೆ. ಇದು ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹದಾಯಿ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದರಿಂದ ಸ್ವಲ್ಪ ದೂರದಲ್ಲೇ ಮಲಪ್ರಭಾ ನದಿಯೂ ಹುಟ್ಟಿದ್ದು, ಅದು ಪೂರ್ವಾಭಿಮುಖವಾಗಿ ಹರಿಯುವುದು ವಿಶೇಷ. ಇಲ್ಲಿಂದ 4 ಕಿ.ಮೀ. ದೂರದಲ್ಲೇ ಕಳಸಾ ನಾಲೆ ಹರಿಯುತ್ತದೆ. ಮಹಾದಾಯಿ 2,032 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಅದರಲ್ಲಿ ಕರ್ನಾಟಕದ ಪಾಲು 412 ಚ.ಕಿ.ಮೀ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ನದಿಯಲ್ಲಿ ಒಟ್ಟು 210 ಟಿಎಂಸಿ ನೀರು ಲಭ್ಯವಿದ್ದು ಕರ್ನಾಟಕ 45 ಟಿಎಂಸಿ ನೀರಿನ ಪಾಲನ್ನು ಹೊಂದಿದೆ.

ಮಹದಾಯಿ ತಿರುವು ಯೋಜನೆ ಹಿನ್ನೋಟ

ಬೆಳಗಾವಿ, ಧಾರವಾಡ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಹಲವು ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲೆಂದು ಮತ್ತು ಕುಡಿಯುವ ನೀರು ಒದಗಿಸಲೆಂದು ಸವದತ್ತಿಯ ನವಿಲುತೀರ್ಥದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ‘ರೇಣುಕಾಸಾಗರ’ ಜಲಾಶಯ ನಿರ್ಮಿಸಲಾಯಿತು. 37 ಟಿ.ಎಂ.ಸಿ. ನೀರಿನ ಸಂಗ್ರಹ ಸಾಮಥ್ರ್ಯದ ಈ ಜಲಾಶಯದಿಂದ 5.27 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸುವ ಗುರಿ ಹೊಂದಲಾಗಿತ್ತು. ಆದರೆ ಇದುವರೆಗೆ ಈ ಜಲಾಶಯ ಭರ್ತಿಯಾಗಿದ್ದು 3—4 ಬಾರಿ ಮಾತ್ರ. ಮಲಪ್ರಭಾ ನದಿಯಲ್ಲಿ ನೀರಿನ ಕೊರತೆ ಎದುರಾಯಿತು. ಮಲಪ್ರಭಾದ ನೀರಿನ ಕೊರತೆಯನ್ನು ನೀಗಿಸಲು ರೂಪುಗೊಂಡಿದ್ದೇ ಮಹದಾಯಿ ತಿರುವು ಯೋಜನೆ. ಮಹದಾಯಿ ನದಿಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

1978ರಲ್ಲಿಯೇ ಮಹದಾಯಿ ನೀರಾವರಿ ಯೋಜನೆ ಬಗ್ಗೆ ಚರ್ಚೆ ಆದರೂ ಕಾರ್ಯರೂಪಕ್ಕೆ ಬರಲಿಲ್ಲ. 1978ರಲ್ಲಿ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ನದಿ ನೀರನ್ನು ಬಳಸಿಕೊಳ್ಳುವ ಬಗ್ಗೆ ವಿಧಾನಸಭೆಯಲ್ಲಿ ಪ್ರಥಮವಾಗಿ ಪ್ರಸ್ತಾಪವಾಯಿತು. ಆರ್. ಗುಂಡೂರಾವ್ ಅಂದು ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ಆರ್.ಬೊಮ್ಮಾಯಿಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ಕೊಡುವಂತೆ ಸೂಚಿಸಿದ್ದರು. ಈ ಕುರಿತು ಕೂಲಂಕಷವಾಗಿ ಅಧ್ಯಯನ ಮಾಡಿದ ಸಮಿತಿಯು 1980ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಮಹದಾಯಿ ನದಿ ನೀರನ್ನು ಬಳಸಿಕೊಳ್ಳಲು ಯೋಜನೆಯೊಂದನ್ನು ರೂಪಿಸುವಂತೆ ಬೊಮ್ಮಾಯಿಯವರು ತಮ್ಮ ವರದಿಯಲ್ಲಿ ಶಿಫಾರಸು ಮಾಡಿದರು. ಆದರೆ ಈ ವರದಿ ಜಾರಿಗೊಳ್ಳದೇ ಮೂಲೆಗುಂಪಾಯಿತು.

ವೀರೇಶ ಸೊಬರದಮಠ
ಕರ್ನಾಟಕ ರೈತ ಸೇನಾ ಅಧ್ಯಕ್ಷ

ಇಷ್ಟು ಸುದೀರ್ಘ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿದಿತ್ತೆ?

ಖಂಡಿತ ತಿಳಿದಿತ್ತು. ಯಾಕೆಂದರೆ, ನಾಲ್ಕು ದಶಕಗಳಿಂದ ವಿವಾದವನ್ನು ಬಗೆಹರಿಸದೇ ರಾಜಕೀಯಕ್ಕೆ ಬಳಸಿಕೊಂಡಿದ್ದರು. ರಾಜಕೀಯದವರಿಗೆ ಇಚ್ಛಾಶಕ್ತಿ ಇಲ್ಲ, ಮುಂದೆ ಕೂಡ ಚುನಾವಣೆ ಬಂದಾಗ ಇದನ್ನು ಬಳಕೆ ಮಾಡಿಕೊಳ್ತಾರೆ ಅನ್ನುವುದು ಗಮನದಲ್ಲಿತ್ತು.

ಹೋರಾಟದಿಂದ ನಿಮಗಾದ ಅನುಭವ ಏನು?

ಯೋಜನೆಯನ್ನು ಜಾರಿಗೊಳಿಸುವ ಇಚ್ಛಾಶಕ್ತಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳಿಗೆ ಇಲ್ಲ. ನಮ್ಮ ಹೋರಾಟದಿಂದ ರಾಜ್ಯದ ಜನರಿಗೆ ಇದು ಮನವರಿಕೆ ಆಗಿದೆ. ಕುಡಿಯುವ ನೀರಿಗೆ ತಕರಾರು ಮಾಡಬಾರದೆಂದು ಸಂವಿಧಾನದಲ್ಲೇ ಹೇಳಿದೆ. ನಮ್ಮನ್ನು ಆಳುವವರು ಒಂದಾಗಿ ಯಾಕೆ ನೀರು ತರಬಾರದು? ಇದರಲ್ಲೂ ರಾಜಕೀಯ ಮಾಡ್ತಿದ್ದಾರಲ್ಲಾ... ಇವರು ಎಷ್ಟು ನೀಚರಿದ್ದಾರೆ ಅನ್ನುವುದು ಅರಿವಾಗ್ತಿದೆ.

ರಾಜಕೀಯ ಮಾಡುತ್ತಿರುವವರು ಯಾರು?

ಮೂರೂ ಪಕ್ಷದವರು ರಾಜಕೀಯ ಮಾಡ್ತಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್ಸಿನವರು ರಾಜಕೀಯ ಮಾಡ್ತಿಲ್ಲ ಅನ್ನುವಂತೆ ಬಿಂಬಿಸ್ತಿದ್ದಾರೆ. ಬಿಜೆಪಿಯವರು ಮಾಡಲಿ ಎಂದು ಅವರ ಮೇಲೆ ಹಾಕಿ, ಚುನಾವಣೆಗೆ ಬಳಕೆ ಮಾಡಿಕೊಳ್ಳಲು ಮುಂದೂಡ್ತಿದ್ದಾರೆ. ಬಿಜೆಪಿಯವರು ಇದಕ್ಕೆ ಪರಿಹಾರವೇ ಇಲ್ಲ ಎಂದು ಜನಕ್ಕೆ ಮೋಸ ಮಾಡ್ತಿದ್ದಾರೆ. ಇನ್ನು ಜೆಡಿಎಸ್ ನವರಿಗೂ ಕಾಳಜಿಯಿಲ್ಲ. ಯೋಜನೆಗೆ ಈಶ್ವರಪ್ಪನವರು ಅಡಿಗಲ್ಲು ಹಾಕುವಾಗ ಇದೇ ಕುಮಾರಸ್ವಾಮಿ ಮತ್ತು ದೇವೇಗೌಡರು ವಿರೋಧ ಮಾಡಿದ್ದರು. ರೈತರ ಹೋರಾಟ ಜನಾಂದೋಲನವಾಗಿದೆ ಎಂದು ಈಗ ಬೇಳೆ ಬೇಯಿಸಿಕೊಳ್ಳಲು ನೋಡ್ತಿದ್ದಾರೆ ಅಷ್ಟೇ.

ವಿವಾದ ಬಗೆಹರಿಯುವ ಭರವಸೆ ಇದೆಯೇ?

ಹೋರಾಟಗಾರರು ಆಶಾವಾದಿಗಳಾಗಿರಬೇಕು. ಫೆಬ್ರುವರಿ 5 ರಂದು ಸರ್ವಪಕ್ಷ ಸಭೆ ಇದೆ. ಅದರಲ್ಲಿ ಮೂರು ಪಕ್ಷದವರು ಒಂದಾಗಿ ನೀರು ತರುವ ಬಗ್ಗೆ ನಿರ್ಣಯ ಮಾಡಿದರೆ ಒಳಿತು. ಇಲ್ಲದಿದ್ದರೆ ರೈತರ ದುರ್ದೈವ ಅಂದುಕೊಂಡು ನ್ಯಾಯಮಂಡಳಿಯಿಂದ ನ್ಯಾಯ ಪಡೆಯುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸ್ತೇವೆ.

ನೀವು ರಾಜಕೀಯಕ್ಕೆ ಬರುವ ಇಚ್ಛೆಯಿದೆಯೇ?

ಇಲ್ಲ, ಖಂಡಿತ ಇಲ್ಲ. ಆದರೆ, ರಾಜಕಾರಣಿಗಳು ಯಾವತ್ತೂ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡ್ತಿಲ್ಲ ಎಂಬುದನ್ನು ಮನಗಂಡ ಮೇಲೆ ಜನ ಮುಂದೆ ಒಳ್ಳೆಯವರನ್ನು ರಾಜಕೀಯಕ್ಕೆ ಕಳಿಸಬಹುದು.

ನಿಮ್ಮ ಹೋರಾಟದ ಅಂತಿಮ ಗುರಿ ಏನು?

ರಾಜಕಾರಣಿಗಳು ಮತ್ತು ರಾಜಕೀಯ ವ್ಯವಸ್ಥೆ ಒಂದು ಸಮಸ್ಯೆಯನ್ನು ಬಗೆಹರಿಸಲು ವಿಫಲವಾದಾಗ ಜನಾಂದೋಲನದ ಮೂಲಕ ವ್ಯವಸ್ಥೆಯನ್ನು ಬದಲಿಸಬಹುದು, ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದೇ ನನ್ನ ಗುರಿ.

ಅನಂತರ ನೆನೆಗುದಿಗೆ ಬಿದ್ದಿದ್ದ ಈ ವರದಿಗೆ 1988ರಲ್ಲಿ ಬೊಮ್ಮಾಯಿಯವರು ಮುಖ್ಯಮಂತ್ರಿ ಆದ ಮೇಲೆ ಮರುಜೀವ ಬಂದಿತು. ಇದನ್ನೊಂದು ಜಲವಿದ್ಯುತ್ ಯೋಜನೆಯಾಗಿ ಮಾರ್ಪಡಿಸಿ ಮಹದಾಯಿ ಜಲಾಯನ ಪ್ರದೇಶದಿಂದ 9 ಟಿಎಂಸಿ ನೀರನ್ನು ಮಲಪ್ರಭಾಗೆ ವರ್ಗಾಯಿಸಿ ವಿದ್ಯುತ್ ಉತ್ಪಾದನೆಗೂ ಯೋಜಿಸಲಾಗಿತ್ತು. ಈ ಸಂಬಂಧ ಬೊಮ್ಮಾಯಿಯವರು ಆಗಿನ ಗೋವಾ ಮುಖ್ಯಮಂತ್ರಿ ಪ್ರತಾಪ್‍ಸಿಂಗ್ ರಾಣೆ ಅವರೊಂದಿಗೆ ಮಾತುಕತೆ ನಡೆಸಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಹಂತದಲ್ಲಿ ಗೋವಾ ಮುಖ್ಯಮಂತ್ರಿ ಪ್ರತಾಪಸಿಂಗ್ ರಾಣೆ ಕರ್ನಾಟಕದ ಪಾಲಿನ 45 ಟಿ.ಎಂ.ಸಿ. ನೀರು ಕೊಡಲು ಒಪ್ಪಿದ್ದರು ಎನ್ನಲಾಗಿದೆ. ಮುಂದೆ ಕೆಲವೇ ದಿನಗಳಲ್ಲಿ ಬೊಮ್ಮಾಯಿಯವರ ಸರಕಾರ ವಜಾಗೊಂಡು ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತು. ಬಳಿಕ ಗೋವಾ ಸರಕಾರ ಯೋಜನೆಗೆ ವಿರೋಧ ಮಾಡಿತು. ಇದರಿಂದಾಗಿ ಯೋಜನೆಗೆ ತಡೆಯಾಯಿತು. ಗೋವಾ ಸರಕಾರ ಮಹದಾಯಿ ನದಿಗೆ ಜಲವಿದ್ಯುತ್ ಆಗಲಿ, ಇತರ ಇನ್ನಾವುದೇ ಯೋಜನೆಯನ್ನು ರೂಪಿಸಿಲ್ಲ. ಕರ್ನಾಟಕ ತನ್ನ ಪಾಲಿನ ನೀರು ಪಡೆಯಲು ಯೋಜನೆ ರೂಪಿಸಿದರೂ ಅದಕ್ಕೆ ಗೋವಾ ಅಡ್ಡಿ ಮಾಡುತ್ತಲೇ ಇದೆ.

ಮಹದಾಯಿ ನದಿ ಕೊಳ್ಳದಲ್ಲಿ 210 ಟಿ.ಎಂ.ಸಿ. ನೀರು ಹರಿಯುತ್ತದೆ. ಅದರಲ್ಲಿ ಗೋವಾ ಹೆಚ್ಚೆಂದರೆ 10 ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುತ್ತದೆ. ಉಳಿದ 200 ಟಿ.ಎಂ.ಸಿ. ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದರೂ ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಿರುವ ನೀರಿನಲ್ಲಿ 7.56 ಟಿ.ಎಂ.ಸಿ ನೀರು ಕೊಡಲು ಇಲ್ಲದ ತಗಾದೆ ತೆಗೆಯುತ್ತಿದೆ.

ಕಳಸಾ—ಬಂಡೂರಿ ನಾಲಾ ಯೋಜನೆ

ಮಹದಾಯಿ ನದಿ ಯೋಜನೆಗೆ ಗೋವಾ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ 2000ನೇ ಇಸವಿಯಲ್ಲಿ ಆಗಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ ಅವರು ವೈಯಕ್ತಿಕ ಆಸಕ್ತಿ ವಹಿಸಿ ರಾಜ್ಯದ ವ್ಯಾಪ್ತಿಯಲ್ಲೇ ಹರಿಯುತ್ತಿದ್ದ ಕಳಸಾ—ಬಂಡೂರಿ ನಾಲಾಗಳಿಗೆ ಪ್ರತ್ಯೇಕ ಯೋಜನೆಯನ್ನು ರೂಪಿಸಿದರು. ಕಳಸಾ ಮತ್ತು ಬಂಡೂರಿ ನಾಲಾಗಳು ಮಹದಾಯಿ ನದಿ ಕಣಿವೆಯಲ್ಲಿದ್ದರೂ ರಾಜ್ಯದಲ್ಲೇ ಹುಟ್ಟಿ ಇಲ್ಲೇ ಹರಿಯುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ತಿರುಗಿಸಿಕೊಂಡು ಕುಡಿಯುವುದಕ್ಕಾಗಿ 7.56 ಟಿ.ಎಂ.ಸಿ. ನೀರಿಗೆ ಯೋಜನೆ ರೂಪಿಸಿದರೆ ಗೋವಾದ ವಿರೋಧ ಬರಲಿಕ್ಕಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆಯು ಹುಸಿಯಾಯಿತು.

ಕಳಸಾ ನಾಲಾ ತಿರುವು

ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ 24 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವ ಯೋಜನೆ ಇದೆ. ಮೊದಲನೆಯದಾಗಿ, ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ ಮಾಡುವುದು. ಎರಡನೆಯದಾಗಿ, ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.

ಯೋಜನೆ ರೂಪಿಸಿದಾಗ ಇದರ ಒಟ್ಟು ವೆಚ್ಚ 44 ಕೋಟಿ ರೂ. ಗಳು. ಆದರೆ ಈಗ ಅದರ ವೆಚ್ಚ 500 ಕೋಟಿಗೂ ಮೀರಿದೆ. ಈ ಪೈಕಿ ಜೆಡಿಎಸ್—ಬಿಜೆಪಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ ಅರಣ್ಯೇತರ ಪ್ರದೇಶದಲ್ಲಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆಗ ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಗೋವಾದ ವಿರೋಧವನ್ನು ಲೆಕ್ಕಿಸದೇ, ಗಟ್ಟಿ ಧೈರ್ಯ ಮಾಡಿ ಕಾಮಗಾರಿಗೆ ಅಡಿಗಲ್ಲು ಹಾಕಿದರು. ಆ ಮೂಲಕ ಯೋಜನೆಗೆ ಚಾಲನೆ ನೀಡುವ ಧೈರ್ಯ ತೋರಿದರು. ಅನಂತರ ಸಚಿವರಾದ ಬಸವರಾಜ ಬೊಮ್ಮಾಯಿ ಕಾಮಗಾರಿಯನ್ನು ಮುಂದುವರೆಸಿದರು. ಈಗ ಕಾಲುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಣೆಕಟ್ಟು ನಿರ್ಮಿಸುವುದು ಬಾಕಿ ಇದೆ. ಈ ಕಾಮಗಾರಿಯನ್ನು ನಿಲ್ಲಿಸಲೆಂದು ಸುಪ್ರೀಂಕೋರ್ಟ್ ಹಾಗೂ ಹಸಿರು ನ್ಯಾಯಮಂಡಳಿ ಮುಂದೆ ಗೋವಾ ಸರಕಾರ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ನ್ಯಾಯಮಂಡಳಿ ರಚನೆಯಾದ ಮೇಲೆ ಕಾಮಗಾರಿಯನ್ನು ಅಷ್ಟಕ್ಕೇ ನಿಲ್ಲಿಸಲಾಗಿದೆ.

ಬಂಡೂರಿ ನಾಲಾ ತಿರುವು

ಬಂಡೂರಿ ಮಹದಾಯಿ ನದಿಯ ಇನ್ನೊಂದು ಉಪನದಿ. ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು, ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು 5.15 ಕಿ.ಮೀ ಉದ್ದದ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು ಈ ಯೋಜನೆಯ ಉದ್ದೇಶ. ಬಂಡೂರಿ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಯೋಜನೆ ತಯಾರಿಸುವಾಗ ಇದರ ವೆಚ್ಚ 49 ಕೋಟಿ ರೂ.ಗಳು. ಈಗ ಅದು 400 ಕೋಟಿ ಮೀರುತ್ತದೆ. ಈ ಯೋಜನೆ ಸ್ವಲ್ಪ ಅರಣ್ಯ ಪ್ರದೇಶದಲ್ಲಿ ಬರಲಿದೆ. ಈ ಯೋಜನೆಗೆ ಇನ್ನೂ ಚಾಲನೆಯನ್ನೇ ನೀಡಿಲ್ಲ.

ಮಹದಾಯಿ ವಿಚಾರದಲ್ಲಿ ಪಕ್ಷ ರಾಜಕಾರಣದ ಬಗ್ಗೆ ಮಾತನಾಡುವವರಿಗೆ ಒಕ್ಕೂಟ ವ್ಯವಸ್ಥೆಯ ಅರಿವಿಲ್ಲ ಅನಿಸುತ್ತೆ. ಇಲ್ಲಿ ವಿಷಯ ಇರುವುದು ಗೋವಾ, ಕರ್ನಾಟಕ ರಾಜ್ಯಗಳು ಹಾಗೂ ಕೇಂದ್ರ ಸರಕಾರದ ನಡುವೆ. ಎರಡು ರಾಜ್ಯ ಸರಕಾರಗಳ ನಡುವಿನ ವಿವಾದ ಇದು. ಹಾಗಾಗಿ ಅಂತರ್ ರಾಜ್ಯ ಜಲವಿವಾದ ಕಾಯ್ದೆಯಡಿ ಕೇಂದ್ರ ಸರಕಾರ ಮತ್ತು ನ್ಯಾಯಮಂಡಳಿ ತೆಗೆದುಕೊಳ್ಳುವ ನಿರ್ಣಯದಿಂದ ವಿವಾದ ಬಗೆಹರಿಸಬಹುದು. ಪಕ್ಷ ರಾಜಕಾರಣದಿಂದ ಅಲ್ಲ, ಸೌಹಾರ್ದ ಪರಿಹಾರಕ್ಕೆ ಮಾರ್ಗವಿದೆ. ಪ್ರಧಾನಿಯವರು ಎರಡೂ ರಾಜ್ಯ ಸರಕಾರಗಳನ್ನು ಕರೆದು ಮಾತನಾಡಿದರೆ ಬಗೆಹರಿಯುತ್ತೆ. ಆದರೆ ಆ ಸಾಧ್ಯತೆ ಕಾಣುತ್ತಿಲ್ಲ. ಮಹದಾಯಿ ವಿವಾದವನ್ನು ಬಗೆಹರಿಸಲು ಕೇಂದ್ರದಲ್ಲಿನ ಸಚಿವರು, ಸಂಸದರು ಪ್ರಯತ್ನವನ್ನೇ ಮಾಡುತ್ತಿಲ್ಲ. ಹಾಗಾಗಿ ನ್ಯಾಯಮಂಡಳಿ ತೀರ್ಪೇ ಅಂತಿಮ. ಎಚ್.ಕೆ.ಪಾಟೀಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು

ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ. ಇದರಿಂದ ಹುಬ್ಬಳ್ಳಿ—ಧಾರವಾಡ ಮಹಾನಗರಗಳು ಮತ್ತು ಬೆಳಗಾವಿ, ಧಾರವಾಡ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ 13 ತಾಲ್ಲೂಕುಗಳ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಯೋಜಿಸಲಾಗಿದೆ. ಇದುವೆ ಕಳಸಾ— ಬಂಡೂರಿ ನಾಲಾ ಯೋಜನೆ.

ಕೇಂದ್ರದ ಒಪ್ಪಿಗೆ ಹಾಗೂ ತಡೆ

ಹುಬ್ಬಳ್ಳಿ—ಧಾರವಾಡ ಅವಳಿ ನಗರಗಳಿಗೆ ಹಾಗೂ ಇತರ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ಈ ಯೋಜನೆ ಅಗತ್ಯ ಎಂಬುದನ್ನು ಕರ್ನಾಟಕ ಸರಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ 30.4.2002 ರಂದು ಕೆಲವು ಷರತ್ತುಗಳೊಂದಿಗೆ ಯೋಜನೆಗೆ ತನ್ನ ತಾತ್ವಿಕ ಒಪ್ಪಿಗೆ ನೀಡಿತು. ಇದಾದ 5 ತಿಂಗಳಲ್ಲೇ ಗೋವಾ ಸರಕಾರದ ವಿರೋಧ ಹಾಗೂ ಆಕ್ಷೇಪಣೆಗಳಿಗೆ ಮನ್ನಣೆ ನೀಡಿದ ಕೇಂದ್ರ ಜಲ ಆಯೋಗ 19.9.2002 ರಂದು ತಾನೇ ನೀಡಿದ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು.

ಅಧ್ಯಯನ ಮತ್ತು ಸಮೀಕ್ಷೆಗಳು

ಅಧ್ಯಯನಗಳು ಮತ್ತು ಸಮೀಕ್ಷೆಗಳು ಗೋವಾದ ವಾದದಲ್ಲಿರುವ ಪೊಳ್ಳುತನವನ್ನು ಎತ್ತಿತೋರಿಸಿವೆ. ಕೇಂದ್ರ ಸರಕಾರದ ಸಲಹೆಯಂತೆ ಕರ್ನಾಟಕ ಸರಕಾರ ಮಾಡಿಕೊಂಡ ಮನವಿ ಮೇರೆಗೆ ಮಹಾರಾಷ್ಟ್ರದ ನಾಗಪುರದಲ್ಲಿರುವ `ನೀರಿ’ ಸಂಸ್ಥೆ ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆಯು ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿತು.

ಅದರಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ. ಕೇಂದ್ರ ಜಲ ಆಯೋಗವೇ ನಡೆಸಿದ ಅಧ್ಯಯನದ ಪ್ರಕಾರ ಮಹದಾಯಿ ನದಿ ಕಣಿವೆಯಲ್ಲಿ 210 ಟಿ.ಎಂ.ಸಿ. ನೀರು ದೊರೆಯುತ್ತದೆ. ಆದರೆ ಗೋವಾ ಸರಕಾರ ಮಾತ್ರ ಈ ಯಾವ ವರದಿಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.

ಗೋವಾದ ವಾದದಂತೆ ಮಹದಾಯಿ ನದಿ ನೀರನ್ನು ಅದೇ ಕಣಿವೆ ವ್ಯಾಪ್ತಿಯಲ್ಲಿ ಕರ್ನಾಟಕ ಬಳಸಿಕೊಳ್ಳಲು ಸಾಧ್ಯವಿಲ್ಲ. ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಮಲಪ್ರಭಾ ನದಿಗೆ ಈ ನೀರನ್ನು ಹರಿಸುವುದು ಅಗತ್ಯವಾಗಿದೆ. ಹೀಗೆ ಒಂದು ಕಣಿವೆಯಿಂದ ಇನ್ನೊಂದು ನದಿಕಣಿವೆಗೆ ನೀರು ಹರಿಸಬಾರದೆಂಬ ನಿಯಮವೇನೂ ಇಲ್ಲ. ಒಂದು ನದಿಕಣಿವೆಯಿಂದ ಇನ್ನೊಂದು ನದಿಕಣಿವೆ ಪ್ರದೇಶಗಳಿಗೆ ನ್ಯಾಯಮಂಡಳಿಗಳೇ ನೀರು ಹಂಚಿಕೆ ಮಾಡಿದ ಉದಾಹರಣೆಗಳು ನಮ್ಮ ದೇಶದಲ್ಲಿ ಬೇಕಾದಷ್ಟಿವೆ. ಉದಾಹರಣೆಗೆ ಕೃಷ್ಣಾ ನದಿ ಕಣಿವೆ ನೀರನ್ನು ಮಹಾರಾಷ್ಟ್ರ ಬೇರೆ ನದಿ ಕಣಿವೆಗೆ ಸೇರಿದ ಕೊಯ್ನಾ ವಿದ್ಯುತ್ ಯೋಜನೆಗೆ ಬಳಸಿಕೊಂಡಿದೆ. ಹಾಗೆಯೇ ಆಂಧ್ರಪ್ರದೇಶವು ಬೇರೆ ಕಣಿವೆಗೆ ಸೇರಿದ ತೆಲುಗುಗಂಗಾಕ್ಕೆ 25 ಟಿ.ಎಂ.ಸಿ. ಸೇರಿದಂತೆ ವಿವಿಧ ಯೋಜನೆಗಳಿಗೆ ಸಾಕಷ್ಟು ನೀರು ಬಳಸಿಕೊಳ್ಳಲು ಕೃಷ್ಣಾ ಒಂದನೇ ಮತ್ತು ಎರಡನೇ ನ್ಯಾಯಮಂಡಳಿಗಳೇ ಅವಕಾಶ ಮಾಡಿಕೊಟ್ಟಿವೆ. ವಾಸ್ತವ ಹೀಗಿರುವಾಗ ಗೋವಾದ ವಾದ ಮೊಂಡುತನದ್ದು ಎಂಬುದು ಸ್ಫಟಿಕ ಸತ್ಯವಾಗಿದೆ.

ನ್ಯಾಯಾಧಿಕರಣ ನೇಮಕ

ಗೋವಾ ಸರಕಾರ ನ್ಯಾಯಾಧಿಕರಣ ರಚಿಸುವಂತೆ ಕೋರಿ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ 9.7.2002 ರಂದು ಪತ್ರ ಬರೆದರು. ಬಳಿಕ 2006ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಗೋವಾ ಸರಕಾರ ಕಳಸಾ ಬಂಡೂರಿ ಯೋಜನೆ ಕಾಮಗಾರಿಯನ್ನು ತಡೆಯುವಂತೆ ಹಾಗೂ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ವಿನಂತಿಸಿತು. ನವೆಂಬರ್ 16, 2010 ರಂದು ಕೇಂದ್ರ ಸರಕಾರವು `ಮಹದಾಯಿ ಜಲವಿವಾದ ನ್ಯಾಯಾಧಿಕರಣ’ವನ್ನು ರಚಿಸಿತು. ಹೀಗಾಗಿ ಮಹದಾಯಿ ನದಿ ನೀರು ಹಂಚಿಕೆ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಈಗ ನ್ಯಾಯಾಧಿಕರಣದ ಅಂಗಳದಲ್ಲಿವೆ. ಕರ್ನಾಟಕ ಸರಕಾರ ಮಹದಾಯಿ ನದಿ ನೀರಿನ ತನ್ನ ಪಾಲಿನಲ್ಲಿ 2040ನೇ ಇಸವಿವರೆಗೆ ಕುಡಿಯಲೆಂದು 7.56 ಟಿ.ಎಂ.ಸಿ., ನೀರಾವರಿಗೆ 7, ಜಲವಿದ್ಯುತ್ ಯೋಜನೆಗೆ 14.5 ಹಾಗೂ ಕಾಳಿ ಜಲವಿದ್ಯುತ್ ಯೋಜನೆಗೆ 5.5 ಟಿ.ಎಂ.ಸಿ. ಸೇರಿ ಒಟ್ಟು 36 ಟಿ.ಎಂ.ಸಿ. ನೀರಿಗೆ ನ್ಯಾಯಾಧಿಕರಣದ ಮುಂದೆ ಬೇಡಿಕೆ ಇಟ್ಟಿದೆ.

ನ್ಯಾಯಾಧಿಕರಣದ ಅವಧಿ ಪೂರ್ಣಗೊಂಡಿದ್ದು ಈಗ ಮತ್ತೆ 2018ರ ಆಗಷ್ಟ 20 ರವರೆಗೆ ವಿಸ್ತರಿಸಲಾಗಿದೆ. ಈ ನಡುವೆ ಕರ್ನಾಟಕ ಸರಕಾರ ಮಧ್ಯಂತರ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದ್ದು, ಬರುವ ಆಗಷ್ಟ್ 20 ರೊಳಗೆ ಅಂತಿಮ ತೀರ್ಪು ನೀಡಲೇಬೇಕಿದೆ. ಅದಕ್ಕಾಗಿ ಎರಡೂ ರಾಜ್ಯಗಳ ವಾದಗಳನ್ನು ಮತ್ತು ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಮಂಡಳಿ ತೀವ್ರಗತಿಯಲ್ಲಿ ನಡೆಸುತ್ತಿದೆ.

ಪಕ್ಷ ರಾಜಕಾರಣ

ಈಗಾಗಲೇ ಹೇಳಿದಂತೆ ಮಹದಾಯಿ ನದಿ ನೀರಿನ ವಿವಾದದಲ್ಲಿ ಪಕ್ಷ ರಾಜಕಾರಣವೇ ಮೇಲಾಗಿ ಅಭಿವೃದ್ಧಿ ಕಡೆಗಣಿಸಲ್ಪಟ್ಟಿದೆ. ರಾಜ್ಯದಲ್ಲಿನ ಮೂರೂ ಪಕ್ಷಗಳು ಪರಸ್ಪರ ಆರೋಪ—ಪ್ರತ್ಯಾರೋಪ ಮಾಡುತ್ತ ಕಾಲ ಕಳೆದಿವೆ ಹೊರತು ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರಿಲ್ಲ ಎಂದು ಸಾಮಾನ್ಯ ಜನರೂ ಆಡಿಕೊಳ್ಳುತ್ತಿದ್ದಾರೆ. 2002ರಲ್ಲಿ ಗೋವಾ ಸರಕಾರ ಯೋಜನೆಗೆ ವಿರೋಧ ಮಾಡಿದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ತನ್ನದೇ ಪಕ್ಷದ ಗೋವಾ ಸರಕಾರಕ್ಕೆ ತಿಳಿಹೇಳಿ ಕುಡಿಯುವ ನೀರಿನ ಯೋಜನೆ ಜಾರಿಗೆ ಅವಕಾಶ ನೀಡಬೇಕಿತ್ತು. ಆದರೆ ಕರ್ನಾಟಕದಲ್ಲಿ ಆಗ ಕಾಂಗ್ರೆಸ್ ಸರಕಾರ ಇದ್ದುದರಿಂದ ಹಾಗೆ ಮಾಡದೇ ತಾತ್ವಿಕ ಒಪ್ಪಿಗೆಗೆ ತಡೆ ನೀಡಿತು.

ನೀರು ರಾಷ್ಟ್ರದ ಆಸ್ತಿ. ಯಾವ ಒಬ್ಬ ವ್ಯಕ್ತಿ, ಪಕ್ಷ ಅಥವಾ ರಾಜ್ಯಕ್ಕೆ ಸೀಮಿತವಲ್ಲ. ನೀರನ್ನು ಹಂಚಿಕೆ ಮಾಡಿಕೊಳ್ಳುವ ಸಂದರ್ಭ ಬಂದಾಗ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ. ಗೋವಾ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಮಹದಾಯಿ ನದಿ ನೀರು ಹಂಚಿಕೆ ವಿವಾದ ಸುಪ್ರೀಂಕೋರ್ಟಿಗೆ ಹೋಯಿತು. ನ್ಯಾಯಮಂಡಳಿ ರಚನೆ ಆಗುವಂತಾಯಿತು. ಗೋವಾ, ಕರ್ನಾಟಕ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಾದವನ್ನು ಬಗೆಹರಿಸದೇ ಈಗ ಪ್ರಧಾನಿ ನರೇಂದ್ರ ಮೋದಿ ಬಗೆಹರಿಸಲಿ ಎನ್ನುವುದು ಕಾಂಗ್ರೆಸ್ಸಿನ ದ್ವಂದ್ವ ನಿಲುವು. ಈಗ ಒಂದು ವೇಳೆ ಗೋವಾ ಮುಖ್ಯಮಂತ್ರಿ ನೀರು ಬಿಡುತ್ತೇವೆ ಎಂದರೆ ಅಲ್ಲಿನ ಕಾಂಗ್ರೆಸ್ ಪ್ರತಿಭಟನೆ ಮಾಡ್ತದೆ. ಅದರಿಂದ ಬಿಜೆಪಿ ಸರಕಾರ ಕಳೆದುಕೊಳ್ಳಲಿದೆ. ಹಾಗಾಗಿ ಈಗಲೂ ಗೋವಾ ಕಾಂಗ್ರೆಸ್‍ನ್ನು ಒಪ್ಪಿಸಿದರೆ ವಿವಾದ ಮಾತುಕತೆ ಮೂಲಕ ಬಗೆಹರಿಯುತ್ತದೆ. ಇಲ್ಲವಾದರೆ ನ್ಯಾಯಾಧಿಕರಣದ ತೀರ್ಪಿಗೆ ಕಾಯಬೇಕು. ಕೆ.ಎಸ್.ಈಶ್ವರಪ್ಪ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರು

ಬಳಿಕ ಗೋವಾ ವಿಧಾನಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿಕೆ ನೀಡಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಲ್ಲಿ ಅಧಿಕಾರಕ್ಕೆ ಬಂದಿತು. ಮುಂದೆ ಕರ್ನಾಟಕದಲ್ಲೂ ಪರಿಸ್ಥಿತಿ ಬದಲಾಗಿ ಜೆಡಿಎಸ್—ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು, ಕಳಸಾ ಯೋಜನೆಗೆ ಚಾಲನೆ ನೀಡಿತು. ಆಗ ಗೋವಾದಲ್ಲಿದ್ದ ಕಾಂಗ್ರೆಸ್ ಸರಕಾರ ಇದಕ್ಕೆ ಇನ್ನಿಲ್ಲದಂತೆ ವಿರೋಧ ಮಾಡಿತು. ಅದೇ ವೇಳೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತನ್ನದೇ ಪಕ್ಷದ ಗೋವಾ ರಾಜ್ಯ ಸರಕಾರಕ್ಕೆ ಬುದ್ಧಿ ಹೇಳಿ ಯೋಜನೆಯನ್ನು ಮುಂದುವರೆಸಲು ಬಿಡಲಿಲ್ಲ.

ಈ ಪರಂಪರೆ ಈಗಲೂ ಮುಂದುವರೆದಿದೆ. ಪ್ರಧಾನಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಲಿ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ಗೋವಾದ ಕಾಂಗ್ರೆಸ್ಸಿಗರನ್ನು ರಾಜ್ಯ ಕಾಂಗ್ರೆಸ್ಸಿಗರು ಒಪ್ಪಿಸಲಿ ಎಂದು ಬಿಜೆಪಿ ಹೇಳುತ್ತ ಕಾಲ ತಳ್ಳುತ್ತಿವೆ. ಈಗಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಹಿಂದಿನ ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಎಚ್.ಕೆ.ಪಾಟೀಲ ಮುಂತಾದವರು ವೈಯಕ್ತಿಕವಾಗಿ ಯೋಜನೆ ಜಾರಿಗೆ ಕಾಳಜಿ ಹೊಂದಿದ್ದರೂ ಅವರಿಗೆ ಪಕ್ಷ ರಾಜಕಾರಣ ಮೀರಲು ಸಾಧ್ಯವಾಗುತ್ತಿಲ್ಲ.

ಕೊನೆಯ ಮಾತು

ಮಹದಾಯಿ ನದಿ ನೀರಿನಲ್ಲಿ ಕರ್ನಾಟಕದ ಪಾಲು ಇದ್ದೇ ಇದೆ. ಯಾರು ಎಷ್ಟೇ ವಿರೋಧ ಮಾಡಿದರೂ ರಾಜ್ಯಕ್ಕೆ ನೀರು ಸಿಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ನ್ಯಾಯಾಧಿಕರಣ ರಚಿಸಿದರೆ ಯೋಜನೆ ಜಾರಿಗೆ ವಿಳಂಬವಾಗುತ್ತದೆ ಎಂದು ಕರ್ನಾಟಕ ಅದನ್ನು ವಿರೋಧಿಸುತ್ತ ಬಂದಿತು. ಒಂದು ವೇಳೆ, ವಿವಾದ ಉಂಟಾದಾಗಲೇ ನ್ಯಾಯಾಧಿಕರಣ ರಚಿಸಿದ್ದರೆ ತೀರ್ಪು ಹೊರಬಿದ್ದು, ಯೋಜನೆ ಜಾರಿಯಾಗಿ ಹತ್ತಾರು ವರ್ಷಗಳೇ ಕಳೆದಿರುತ್ತಿದ್ದವೇನೋ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಮಾತುಕತೆ ಮೂಲಕ ವಿವಾದ ಇತ್ಯರ್ಥವಾಗುವುದು ಕನಸಿನಂತೆ ಕಾಣುತ್ತದೆ. ನ್ಯಾಯಮಂಡಳಿ ಮುಂಬರುವ ಆಗಷ್ಟ್ ತಿಂಗಳೊಳಗೆ ಅಂತಿಮ ತೀರ್ಪು ನೀಡಬೇಕಿದ್ದು, ಅದರಲ್ಲಿ ರಾಜ್ಯಕ್ಕೆ ಅನ್ಯಾಯ ಆಗದಂತೆ ಸರಕಾರ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಬೇಕಿದೆ. ಅಲ್ಲಿಯವರೆಗೆ ಹೋರಾಟಗಾರರೂ ತಾಳ್ಮೆಯಿಂದ ಕಾಯುವುದು ಒಳಿತು.

ಎನ್.ಎಸ್.ಶಂಕರ್

ಬಿಜೆಪಿ ವಿರೋಧಿ ಒಕ್ಕೂಟ ಸಾಧ್ಯವೇ?

ಜುಲೈ ೨೦೧೮

ಶಾಂತಲಾ ದಾಮ್ಲೆ

ಹೋರಾಟಗಾರ ಅಭ್ಯರ್ಥಿ ಚುನಾವಣಾ ಬವಣೆ

ಜುಲೈ ೨೦೧೮

ಶ್ರೀಶೈಲ ಆಲದಹಳ್ಳಿ

ಸಂಡೂರು ಕುಮಾರಸ್ವಾಮಿ ಬೆಟ್ಟಕ್ಕೆ ಗಣಿ ಕಂಟಕ!

ಜುಲೈ ೨೦೧೮

ಡಾ.ಡಿ.ಸಿ.ನಂಜುಂಡ

ನಿಮ್ಮ ಆನ್‍ಲೈನ್ ಮಾಹಿತಿ ಎಷ್ಟು ಸುರಕ್ಷಿತ?

ಜೂನ್ ೨೦೧೮

ಪ್ರೊ. ರವೀಂದ್ರ ರೇಷ್ಮೆ

ಅಸೆಂಬ್ಲಿ ಫಲಿತಾಂಶ - ಪಕ್ಷ ರಾಜಕಾರಣದ ಪತನ

ಜೂನ್ ೨೦೧೮

ಡಾ.ಟಿ.ಆರ್.ಚಂದ್ರಶೇಖರ

ಭಾರತದಲ್ಲಿ ಬ್ಯಾಂಕಿಂಗ್ ಬುಡ ಗಡಗಡ!

ಮೇ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬೆಳ್ಳಂದೂರಿನಲ್ಲಿ ನೊರೆ ಹೊತ್ತಿ ಉರಿದೊಡೆ...!

ಮೇ ೨೦೧೮

ರಹಮತ್ ತರೀಕೆರೆ

ಪ್ರತಿಮೆಗಳ ರಾಜಕಾರಣ

ಎಪ್ರಿಲ್ ೨೦೧೮

ಹನುಮಂತರೆಡ್ಡಿ ಶಿರೂರು

ಸಿದ್ದರಾಮಯ್ಯನವರ ಕಲ್ಯಾಣ ರಾಜ್ಯ !

ಎಪ್ರಿಲ್ ೨೦೧೮

ದಾಸನೂರು ಕೂಸಣ್ಣ

ಒಳ ಮೀಸಲಾತಿಏಕೆ ಬೇಕು?

ಮಾರ್ಚ್ ೨೦೧೮

ರೇಣುಕಾ ನಿಡಗುಂದಿ

ಮೊಲೆ ಕತ್ತರಿಸಿಕೊಟ್ಟ ನಂಗೇಲಿ ನೆನಪು!

ಮಾರ್ಚ್ ೨೦೧೮

ಡಿ. ಎಸ್. ನಾಗಭೂಷಣ

ಕನ್ನಡ ಮೊದಲು ನಂತರ ಇಂಗ್ಲಿಷ್

ಮಾರ್ಚ್ ೨೦೧೮

ಡಾ. ವಾಸು ಎಚ್. ವಿ

ಈ ಹೊತ್ತಿನ ಕರ್ನಾಟಕ: ಪರ್ಯಾಯ ರಾಜಕಾರಣ

ಫೆಬ್ರವರಿ ೨೦೧೮

ಡಾ.ಕಿರಣ್ ಎಂ.ಗಾಜನೂರು

‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ’

ಫೆಬ್ರವರಿ ೨೦೧೮