ಹೊಸ ಪುಸ್ತಕ

ರಕ್ತ ಸಿಕ್ತ ರತ್ನ
ಡಾ.ಕೆ.ಎನ್.ಗಣೇಶಯ್ಯ
ಪುಟ: 384, ಬೆಲೆ: ರೂ.350

ಇದೊಂದು ರೋಚಕ ಕಾದಂಬರಿ. ಲಂಡನ್ ಪತ್ರಕರ್ತೆ ಮೇರಿ ಬರ್ಮಾ ದೇಶದ ಭಾಗನ್‍ನಲ್ಲಿನ ಪಗೋಡಗಳ ನಡುವೆ ತನ್ನ ಕುಟುಂಬದ ರಹಸ್ಯ ವಸ್ತುವನ್ನು ಹುಡುಕಲು ಒಂದು ರಾತ್ರಿ ಕದ್ದು ಡ್ರೋನ್ ಹಾರಿಸುವುದು, ಆಗ ಅಕೆಯ ಮೇಲೆ ನಡೆಯುವ ಗುಂಡಿನ ದಾಳಿ, ಇದಕ್ಕೆ ಹೆದರಿ ಆಕೆ ಭಾರತದ ರತ್ನಗಿರಿಗೆ ಬರುವುದು, ಅಲ್ಲೂ ನಡೆಯುವ ಕೊಲೆ ಯತ್ನ, ಇದೇ ವೇಳೆ ಮೇರಿಯ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮಾದ ಬೌದ್ಧ ಗುರು ತನ್ನ ಸಹಾಯಕನ್ನು ಈಕೆಯ ಬಳಿ ಕಳಿಸುತ್ತಾನೆ. ಈಕೆಯ ಗೈಡ್‍ಗೆ ಭೂಗತ ಗುಂಪು ಸಂಪರ್ಕಿಸುವುದು, ಇನ್ನೊಂದೆಡೆ ಭಾರತದ ಸಿಬಿಐ ಮತ್ತು ಇತಿಹಾಸ ಪ್ರಾಧ್ಯಾಪಕಿ ಡಾ.ಸುನಿತಾ ನಡೆಸುವ ಸಂಶೋಧನೆಯಿಂದ ಮರೆತುಹೋಗಿದ್ದ ದಾರುಣ ಚರಿತ್ರೆ ಅನಾವರಣಗೊಳ್ಳುವ ರೋಚಕ ವಿಷಯಗಳನ್ನು ಈ ಕಾದಂಬರಿ ಒಳಗೊಂಡಿದೆ.

ಆರ್ಯ ವೀರ್ಯ
ಡಾ.ಕೆ.ಎನ್.ಗಣೇಶಯ್ಯ
ಪುಟ: 152, ಬೆಲೆ: ರೂ.150
ಇದೊಂದು ಕಥಾ ಸಂಕಲನ. ಇದರಲ್ಲಿ ಮೂರು ಕತೆಗಳಿವೆ. ಗಣೇಶಯ್ಯನವರು ಸಂಶೋಧನೆ, ವೈಜ್ಞಾನಿಕ ಹಾಗೂ ಐತಿಹಾಸಿಕ ಬರಹಗಳ ಮೂಲಕ ಹೆಸರು ಮಾಡಿದವರು. ಇಲ್ಲಿನ ಮೂರು ಕತೆಗಳಲ್ಲಿ ಕತೆಗಾರರ ಸಂಶೋಧನಾ ದೃಷ್ಟಿ ಎದ್ದು ಕಾಣುತ್ತದೆ. ಕುತೂಹಲ ಮೂಡಿಸುವ ಕತೆಗಳು ಸಾಕಷ್ಟು ಮಾಹಿತಿಯನ್ನೂ ನೀಡುತ್ತವೆ.

 

 

ತಾರು ಮಾರು
ಡಾ.ಕೆ.ಎನ್.ಗಣೇಶಯ್ಯ
ಪುಟ: 104, ಬೆಲೆ: ರೂ.95
ಇದೊಂದು ಲೇಖನಗಳ ಸಂಗ್ರಹ. ಲೇಖಕರು ತಮ್ಮ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳು, ವಿವಿಧ ಬಗೆಯ ಸನ್ನಿವೇಶಗಳ ಸಂದರ್ಭದಲ್ಲಿ ಮನಸ್ಸಿನಲ್ಲಿ ಮೂಡಿದ ಚಿಂತನೆಗಳನ್ನು ಲೇಖನದ ರೂಪದಲ್ಲಿ ಆಗಾಗ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅವೆಲ್ಲವುಗಳನ್ನು ಒಟ್ಟುಗೂಡಿಸಿದ್ದೇ ಈ ಕೃತಿ.

 

 

 

ನಾಳೆಗೂ ಇರಲಿ ನೀರು
ಇಂಗ್ಲಿಷ್ ಮೂಲ: ಸೇತ್ ಎಂ. ಸಿಗೆಲ್
ಕನ್ನಡಕ್ಕೆ: ರಾಘವೇಂದ್ರ ಹೆಗಡೆ
ಪುಟ: 216, ಬೆಲೆ: ರೂ.225

ನೀರಿನ ಸದ್ಬಳಕೆಯಲ್ಲಿ ಪ್ರಪಂಚದಲ್ಲೇ ಇಸ್ರೇಲ್ ತನ್ನದೇ ಆದ ಮಾದರಿಯನ್ನು ಸೃಷ್ಟಿಸಿದೆ. ಅತ್ಯಂತ ಕಡಿಮೆ ಮಳೆಯಾದರೂ ಕುಡಿಯಲು ಮತ್ತು ಕೃಷಿಗೆ ನೀರಿನ ಕೊರತೆಯಾಗದಂತೆ ಇಸ್ರೇಲ್ ದೇಶ ನೀರಿನ ನಿರ್ವಹಣೆ ಮಾಡುವುದರಲ್ಲಿ ಇತರರಿಗೆ ಅನುಕರಣೀಯ. ಇಸ್ರೇಲ್ ದೇಶದವರಾದ ಸೇತ್ ಎಂ. ಸಿಗೆಲ್ ವೃತ್ತಿಯಲ್ಲಿ ವಕೀಲರು, ಸಾಮಾಜಿಕ ಕಾರ್ಯಕರ್ತರು ಹಾಗೂ ಬರಹಗಾರರಾಗಿದ್ದು ‘ಲೆಟ್ ದೇರ್ ಬಿ ವಾಟರ್’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದು ನೀರಿನ ನಿರ್ವಹಣೆಯನ್ನು ಕುರಿತಾಗಿದೆ. ಬೆಂಗಳೂರಿನ ನೀರಿನ ಭವಣೆಯನ್ನು ಅರಿತ ರಾಘವೇಂದ್ರ ಹೆಗಡೆ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಇಲ್ಲಿನವರಿಗೆ ನೀರಿನ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಮೇಲಿನ ನಾಲ್ಕೂ ಪುಸ್ತಕಗಳ ಪ್ರಕಾಶಕರು: ಅಂಕಿತ ಪ್ರಕಾಶನ, 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004, ದೂ: 080-26617100
*

ತವರಿನ ಸಿರಿ
ವೇದವತಿ ಕೋದಂಡರಾಮ್
ಪುಟ: 208, ಬೆಲೆ: ರೂ.300
ಪ್ರಕಾಶಕರು: ಅರವಿಂದ ಪ್ರಕಾಶನ, ನಂ.352, 15ನೇ ಅಡ್ಡ ರಸ್ತೆ, 4ನೇ ಹಂತ, ಎಚ್.ಎಸ್.ಆರ್. ಬಡಾವಣೆ, ಬೆಂಗಳೂರು-560042, ದೂ: 9845351299
ಇದೊಂದು ಜೀವನಾನುಭವಗಳ ಸಂಕಲನ. ಆಂಧ್ರಪ್ರದೇಶದಿಂದ ವಲಸೆ ಬಂದಿದ್ದ ಉದ್ಯಮಿಗಳ ಕುಟುಂಬದ ಹೆಣ್ಣುಮಗಳಾದ ಲೇಖಕಿ ವೇದವತಿ ಅವರು ತಾವು ಪಡೆದ ಸಂಸ್ಕೃತಿಕ ವ್ಯಕ್ತಿತ್ವದ ನೆನಪುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಭಾರತೀಯ ಮಹಿಳೆಯರು ತಮ್ಮ ತವರು ಮನೆಯವರನ್ನು ಹಾಗೂ ಅಲ್ಲಿನ ಅನುಭವಗಳನ್ನು ಎಂದಿಗೂ ಮರೆಯಲಾರರು. ತವರು ಮನೆಯಲ್ಲಿ ಪಡೆದ ಸಂಸ್ಕಾರವನ್ನು ಜೀನದುದ್ದಕ್ಕೂ ಕೊಂಡೊಯ್ಯುತ್ತಾರೆ. ಇತರರಿಗೂ ಅದನ್ನು ಹಂಚುತ್ತಾರೆ. ಅಂತಹ ಕೆಲಸವನ್ನು ವೇದವತಿ ಇಲ್ಲಿ ಮಾಡಿದ್ದಾರೆ.
*

ಲೂಸಿಯೇಡ್ಸ್
ಲೂಯಿ-ದ-ಕಮೋಯಿಸ್
ಕನ್ನಡಕ್ಕೆ: ಡಾ. ಬಸವರಾಜ ನಾಯ್ಕರ
ಪುಟ: 264, ಬೆಲೆ: ರೂ.250
ಪ್ರಕಾಶನ: ಗೀತಾಂಜಲಿ ಪಬ್ಲಿಕೇಷನ್ಸ್, ನಂ.60, 2ನೇ ಅಡ್ಡ ರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072, ದೂ: 9740066842
ಭಾರತ ಮತ್ತು ಪೋರ್ತುಗೀಜ್ ದೇಶಗಳ ನಡುವೆ ಸ್ಥಾಪಿತವಾದ ವಸಾಹತುಶಾಹಿ ಸಂಬಂಧದ ಪ್ರಾರಂಭಿಕ ಹಂತವನ್ನು ಚಿತ್ರಿಸುವ ಕಥಾ ವಸ್ತುವೇ ಈ ಲೂಸಿಯೇಡ್ಸ್. ಪೋರ್ತುಗೀಜ್‍ನ ವಾಸ್ಕೋ-ಡ-ಗಾಮನು ಸಮುದ್ರಯಾನ ಮಾಡುತ್ತ ಅನೇಕ ಗಂಡಾಂತರಗಳನ್ನು ಎದುರಿಸಿ ಕೊನೆಗೆ ಭಾರತದ ಕಾಲೀಕತ್ ನಗರದ ಮೂಲಕ ಹಾಯ್ದು ಗೋವಾ ತಲುಪುತ್ತಾನೆ. ಬಳಿಕ ಎರಡು ದೇಶಗಳ ನಡುವೆ ವ್ಯಾಪಾರ ಸಂಬಂಧ ಶುರುವಾಗುತ್ತದೆ. ಹದಿನಾರನೆಯ ಶತಮಾನದಿಂದ ಆರಂಭವಾಗುವ ಈ ಸಂಬಂಧ ನಂತರ ಧರ್ಮಪ್ರಚಾರ ಕಾಲಕ್ರಮೇಣ ರಕ್ತ ಸಂಬಂಧವು ಬೆಳೆಯುತ್ತದೆ ಎಂಬುದನ್ನು ಈ ಕೃತಿ ಪ್ರತಿಪಾದಿಸುತ್ತದೆ.
*
ನೂರ್ಮಿಂಚು ಕೋಲ್ಮಿಂಚು
ಅಂತಃಕರಣ
ಪುಟ: 324, ಬೆಲೆ: ರೂ.250
ಪ್ರಕಾಶನ: ಪ್ರಗತಿ ಪ್ರಕಾಶನ, ಮಹಡಿ, ನಂ.2406, 2407/ಕೆ-1, 1ನೇ ಕ್ರಾಸ್, ಹೊಸಬಂಡಕೇರಿ, ಕೆ.ಆರ್. ಮೊಹಲ್ಲಾ, ಮೈಸೂರು-570004, ದೂ: 9448780144
4ನೇ ಕ್ಲಾಸಿನಿಂದ ವಿವಿಧ ಪತ್ರಿಕೆಗಳಲ್ಲಿ ವಾರಕ್ಕೆ ಎರಡು ಅಂಕಣ ಬರೆಯುವ ಅಂಕಣಕಾರ ಈ ಕೃತಿಯ ಲೇಖಕ ಎಂಬುದು ಅಚ್ಚರಿಯ ವಿಷಯ. ಅಂತಃಕರಣ ಈಗಾಗಲೇ 340 ಅಂಕಣ ಪ್ರಬಂಧ, 93 ಕವಿತೆ, ಒಂದು ನಾಟಕ, 5 ಕಾದಂಬರಿಗಳು ಸೇರಿದಂತೆ ಕನ್ನಡ ಮತ್ತು ಇಂಗ್ಲಿಷನಲ್ಲಿ ಒಟ್ಟು 24 ಕೃತಿಗಳನ್ನು ಪ್ರಕಟಿಸಿರುವ ಪುಟ್ಟ ವಯಸ್ಸಿನ ಸಾಹಿತಿ. ಅವರೇ ಬರೆದ ನೂರು ಅಂಕಣ ಪ್ರಬಂಧಗಳನ್ನು ಈ ಕೃತಿ ಒಳಗೊಂಡಿದೆ.
*

 

ಮಾಮರವೇ… ಮಾಮರವೇ
ಎ.ಆರ್.ಪಂಪಣ್ಣ
ಪುಟ: 88, ಬೆಲೆ: ರೂ.90
ಪ್ರಕಾಶಕನ: ಆಹ್ವಾನ ಪ್ರಕಾಶನ, ಬಸರಕೋಡು-583224, ತಾ.ಹಗರಿಬೊಮ್ಮನಹಳ್ಳಿ, ಜಿ.ಬಳ್ಳಾರಿ, ದೂ: 9686978399
ಜಾಗತೀಕರಣದ ಪರಿಣಾಮವಾಗಿ ಇಂದು ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ರೈತ ಸಂಘಟನೆಗಳು ಇದರ ವಿರುದ್ಧ ಹೋರಾಟ ನಡೆಸಿವೆ. ಇಂಥ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಲೇಖಕ ಎ.ಆರ್.ಪಂಪಣ್ಣ ರೈತರ ಕಷ್ಟ ಕಾರ್ಪಣ್ಯಗಳು, ಅವರ ನಿರೀಕ್ಷೆಗಳು ಸೇರಿದಂತೆ ರೈತರ ಜೀವನದ ಸುತ್ತಲಿನ ಬೆಳವಣಿಗೆಣಿಗೆಗಳನ್ನು ಇಲ್ಲಿ ಲಲಿತ ಪ್ರಬಂಧಗಳ ರೂಪದಲ್ಲಿ ಮಂಡಿಸಿದ್ದಾರೆ.
*

 

ಬಾಳೆ ಗರ್ಭದಲಿ
ಹೇಮಾ ಪಟ್ಟಣಶೆಟ್ಟಿ
ಪುಟ: 140, ಬೆಲೆ: ರೂ.80
ಹೇಮಾ ಪಟ್ಟಣಶೆಟ್ಟಿ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ತಮ್ಮ 60 ಕವನಗಳನ್ನು ಒಟ್ಟುಗೂಡಿಸಿ ಇಲ್ಲಿ ಪ್ರಕಟಿಸಿದ್ದಾರೆ. ದಾಂಪತ್ಯ, ಮಕ್ಕಳು ಮತ್ತು ತಾಯ್ತನದ ಕಷ್ಟ-ಸುಖಗಳನ್ನು ಅವರು ಸೃಜನಶೀಲತೆಗೆ ಬಳಸಿಕೊಂಡಿದ್ದಾರೆ. ಅವರ ಕವನಗಳು ಮಹಿಳಾವಾದಿ ಸಾಹಿತ್ಯದಿಂದ ಪ್ರಭಾವಿತವಾದಂತೆ ಕಾಣುತ್ತದೆ.

 

 

ಅಪರಂಪಾರ
ಸಿದ್ಧಲಿಂಗ ಪಟ್ಟಣಶೆಟ್ಟಿ
ಪುಟ: 88, ಬೆಲೆ: ರೂ.60
ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇವರ ಹಲವು ಕವನ ಸಂಕಲನಗಳು ಈಗಾಗಲೇ ಪ್ರಕಟವಾಗಿವೆ. ಪಟ್ಟಣಶೆಟ್ಟಿ ಅವರು ಪತ್ರಿಕೆಗಳಲ್ಲಿ ಅಂಕಣ ಬರೆಯುವ ಮೂಲಕವೂ ಸಾಕಷ್ಟು ಸುದ್ದಿಮಾಡಿದವರು. ಪ್ರಸ್ತುತ ಕವನ ಸಂಕಲನದಲ್ಲಿ 52 ಕವನಗಳನ್ನು ಪ್ರಕಟಿಸಿದ್ದಾರೆ.

 

 

ಈ ಎರಡು ಕೃತಿಗಳ ಪ್ರಕಾಶಕರು: ಅನನ್ಯ ಪ್ರಕಾಶನ, ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004, ದೂ: 0836-2462718
*
ಅಡಗುದಾಣ
ಡಾ.ಎಂ.ಡಿ.ಒಕ್ಕುಂದ
ಪುಟ:114, ಬೆಲೆ: ರೂ.100
ಇದೊಂದು ಕವನಸಂಕಲನ ಇದರಲ್ಲಿ ಡಾ.ಒಕ್ಕುಂದ ಅವರ 56 ಕವಿತೆಗಳಿವೆ. ಇಲ್ಲಿನ ಕವಿತೆಗಳೆಲ್ಲಾ ಈಗಾಗಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾದವು. ಕವಿಯೇ ಹೇಳುವಂತೆ ಇಲ್ಲಿನ ಪ್ರತೀ ಕವನವೂ ಒಂದೊಂದು ಬಗೆಯ ಅಡಗುದಾಣದ ಅನುಭೂತಿಯನ್ನು ನೀಡುತ್ತವೆ.

 

 

 

ಉಡಿಯಕ್ಕಿ
ಡಾ.ವಿನಯಾ
ಪುಟ:212, ಬೆಲೆ: ರೂ.200
ಡಾ.ವಿನಯಾ ಕನ್ನಡದ ಸಂವೇದನಾಶೀಲ ಲೇಖಕಿಯರಲ್ಲಿ ಒಬ್ಬರು. ಕಾವ್ಯ, ಸಣ್ಣಕತೆ, ವಿಮರ್ಶೆ ಹಾಗೂ ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಮೌಲಿಕವಾದದ್ದನ್ನು ಬರೆಯುತ್ತಾ ಬಂದಿದ್ದಾರೆ. ಪ್ರಸ್ತುತ ಉಡಿಯಕ್ಕಿ ಡಾ.ವಿನಯಾ ಅವರು ಆಗಾಗ ಪತ್ರಿಕೆಗಳಲ್ಲಿ ಪ್ರಕಟಿಸಿದ ಲೇಖನಗಳನ್ನು ಒಟ್ಟುಗೂಡಿಸಿದ ಕೃತಿ. ಇಲ್ಲಿನ ಲೇಖನಗಳು ಆಗಿನ ಸಂದರ್ಭಕ್ಕೆ ಬರೆದವುಗಳಾಗಿದ್ದರೂ ಬರಹಗಳ ರೀತಿ ಕಾವ್ಯಾತ್ಮಕವಾಗಿದ್ದು, ಸಮಾಜದಲ್ಲಿನ ವಾಸ್ತವತೆಯನ್ನು ಬಿಂಬಿಸುವ ಕತೆಗಳಾಗಿವೆ.

 

 

ಟ್ರಯೆಲ್ ರೂಮಿನ ಅಪ್ಸರೆಯರು
ಭುವನಾ ಹಿರೇಮಠ
ಪುಟ: 72, ಬೆಲೆ: ರೂ.70
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸೋಮನಹಟ್ಟಿಯವರಾದ ಕವಯತ್ರಿ ಭುವನಾ ವಿಜ್ಞಾನ ವಿಷಯದ ಪದವೀಧರೆ, ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಪ್ರವೃತ್ತಿಯಿಂದ ಇವರೊಬ್ಬ ಸಾಹಿತಿ. ಈಗಾಗಲೇ ಇವರ ಕವಿತೆ, ಕತೆ ಹಾಗೂ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ‘ಟ್ರಯೆಲ್ ರೂಮಿನ ಅಪ್ಸರೆಯರು’ ಕವನವು ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ. ಇದು ಮೊದಲ ಕವನ ಸಂಕಲನವಾದರೂ ಹೆಣ್ಣಿನ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಅನುಭವ ಇವರ ಕವನಗಳಲ್ಲಿ ಕಾಣುತ್ತದೆ.

 

ಈ ಮೂರು ಪುಸ್ತಕಗಳ ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ, ಎಮ್ಮಿಗನೂರ, ಬಳ್ಳಾರಿ-583113 ದೂ: 9480353507
*
ಬದುಕಿನ ಅರ್ಥವನು ಹುಡುಕುತ್ತಾ
ವಿಕ್ಟರ್ ಫ್ರಾಂಕ್ಲ್, ಕನ್ನಡಕ್ಕೆ: ಸುಭಾಷ್ ರಾಜಮಾನೆ
ಪುಟ: 158, ಬೆಲೆ: ರೂ.160
ಪ್ರಕಾಶನ: ಆಕೃತಿ ಪುಸ್ತಕ, ನಂ31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010, ದೂ: 080-23409479
ವಿಕ್ಟರ್ ಫ್ರಾಂಕ್ಲ್ ಜಗತ್‍ಪ್ರಸಿದ್ದ ಮನಶಾಸ್ತ್ರಜ್ಞರಲ್ಲಿ ಒಬ್ಬರು. ವಿಯೆನ್ನಾದಲ್ಲಿ ಸಾವಿರಾರು ಮನೋರೋಗಿಗಳ ಆತ್ಮಹತ್ಯೆಯನ್ನು ತಡೆದು ಜನಪ್ರಿಯರಾದವರು. ಜೀವನವೆಂದರೆ ಏನು? ಅದರ ಅರ್ಥವೇನು? ಇಂಥ ಬದುಕಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಮನುಷ್ಯ ಜೀವನದಲ್ಲಿ ಏನೇ ಕಷ್ಟ ಬಂದರೂ ಈಸಬಲ್ಲ, ಇದ್ದು ಜೈಸಬಲ್ಲ ಎಂಬುದು ಫ್ರಾಂಕ್ಲ್‍ನ ಸಿದ್ಧಾಂತದ ಸಾರಾಂಶ. ‘ಲೋಗೋಥೆರಪಿಯ ಮಾನವತಾವಾದಿ’ ಈ ಸಿದ್ಧಾಂತವನ್ನು ವಿವರಿಸುವುದಕ್ಕಾಗಿಯೇ ಫ್ರಾಂಕ್ಲ್ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಎಂಬ ಪುಸ್ತಕ ಬರೆದರು. ಅದನ್ನು ಸುಭಾಷ ರಾಜಮಾನೆ ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬರದಂತೆ ಅನುವಾದಿಸಿದ್ದಾರೆ.
*
ನಿಷೇಧಕ್ಕೊಳಪಟ್ಟ ಒಂದು ನೋಟು
ವಿಲ್ಸನ್ ಕಟೀಲ್
ಪುಟ: 110, ಬೆಲೆ: ರೂ.120
ಕವಿ ವಿಲ್ಸನ್ ಮೂಲತಃ ಕೊಂಕಣಿ ಭಾಷೆಯವರು. ಈಗ ಕನ್ನಡದಲ್ಲೂ ಹೊಸ ಆಲೋಚನೆಗಳೊಂದಿಗೆ ಕಾವ್ಯಗಳನ್ನು ಬರೆಯುತ್ತಿದ್ದಾರೆ. ಈ ಸಂಕಲನ ವಿಲ್ಸನ್‍ರ 48 ಕವಿತೆಗಳನ್ನು ಒಳಗೊಂಡಿದೆ. ಕೊಂಕಣಿ ಭಾಷೆಯ ಲಯ, ಜನಪದ ಸೊಬಗುಗಳನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದು.

 

 

ಮಲ್ಲಿಗೆ ಹೂವಿನ ಸಖ
ಟಿ.ಎಸ್.ಗೊರವರ
ಪುಟ: 63, ಬೆಲೆ: ರೂ.80
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರಾದ ಟಿ.ಎಸ್.ಗೊರವರ ಸದ್ಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಅಪ್ಪಟ ಗ್ರಾಮೀಣ ಯುವಪ್ರತಿಭೆ. ಈಗಾಗಲೇ ಎರಡು ಕಥಾಸಂಕಲನ, ಒಂದು ಕಾದಂಬರಿ ಹಾಗೂ ಅನುಭವ ಕಥನವನ್ನು ಬರೆದಿರುವ ಗೊರವರರ ಮೂರನೇ ಕಥಾ ಸಂಕಲನವಿದು. ಇದರಲ್ಲಿ ಆರು ಸಣ್ಣ ಕತೆಗಳಿವೆ. ಇವರು ಬಳಸುವ ಭಾಷೆ ಮತ್ತು ಆಯ್ಕೆ ಮಾಡಿಕೊಂಡ ವಸ್ತು ಒದುಗರನ್ನು ಸೆಳೆದಿಡುತ್ತವೆ.

 

ಈ ಎರಡು ಪುಸ್ತಕಗಳ ಪ್ರಕಾಶಕರು: ಸಂಗಾತ ಪುಸ್ತಕ, ರಾಜೂರ ಪೋಸ್ಟ್-582114, ಗಜೇಂದ್ರಗಡ ತಾಲೂಕು, ಗದಗ ಜಿಲ್ಲೆ
ದೂ: 9341757653

Leave a Reply

Your email address will not be published.