ಹೆಂಡತಿ ಮತ್ತು ಗೆಳತಿ

ಗೆಳತಿ ಪ್ರೇಯಸಿಯಾಗುವುದು ಮುಂದೆ ಪ್ರೇಯಸಿ ಪತ್ನಿಯಾಗುವುದು ಸರಳ. ಆದರೆ ಒಮ್ಮೆ ಪತ್ನಿಯಾದಳೆಂದರೆ ಅವಳನ್ನು ಮತ್ತೊಮ್ಮೆ ಗೆಳತಿ ಮಾಡೋದು ಏನದಲ್ಲಾ ಆದು ಮಾತ್ರ ಬಹಳ ಕಠಿಣವಿದೆ ನೋಡ್ರಿ!

ಎರಡು ಗಟ್ಟಿ ಹೆರಳು ಹಾಕಿಕೊಂಡು ಜೋಡೀಲೇ ಶಾಲೆಗೆ ಬರುವ ಬಾಜು ಮನಿ ಹುಡುಗಿ ನಿಮ್ಮಿ ಒಮ್ಮಿಂದೊಮ್ಮೆಲೆ ಸುಂದರ ಪೋನಿಟೇಲಧಾರಿಯಾಗಿ ಬರುತ್ತಾಳೆ. “ಏ ನೀವು ಗಂಡು ಹುಡುಗೂರೆಲ್ಲಾ ನಿಮ್ಮಷ್ಟಕ್ಕ ನೀವು ಹಿಂದ ಆಡಿಕೋ ಹೋಗ್ರಿ” ಎಂದು ಹೈಕಳನ್ನು ನಿತ್ಯ ಹಿಂದಿನ ಬಯಲಿಗೆ ಅಟ್ಟುವವಳು ತಾನೇ ಸ್ವತಃ ದೂರದೂರ ನಿಲ್ಲಲಾರಂಭಿಸಿದ್ದಾಳೆ. ಮೊನ್ನೆ ಮೊನ್ನೆಯವರೆಗೂ ಹುಚ್ಚುಚ್ಚಾರ ಜೋಕಿಗೂ ಕುದುರೆ ಕೆನೆದಂತೆ ಕೆನೆದವಳು ಇಂದು ಕಂಡೂಕಾಣದಂತೆ ಗಲ್ಲದಲ್ಲೇ ಮುಗುಳ್ನಕ್ಕಿದ್ದಾಳೆ. ಅವಳ ಸೈಕಲ್ ಕಲಿಯುವ ಹುಚ್ಚಿಗೆ ದಿನಾ ಬಯ್ಯುವ ನಾನೇ ಮುಂದಾಗಿ, “ನಡಿಯೇ ನಿಮ್ಮಿ ಸೈಕಲ್ ಹೊಡಿಯೋಣು” ಎಂದರೂ “ಇಲ್ಲಪ್ಪ ಅವ್ವ ಬೈಯ್ತಾಳ ಮತ್ತು ನನಗ ಕೆಲಸಾನೂ ಅದ” ಅಂತ ಹಗೂರಾಗಿ ಜಾರಿಕೊಂಡಳಲ್ಲ.

ಶಾಲೆ ಬಿಟ್ಟದ್ದೇ ತಡ ಬ್ಯಾಗನ್ನು ಗಿರಿಗಿರಿ ತಿರುಗಿಸುತ್ತ ಸಂಜೀತನಕ ಊರೆಲ್ಲ ತಿರುಗುವ ನಿಮ್ಮಿ ಡೌಲಾಗಿ ನಾಲ್ಕೇ ಪುಸ್ತಕಗಳನ್ನು ಎದೆಗವಚಿಕೊಂಡು ನಡೆದಾಗ ಮಾತ್ರ ನನಗೆ ಖಾತ್ರಿಯಾಗಿದೆ, ಈ ಹುಡುಗಿ ಬದಲಾಗಿದ್ದಾಳೆ. ನಿತ್ಯ ಕಾಣುವ, ಕಾಡುವ, ಸಿಟ್ಟಿಗೇಳಿಸುವ ಮತ್ತೆ ಕ್ಷಣದಲ್ಲಿಯೇ ತಾನೇ ಮುಂದಾಗಿ ರಮಿಸುವ ನಿಮ್ಮಿ ಇವಳೆಯೇ? ಅವಳು ಬದಲಾಗಿದ್ದಾಳೆಯೆ ಇಲ್ಲವೆ ನಾನೇ ಬದಲಾಗಿದ್ದೇನೆಯೆ? ಇಲ್ಲ ಇಬ್ಬರೂ? ಕೆಲವೇ ಸಮಯದಲ್ಲಿ ಉತ್ತರ ಇಬ್ಬರಿಗೂ ಸಿಕ್ಕಿದೆ. ಪ್ರಕೃತಿ ತನ್ನ ರೆಕ್ಕೆ ಬಿಚ್ಚಿಕೊಳ್ಳುತ್ತ ಸಾಗಿದಂತೆ ಅವಳು ಹತ್ತಿರ ಇರಬೇಕೆಂಬ ಭಾವ ಹೆಚ್ಚಾಗುತ್ತಲೇ ಸಾಗಿತ್ತು. ಎರಡು ದಿನವೇನಾದರೂ ಅವಳು ಕಾಣಲಿಲ್ಲವೆಂದರೆ ಏನೋ ಬೇಚೈನಿ, ಹೇಳಲಾಗದ ಕಸಿವಿಸಿ ಎದೆಯಲ್ಲಿ. ವಾದ ಸಂವಾದವೆಲ್ಲ ಮುಗಿದು ಕಣ್ಣಲ್ಲೇ ಪರಸ್ಪರರನ್ನು ಅರಿಯುವ ಈ ಸಂಧಿಕಾಲ ಗೆಳತಿಯನ್ನೇ ಮನದನ್ನೆಯನ್ನಾಗಿ ಮಾಡಿಕೊಂಡ ಬಹುತೇಕ ಎಲ್ಲ ಯುವಕರ ಅನುಭವ, ಮೈನರ್ ಡಿಟೇಲ್ಸ ಏನಾದ್ರೂ ಸ್ಪಲ್ಪ ಬೇರೆ ಇರಬಹುದಷ್ಟೆ.

ಈ “ಪ್ರೇಯಸಿ ಫೇಸ್” ಶಿಕ್ಷಣ ಮುಗಿದು ನೌಕರಿಪರ್ಯಂತ ಚಾಟಿಂಗ್, ಚಾಟ್ ಈಟಿಂಗ್, ಬೈಕ್ ಸವಾರಿ ದುಬಾರಿ ಕೊಡುಗೆಯ ವಿನಿಮಯದವರೆಗೆ ಸಂಭ್ರಮದಿಂದ ನಡೆದು ಕಡೆಗೊಮ್ಮೆ ಲಗ್ನದ ಮಾತು ಬರುವುದು ಮಾತ್ರ ಹುಡುಗಿಯ ಬಾಯಲ್ಲೇ.

“ಮಾಡ್ಕೋಳ್ಳೋಣ ಬಿಡು ನಿಮ್ಮಿ ಏನು ಗಡಿಬಿಡಿ? ಮೊದಲು ನಾನು ಮನೆಯಲ್ಲಿ ಹೇಳಬೇಕು ಅಪ್ಪಂದೇನೂ ತಕರಾರಿಲ್ಲ (ಹುಡುಗರು ಅಪ್ಪನ ವಿಷಯದಲ್ಲೇ ಖಾತ್ರಿ ಇರ್ತಾರೆ). ಅವ್ವನ್ನ ಒಪ್ಪಿಸೋದು ಅಂದರ ಏಕದಮ್ ಭಾರಿ ಅಂಜಿಕಿ ಕೆಲಸ.

ನಿನ್ನೆ ತನಕ “ಬಾಬ್ಯಾಗ ಭಾಳ ಸೇರ್ತಾವ” ಎಂದು ಬೇಸನ್ ಉಂಡಿ ಮಾಡುವ, ಸ್ವಲ್ಪ ಮೈಕೈ ನೋವು ಜ್ವರ ಅಂದರೆ ಸಾಕು ರಾತ್ರಿಯೆಲ್ಲ ನಿದ್ದೆಗೆಟ್ಟು ಪಕ್ಕದಲ್ಲೇ ಕೂಡುವ, ಪರೀಕ್ಷೆಯ ವೇಳೆಗೆ ರಾತ್ರಿ ಅಪರಾತ್ರಿ ಕೇಳದಿದ್ದರೂ ಚಹಾ ಮಾಡಿ ಕೊಡುವ, ಬಿದ್ದು ಒಂಚೂರು ಕೈ ತರಚಿದರೆ ಸಾಕು “ನೋಡ್ಕೊಂಡು ಅಡ್ಡಾಡಲಿಕ್ಕೇನು ಧಾಡಿ” ಎಂಬ ಮಾತು ಬಾಯಲ್ಲಾಡಿದರೂ ಗಾಯದ ಮೇಲೆ ಆಡಿಸುವ ಕೈಯಿಂದ ಪ್ರೇಮಸಿಂಚನ ಮಾಡುವ ಅವ್ವ ನಿಮ್ಮಿಯೊಡನೆ ಲಗ್ನದ ಮಾತು ತೆಗೆದೊಡನೆ ಏಕದಮ್ ಪಾಕಿಸ್ತಾನ ಆಗಿಬಿಟ್ಟಳಲ್ಲ.

‘ಖಬರ್ದಾರ್ ಆ ನಿಮ್ಮಿ ಜೊತಿ ಲಗ್ನಾ ಮಾಡ್ಕೊಂಡೆಂದರ…, ಮನೆತನದ ಮಾನಾ ತಗದಿ! ನಾನ ಮನಿ ಬಿಟ್ಟು ಹೋಗ್ತೀನಿ…

ರೇಲ್ವೇ ಹಳಿ ಮ್ಯಾಲ ಬಿದ್ದು ಜೀವ ಕಳ್ಕೋತೇನಿ…’ ಇತ್ಯಾದಿ ಧಮಕಿಗಳ ಮಳೆ.

ಜೀವನಪರ್ಯಂತ ಮಕ್ಕಳ ಆನಂದದಲ್ಲೇ ತಮ್ಮ ಆನಂದ ಕಾಣುವ ಅವ್ವಂದಿರು ಮಕ್ಕಳ ಪ್ರೇಮವಿವಾಹದ ವಿಷಯ ಬಂದಿತೋ ಇಷ್ಟೊಂದು ಕಠಿಣವಾಗುವುದು ಯಾತಕ್ಕಾಗಿ? ಬಲ್ಲವರಾರು?

ಇಂತಹ ಪರಿಸ್ಥಿತಿಯಲ್ಲಿ ತಾಯಂದಿರು ಎರಡು ಕವಲುಗಳಲ್ಲಿ ಒಡೆಯುತ್ತಾರೆ. ಒಂದನೆಯದು ತಮ್ಮ ಹೊಟ್ಟೆಯ ಸಂಕಟ ಹತ್ತಿಕ್ಕಿಕೊಂಡು ಮಕ್ಕಳಿಗೆ ಲಗ್ನದ ಅನುಮತಿ ನೀಡುವ ಗುಂಪು. ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡಿ ಮಕ್ಕಳ ಪ್ರೇಮಕ್ಕೆ ಮುಲಾಜಿಲ್ಲದೆ ಅಂತ್ಯ ಹಾಡಿ ತಮಗೆ ಬೇಕಾದಂತಹ, ನಾಲ್ಕು ಜನರಲ್ಲಿ ಚೆನ್ನಾಗಿ ಕಾಣುವ, ದೇವರು ಧರ್ಮ ಮಾಡುವ ದೊಡ್ಡವರ (ಕೇವಲ ಅತ್ತೆಯ) ಮಾತು ಕೇಳುವ ಹುಡುಗಿಯನ್ನು ಆರಿಸಿ ಮಗನಿಗೆ ಪತ್ನಿ ಅದಕ್ಕಿಂತ ಹೆಚ್ಚಾಗಿ ತಮಗೆ ಸೊಸೆಯಾಗಿ ಮಾಡಿಕೊಳ್ಳುವ ಗುಂಪು ಇನ್ನೊಂದು.

ಖರೆ ಹೇಳಬೇಕಂದರೆ ನನಗೇನೂ ಅವ್ವನ ಸಿಟ್ಟಿನ ಮ್ಯಾಲ ನನ್ನ ಪ್ರೇಮದ ತಾಜಮಹಲು ಕಟ್ಟುವುದು ಬೇಕಿರಲಿಲ್ಲ. ಏನಂದರೂ ನಮಗಿಂತ ಹೆಚ್ಚಾಗಿ ಪರರ ಬಗೆಗೆ ಕಾಳಜಿ ಮಾಡುವ ಸಂಸ್ಕಾರ ನಮ್ಮ ಹಿರಿಯರಷ್ಟೇ ಅಲ್ಲ ಸಿನೆಮಾಗಳೂ ಸುದ್ಧಾ ನಮ್ಮ ಮ್ಯಾಲ ಪ್ರಭಾವ ಮಾಡಿರತಾವಲ್ಲ!

ಇರಲಿ ವಿಷಯಾಂತರ ಬಹಳವಾಯ್ತು.

ಅವ್ವನ ಆಯ್ಕೆ ಅಂದರ ಕೇಳಬೇಕೆ? ಸೊಸೆ ಅಂತ ಬಂದವಳು ಅವ್ವನ ಎಲ್ಲ ಆಪೇಕ್ಷೆ ಪೂರ್ಣ ಮಾಡಿದ್ದಳು. ಎದುರುತ್ತರವಿಲ್ಲ, ಜಗಳವಿಲ್ಲ ಅರ್ಥಾತ್ ಅವ್ವನೊಡನಿಲ್ಲ. “ಸ್ವಲ್ಪ ದಿನ ಚಂದು ಭಾವನ ಕಡೆ ಹೋಗಿರಲ್ಲ ನಿಮಗೂ ಬದಲಾವಣಿ ಆಗ್ತದ (ಮುಖ್ಯ ನಮಗ ಆಗ್ತದ!) ಅವರಿಗೂ ಸೇವಾ ಮಾಡ್ಲಿಕ್ಕೆ ಅವಕಾಶ ಸಿಗ್ತದ” ಇಂತಹ ಯಾವುದೇ ಭಂಡ ಸೂಚನೆಗಳನ್ನು ಕೊಡದ, ಊಟ ಉಡುಗೆ, ಔಷಧ ಉಪಚಾರ, ಹಬ್ಬ ಹರಿದಿನ, ಮಡಿ ಮೈಲಿಗೆ, ಪಾರಣೆ ಹೂರಣ ಮಾಡುವ… ಅಂದರೆ ಅಗದಿ ಹೆಂಗಿರಬೇಕೋ ಹಂಗಿರುವ ವ್ಯವಸ್ಥಿತ ಸೊಸಿ.

ತಾಯಿಯಾಗಂತೂ ಅವಳು ಅಮೀರಖಾನನಿಗಿಂತ ಪರಫೆಕ್ಶನಿಸ್ಟ! ಮಕ್ಕಳ ಶಾಲೆ, ಕ್ಲಾಸು, ಓದು, ಹೋಮವರ್ಕ ಊಟ ತಿಂಡಿ ಇತ್ಯಾದಿ ಇತ್ಯಾದಿ ಎಲ್ಲ ನಿಭಾಯಿಸುತ್ತಾಳೆ. ಸುಳ್ಳು ಹೇಳುವುದಿಲ್ಲ, ಒಮ್ಮೆ ಮಕ್ಕಳ ಜೋಡೀಗೇನ ಅವ್ವನಿಗೂ ಬಿಸಿಬಿಸಿ ಹಾಲು ಕೊಟ್ಟಾಗ ಅವ್ವ ಸೆರಗಲ್ಲಿ ಕಣ್ಣೊರೆಸಿಕೊಂಡದನ್ನು ನಾನೇ ಸ್ವತಃ ಕಂಡಿದ್ದೇನೆ.

ಆದರೆ ಹೆಂಡತಿಯಾಗಿ? ಕೇಳುವುದೇ ಬೇಡ ಅಂತಹವಳು, ಲಕ್ಷಕ್ಕೊಬ್ಬಳು! ದೇವರು ಇಂತಹ ಮಾಡೆಲ್ ಮಾಡೋದನ್ನ ನಿಲ್ಲಿಸ್ಯಾನೇನೋ ಎಂಬಂಥ ಯೂನಿಕ್ ಕೇಸು. ಲಗ್ನದ ಮುಹೂರ್ತದ ವೇಳೆಗೆ ಅಂತರಪಟದ ಆ ಕಡೆ ನಿಂತವಳು ಆ ವಿರೋಧಿ ಪಾರ್ಟಿಯಲ್ಲೇ ಜೀವನಪರ್ಯಂತ ಮುಂದುವರಿದವಳು. ಕಾರಣವಿರಲಿ ಬಿಡಲಿ ಯಾವತ್ತೂ ಪತಿಯ ವಿರೋಧಿ ಪಕ್ಷ!

ಉದ್ದನೆಯ ದಾಡಿ ಶೋಕಿನಿಂದ ಗಂಡನೆನಿಸಿಕೊಂಡವನು ಬಿಟ್ಟನೋ, “ಅಯ್ಯ ಇದೇನ್ರೀ ಅಸಹ್ಯ ಆ ವಿಜು ಭಾವಜೀನ್ನ ಸ್ವಲ್ಪ ನೋಡ್ರಿ ಹೆಂಗ ಶಿಸ್ತ ಇರ್ತಾರ ಚಿಕ್ಕ ದಾಡಿ ಬಿಟ್ಟು ಮ್ಯಾನಲಿ ಕಾಣ್ತಾರ” ಪತ್ನಿ ಉವಾಚ.

ಜೀನ್ಸ ಟೀಶರ್ಟಿನಲ್ಲೊಮ್ಮೆ ಉಮೇದಿನಲ್ಲಿ ಕಾಣಿಸಿಕೊಂಡರಂತೂ, “ಛೀ ಇದೆಂಥಾ ಪೋಲ್ಕಾದಂಥ ಶರ್ಟ ಹಾಕ್ಕೊಂಡೀರಿ, ನಿಮಗಿಂತಾ ಆ ಧೋಭಿ ಬಾಬುರಾಮ ಛಲೋ ಕಾಣ್ತಾನ…”

“ನಡೀ ಇವತ್ತ ಮಸ್ತs ಹೋಟೆಲ್ಲಿಗೆ ಹೋಗೂಣು” ಅಂದರೆ ಪಟ್ಟನೆ ಅವಳ ಉತ್ತರ ತಯ್ಯಾರು, “ಏನೂ ಬ್ಯಾಡ ಮುಂಜಾನಿ ಚಪಾತಿ ಹಂಗ ಕೂತಾವ ಇನ್ನೂ.. ರೊಕ್ಕೇನು ಗಿಡದ ಮ್ಯಾಲ ಬೆಳೀತಾವೇನು?”

ಎಂದಿಲ್ಲೊಂದಿನ ತನ್ನ ತಲೆಯಲ್ಲಿ ದೋಸೆ ತಿನ್ನುವ ಹುಕಿ ಬಂತೋ, “ಅಯ್ಯ ಖೊಟ್ಟಿ ನಸೀಬ ಏನೋ ಮನೀ ಊಟಾ ಉಂಡು ನಾಲಿಗಿ ಜಡ್ಡಗಟ್ಟೇದ ಹೊರಗ ಊಟಕ್ಕ ಹೋಗೂಣ ಅಂದರ ಇವರು ಎಷ್ಟರೆ ನಾಟಕ ಮಾಡ್ತಾರವ್ವ, ಏನೂ ಉತ್ಸಾಹ ಇಲ್ಲ ಹುರುಪಿಲ್ಲ ಎಲ್ಲಾದಕ್ಕೂ ಕೇಳಕೊಂಡು ಬಂದಿರಬೇಕು” ಅಂತ ನಿಟ್ಟುಸಿರು! ಈ ಮಾತಿನೊಡನೆ ಕೆಲವೊಮ್ಮೆ ಅಶ್ರುಪಾತ. ನನಗನ್ನಿಸ್ತದ ಸ್ಯಾಂಪಲ್ಲಿಗೆ ಇಷ್ಟು ಉದಾಹರಣ ಸಾಕೇನೋ ಅಂತ.

ಬದುಕಿನುದ್ದಕ್ಕೂ ಅವಳೊಡನೆ ಬಾಂಧವ್ಯ ಬೇರೆ ಬೇರೆ ಆಯಾಮ ಪಡೆಯತ್ತಲೇ ಇರುತ್ತದೆ. ತಾಯಿ ಆದಮೇಲಂತೂ ಅವಳ ಮಾತೃತ್ವ ಬಹಳ ವಿಶಾಲವಾಗುತ್ತದೆ ಅಷ್ಟೇ ಅಲ್ಲ ಬಾಕಿ ಎಲ್ಲ ಸಂಬಂಧಗಳ ಮೇಲೂ ಹರಡುತ್ತದೆ ಅದರ ಛಾಯೆ! ಹೆಂಗೂ ವಿಷಯ ಶುರು ಆಗೇದ ಅಲ್ಲದನ ನೀವು ನಮ್ಮವರಿದ್ದೀರಿ ಅಂತ ಹೇಳ್ತೇನಿ. ಮದುವೆ ಆಗಿ ಮೂವತ್ತು ವರ್ಷ ಆಯಿತು ಕೆಲವೊಮ್ಮೆ ಮೊಮ್ಮಕ್ಕಳ ಜೋಡಿ ತಾನೂ “ಅಜ್ಜಾ ಬರ್ರಿ” ಅಂತ ನನ್ನನ್ನು ಕರೀತಾಳ! ಕೆಲವೊಮ್ಮೆ ಸ್ವತಃ ತಾನೇ ಅಜ್ಜ ಅಂದರೆ ದಾದಾ ಆಗುತ್ತಾಳೆ, ಅರ್ಥಾತ್ ಅದೇ ಅವಳ ನಿತ್ಯದ ದಾದಾಗಿರಿ!

ಯಾರಾದರೂ ಗಂಡನಿಗೆ ಏನಾದ್ರೂ ಹೆಸರಿಟ್ಟರೆ ಮಾತ್ರ ಭಯಂಕರ ಆಕ್ರಮಣಕಾರಿ ಆಗ್ತಾಳಿವಳು. ಯಾಕಂದ್ರ ಹೆಸರಿಡೋ ಮೊನೋಪಾಲಿ ಅವಳದ್ದು ಮಾತ್ರ ಇದೆಯಲ್ಲ. ಅವಳೇ ವಕೀಲ (ವ ಕಿಲ್) ಆಗುತ್ತಾಳ, ಜಡ್ಜೂ ಅವಳೇ. ಒಮ್ಮೊಮ್ಮೆ ನರ್ಸೂ ಅವಳೇ ಡಾಕ್ಚರೂ ಅವಳೇ. ಪತಿಯ ನಡವಳಿಕೆ, ಮಾತುಕತೆ ಮತ್ತು ಪಗಾರ -ಎಲ್ಲದರ ಆಡಿಟ್ ಕೂಡಾ ಅವಳೇ ಮಾಡುತ್ತಾಳೆ. ಒಟ್ಟಿನಲ್ಲಿ “ಎಲ್ಲಾ ಆದೇನು ನಿನ್ನ ಗೆಳತಿ ಆಗೆನು” ಎಂಬಂತೆ ಅವಳ ವರಸೆ! ಯಾಕೆ ಹೀಗೆ?

ಇದೇ ಪ್ರಶ್ನೆ ನಾನು ನಮ್ಮ ಶ್ಯಾಮ್ಯಾನ ಮುಂದೆ ಇಟ್ಟೆ.

“ವೈನಿ ಹೆಂಗಿದ್ದಾರೋ ಹಂಗನ ಅವರನ್ನ ಗೆಳತಿ ಅಂದುಕೋ” ಶ್ಯಾಮ್ಯಾನ ಸೊಲ್ಯುಶನ್!

ಅರೆರೆ…

“ಯಾಕ? ಸಣ್ಣವಿದ್ದಾಗ ಆ ಘಟ್ಟಿ ಬಾಲದಂಥಾ ಹೆರಳಿನ ನಿಮ್ಮೀಗೆ ಗೆಳತಿ ಅಂತಿದ್ಯಲ್ಲಾ? ಸುರಶ್ಯಾ, ಗೆಳತಿಯ ಹಂಗ ಇರೋದು ಮುಖ್ಯ ಅದ. ಹಂಗ ಕಾಣೋದಲ್ಲ”

ಆದರೂ…

“ನೀನು ಸ್ಪಷ್ಟ ಹೇಳು ವೈನಿ ಕಡೆಯಿಂದ ನಿನ್ನ ಆಪೇಕ್ಷಾ ಏನದ ಅಂತ”

“ಏನು ಹೇಳಲಿ ಶ್ಯಾಮ್ಯಾ? ಹಂಗ ಅಕೀ ಛಲೋ ಇದ್ದಾಳ. ಆದರೆ ಸ್ಪಲ್ಪ ತನ್ನ ತಾನು ಬದಲಾಯಿಸಿಕೊಂಡರ ಸಾಕು. ಹಂಗ ನೋಡಿದ್ರ ಇದು ನಂದೊಬ್ಬವನದ ಅಲ್ಲ, ಭಾಳ ಮಂದಿಯ ಆಸೆ ಇರತದ. ಏನಪಾ ಅಂತದ್ರ ಸ್ವಲ್ಪ ತನ್ನ ಕಾಳಜಿ ತಾನು ತೊಗೋಬೇಕು, ತೂಕ ಒಂಚೂರು ಇಳಿಸಿಕೋಬೇಕು. ಡ್ರೈವರ್ ಇಲ್ಲಾ ಅಂತದ್ರೂ ನಡೀಲಿಕ್ಕೆ ತಯ್ಯಾರಿರಬೇಕು, ಸ್ಮಾರ್ಟ ಅಂತಾರಲ್ಲ ಹಂಗಿರಬೇಕು. ಅನಾವಶ್ಯಕ ಮಾತಾಡೋದು, ತನ್ನದ ಖರೆ ಅಂತ ಅಟ್ಟಹಾಸ ಮಾಡೋದು ಇವೆಲ್ಲಾ ಬಿಟ್ಟುಬಿಡಬೇಕು. ಇತರರ (ನನ್ನ) ಅಭಿಪ್ರಾಯ ಏನೆಂಬುದನ್ನೂ ತಿಳಿದುಕೋಬೇಕು ಮತ್ತು ಬದಲಾಗುತ್ತಿರುವ ಜಮಾನಾದ ಜೋಡಿ ತಾನೂ ಬದಲಾಗಬೇಕು. ನವನವೀನ ಬಟ್ಟೆಗಳನ್ನು ಹಾಕ್ಕೊಂಡು…

“ಆತ ನಿನ್ನ ಮಾತು? ಒಂದ ಮಾತಿನಾಗ ಹೇಳಬೇಕಂದರ ನಿನ್ನಂಥಾ ಗಂಡಂದಿರಗೆ ಬಣ್ಣದ ಚಿಟ್ಟೆಯಂಥಾ ಹೆಂಡತಿ ಬೇಕನ್ನು”

ಹಂಗಲ್ಲ…

“ಸುರಶ್ಯಾ ನಾಳೆ ನಿನ್ನ ದಾಡಿ ಪೆಟ್ಟಿಗೆಯ ಕನ್ನಡಿ ಇಲ್ಲಾಂದರ ಡ್ರೆಸಿಂಗ್ ಟೇಬಲ್ಲಿನ ಕನ್ನಡ್ಯಾಗ ಒಮ್ಮೆ ಮಾರೀ ನೋಡಿಕೋ. ವೈನಿನ್ನ ಬದಲಾಯಿಸೋ ಭಾನಗಡಿಗೆ ಬೀಳಬ್ಯಾಡ ಯಾಕಂದ್ರ ಬದಲಾಗಬೇಕಾದವ ನೀನ ಇದ್ದಿ”

ನನಗೆ ಮಾತ್ರ ಶ್ಯಾಮ್ಯಾ ತೋರಿಸಿದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲು ಹೆದರಿಕೆ, ನಾನು ಅವಳಿಗೆ ಬೇಕಾದಂತೆ ಬದಲಾಗಿಬಿಟ್ಟರೆ ನನಗೆ ಬೇಕಾದಂತೆ ಅವಳು ಬದಲಾಗುವುದು ಹೇಗೆ? ಯಾಕಂದ್ರೆ ಗೆಳತಿ ಪ್ರೇಯಸಿಯಾಗುವುದು ಮುಂದೆ ಪ್ರೇಯಸಿ ಪತ್ನಿಯಾಗುವುದು ಸರಳ. ಆದರೆ ಒಮ್ಮೆ ಪತ್ನಿಯಾದಳೆಂದರೆ ಅವಳನ್ನು ಮತ್ತೊಮ್ಮೆ ಗೆಳತಿ ಮಾಡೋದು ಏನದಲ್ಲಾ ಆದು ಮಾತ್ರ ಬಹಳ ಕಠಿಣವಿದೆ ನೋಡ್ರಿ.

Leave a Reply

Your email address will not be published.