ಹುಯೆನ್ ತ್ಸಾಂಗ್ ಹಾದಿಯ ‘ಶುಷ್ಕ ಆಕಾಶದಡಿಯ ಹತ್ತು ಸಾವಿರ ಮೈಲಿಗಳು!’

ಸನ್ ಶೂಯನ್ ಎಂಬ ಚೀನಿ ಮಹಿಳೆ ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಹುಯೆನ್ ತ್ಸಾಂಗನು ಸಾಗಿದ್ದ ಹಾದಿಯಲ್ಲಿ ನಡೆದೇಬಿಟ್ಟಳು. ಹೀಗೆ ಆರಂಭವಾದ ಆಕೆಯ ಪಯಣ, ಇಂದಿನ ಚೈನಾ, ಅಪಾಯಕಾರಿ ಅಫ್ಗನಿಸ್ತಾನ್, ಬಿಗುವಿನ ಪಾಕಿಸ್ತಾನ, ನಿರಾಳವೆನಿಸುವ ಭಾರತಗಳ ಚಿತ್ರಣಗಳು ಕಮ್ಯುನಿಸ್ಟ್ ನಾಡಿನಿಂದ ಪ್ರಜಾಪ್ರಭುತ್ವದಧಿಪತ್ಯ, ಪ್ರಾಪಂಚಿಕತೆಯಿಂದ ಪಾರಮಾರ್ಥದೆಡೆಯ ಮಹಾಪಯಣವೆನಿಸಿಬಿಡುತ್ತದೆ. ಆ ಪಯಣದ ಅದ್ಭುತ ನಿರೂಪಣೆಯೇ ‘ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್’ ಕೃತಿ.

ಮ್ಮೊಮ್ಮೆ ಜೀವನದ ತಿರುವುಗಳು ಹೀಗೆಯೂ ಘಟಿಸಿಬಿಡುತ್ತವೆ. ಹತ್ತು ವರ್ಷಗಳ ಹಿಂದೆ ಬ್ಲಾಗು, ಪೋರ್ಟಲ್ ಅಂಕಣ ಬರಹ ಮಾಡಿಕೊಂಡಿದ್ದ ನಾನು ಅದ್ಯಾವ ಗಳಿಗೆಯಲ್ಲಿ ಮೇಜುವಾನಿಯ ಮೋಜಿನಲ್ಲಿ ನನ್ನ ಚೀನೀ ಗೆಳೆಯನೊಟ್ಟಿಗೆ ಹುಯೆನ್ ತ್ಸಾಂಗನ ಕುರಿತು ವಿಷಯವೆತ್ತಿದೆನೋ ಅದು ಅಂಕಣ, ಬ್ಲಾಗು ಬಿಡಿಸಿ ಈತನ ಹುಚ್ಚು ಹಿಡಿಸಿತು.

ನಂತರ ಈತನ ಕುರಿತಾಗಿ ಎಲ್ಲಾ ಆಕರಗಳನ್ನು ಜೋಡಿಸಿಕೊಂಡು, ಒಂದು ಚೀನಾ ಪ್ರವಾಸವನ್ನೂ ಹಾಕಿ ಒಂದು ಪುಸ್ತಕ ಬರೆಯಲಾರಂಭಿಸಿದೆನು. ಭಾಗಶಃ ನಲವತ್ತು ಭಾಗ ಮುಗಿಸಿದ ನಂತರ ಬೋರು ಹೊಡೆದು ನಿಲ್ಲಿಸಿಯೂಬಿಟ್ಟೆ. ಭಾರತದ ಇತಿಹಾಸಕ್ಕೆ ಅನಿವಾರ್ಯನಾದ ಇಂತಹ ಮಹತ್ವದ ಚಾರಿತ್ರಿಕ ವ್ಯಕ್ತಿಯ ಬಗ್ಗೆ ಇದುವರೆಗೆ ಏಕೆ ಯಾವ ಭಾರತೀಯನೂ ಬರೆದಿಲ್ಲವೋ! ಬಹುಶಃ ಈತ ಭಾರತಕ್ಕೆ ಅಷ್ಟೊಂದು ಅನಿವಾರ್ಯನಲ್ಲವೆಂದೋ ಯಾ ಕುತೂಹಲಕಾರಿಯಲ್ಲವೇನೋ… ಎಂದೇ ಭಾರತೀಯ ಇತಿಹಾಸಜ್ಞರು ಅಷ್ಟೊಂದು ಪ್ರಾಮುಖ್ಯ ಕೊಟ್ಟಿಲ್ಲವೆಂದೆನಿಸಿದ್ದು ಕೂಡಾ ಒಂದು ಕಾರಣ. ಹಾಗೆ ನಿಲ್ಲಿಸಿದ್ದನ್ನು ಮತ್ತೆ ಬರೆಯಲಾರಂಭಿಸಿದ್ದುದು ಸಮಾಜಮುಖಿಯ ಸಂಪರ್ಕದಿಂದ!

ಅದೇ ರೀತಿ ಸನ್ ಶೂಯನ್ ಎಂಬ ಚೀನಿ ಹೆಣ್ಣುಮಗಳು ತನ್ನ ಬೌದ್ಧಮತನಿಷ್ಠೆಯಾಗಿದ್ದ ಅಜ್ಜಿಯಿಂದ ಕೋತಿರಾಜನ ನೀತಿಕತೆಗಳನ್ನು ಬಾಲ್ಯದಲ್ಲಿ ಕೇಳುತ್ತ ಬೆಳೆದಿದ್ದಳು. ಕ್ರಮೇಣ ಕಮ್ಯುನಿಸ್ಟ್ ಸರ್ಕಾರದ ಶಿಕ್ಷಣ ಆ ಕತೆಗಳ ನೀತಿಯನ್ನೆಲ್ಲಾ ಮೌಢ್ಯವೆನಿಸಿಬಿಟ್ಟಿದ್ದಿತು. ತನ್ನ ಬಾಲ್ಯದಲ್ಲಿ ಕಂಡ ಮಾವೋ ಕ್ರಾಂತಿ, ಆ ಕ್ರಾಂತಿಯ ವಿರೋಧಿಗಳನ್ನು ಸರ್ಕಾರ ಸಾರ್ವಜನಿಕವಾಗಿಯೇ ಹಿಂಸಿಸುತ್ತಿದ್ದ ಪರಿ ಅವಳಿಗೆ ತನ್ನ ಶಿಕ್ಷಣದ ಕಾರಣ ತಪ್ಪೆನಿಸುತ್ತಿರಲಿಲ್ಲ. ಆದರೆ ಅವಳ ಅಜ್ಜಿ ಹಾಗೆಲ್ಲ ಮನುಷ್ಯರನ್ನು ಹಿಂಸಿಸುವವರು ನರಕಕ್ಕೆ ಹೋಗುವರೆಂಬುದನ್ನು ಅಪಹಾಸ್ಯ ಮಾಡುತ್ತಿದ್ದುದರ ಚಿತ್ರಣವನ್ನು ಅವಳು ಮರೆಯಲಿಲ್ಲ.

ದೊಡ್ಡವಳಾದ ನಂತರ ಆಕ್ಸ್ ಫರ್ಡ್ ಸೇರಿದ ಅವಳಿಗೆ ತನ್ನಜ್ಜಿ ಹೇಳಿದ್ದ ನೀತಿಕತೆಗಳ ನಾಯಕ ಹುಯೆನ್ ತ್ಸಾಂಗ್ ರಕ್ತ, ಮಾಂಸಗಳಿಂದ ಕೂಡಿದ್ದ ಒಬ್ಬ ಚಾರಿತ್ರಿಕ ನಿಜವ್ಯಕ್ತಿಯೆಂದು ತಿಳಿಯಿತು. ಆತನ ಕುರಿತು ಕುತೂಹಲ ಬೆಳೆಸಿಕೊಂಡ ಸನ್ ಶೂಯನ್, ಹುಯೆನ್ ತ್ಸಾಂಗನ ಕುರಿತು ಸಾಕಷ್ಟು ಓದಿಕೊಂಡಳು. ಬರುಬರುತ್ತಾ ಆಕೆಯ ಕುತೂಹಲ ಆತನು ಸಾಗಿದ್ದ ಯಾತ್ರೆಯ ಹಾದಿಯಲ್ಲಿ ತಾನೊಮ್ಮೆ ಸಾಗಿ ಬರಬೇಕೆಂಬ ತೀವ್ರ ಬಯಕೆಯನ್ನು ಮೂಡಿಸಿತು. ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಹುಯೆನ್ ತ್ಸಾಂಗನು ಸಾಗಿದ್ದ ಹಾದಿಯಲ್ಲಿ ನಡೆದೇಬಿಟ್ಟಳು. ಹೀಗೆ ಆರಂಭವಾದ ಆಕೆಯ ಪಯಣ, ಇಂದಿನ ಚೈನಾ, ಅಪಾಯಕಾರಿ ಅಫ್ಗನಿಸ್ತಾನ, ಬಿಗುವಿನ ಪಾಕಿಸ್ತಾನ, ನಿರಾಳವೆನಿಸುವ ಭಾರತಗಳ ಚಿತ್ರಣಗಳು ಕಮ್ಯುನಿಸ್ಟ್ ನಾಡಿನಿಂದ ಪ್ರಜಾಪ್ರಭುತ್ವದಧಿಪತ್ಯ, ಪ್ರಾಪಂಚಿಕತೆಯಿಂದ ಪಾರಮಾರ್ಥದೆಡೆಯ ಮಹಾಪಯಣವೆನಿಸಿಬಿಡುತ್ತದೆ. ಅಂದು ಗೊಂದಲದ ಗೂಡಾಗಿದ್ದ ಗ್ರಂಥಗಳಿಂದ ಬಿಡುಗಡೆ ಬಯಸಿ ಹುಯೆನ್ ತ್ಸಾಂಗ್ ಓಡಿಹೋದಂತೆಯೇ, ತಾನು ಕೂಡಾ ತನ್ನ ಮಾವೋ ಸರ್ಕಾರದ ಶಿಕ್ಷಣವನ್ನು ಇಲ್ಲವಾಗಿಸಿಕೊಳ್ಳಲು ಮಹಾಪಯಣವನ್ನು ಕೈಗೊಂಡ ಬಗೆಯೆನಿಸುವ ಪರಿಕಲ್ಪನೆ ಅವಳಿಗೆ ಮೂಡಿರಬೇಕು.

ತನ್ನೆಲ್ಲಾ ಪ್ರವಾಸವನ್ನು ಮುಗಿಸಿ ಕಡೆಯದಾಗಿ ಹುಯೆನ್ ತ್ಸಾಂಗನ ಸಮಾಧಿ ಇರುವ ಜಿಯಾನ್ ಗೆ ಬಂದಳು. ಅಲ್ಲಿನ ಬೌದ್ಧಸನ್ಯಾಸಿಗೆ ತನ್ನ ಯಾತ್ರೆ, ಕಂಡ ದೃಶ್ಯ, ಕಲಿತ ವಿಷಯಗಳ ಕುರಿತಾಗಿ ಹೇಳಿದಳು. ಆಗ ಆ ಬೌದ್ಧಭಿಕ್ಷು ‘ಹಾಗಿದ್ದರೆ ನಮ್ಮ ಮಹಾಗುರು ಕಂಡದ್ದನ್ನೆಲ್ಲ ಕಂಡುಬಂದಿರುವೆ’ ಎಂದು ಧನ್ಯತಾಭಾವದಿಂದ ಕೇಳಿದನು. ಅದಕ್ಕೆ ‘ಎಲ್ಲವನ್ನೂ ಎಂದು ಹೇಳಲಾರೆ. ಆದರೆ ಸಾಕಷ್ಟು ಎನ್ನಬಲ್ಲೆ’ ಎಂದುತ್ತರಿಸುತ್ತಾಳೆ. ನಂತರ ಈ ಯಾತ್ರೆಗೆ ಕಾರಣವಾದ ತನ್ನ ಅಜ್ಜಿಯ ಸಮಾಧಿಗೆ ತೆರಳುತ್ತಾಳೆ. ಅದಾಗಲೇ ಅವಳ ಅಜ್ಜಿ ಸತ್ತು ಒಂಬತ್ತು ವರ್ಷಗಳಾಗಿರುತ್ತದೆ. ಹುಯೆನ್ ತ್ಸಾಂಗನು ತನ್ನ ಪೋಷಕರ ಸಮಾಧಿಯ ಸುತ್ತ ಬೆಳೆದಿದ್ದ ಹುಲ್ಲನ್ನು ಕೀಳುತ್ತ ಭಾವಪರವಶನಾದಂತೆ, ಸನ್ ಶೇಂಗಾ ಹೊಲದಲ್ಲೆಲ್ಲೋ ಹುದುಗಿಹೋಗಿದ್ದ ತನ್ನ ಅಜ್ಜಿಯ ಸಮಾಧಿಯನ್ನು ಹುಡುಕುತ್ತಾಳೆ. ಅಲ್ಲೇ ಸಮೀಪದಲ್ಲಿ ಕೊಂಚ ಉಬ್ಬಿದ ನೆಲದ ಮುಂದಿದ್ದ ವಾಂಗ್ ಮತ್ತು ಲೀ ಪರಿವಾರದ ಹೆಣ್ಣುಮಗಳ ಸಮಾಧಿಯೆಂದಿದ್ದ ಮರದ ತುಂಡು ಕಾಣುತ್ತದೆ. ತನ್ನ ಹೆಸರನ್ನೂ ಹಾಕಿಸಿಕೊಳ್ಳದೇ ಕೇವಲ ಹೆಣ್ಣುಮಗಳು ಎಂದಿದ್ದ ಮರದ ಹಲಗೆಯ ತುಣುಕು, ಆಕೆಯ ಅಜ್ಜಿ ಕನಸಿದ್ದ ಸಮಾಧಿಯ ಚಿತ್ರಣ ಆಕೆಯ ಕಣ್ಣ ಮುಂದೆ ಬರುತ್ತದೆ.

ಎಲ್ಲಾ ಬೌದ್ಧರಂತೆ ಆಕೆಯ ಅಜ್ಜಿ ಕೂಡಾ ಸತ್ತ ನಂತರ ತಾನು ಇನ್ನೊಂದು ಲೋಕಕ್ಕೆ ಹೋಗುತ್ತೇನೆಂದು ನಂಬಿದ್ದಳು. ಸಾವು ಸಮೀಪಿಸುತ್ತಿದ್ದಾಗ ಚೆಂದದ ಬಟ್ಟೆಗಳನ್ನು ಹೊಲಿಸಿಟ್ಟುಕೊಂಡು, ತನ್ನ ಸಾವಿನ ನಂತರ ಹೋಗುವ ಹೊಸ ಮನೆಯಲ್ಲಿ ತನಗೆ ಬೇಕಾದ ಕುರ್ಚಿ, ಮೇಜು, ಮಂಚ, ಮತ್ತಿತರೆ ವಸ್ತುಗಳ ಪಟ್ಟಿ ಮಾಡಿಟ್ಟುಕೊಂಡಿದ್ದಳು. ಸನ್ ಳ ತಾಯಿಗೆ ತಾನು ಹೊಲಿಸಿಟ್ಟ ಹೊಸ ಬಟ್ಟೆಗಳ ತೊಡಿಸು, ನಾನು ಹೊಸ ಲೋಕಕ್ಕೆ ಬೆತ್ತಲೆಯಾಗಿ ಹೋಗಿಬಿಟ್ಟರೆ ಹೇಗೆ ಎಂದಿದ್ದಳಂತೆ ಅಜ್ಜಿ. ಆದರೆ ಮಾವೋ ಸಾಮ್ರಾಜ್ಯದ ಅಂದಿನ ಚೀನಾ, ಅಜ್ಜಿಯ ಆಸೆಯನ್ನು ಈಡೇರಿಸಲು ಬಿಡಲಿಲ್ಲ. ಸರ್ಕಾರ ಮಣ್ಣು ಮಾಡುವ ಸಂಸ್ಕಾರವನ್ನು ಬಹಿಷ್ಕರಿಸಿ, ಅಜ್ಜಿ ದ್ವೇಷಿಸುತ್ತಿದ್ದ ಚಿತೆ ಸಂಸ್ಕಾರವನ್ನು ಮಾತ್ರ ಊರ್ಜಿತಗೊಳಿಸಿತ್ತು! ಆ ಬೂದಿಯನ್ನೇ ಹೂತು ಸಮಾಧಿ ಮಾಡಿದ ತೃಪ್ತಿಯನ್ನು ಪಟ್ಟುಕೊಳ್ಳಬೇಕಿದ್ದಿತು.

ಮಾವೋ ಸರ್ಕಾರ ಧರ್ಮವನ್ನು ಹುಚ್ಚೆಂದು ಪರಿಗಣಿಸಿದ್ದಿತು.ಹೀಗೆ ತನ್ನ ಯಾತ್ರೆಯುದ್ದಕ್ಕೂ ಹುಯೆನ್ ತ್ಸಾಂಗ್, ಬೌದ್ಧಧರ್ಮ, ಮಾವೋ, ಕಮ್ಯುನಿಸಂ, ಮಾನವೀಯ ಮೌಲ್ಯ, ಸಂಬಂಧಗಳ ತುಲನೆಗಳನ್ನು ಮೇಳೈಸುತ್ತ ಹೆಣೆದಿರುವ ‘ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್’ ಒಂದು ಅದ್ಭುತ ಓದು! ಹದಿನಾಲ್ಕು ಶತಮಾನಗಳ ನಂತರ ಹೂಯೆನ್ ತ್ಸಾಂಗ್‍ನ ದಾರಿಯಲ್ಲಿಯೇ ಇಪ್ಪತ್ತು ಸಾವಿರ ಮೈಲಿಗಳಷ್ಟು ನಡೆದು ಪಡೆದ ಅನುಭಾವದ ಚಿತ್ರಣ ಈ ಪುಸ್ತಕದಲ್ಲಿದೆ. ಅಷ್ಟು ದೂರ ನಡೆಯಲಾಗದ ಓದುಗರಿಗೆ ನಡೆದ ಕಾಣ್ಕೆ ನೀಡುವ ಈ ಪುಸ್ತಕ ಪ್ರವಾಸಿ ಕಥನಗಳಲ್ಲಿ ಅತ್ಯಂತ ಅಪರೂಪದ್ದಾಗಿದೆ.

ಹುಯೆನ್ ತ್ಸಾಂಗನ ಮಹಾಪಯಣದ ಪ್ರಕಾಶಕರಾದ ಸಮಾಜಮುಖಿ, ‘ನಡೆದು ನೋಡು ನಾಡು’ ಅಭಿಯಾನವನ್ನು ಆರಂಭಿಸಿದೆ. ಈ ನಡೆದು ನೋಡುವ ಅಭಿಯಾನ ಶೀಘ್ರದಲ್ಲಿ ಹುಯೆನ್ ತ್ಸಾಂಗ್ ನಡೆದು ಬಂದ, ಸನ್ ಶೂಯನ್ ಪ್ರಯಾಣಿಸಿದ ಹಾದಿಯಲ್ಲಿ ಒಂದು ಪಯಣವನ್ನು ಯೋಜಿಸಿ ತನ್ನ ಓದುಗರಿಗೆ ಕೂಡಾ ಆ ಅದ್ಭುತ ಅನುಭವವನ್ನು ಕಟ್ಟಿಕೊಡಲಿ.

‘ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್’ ಪುಸ್ತಕದಿಂದ ಆಯ್ದ ಭಾಗ
ಒಂದು ದಿನ ನನ್ನಜ್ಜಿ ಕೋತಿರಾಜನ ಸಾಹಸಗಳು ಎಂಬ ಕಾಮಿಕ್ ಪುಸ್ತಕವನ್ನು ತಂದುಕೊಟ್ಟಳು. ಮುಖಪುಟ ಹರಿದಿದ್ದ ಆ ಪುಸ್ತಕ ಕಾಮಿಕ್ ಪುಸ್ತಕವಾದ್ದರಿಂದ ನನಗೆ ಮೆಚ್ಚುಗೆಯಾಗಿತು. ಅದರಲ್ಲಿನ ಒಬ್ಬ ಬಡಕಲು ಬೌದ್ಧಸನ್ಯಾಸಿ ಪವಿತ್ರ ಸೂತ್ರಗಳನ್ನು ತರಲು ಜ್ವಾಲೆಗಳ ಸಮುದ್ರವನ್ನು ದಾಟಿ, ಕತ್ತಿಗಳ ಬೆಟ್ಟಗಳನ್ನು ಏರಿ ಹೆಜ್ಜೆಹೆಜ್ಜೆಗೂ ಹೇಗೆ ಒಂದು ಮಂಗ ಮತ್ತು ಹಂದಿಯೊಂದರ ಸಹಾಯದಿಂದ ಸೂತ್ರಗಳನ್ನು ತಂದನೆಂಬ ಅತೀ ರಂಜನೀಯ ಸಾಹಸದ ಕತೆಗಳಿದ್ದವು. ಸನ್ಯಾಸಿಯ ಒಂದು ಮಂತ್ರಕ್ಕೆ, ಮಂತ್ರದಂಡದ ಸ್ಪರ್ಶಕ್ಕೆ ಅದರಲ್ಲಿನ ಮಂಗಕ್ಕೆ ಹೇಗೆ ಸೂರ್ಯ ಚಂದ್ರರಂತಹ ಕಣ್ಣುಗಳಾಗಿ, ಒಂದು ಲಾಗಕ್ಕೆ ನೂರಾ ಎಂಬತ್ತು ಸಾವಿರ ಯೋಜನಗಳನ್ನು ನೆಗೆದು ಪವಿತ್ರ ಸೂತ್ರಗಳನ್ನು ಬಡಕಲು ಸನ್ಯಾಸಿಗೆ ತಂದುಕೊಟ್ಟಿದ್ದಿತು. ತನ್ನ ಜೀವವನ್ನು ಅಂತಹ ಕಷ್ಟಕ್ಕೊಡ್ಡಿಯಾದರೂ ಏಕೆ ಆ ಮುದಿ ಸನ್ಯಾಸಿಗೆ ಬುದ್ಧನ ಸೂತ್ರಗಳು ಏಕೆ ಬೇಕಾಗಿದ್ದವೋ! ಕೋತಿರಾಜನ ಕತೆಯ ಕುರಿತು ಒಂದು ದಿನ ಸಂಜೆ ಮನೆಗೆ ಹಿಂತಿರುಗಿದ ಅಪ್ಪನನ್ನು ಕೇಳಿದೆನು. ಅದಕ್ಕೆ ಆತ ‘ಅದು ಒಂದು ಒಳ್ಳೆಯ ಪುಸ್ತಕ. ಚೇರ್ಮನ್ ಮಾವೋ ಅವರಿಗೆ ಕೂಡಾ ಅದು ಅಚ್ಚುಮೆಚ್ಚು. ಅದರ ಕುರಿತು ಚೇರ್ಮನ್ ಕವನಗಳನ್ನು ರಚಿಸಿದ್ದಾರೆ’ ಎಂದನು. ‘ಅಪ್ಪಾ, ಹಾಗಿದ್ದರೆ ಆ ಸೂತ್ರಗಳು ಮಾವೋ ಅವರ ಕೆಂಪು ಪುಸ್ತಕವಿದ್ದಂತೆಯೇ’ ಎಂದು ಕೇಳಿದೆನು. ಏಕೆಂದರೆ ಹಿರಿಯರು ಕೆಂಪು ಪುಸ್ತಕವನ್ನು ಸೂತ್ರವೆಂದು ಸಂಬೋಧಿಸುವುದನ್ನು ಸಾಕಷ್ಟು ಸಾರಿ ಕೇಳಿಸಿಕೊಂಡಿದ್ದೆನು. ಅದಲ್ಲದೇ ಮಾವೋವಾದಿಗಳು ತಮ್ಮ ಭಾಗಗಳನ್ನು ಚಿನ್ನದ ಕೋತಿ, ಮಂತ್ರದಂಡವೆಂದು ಕೂಡಾ ಕರೆಯುತ್ತಿದ್ದರು. ಹಾಗಾಗಿ ಈ ಕೋತಿರಾಜನ ಕತೆಯೂ ಕೆಂಪುಪುಸ್ತಕವೂ ಒಂದೇ ಎಂದುಕೊಂಡಿದ್ದೆನು. ‘ಸೂತ್ರವೆಂದರೆ ಬುದ್ಧನ ತತ್ವಗಳು’ ಎಂದುತ್ತರಿಸಿದ ಅಪ್ಪನ ಮಾತುಗಳನ್ನು ತಡೆದು ‘ಹಾಗಿದ್ದರೆ ಚೇರ್ಮನ್ ಮಾವೋ ಬುದ್ಧನೇ’ ಎಂದು ಕೇಳಿದೆನು. ಇದರಿಂದ ಕೋಪಗೊಂಡ ಅಪ್ಪ ‘ಸಾಕು ಮಾಡು. ಅವು ಮಕ್ಕಳಿಗೆ ಬೇಕಿಲ್ಲದ ವಿಷಯಗಳು. ಈ ಕುರಿತು ಇನ್ನೆಂದೂ ಮನೆಯಲ್ಲಾಗಲಿ, ಹೊರಗಾಗಲಿ ಮಾತನಾಡಬೇಡ’ ಎಂದು ನಿರ್ಬಂಧ ಹೇರಿದನು.

Ten Thousand Miles Without a Cloud
by Sun Shuyun
452 pp, HarperCollins, £17.99

Leave a Reply

Your email address will not be published.