‘ಸಂವಿಧಾನ ಓದು’ ಅಭಿಯಾನ

‘ಸಂವಿಧಾನ ಓದು: ವಿದ್ಯಾರ್ಥಿಗಳೆಡೆ ಸಂವಿಧಾನ ನಡೆ’ ಅಭಿಯಾನವನ್ನು ಸಹಯಾನ (ಡಾ.ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ, ಕೆರೆಕೋಣ) ಮತ್ತು ಸಮುದಾಯ ಕರ್ನಾಟಕ ನಾಡಿನ ಎಲ್ಲಾ ಸಹೋದರ ಸಂಘಟನೆಗಳ ನೆರವಿನೊಂದಿಗೆ ಪ್ರಾರಂಭಿಸಿದೆ. ಈ ಅಭಿಯಾನ ಇಂದು ಪುಸ್ತಕ ಮುದ್ರಣದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸುತ್ತಿದೆ. ಮೊದಲ ಮುದ್ರಣ ಲೋಕಾರ್ಪಣೆಗೊಂಡು 4 ತಿಂಗಳೊಳಗೆ 25 ಮುದ್ರಣದೊಂದಿಗೆ 50,000 ಪ್ರತಿಗಳು ಹೊರಬಂದಿದೆ. ನವೆಂಬರ್ ತಿಂಗಳಿಗೆ ಇನ್ನೂ 20 ಸಾವಿರ ಪುಸ್ತಕ ಮುದ್ರಣಗೊಳ್ಳುತ್ತಿವೆ.

ವಿಶ್ವಮಾನ್ಯತೆಯನ್ನು ಪಡೆದ ಭಾರತದ ಸಂವಿಧಾನವು ಆಧುನಿಕ ಭಾರತದಲ್ಲಿ ಸಮಾನತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಅಸಮಾನತೆಯನ್ನೇ ಸಮಾಜದ ತಳಹದಿಯನ್ನಾಗಿಸಿಕೊಂಡ ಈ ನೆಲದಲ್ಲಿ ಮೊದಲ ಬಾರಿಗೆ ಒಂದು ಕಾನೂನನ್ನು ಎಲ್ಲರಿಗೆ ಸಮಾನವಾಗಿ ಅಧಿಕೃತಗೊಳಿಸಿದ್ದು ನಮ್ಮ ಸಂವಿಧಾನ. ಹಲವು ಶತಮಾನಗಳಿಂದಲೂ ಈ ನಾಡಿನಲ್ಲಿ ಸಮಾನತೆ, ಸೋದರತೆ ಮತ್ತು ಸ್ವಾತಂತ್ರ್ಯದ ಹಕ್ಕೊತ್ತಾಯದೊಂದಿಗೆ ಹಲವು ಬಗೆಯ ವೈಚಾರಿಕ ಸಂಘರ್ಷಗಳು, ಭಿನ್ನ ಬಗೆಯ ಹೋರಾಟಗಳು ನಿರಂತರವಾಗಿ ನಡೆದಿವೆ. ಚಾರ್ವಾಕ, ಸಾಂಖ್ಯ, ಬೌದ್ಧ, ವಚನ ಚಳವಳಿ, ಭಕ್ತಿ ಚಳವಳಿಗಳು… ಹೀಗೆ ಆಯಾ ಕಾಲದ ಸಮಾಜವನ್ನು ನಿಷ್ಠುರವಾಗಿ ವಿಮರ್ಶಿಸುತ್ತಲೇ ಹೊಸ ಸಮಾಜ ಕಟ್ಟುವ ಭಿನ್ನ ದಾರಿಯನ್ನು ಅರಸಿವೆ. ಮುಂದೆ ಬಂದ ಸ್ವಾತಂತ್ರ್ಯ ಚಳವಳಿ ಈ ಆಶಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿತು. ದೇಶದ ಜನರ ಹಕ್ಕೊತ್ತಾಯವನ್ನು ಇನ್ನಷ್ಟು ಹೆಚ್ಚು ಬಲಪಡಿಸಿತು; ಅರ್ಥಪೂರ್ಣಗೊಳಿಸಿತು.

ಘನತೆ, ಸ್ವಾಭಿಮಾನ ಮತ್ತು ಮಾನವೀಯ ಸಂಬಂಧಗಳನ್ನೊಳಗೊಂಡ ಒಂದು ಬೆಚ್ಚಗಿನ ಬದುಕನ್ನು ಹಲವು ಶತಮಾನಗಳ ಕಾಲ ಹಂಬಲಿಸಿದ, ಒತ್ತಾಯಿಸಿದ ಜನಸಮುದಾಯದ ಕನಸುಗಳು, ವಿನ್ಯಾಸಗಳು, ಆಶಯಗಳು ಸ್ವಾತಂತ್ರ್ಯಾನಂತರ ಸಂವಿಧಾನದ ರೂಪ ಪಡೆದವು. ಸಮಾನತೆಯ ಕನಸುಗಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮರ್ಥ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳವಳಿಗಾರರು, ಹುತಾತ್ಮರು ಕಂಡ ಕನಸಿನ ಭಾರತವನ್ನು ನನಸು ಮಾಡುವ ನೆಲೆಯಲ್ಲಿ ನಮ್ಮ ಸಂವಿಧಾನ ಹೆಚ್ಚು ಸಶಕ್ತವಾಗಿದೆ. ಇದನ್ನು ಓದುವುದು, ಅರ್ಥೈಸಿಕೊಳ್ಳುವುದು ಮತ್ತು ಅದರಂತೆ ಬದುಕುವುದು ನಮ್ಮ ಮೊದಲ ಆದ್ಯತೆ ಆಗಬೇಕಾಗಿದೆ. ಈ ಕಾರಣದಿಂದ ‘ಸಂವಿಧಾನ ಓದು: ವಿದ್ಯಾರ್ಥಿಗಳೆಡೆ ಸಂವಿಧಾನ ನಡೆ’ ಅಭಿಯಾನವನ್ನು ಸಹಯಾನ (ಡಾ.ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ, ಕೆರೆಕೋಣ) ಮತ್ತು ಸಮುದಾಯ ಕರ್ನಾಟಕ ನಾಡಿನ ಎಲ್ಲಾ ಸಹೋದರ ಸಂಘಟನೆಯ ನೆರವಿನೊಂದಿಗೆ ಪ್ರಾರಂಭಿಸಿದೆ.

ಕಾಯಕ ಜೀವಿಗಳು, ದಲಿತರು, ದಮನಿತರು, ಮಹಿಳೆಯರನ್ನೂ ಒಳಗೊಂಡಂತೆ ದೇಶದ ಎಲ್ಲಾ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಂಸ್ಕೃತಿ ಕ ದುರ್ಬಲ ಜನಸಮುದಾಯದ ಪಾಲಿಗೆ ಸಂವಿಧಾನದ ಆಶಯಗಳು ಇನ್ನೂ ಪೂರ್ಣವಾಗಿ ಕೈಗೂಡದ ಕನಸಿನ ಗಂಟಾಗಿದೆ. ಸಮಾಜದ ಕೊನೆಯ ವ್ಯಕ್ತಿಯವರೆಗೆ ಇದು ತಲುಪಬೇಕಾದರೆ ಮೊದಲು ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳುವ ವಾತಾವರಣ ನಿರ್ಮಿಸಬೇಕು. ಜನ ಪ್ರಜ್ಞಾವಂತರಾಗಬೇಕು. ಹೀಗೆ ಜನರಿಗೆ ತಲುಪಿಸುವ ಕಿರುದಾರಿ ಸ್ವಾತಂತ್ರ್ಯ ಹೋರಾಟದ ಕುಟುಂಬದಿಂದ ಬಂದು, ನಾಡಿನ ಹಲವು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಪಾಲ್ಗೊಂಡ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಬರೆದಿರುವ ‘ಸಂವಿಧಾನ ಓದು’ ಪಸ್ತಕ.

ಇಂತಹದ್ದೊಂದು ಅಭಿಯಾನವನ್ನು ನಡೆಸಬೇಕೆಂದು ಆಲೋಚಿಸುತ್ತಿರುವಾಗಲೇ ಜನೆವರಿಯಲ್ಲಿ ಶಿರಸಿಯಲ್ಲಿ ನಡೆದ ‘ಸಂವಿಧಾನ ನಡೆ’ ಕಾರ್ಯಕ್ರಮ ನಡೆದ ಸ್ಥಳವನ್ನು ಸನಾತನವಾದಿಗಳು ಸೆಗಣಿ ನೀರು ಸಿಂಪಡಿಸಿ ಸ್ವಚ್ಛಗೊಳಿಸಿದ್ದಾಗಿ ಹೇಳಿದರು. ಕೇಂದ್ರದ ಸಚಿವರೊಬ್ಬರು ಸಂವಿಧಾನವನ್ನೇ ಬದಲಾಯಿಸುವ ಮಾತನಾಡಿದರು. ದೆಹಲಿಯಲ್ಲಿ ಕೆಲವರು ಸಂವಿಧಾನವನ್ನೇ ಸುಟ್ಟುಹಾಕಿದರು. ಸಂವಿಧಾನವನ್ನೇ ಓದದ, ಅದರೊಳಗಿರುವುದು ಏನೆಂದು ಅರಿಯದ ವಿದ್ಯಾರ್ಥಿ-ಯುವಜನರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಯಿತು. ಸಂವಿಧಾನದ ಕುರಿತು ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಹುಟ್ಟುಹಾಕಿದ ಅಪಕಲ್ಪನೆಯನ್ನು ಹೋಗಲಾಡಿಸುವ ಉದ್ದೇಶದಿಂದ ಬರೆದಿರುವ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಈ ಪುಸ್ತಕವನ್ನು ವಿದ್ಯಾರ್ಥಿ-ಯುವಜನರ ಬಳಿ ಒಯ್ದಾಗ ಸಿಕ್ಕ ಅಭೂತಪೂರ್ವ ಸ್ಪಂದನೆ, ಬೆಂಬಲ ಬೆರಗು ಹುಟ್ಟಿಸಿದ್ದು ಮಾತ್ರವಲ್ಲ ಭವಿಷ್ಯದ ಕುರಿತು ಆಶಾವಾದವನ್ನು ಬೆಳೆಸಿದೆ.

‘ಒಂದೇ ಹಿಡಿತಕ್ಕೆಈ  ಪುಸ್ತಕ ಓದಿ ಮುಗಿಸಿದೆ. ಹಲವು ಅಪಕಲ್ಪನೆಗಳು ದೂರಾದವು; ಈ ಪುಸ್ತಕವನ್ನು ಯಾಕೆ ಸುಡುತ್ತಿದ್ದಾರೆ? ಸುಡುವಂತಹುದೇನಿದೆ ಇದರಲ್ಲಿ?’ ಎಂದು ತನಗೆ ತಾನೇ ಒಬ್ಬ ವಿದ್ಯಾರ್ಥಿ ಪ್ರಶ್ನಿಸಿಕೊಂಡರೆ, ‘ನನಗೆ ಈ ಪುಸ್ತಕ ಒಂದೆರಡು ತಿಂಗಳ ಮೊದಲೇ ಓದಿಗೆ ಸಿಕ್ಕಿದ್ದರೆ ನಾನು ಸಂವಿಧಾನ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರಲಿಲ್ಲ, ನಾನೇ ಅವರಿಗೆ ಪ್ರಶ್ನಿಸುತ್ತಿದ್ದೆ’ ಎನ್ನುತ್ತಾನೆ ಇನ್ನೊಬ್ಬ. ‘ನಾವೆಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನದ ಪಾಠವನ್ನು ಮಾಡುತ್ತಾ ಬಂದಿದ್ದೇವೆ. ಆದರೆ ಈ ಪುಸ್ತಕ ಓದಿದ ಮೇಲೆ ನಮ್ಮ ಪಾಠಕ್ರಮವನ್ನೇ ಬದಲಾಯಿಸಿಕೊಳ್ಳುತ್ತಿದ್ದೇವೆ’ ಎಂದು ರಾಜ್ಯಶಾಸ್ತ್ರ ಉಪನ್ಯಾಸಕರೊಬ್ಬರು ಹೇಳಿದರೆ, ಈ ಪುಸ್ತಕದ ಓದು ನಾವು ನ್ಯಾಯಾಲಯದಲ್ಲಿ ಮಾಡುವ ವಾದವನ್ನೇ ಪುನರ್ ಪರಿಶೀಲಿಸುವಂತೆ ಮಾಡಿದೆ’ ಎಂದು ನ್ಯಾಯವಾದಿಯೊಬ್ಬರು ಹೇಳಿದ್ದು ಅಭಿಯಾನದ ಯಶಸ್ಸನ್ನು ತೋರಿಸುತ್ತಿದೆ. ರಾಜ್ಯದ ತುಂಬಾ ಈ ಅಭಿಯಾನಕ್ಕಾಗಿ ಓಡಾಡುವಾಗ ಇಂತಹ ನೂರಾರು ಮಾತುಗಳನ್ನು ಕೇಳಿಸಿಕೊಂಡೆ.

ಅಗಸ್ಟ್ 25ರಂದು ಬೆಂಗಳೂರಿನ ಸೆನೆಟ್ ಹಾಲಿನಲ್ಲಿ ಕಿಕ್ಕಿರಿದು ತುಂಬಿದ ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ 125 ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂವಿಧಾನದ ಅಭಿಮಾನಿಗಳೆದುರು ನಡೆದ ‘ಸಂವಿಧಾನ ಓದು’ ಪುಸ್ತಕ ಬಿಡುಗಡೆ, ಅಭಿಯಾನ ಉದ್ಘಾಟನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರದ ನಂತರ ಇದು ರಾಜ್ಯದಾದ್ಯಂತ ಹಬ್ಬಿತು. 100 ಕಾಲೇಜುಗಳಲ್ಲಿ ತಲಾ 100 ವಿದ್ಯಾರ್ಥಿಗಳಿಗೆ ಈ ಪುಸ್ತಕ ನೀಡಿ, ಓದಿಸಿ ಅವರೊಂದಿಗೆ ಸಂವಾದ ನಡೆಸುವ ಆಶಯದಿಂದ ಪ್ರಾರಂಭವಾದ ಈ ಅಭಿಯಾನ ಇಂದು ಪುಸ್ತಕ ಮುದ್ರಣದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸುತ್ತಿದೆ. ಮೊದಲ ಮುದ್ರಣ ಲೋಕಾರ್ಪಣೆಗೊಂಡು 4 ತಿಂಗಳೊಳಗೆ 25 ಮುದ್ರಣದೊಂದಿಗೆ 50,000 ಪ್ರತಿಗಳು ಹೊರಬಂದಿದೆ. ನವೆಂಬರ್ ತಿಂಗಳಿಗೆ ಇನ್ನೂ 20 ಸಾವಿರ ಪುಸ್ತಕ ಮುದ್ರಣಗೊಳ್ಳುತ್ತಿವೆ. ಮ್ಯಾಪ್ಲಿತೋ ಕಾಗದದಲ್ಲಿ ಅಪರೂಪದ ಫೋಟೋವನ್ನು ಒಳಗೊಂಡ 100 ಪುಟದ ಈ ಪುಸ್ತÀಕವನ್ನು ಸಾರ್ವಜನಿಕರಿಗೆ ಕೇವಲ 50 ರೂ. ಗೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ, ಸಂವಿಧಾನ ಓದು ಕಾರ್ಯಾಗಾರ ನಡೆಸುವ ವಿದ್ಯಾಲಯಗಳಿಗೆ ಇನ್ನಷ್ಟು ರಿಯಾಯತಿ ದರದಲ್ಲಿ ಒದಗಿಸುವ ಬದ್ಧತೆಯನ್ನು ಪುಸ್ತಕ ಹೊರತಂದಿರುವ ಸಹಯಾನ ಕೆರೆಕೋಣ ಮತ್ತು ಸಮುದಾಯ ಕರ್ನಾಟಕ ಸಂಸ್ಥೆಗಳು ಪ್ರಕಟಿಸಿದೆ.

ಈಗಾಗಲೆ ಬೆಂಗಳೂರು, ಗುಲಬರ್ಗ, ಕೋಲಾರ, ಬಾಗೇಪಲ್ಲಿ, ಕೊಪ್ಪ, ಶೃಂಗೇರಿ, ಗದಗ, ಧಾರವಾಡ, ಹಾಸನ, ಗಜೇಂದ್ರಗಡ, ತುಮಕೂರು ಮುಂತಾದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೂರಾರು ಸಂಪನ್ಮೂಲ ವ್ಯಕ್ತಿಗಳಿಗೆ ನಡೆದ ಕಾರ್ಯಾಗಾರಗಳಲ್ಲಿ ಸ್ವತಃ ಲೇಖಕರಾದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಪಾಲ್ಗೊಂಡು ನಡೆಸಿಕೊಟ್ಟಿದ್ದಾರೆ. ಮಾತ್ರವಲ್ಲ ಇಡೀ ರಾಜ್ಯದಲ್ಲಿ ಓಡಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಮುಂದಾಗಿದ್ದಾರೆ. ಮಾರ್ಚ್ ಒಳಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಾಗಾರ ನಿಗದಿಗೊಂಡಿದೆ. ಈಗಾಗಲೇ ನೂರಾರು ಕಾಲೇಜುಗಳಲ್ಲಿ ಸಂವಾದ ನಡೆದಿದೆ. ಹಲವು ವಿಶ್ವವಿದ್ಯಾಲಯಗಳು, ಕಾಲೇಜುಗಳು ತಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಲು ನಿರ್ಧರಿಸಿ ಖರೀದಿ ಮಾಡುತ್ತಿವೆ.

ಹಲವರು ಹುಟ್ಟು ಹಬ್ಬ, ವಿಶೇಷ ಕಾರ್ಯಕ್ರಮಗಳಿಗೆ ಉಚಿತವಾಗಿ ಪುಸ್ತಕ ನೀಡುತ್ತಿದ್ದಾರೆ. ಈ ಪುಸ್ತಕದ ಮೇಲೆ ಕ್ವಿಜ್, ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದಾರೆ. ಹುಬ್ಬಳ್ಳಿಯ ಒಬ್ಬರು ಊರಿಗೆಲ್ಲಾ ಪುಸ್ತಕ ಹಂಚಿದ್ದಾರೆ. ಕೆಲವರು ಪುಸ್ತಕ ಖರೀದಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ಒದಗಿಸುತ್ತಿದ್ದಾರೆ. ಒಬ್ಬ ಗೌರವಾನ್ವಿತ ಶಾಸಕರು ತನ್ನ ಕ್ಷೇತ್ರದ ಪ.ಪೂ ಕಾಲೇಜು ಮತ್ತು ಪದವಿ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ಒದಗಿಸುತ್ತಿದ್ದಾರೆ. ಈಗಾಗಲೇ ಅಭಿಯಾನ ಬರಬರುತ್ತಾ ಒಂದು ಸಂವಿಧಾನ ಹಬ್ಬವಾಗಿ ಪರಿವರ್ತನೆಗೊಳ್ಳುತ್ತಿದೆ.

‘ಎಲ್ಲಾ ಮಿತಿಗಳ ನಡುವೆ ಕೂಡ ಸ್ವತಂತ್ರ ಭಾರತದ ಏಳು ದಶಕಗಳ ಸಾಧನೆ ಗಮನಾರ್ಹವಾದದ್ದು. ಇದು ಸಾಧ್ಯವಾಗಿರುವುದು ಸಂವಿಧಾನದ ಆಶಯಗಳು ಭಾಗಶಃವಾಗಿಯಾದರೂ ಜಾರಿಯಾಗಿರುವುದರಿಂದ ಎನ್ನುವ ಸತ್ಯ ನಮ್ಮೊಂದಿಗಿದೆ. ಇಂದು ಸಂವಿಧಾನವೇ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸದೇ ಹೋದರೆ ನಮ್ಮ ಸಂವಿಧಾನವನ್ನು ಹಾಗೂ ಅದು ನೀಡಿರುವ ಪ್ರಜಾಪ್ರಭುತ್ವವಾದಿ ಆಡಳಿತ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನವನ್ನು ಉಳಿಸಿಕೊಳ್ಳದಿದ್ದರೆ ಪ್ರಜಾಪ್ರಭುತ್ವ ಹೋಗಿ ಅರಾಜಕತೆ ಬರುತ್ತದೆ. ಹಾಗಾಗಿ ಇಂದು ಸಂವಿಧಾನದ ಮುಂದಿರುವ ಹಾಗೂ ದೇಶದ ಮುಂದಿರುವ ಸವಾಲುಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ’ -ನ್ಯಾ.ಎಚ್.ಎನ್. ನಾಗಮೋಹನದಾಸ್ ಅವರ ಈ ಎಚ್ಚರಿಕೆಯೊಂದಿಗೆ ಎಲ್ಲರೂ ಸಂವಿಧಾನ ಓದಿನ ಸಹಯಾನಿಗಳಾಗಬೇಕೆಂಬುದೇ ಈ ಅಭಿಯಾನದ ಕನಸು.

Leave a Reply

Your email address will not be published.