ವಿಜ್ಞಾನಿ ಸ್ಟೀಫನ್ ಹಾಕಿಂಗರ ‘ಮಹತ್ವದ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳು’

ಈ ಕೃತಿಯಲ್ಲಿನ ಹಾಕಿಂಗರ ಲೇಖನಗಳು ವಿಜ್ಞಾನದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಇತರ ಪುಸ್ತಕಪ್ರಿಯರನ್ನೂ ಆಕರ್ಷಿಸುವ ಶ್ಯೆಲಿಯಲ್ಲಿ ಇವೆ. ವಿಜ್ಞಾನವಷ್ಟೇ ಅಲ್ಲದೆ ಹಾಕಿಂಗರ ರಾಜಕೀಯದ ಜ್ಞಾನ, ಚಲನಚಿತ್ರ-ಸಾಹಿತ್ಯಗಳ ಬಗೆಗಿನ ಒಲವು… ಹೀಗೆ ಅವರ ಬಹುಮುಖೀ ಆಸಕ್ತಿಗಳು ಅತೀವ ಅಚ್ಚರಿ ಮೂಡಿಸುತ್ತವೆ.

ಹತ್ವದ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳು (Brief Answers to the Big Questions) ಎಂಬ ಕುತೂಹಲ ಮೂಡಿಸುವ ಶೀರ್ಷಿಕೆಯನ್ನು ಹೊಂದಿದ ಈ ಕೃತಿ ಜಗದ್ವಿಖ್ಯಾತ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗರ ಜನಪ್ರಿಯ ವಿಜ್ಞಾನ ಪುಸ್ತಕಗಳ ಸರಣಿಯಲ್ಲಿ ಕೊನೆಯದು. ವಿಶ್ವವಿಜ್ಞಾನದಲ್ಲಿ ಅಪಾರ ಸಾಧನೆಗೈದ ಹಾಕಿಂಗರು ವಿಶ್ವದ ರಹಸ್ಯಗಳ ಬಗೆಗಿನ ಮಹತ್ವದ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರಗಳನ್ನು ಹಾಗೂ ಉತ್ತರಗಳೆಡೆಗೆ ಕೊಂಡೊಯ್ಯಬಹುದಾದ ಚಿಂತನೆಗಳನ್ನು ದಾಖಲಿಸಿರುವ ಹತ್ತು ಲೇಖನಗಳನ್ನು ಒಳಗೊಂಡ ಕೃತಿ ಇದು. 2018ರ ಮಾರ್ಚ್ 14ರಂದು ತಮ್ಮ ಅಭೂತಪೂರ್ವ ಜೀವನಯಾತ್ರೆಗೆ ವಿದಾಯ ಹೇಳಿದ ಹಾಕಿಂಗರ ಅಪ್ರಕಟಿತ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ತಮ್ಮ ನೆನಪಿನ ಕಾಣಿಕೆಯನ್ನು ಸಲ್ಲಿಸಿದವರು ಅವರ ಆಪ್ತ ಸ್ನೇಹಿತರು ಮತ್ತು ಬಂಧುವರ್ಗ. ಲಂಡನ್ನಿನ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಜಾನ್ ಮುರ್ರೇ ಪಬ್ಲಿಕೇಶನ್ಸ್ ಸಂಸ್ಥೆ ಆಗಸ್ಟ್ 2018ರಲ್ಲಿ ಹೊರತಂದಿರುವ ಈ ಕೃತಿ, ಜಗತ್ತಿಗೆ ಹಾಕಿಂಗರ ಅಂತಿಮ ಕೊಡುಗೆಯಾಗಿರುವ ಕಾರಣಕ್ಕೆ ಭಾವನಾತ್ಮಕ ನೆಲೆಯನ್ನು ಕೂಡಾ ಹೊಂದಿದೆ.

ಹಾಕಿಂಗರ ಜೀವನವನ್ನು ಆಧರಿಸಿಡಿದ ‘ದಿ ಥಿಯರಿ ಆಫ್ ಎವೆರಿಥಿಂಗ್’ ಚಿತ್ರದಲ್ಲಿ ಹಾಕಿಂಗರ ಪಾತ್ರ ನಿರ್ವಹಿಸಿ, ಅಕಾಡೆಮಿಯ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ ಎಡ್ಡಿ ರೆಡಮೇನ್ ಈ ಕೃತಿಗೆ ಮುನ್ನುಡಿ ಬರೆದು ಅಗಲಿದ ಸಾಧಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆಕಾಶಕಾಯಗಳ ಹುಟ್ಟು-ಸಾವು, ರಚನೆಗಳನ್ನು ಅರಿಯಲು ತನ್ನ ಜೀವನವನ್ನೇ ಮುಡಿಪಾಗಿಟ್ಟ ಹಾಕಿಂಗರು, ಈಗ ತಮ್ಮ ನೆಚ್ಚಿನ ಆಕಾಶಕಾಯಗಳೊಂದಿಗೆ ಸಂತೋಷವಾಗಿ ದಿನಗಳನ್ನು ಕಳೆಯಲಿ ಎಂಬ ಬರಾಕ್ ಒಬಾಮಾರ ಮಾತುಗಳನ್ನು ಉದ್ಧರಿಸಿ ತಮ್ಮ ನುಡಿನಮನ ಸಲ್ಲಿಸಿದ್ದಾರೆ ಈ ಬೆಳ್ಳಿ ತೆರೆಯ ಸ್ಟೀಫನ್ ಹಾಕಿಂಗ್.

‘ಗುರುತ್ವ ಅಲೆ’ಗಳ ಬಗೆಗಿನ ಮಹತ್ವದ ಸಂಶೋಧನೆಗಾಗಿ 2017ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಕಿಪ್ ಎಸ್ ಥಾರ್ನಿ ಅವರು ಸ್ಟೀಫನ್ ಹಾಕಿಂಗರ ಆಪ್ತ ಸ್ನೇಹಿತ, ಸಹಸಂಶೋಧಕ ಮತ್ತು ಈ ಕೃತಿಯನ್ನು ಹೊರತರುವಲ್ಲಿ ಮುಂದಾಳತ್ವವನ್ನು ವಹಿಸಿದವರು. ಕೃತಿಯ ಬಗೆಗಿನ ಪರಿಚಯ ಲೇಖನದಲ್ಲಿ ಅವರು ಹಾಕಿಂಗ್ ಮತ್ತು ತಮ್ಮ ಮೊದಲ ಭೇಟಿ, ನಂತರ ಬೆಳೆದ ಸ್ನೇಹ, ಒಡನಾಟ, ಗುರುತ್ವ ಅಲೆಗಳ ಬಗೆಗಿನ ತಮ್ಮ ಪ್ರತಿಪಾದನೆ ರೂಪುಗೊಳ್ಳುವಲ್ಲಿ ಹಾಕಿಂಗರ ಚಿಂತನೆಗಳ ಪ್ರಭಾವ, ಅವರ ವ್ಯೆಜ್ಞಾನಿಕ ಸಂಶೋಧನೆಗಳ ದೂರಗಾಮಿ ಪರಿಣಾಮ ಇತ್ಯಾದಿಗಳನ್ನು ವಿವರಿಸುವುದಲ್ಲದೆ ಕೃತಿಯಲ್ಲಿನ ಲೇಖನಗಳ ಸಂಕ್ಷಿಪ್ತ ಸಾರಾಂಶವನ್ನೂ ಹಿಡಿದಿಟ್ಟಿದ್ದಾರೆ. ದೈಹಿಕ ಅಪಾಂಗತ್ವದ ದುಸ್ತರ ಸ್ಥಿತಿಯಲ್ಲಿಯೂ ಜೀವನದ ಬಗೆಗೆ ಅಪಾರ ಉತ್ಸಾಹ, ಒಳ್ಳೆಯ ಹಾಸ್ಯಪ್ರಜ್ಞೆ ಹೊಂದಿದ್ದ ತಮ್ಮ ಜೀವದ ಗೆಳೆಯನ ಅಸಾಧಾರಣ ವ್ಯಕ್ತಿತ್ವದ ಬಗ್ಗೆ ಹಲವಾರು ಘಟನೆಗಳ ಮೂಲಕ ನಿರೂಪಿಸುತ್ತಾ ಆತನನ್ನು ನೆನೆದಿದ್ದಾರೆ.

ಕೃತಿಯ ಲೇಖನಗಳ ಸರಣಿ ಪ್ರಾರಂಭವಾಗುವ ಮುನ್ನವೇ `ದೊಡ್ಡ, ಅರ್ಥಾತ್ ಮಹತ್ವದ ಪ್ರಶ್ನೆಗಳನ್ನು ನಾವು ಏತಕ್ಕಾಗಿ ಕೇಳಲೇಬೇಕಾಗಿದೆ?’ ಎಂಬ ಹಾಕಿಂಗರ ದೀರ್ಘ ಲೇಖನ ಕೃತಿಯ ಶೀರ್ಷಿಕೆಗೆ ಪುಷ್ಟಿ ನೀಡುವುದರೊಂದಿಗೆ, ಹಾಕಿಂಗರ ಪುಟ್ಟ ಅತ್ಮಕಥನವೂ ಆಗಿದೆ. ತಮ್ಮ ವಿದ್ಯಾರ್ಥಿ ದಿನಗಳು, ಕಾಲೇಜು ದಿನಗಳಲ್ಲಿಯೇ ಪ್ರಾರಂಭವಾದ ತನ್ನ ದೈಹಿಕ ಅಸ್ವಸ್ಥತೆ, ಗುಣಪಡಿಸಲಾಗದ ಖಾಯಿಲೆಯಿಂದ ತಾನು ಬಳಲುತ್ತಿರುವ ಅರಿವು, ಅದನ್ನು ಎದುರಿಸಿದ ಬಗೆಗಳನ್ನು ಪ್ರತಿಯೊಂದು ಘಟನೆಗಳ ಮೂಲಕ ತಮ್ಮದೇ ಮಾತುಗಳಲ್ಲಿ ನಿರೂಪಿಸಿದ್ದಾರೆ ಹಾಕಿಂಗ್. ಕೆಲವೇ ದಿನಗಳು ಬದುಕಬಹುದೆನ್ನುವ ಅರಿವಿನಿಂದ ಮಾಡಬೇಕಿರುವ ಕೆಲಸಗಳಲ್ಲಿ ತೊಡಗಿಕೊಳ್ಳುವ ತನ್ನ ತುಡಿತ ಹೆಚ್ಚಾದ್ದನ್ನು, ಪ್ರತಿ ದಿನವನ್ನೂ ತಾನು ಯಾರಿಂದಲೋ ಎರವಲು ಪಡೆದಿದ್ದೇನೆನ್ನುವ ಭಾವ ಕೊನೆಯವರಿಗೂ ಉಳಿದಿದ್ದನ್ನು, ಅದು ತನ್ನ ಬದುಕಿನ, ಚಿಂತನೆಗಳ ತೀವ್ರತೆಯನ್ನು ಹೆಚ್ಚಿಸಿದ ಬಗೆಯನ್ನು ಹಾಕಿಂಗ್ ಬರೆದಿರುವ ರೀತಿ ಅವರ ಧನಾತ್ಮಕ ಧೋರಣೆಗೆ ಹಿಡಿದ ಕನ್ನಡಿಯಂತಿದೆ.

ಹಾಕಿಂಗರ ಮೊದಲ ಮಹತ್ವದ ಪ್ರಶ್ನೆಯೇ `ದೇವರಿದ್ದಾನೆಯೇ?’ ಎಂಬುದು. ವಿಶ್ವದ ಜನಕ ದೇವರು ಎಂಬ ನಂಬಿಕೆಗಳು ದೇವರ ಅಸ್ತಿತ್ವವನ್ನು ದೃಢ ಪಡಿಸಲಾರವು, ವಿಜ್ಞಾನದ ನಿಯಮಗಳನ್ನೇ ದೇವರು ಎಂದು ನಂಬಲು ಸಾಧ್ಯವಿದೆಯಾದರೂ ಅಂತಹ ದೇವರು ಕಷ್ಟಗಳನ್ನು ಪರಿಹರಿಸುವನೆಂಬ ನಂಬಿಕೆಗಳಿಗೆ ಆಧಾರಗಳಿಲ್ಲ ಎಂಬುದು ಹಾಕಿಂಗರ ಖಚಿತ ಆಭಿಪ್ರಾಯ. ಸ್ವರ್ಗ, ಪುನರ್ಜನ್ಮದಂತಹ ಕಲ್ಪನೆಗಳಲ್ಲಿ ತನಗೆ ನಂಬಿಕೆಯಿಲ್ಲ ಎಂದು ಸ್ಪಷ್ಟಪಡಿಸುತ್ತಾ ಪ್ರಕೃತಿಯ ರಹಸ್ಯಗಳನ್ನು ಅರಿಯಲು ಮಾಡಬೇಕಾದ ಎಲ್ಲವನ್ನೂ, ದೊರಕಿರುವ ಈ ಜೀವನದಲ್ಲೇ ಮಾಡಬೇಕು ಎಂಬ ನಂಬಿಕೆಯಿಂದ ತಾನು ಜೀವನ ನಡೆಸುತ್ತಿದ್ದೇನೆ ಎಂದು ನುಡಿದಿದ್ದಾರೆ. ದೇವರೊಂದಿಗೆ ತಾನು ವಾಗ್ವಿವಾದಕ್ಕೆ ಇಳಿದಿಲ್ಲ ಎಂಬ ತಿಳಿಹಾಸ್ಯದ ನುಡಿಗಳನ್ನು ಹೊಂದಿರುವ ಈ ಲೇಖನದಿಂದ ಹಾಕಿಂಗರು ದೈವದ್ವೇಷಿಯಲ್ಲ, ದೇವರ ಕಲ್ಪನೆಯನ್ನು ವೈಜ್ಞಾನಿಕ ನಿಲುವಿನಿಂದ ಅರ್ಥೈಸಹೊರಟವರು ಮಾತ್ರ ಎಂದು ತಿಳಿಯುವುದರಲ್ಲಿ ಅನುಮಾನವಿಲ್ಲ.

ಕೆಲವೇ ದಿನಗಳು ಬದುಕಬಹುದೆನ್ನುವ ಅರಿವಿನಿಂದ ಮಾಡಬೇಕಿರುವ ಕೆಲಸಗಳಲ್ಲಿ ತೊಡಗಿಕೊಳ್ಳುವ ತನ್ನ ತುಡಿತ ಹೆಚ್ಚಾದ್ದನ್ನು, ಪ್ರತಿ ದಿನವನ್ನೂ ತಾನು ಯಾರಿಂದಲೋ ಎರವಲು ಪಡೆದಿದ್ದೇನೆನ್ನುವ ಭಾವ ಕೊನೆಯವರಿಗೂ ಉಳಿದಿದ್ದನ್ನು, ಅದು ತನ್ನ ಬದುಕಿನ, ಚಿಂತನೆಗಳ ತೀವ್ರತೆಯನ್ನು ಹೆಚ್ಚಿಸಿದ ಬಗೆಯನ್ನು ಹಾಕಿಂಗ್ ಬರೆದಿರುವ ರೀತಿ ಅವರ ಧನಾತ್ಮಕ ಧೋರಣೆಗೆ ಹಿಡಿದ ಕನ್ನಡಿಯಂತಿದೆ.

`ಎಲ್ಲದರ ಆರಂಭ ಹೇಗಾಯಿತು?’ -ಇದು ವಿಶ್ವದ ಉಗಮದ ಬಗೆಗೆ ಇದ್ದ ಪ್ರಶ್ನೆಗಳನ್ನು ಎತ್ತಿ ಇಂದು ಅವುಗಳಿಗೆ ದೊರಕಿರುವ ಉತ್ತರವನ್ನು ವಿಶದವಾಗಿ ವಿವರಿಸುವ ಲೇಖನ. `ವಿಶ್ವ ಹಿಗ್ಗುತ್ತಿದೆ’ ಎಂದು ಸಿದ್ಧಪಡಿಸಿದ ಸಂಶೋಧನೆಗಳು, ವಿಶ್ವದ ಉಗಮಕ್ಕೆ ಕಾರಣವಾದ ಬಿಗ್ ಬ್ಯಾಂಗ್, ಬಿಗ್ ಬ್ಯಾಂಗ್ ಗೆ ಎಡೆ ಮಾಡಿಕೊಟ್ಟ ಅತಿಸಾಂದ್ರ ಬಿಂದುವಿನಲ್ಲಿ ಐನ್ ಸ್ಟೈನರ ಸಾಪೇಕ್ಷ ಸಿದ್ಧಾಂತ ವಿಫಲಗೊಳ್ಳಬಹುದಾದ ಸಾಧ್ಯತೆಗಳು, ಕ್ವಾಂಟಮ್ ಸಿದ್ಧಾಂತದೊಂದಿಗೆ ಸಾಪೇಕ್ಷ ಸಿದ್ಧಾಂತವನ್ನು ಬೆಸೆದಾಗ ನಿವಾರಿಸಲ್ಪಟ್ಟ ಈ ಸಮಸೈ, `ವಿಶ್ವಕ್ಕೆ ಗಡಿರೇಖೆಗಳಿಲ್ಲ’ವೆನ್ನುವ ತಮ್ಮ ಪ್ರಮೇಯ, ಕ್ವಾಂಟಮ್ ಲೋಕದ ಅಸ್ಥಿರತೆಗಳ ಬಗೆಗಿನ ತಮ್ಮ ಸಿದ್ಧಾಂತ… ಹೀಗೆ ಅನೇಕ ಗಹನ ಚಿಂತನೆಗಳನ್ನು ಒಳಗೊಂಡ ಮಹತ್ವದ ಲೇಖನ ಇದು.

ಬ್ರಹ್ಮಾಂಡದಲ್ಲಿ ಬುದ್ಧಿವಂತ ಜೀವಸಂಕುಲ ಇರಬಹುದೇ? ಎಂಬುದು ಹಾಕಿಂಗರ ಮೂರನೆಯ ಪ್ರಶ್ನೆ. ಬುದ್ಧಿವಂತರೆಂದು ಕರೆಯಿಸಿಕೊಳ್ಳುವ ಮನುಷ್ಯರು ನಿಜಕ್ಕೂ ವಿವೇಕದಿಂದ ವರ್ತಿಸಿ ಬುದ್ಧಿವಂತಿಕೆಯ ಸಾರ್ಥಕ್ಯವನ್ನು ಮೆರೆದಿಲ್ಲ ಎನ್ನುವ ಕಹಿಸತ್ಯವನ್ನು ಹಾಸ್ಯದ ಲೇಪ ಹಚ್ಚಿ ನುಡಿಯುತ್ತಾ, ವಿಶ್ವ ಉಗಮಗೊಂಡಾಗ ಇನ್ನಿತರ ಗ್ರಹಗಳಲ್ಲಿ ಜೀವಸಂಕುಲವನ್ನು ಸೃಷ್ಟಿಸಿ ಬೆಳೆಯಿಸುವ ಸಾಧ್ಯತೆಗಳೆಷ್ಟಿತ್ತು ಎಂಬುದನ್ನು ವ್ಯೆಜ್ಞಾನಿಕ ನೆಲೆಯಲ್ಲಿ ಚರ್ಚಿಸುತ್ತಾರೆ. ಬೇರೆ ಗ್ರಹಗಳಿಂದ ಬಂದ ಜೀವಿಗಳನ್ನು ನಾವಿನ್ನೂ ಕಂಡಿಲ್ಲದಿರುವುದಕ್ಕೆ ಹಾಕಿಂಗರು ನೀಡುವ ಕಾರಣಗಳು ಇಂತಿವೆ:

1. ಸಂತಾನೋತ್ಪತ್ತಿ ಮಾಡಬಲ್ಲ ಜೀವಿಗಳು ಬೇರೆ ಗ್ರಹಗಳಲ್ಲಿ ಇದ್ದಿರಬಹುದಾದರೂ ಅವರಲ್ಲಿ `ಬುದ್ಧಿವಂತಿಕೆ’ ಬೆಳೆದಿರುವ ಸಾಧ್ಯತೆಗಳು ಇಲ್ಲದಿರುವುದು.

2. ಕ್ಷುದ್ರಗ್ರಹಗಳು ಅಥವಾ ಧೂಮಕೇತುಗಳು ಈ ಗ್ರಹಗಳಿಗೆ ಅಪ್ಪಳಿಸಿ ಜೀವಿಗಳು ಬುದ್ಧಿವಂತಿಕೆಯನ್ನು ಪಡೆಯುವ ಮುನ್ನವೇ ನಾಶವಾಗಿರುವ ಸಾಧ್ಯತೆ.

3. ವ್ಯವಸ್ಥೆಯ ಅಸ್ಥಿರತೆಯಿಂದ ಬುದ್ಧಿವಂತ ಜೀವಿಗಳು ತಮ್ಮ ಸಂಕುಲವನ್ನೇ ನಾಶ ಮಾಡಿರಬಹುದಾದ ಸಾಧ್ಯತೆ.

4. ಬೇರೆ ಗ್ರಹದ ಜೀವಿಗಳು ಮನುಷ್ಯರಿಗಿಂತ ತೀರ ಬುದ್ಧಿವಂತರಾಗಿದ್ದು ನಮ್ಮೊಂದಿಗೆ ಸಂಪರ್ಕ ಬೆಳೆಸುವ ಆಸಕ್ತಿಯೇ ಅವರಲ್ಲಿ ಇಲ್ಲದಿರುವುದು!! ಕೊನೆಯ ಕಾರಣವನ್ನು ಉದಾಹರಣೆಗಳ ಸಹಿತ ಹಾಕಿಂಗರು ವಿವರಿಸಿರುವ ಬಗೆ ಅನನ್ಯವಾಗಿದೆ.

`ಭವಿಷ್ಯವನ್ನು ಖಚಿತವಾಗಿ ಊಹಿಸಲು ನಮಗೆ ಸಾಧ್ಯವೇ?’ ಎಂಬ ಮತ್ತೊಂದು ಕುತೂಹಲಕಾರಿ ಪ್ರಶ್ನೆಗೆ `ಸಾಧ್ಯವಿಲ್ಲ’ ಎಂಬ ಆಧಾರಸಹಿತ ಉತ್ತರವನ್ನು ನೀಡುತ್ತಾರೆ ಹಾಕಿಂಗ್. ಕ್ವಾಂಟಮ್ ಸಿದ್ಧಾಂತದಲ್ಲಿನ ಅನಿಶ್ಚಿತತೆ ತತ್ವವನ್ನು ಆಧರಿಸಿ ನಡೆಯುತ್ತಿರುವ ಈ ವಿಶ್ವದಲ್ಲಿ, ಮುಂದೆ ಹೀಗೆಯೇ ಆಗುತ್ತದೆ ಎಂದು ನಿಶ್ಚಿತವಾಗಿ ಹೇಳಲಾಗದು ಮತ್ತು ಕಪ್ಪು ರಂಧ್ರಗಳ ಅಸ್ತಿತ್ವವೂ ಖಚಿತ ಭವಿಷ್ಯವಾಣಿಗಳ ಸಾಧ್ಯತೆಯನ್ನು ಅಲ್ಲಗಳೆಯುತ್ತದೆ ಎಂಬ ವಾದವನ್ನು ಸಮರ್ಥವಾಗಿ ಮಂಡನೆ ಮಾಡಲಾದ ಲೇಖನ ಇದು.

`ಕಪ್ಪು ರಂಧ್ರಗಳ ಒಳಗೇನಿದೆ?’ ಎಂಬ ಐದನೆಯ ಪ್ರಶ್ನೆ ಹಾಕಿಂಗರ ಜೀವಮಾನದ ಸಂಶೋಧನೆಗಳ ಆಧಾರದ ಮೇಲೆ ಉತ್ತರ ನೀಡಬಹುದಾದದ್ದು. ತನ್ನ ಸಮೀಪಕ್ಕೆ ಬಂದ ಎಲ್ಲವನ್ನೂ ಒಳಗೆಳೆದುಕೊಳ್ಳುವ ಅತಿ ಸಾಂದ್ರ ಆಕಾಶ ಕಾಯವಾದ ಕಪ್ಪು ರಂಧ್ರಗಳ ಬಗೆಗೆ ಇದುವರೆಗೂ ನಡೆದ ಸಂಶೋಧನೆಗಳ ಸಾರವನ್ನೇ ಹಿಡಿದಿಡಲಾಗಿದೆ, ಈ ಲೇಖನದಲ್ಲಿ. ಕಪ್ಪು ರಂಧ್ರಗಳ ಹೊರ ಪರಿಧಿಯಾದ ಈವೆಂಟ್ ಹಾರಿಜಾನ್‍ನ ವಿಸ್ತೀರ್ಣ ಕಪ್ಪುರಂಧ್ರದ ದ್ರವ್ಯರಾಶಿ ಹೆಚ್ಚಿದಂತೆಲ್ಲ ಹೆಚ್ಚುವುದೆಂಬ, ಏನನ್ನೂ ಹೊರಬಿಡುವುದಿಲ್ಲ ಎಂದು ನಂಬಲಾದ ಕಪ್ಪುರಂಧ್ರಗಳು ತಾನು ಹೀರಿದ್ದರಲ್ಲಿ ಕೆಲ ಅಂಶವನ್ನು ವಿದ್ಯುತ್ಕಾಂತೀಯ ಅಲೆಗಳ ರೂಪದಲ್ಲಿ ಹೊರಚೆಲ್ಲಬಲ್ಲವೆಂಬ ತಮ್ಮ ಮಹತ್ವದ ಸಿದ್ಧಾಂತಗಳನ್ನು ಸರಳವಾಗಿ ವಿವರಿಸುತ್ತಾರೆ ಹಾಕಿಂಗ್. ಹೆಚ್ಚಿನ ದ್ರವ್ಯರಾಶಿ ಹೊಂದಿದ ಕಪ್ಪು ರಂಧ್ರದಿಂದ ಹೊರಬೀಳುವ ಹಾಕಿಂಗ್ ರೇಡಿಯೇಶನ್ ಗುರುತಿಸಲಾಗದಷ್ಟು ಕಡಿಮ ವೇಗದಲ್ಲಿ ಹೊರಬೀಳುವುದು, ಗುರುತಿಸಬಹುದಾದ ವೇಗದಲ್ಲಿ ಹಾಕಿಂಗ್ ರೇಡಿಯೇಶನ್ ಅನ್ನು ಹೊರಬಿಡುವ ಚಿಕ್ಕ (ಕಡಿಮೆ ದ್ರವ್ಯರಾಶಿಯ) ಕಪ್ಪುರಂಧ್ರಗಳು ಇನ್ನೂ ಕಂಡಿಲ್ಲದಿರುವುದರ ಕುರಿತ ಮಾಹಿತಿ ಇಲ್ಲಿ ಸಿಗುತ್ತದೆ. ಚಿಕ್ಕ ಕಪ್ಪುರಂಧ್ರಗಳ ಪತ್ತೆಯಾಗಿದ್ದರೆ ತಮಗೆ ನೊಬೆಲ್ ಪಾರಿತೋಷಕ ಸಿಗುತ್ತಿತ್ತು ಎಂಬುದನ್ನು ಕಿಂಚಿತ್ತೂ ವಿಷಾದವಿಲ್ಲದೆ ಹೇಳಿರುವ ಹಾಕಿಂಗರ ಮನೋಭಾವವನ್ನು ಮೆಚ್ಚತಕ್ಕದ್ದು.

`ಸಮಯದೊಂದಿಗೆ ಭೂತಕಾಲ-ಭವಿಷ್ಯಲೋಕಕ್ಕೆ ನಾವು ಪಯಣಿಸಬಹುದೇ?’ ಎಂಬ ಇನ್ನೊಂದು ಬೆರಗಿನ ಪ್ರಶ್ನೆಗೆ, ಇದು ಸಾಧ್ಯವಾದರೆ ಘಟಿಸಬಹುದಾದ ವಿಡಂಬನೆಗಳ ಉದಾಹರಣೆಗಳನ್ನು ನೀಡಿ ಆಸಕ್ತಿಯನ್ನು ಕೆರಳಿಸಿದ್ದಾರೆ ಹಾಕಿಂಗ್. ಸಮಯದೊಂದಿಗಿನ ಈ ಬಗೆಯ ಪಯಣಕ್ಕೆ ವಿಜ್ಞಾನದ ಸಿದ್ಧಾಂತಗಳು ಒಡ್ಡುವ ಅಡಚಣೆಗಳ ಕುರಿತ ವಿವರಣೆ, ಕ್ವಾಂಟಮ್ ಸಿದ್ಧಾಂತ ಮತ್ತು ಐನ್ ಸ್ಟೈನರ ಗುರುತ್ವ ಸಿದ್ಧಾಂತಗಳನ್ನು ಒಂದುಗೂಡಿಸಬಹುದಾದ ಎಂ.ಥಿಯರಿ ರೂಪುಗೊಂಡಾಗ ಮಾತ್ರವೇ ಈ ಬಗೆಯ ಪಯಣ ಸಾಧ್ಯವಾಗಬಹುದು ಎಂಬ ವೈಜ್ಞಾನಿಕ ನೆಲೆಯ ಅಭಿಪ್ರಾಯ ಈ ಲೇಖನದಲ್ಲಿ ವ್ಯಕ್ತವಾಗಿದೆ.

ಮೇಲಿನ ಆರು ಪ್ರಶ್ನೆಗಳಿಗೆ ವೈಜ್ಞಾನಿಕ ಆಧಾರ, ಚಿಂತನೆಗಳ ಮೂಲಕವೇ ಉತ್ತರ ನೀಡಿರುವ ಹಾಕಿಂಗ್ ಮುಂದಿನ ನಾಲ್ಕು ಪ್ರಶ್ನೆಗಳಿಗೆ ಉತ್ತರರೂಪವಾದ ತಮ್ಮ ಅನಿಸಿಕೆಗಳನ್ನು ನೀಡಿದ್ದಾರೆ. `ಭೂಮಿಯಲ್ಲಿ ನಮ್ಮ ಉಳಿವು ಸಾಧ್ಯವೇ?’ ಎಂಬ ಪ್ರಶ್ನೆ ತಮ್ಮಲ್ಲಿ ಮೂಡಲು ಕಾರಣವಾದ ಜನಸಂಖ್ಯೆಯ ಹೆಚ್ಚಳ, ಪರಿಸರದ ನಾಶ, ಜಾಗತಿಕ ತಾಪಮಾನದ ಏರಿಕೆಗಳಂತಹ ಆತಂಕ ತರುವ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಾ ಇವು ಹೇಗೆ ನಮ್ಮನ್ನು ವಿನಾಶದಂಚಿಗೆ ತಳ್ಳುತ್ತಿವೆ ಎಂದು ವಿವರಿಸಿದ್ದಾರೆ. ಮಾನವ ಸಂಕುಲದ ಉಳಿವಿನ ಹಾದಿಯ ಬಗೆಗೆ ತಮ್ಮ ಚಿಂತನೆಗಳನ್ನು ಮುಂದಿರಿಸಿರುವ ಹಾಕಿಂಗರ ಕಾಳಜಿ ಮೆಚ್ಚುಗೆಗೆ ಅರ್ಹ.

ಹಾಕಿಂಗರ ಮೊದಲ ಮಹತ್ವದ ಪ್ರಶ್ನೆಯೇ `ದೇವರಿದ್ದಾನೆಯೇ?’ ಎಂಬುದು. ವಿಶ್ವದ ಜನಕ ದೇವರು ಎಂಬ ನಂಬಿಕೆಗಳು ದೇವರ ಅಸ್ತಿತ್ವವನ್ನು ದೃಢ ಪಡಿಸಲಾರವು, ವಿಜ್ಞಾನದ ನಿಯಮಗಳನ್ನೇ ದೇವರು ಎಂದು ನಂಬಲು ಸಾಧ್ಯವಿದೆಯಾದರೂ ಅಂತಹ ದೇವರು ಕಷ್ಟಗಳನ್ನು ಪರಿಹರಿಸುವನೆಂಬ ನಂಬಿಕೆಗಳಿಗೆ ಆಧಾರಗಳಿಲ್ಲ ಎಂಬುದು ಹಾಕಿಂಗರ ಖಚಿತ ಆಭಿಪ್ರಾಯ.

`ಬಾಹ್ಯಾಕಾಶದಲ್ಲಿ ನಾವು ವಸಾಹತು ಮಾಡಬೇಕೇ?’ ಎಂಬ ಲೇಖನ, ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ವಾಸಯೋಗ್ಯವಾದ ಬೇರೊಂದು ನೆಲೆಯನ್ನು ಹುಡುಕಬೇಕಾಗಿರುವ ಅಗತ್ಯವನ್ನು ಕುರಿತದ್ದು. ನಮ್ಮ ಸೌರಮಂಡಲದ ಚಂದ್ರ, ಮಂಗಳ ಗ್ರಹಗಳಲ್ಲದೆ ಬೇರೆ ಸೌರಮಂಡಲದ ಕೆಲವು ಗ್ರಹಗಳ ವಾತಾವರಣ ಮಾನವ ಸಂಕುಲದ ಭವಿಷ್ಯದ ವಸತಿಗೆ ಸೂಕ್ತವಾಗಬಹುದು ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಾದ ಒತ್ತಡ ಬಂದೊದಗಿದೆ ಎನ್ನುತ್ತಾರೆ ಹಾಕಿಂಗ್.

‘ಕೃತಕ ಬುದ್ಧಿಶಕ್ತಿ (ಎ.ಐ.) ನಮ್ಮನ್ನು ಮೀರಿಸಬಹುದೇ?’ ಎನ್ನುವ ಪ್ರಶ್ನೆಯಲ್ಲಿ ನಮ್ಮದೇ ಸೃಷ್ಟಿಯಾದ ರೋಬೋಟ್ ಮುಂತಾದವು ನಮ್ಮನ್ನೇ ನಿಯಂತ್ರಿಸುವ ಸಾಧ್ಯತೆ, ಅದರಿಂದಾಗಬಹುದಾದ ಅಪಾಯಗಳನ್ನು ವಿವರಿಸಲಾಗಿದೆ. ಮುಂದುವರಿದ ತಂತ್ರಜ್ಞಾನ ಅಂತಹ ಅನ್ವೇಷಣೆಯನ್ನು ಆಗಗೊಟ್ಟೀತು ಮತ್ತು ಈ ಪರಿಸ್ಥಿತಿಯನ್ನು ವಿವೇಕದಿಂದ ನಿಭಾಯಿಸುವ ಜಾಣ್ಮೆ ನಮ್ಮ ವಿಜ್ಞಾನಿಗಳಿಗೆ ಬರಲಿ ಎಂದು ಬಯಸಿದ್ದಾರೆ ಹಾಕಿಂಗ್.

`ಭವಿಷ್ಯವನ್ನು ನಾವು ಹೇಗೆ ರೂಪಿಸಬೇಕು?’ -ಇದು ಕೃತಿಯ ಕೊನೆಯ ಲೇಖನ. ವೈಜ್ಞಾನಿಕ ಮನೋಭಾವ, ವಿಜ್ಞಾನದ ಬಗ್ಗೆ ಒಲವು, ವಿವೇಕಯುತ ನಡವಳಿಕೆಗಳಿಂದ ಒಂದು ಸುಂದರ ಭವಿಷ್ಯವನ್ನು ನಮಗಾಗಿ ಕಟ್ಟಿಕೊಳ್ಳುವ ಸಾಧ್ಯತೆ ಖಂಡಿತ ಇದೆ ಎಂಬ ಆಶಾವಾದದ ನುಡಿಗಳನ್ನು ಇಲ್ಲಿ ಆಡಿದ್ದಾರೆ ಹಾಕಿಂಗ್.

ಈ ಕೃತಿಯಲ್ಲಿನ ಹಾಕಿಂಗರ ಲೇಖನಗಳು ವಿಜ್ಞಾನದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಇತರ ಪುಸ್ತಕಪ್ರಿಯರನ್ನೂ ಆಕರ್ಷಿಸುವ ಶ್ಯೆಲಿಯಲ್ಲಿ ಇವೆ. ವಿಜ್ಞಾನವಷ್ಟೇ ಅಲ್ಲದೆ ಹಾಕಿಂಗರ ರಾಜಕೀಯದ ಜ್ಞಾನ, ಚಲನಚಿತ್ರ-ಸಾಹಿತ್ಯಗಳ ಬಗೆಗಿನ ಒಲವು ಈ ಲೇಖನಗಳಲ್ಲಿ ವಿದಿತವಾಗಿದ್ದು ಅವರ ಬಹುಮುಖಿ ಆಸಕ್ತಿಗಳ ಬಗೆಗೆ ಅತೀವ ಅಚ್ಚರಿಯನ್ನು ನಮ್ಮಲ್ಲಿ ಮೂಡಿಸುತ್ತದೆ. ವಿಡಂಬನಾತ್ಮಕ ನವಿರು ಹಾಸ್ಯವನ್ನು ಉದ್ದಕ್ಕೂ ಹೊಂದಿರುವ ಈ ಕೃತಿಯನ್ನು ಕೊಂಡು, ಓದಿ, ವ್ಯೆಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಈ ಅಪ್ರತಿಮ ವಿಜ್ಞಾನಿಗೆ ನಾವೆಲ್ಲ ಸಲ್ಲಿಸುವ ಸೂಕ್ತ ನಮನವಾದೀತು.

*ಲೇಖಕರು ಸಹ ಪ್ರಾಧ್ಯಾಪಕಿ, ಭೌತಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ 577451

ಹಾಕಿಂಗರ ಮಕ್ಕಳಲ್ಲಿ ಎರಡನೆಯವರಾದ ಲೂಸಿ ಹಾಕಿಂಗ್ ಕೃತಿಯ ಹಿನ್ನುಡಿಯಲ್ಲಿ, ತನ್ನ ತಂದೆಯೊಂದಿಗೆ ಕಳೆದ ಮಧುರ ನೆನಪುಗಳನ್ನು, ದ್ಯೆಹಿಕ ಅಪಾಂಗತ್ವದ ಬಗೆಗೆ ದುಃಖ, ನಿರಾಸೆಗಳನ್ನು ಇರಿಸಿಕೊಳ್ಳದೆ ತಮ್ಮನ್ನು ಅವರು ಪ್ರಭಾವಿಸಿದ ಬಗೆಯನ್ನು ಭಾವಪೂರ್ಣ ಮಾತುಗಳಲ್ಲಿ ಹಿಡಿದಿರಿಸಿದ್ದಾರೆ. ಪ್ರತಿಭೆ-ಮನೋಬಲಗಳ ಶಿಖರವಾಗಿದ್ದು ತಮ್ಮ ಅತ್ಯಮೂಲ್ಯ ಸಂಶೋಧನೆಗಳಿಂದ ಜಗತ್ತಿನ ಗಮನವನ್ನೇ ಸೆಳೆದಿದ್ದರೂ, `ವಿಶ್ವವಿಜ್ಞಾನಕ್ಕೆ ತನ್ನದೇನಾದರೂ ಕೊಡುಗೆ ಇದ್ದರೆ ಅದಕ್ಕಾಗಿ ತಾನು ಧನ್ಯ’ ಎಂದು ವಿನಯದಿಂದ ನುಡಿದಿದ್ದ ತನ್ನ ತಂದೆಯ ಬಗ್ಗೆ ಹೆಮ್ಮೆ ಪಡುತ್ತಾರೆ ಲೂಸಿ ಹಾಕಿಂಗ್.

Leave a Reply

Your email address will not be published.