ಮೊಬೈಲು ಪುರಾಣ

ಒಂದು ಹುಡುಗಿಗೂ ಹುಡುಗನಿಗೂ ಪ್ರಣಯಾಂಕುರವಾದರೆ ಎಲ್ಲರಿಗಿಂತ ಹೆಚ್ಚು ಸಂತಸ ಪಡುವವರು ಖಂಡಿತ ಅವರೂ ಅಲ್ಲ, ಅವರ ಹೆತ್ತವರೂ ಅಲ್ಲ. ಮೊಬೈಲ್ ಕಂಪೆನಿಗಳು, ಇಂಟರ್‍ನೆಟ್ ದಾತಾರರು!

ಪ್ರಾತಃ ಸ್ಮರಾಮಿ ಮೊಬೈಲು ಫೋನುಂ
ಅಂಗುಷ್ಠೇ ಸ್ಕ್ರೀನು ತೀಡನಂ
ನೋಟಿಫಿಕೇಷನು ವಿಹಾರಾರ್ಥೇ
ಪ್ರಭಾತೇ ಮೊಬೈಲು ದರ್ಶನಂ          1

ಮೊಬೈಲು ಮೇ ವಸತೇ ಫೋರ್-ಜೀ
ಸರ್ವತಂ ನೆಟ್‍ವರ್ಕ್‍ಂ ಮಂಡಲೇ
ದ್ವಿತೀಯ ಪತ್ನೀ ನಮಸ್ತುಭ್ಯಂ
ಪ್ರಥಮ ಪತ್ನೀ ಕ್ಷಮಸ್ವಮೇ                2

ಏರ್‍ಟೆಲ್ ಐಡಿಯಾ ನೆಟ್ಟುಂ ಪರಾರಿ
ಜಿಯೋ ನೆಟ್ಟುಂ ತ್ರಿಪುರಾಂತಕಾರಿ
ನೆಟ್ಟು ಉಚಿತಂ ಹುಚ್ಚು ಖಚಿತಂ
ಮೊಬೈಲಶ್ಚಕೃತಂ ತಥಂ                   3

ಕುಲದೇವತಾ ವಾಟ್ಸಪ್
ಫೇಸ್ ಬುಕ್ಕೌ ಇಷ್ಟದೇವತಾ
ಇಂಟರ್‍ನೆಟ್ವಾತ್ತವೋ ಪರಮಾತ್ಮಃ
ಮೊಬೈಲೋ ಸ್ವರ್ಗಮೇ ದೃಶಂ         4

ಫೇಸ್ ಬುಕ್ಕೇ ಕೃತಂ ಕರ್ಮಃ
ವಾಟ್ಸಪ್ಪಂಮೇ ಪುನರಾಕೃತಃ
ಘಳಿಘಳಿಗೆ ದರ್ಶನಂ ಕುರ್ಯಾತ್
ಮನಸ್ಸಂತೋಷ ಮಂ ಭೂಯಾತ್    5

ಮೊಬೈಲ್ ಯೂಸರ್ ನಿತ್ಯಮೌನಿ
ಪ್ರತಿಕ್ಷಣಂ ಬ್ರೌಸಿಂಗ್ ಕರ್ಮಣಿ
ಅಪ್ಟುಡೇಟ್ ಚೆಕಿಂಗ್ ಚಾಪಲ್ಯಸ್ಯ
ಸಾಯಂ ಪ್ರಾತಃ ಮೊಬೈಲು ತೀಡನಂ  6

ಇಂಟರ್ನೆಟ್ಟಸ್ಯ ಧರ್ಮಸ್ಯ
ಬ್ರೌಸಿಂಗೇ ನಿತ್ಯ ಪೂಜನಂ
ನೆಟ್ಟುಂ ಮಶ್ಯತಿ ಮತಿಭ್ರಂಶಾತ್
ಪೃಷ್ಠಜ್ವಲಿತ ಮಾರ್ಜಾಲಃ                    7

ಸ್ಮಾರ್ಟ್‍ಫೋನಾಯ ವಿಧ್ಮಹೇ
ಫೋರ್-ಜಿ ಸಿಮ್ಮಾಯ ಧೀಮಹೇ
ತನ್ನೋ ನೆಟ್ ವರ್ಕ್ ಪ್ರಚೋದಯಾತ್

ಇತಿಶ್ರೀ ಮದ್ ಮೊಬೈಲು ಗೀತಾಸು ಉಪನಿಷದ್ ಕಲಿಯುಗದ ವಿದ್ಯಾಯಾಂ ಮೊಬೈಲು ಶಾಸ್ತ್ರೇ ಶ್ರೀ ಟೆಕ್ನಾಲಜಿ ಪುರಾಣೇ ಡಿವೈಸ್ ಕಾಂಡೇ ಸೂರ್ಯ ಸಾರಥಿ ರಚಿತಂ ಪ್ರಥಮೋಧ್ಯಾಯಃ (ಕೃಪೆ: ಬಾಗೂರು ರಾಮರಾವ್)

ಮನೆಯೊಂದರಲ್ಲಿದ್ದ ಅಜ್ಜಿಗೆ ಸಂಸ್ಕೃತ ಗೊತ್ತಿಲ್ಲವಾದರೂ ಶ್ಲೋಕಗಳು, ಸ್ತೋತ್ರಗಳನ್ನು ಪಠಿಸುವುದೆಂದರೆ ತುಂಬ ಇಷ್ಟ. ಯಾರೋ ಭಿಕನಾಸಿ ಹುಡುಗರು ಇದು ಪರಮ ಪುಣ್ಯಕರವಾದ ದೇವರ ಸ್ತೋತ್ರ ಅಂತ ಹೇಳಿ ಈ ಆಧುನಿಕ ಸುಪ್ರಭಾತವನ್ನು ಹೇಳಿ ಕೊಟ್ಟಿದ್ದರು. ಶಿಶಿರದ ಚಳಿಗೆ ನಡುಕವಿದ್ದರೂ ಬೆಳಗಿನ ಜಾವ ಮನೆಯ ಹೊರಗಿನ ಜಗಲಿಯಲ್ಲಿ ಕುಳಿತು ಇದನ್ನೇ ಭಕ್ತಿಯಿಂದ ಪಠಿಸುತ್ತ ಕುಳಿತಿತ್ತು ಅಜ್ಜಿ. `ವೆಂಕಟೇಶ್ವರ ಸುಪ್ರಭಾತಕ್ಕಿಂತಲೂ ಚೆನ್ನಾಗಿದೆ ಕಣ್ರೇ. ನೀವೂ ಹಾಡ್ರೇ’ ಎಂದು ಸೊಸೆಯಂದಿರಿಗೂ ಧರ್ಮೋಪದೇಶ ಮಾಡುತ್ತಿತ್ತು. `ಅದು ಹಂಗಲ್ಲ ಅಜ್ಜಿ, ಅದರರ್ಥ ಹಿಂಗೆ’ ಎಂದು ಯಾರೋ ಅರ್ಥ ವಿವರಿಸಿದಾಗ ಕೋಪದಿಂದ ಕೆಂಪೇರಿ ಶಾಪ ಹಾಕುತ್ತ ಇತ್ತು ಅಜ್ಜಿ. ಆಕಾಶವೇ ಬೀಳಲಿ ಮೇಲೆ, ನಾ ನಿನ್ನ ಕೈ ಬಿಡೆನು ಎಂದು ಫೋನು ಗಟ್ಟಿ ಹಿಡಕೊಂಡವರಿಗೆಲ್ಲ ಅರ್ಚನೆ ಮಾಡಿತು.

ಮೂರಿಂಚು ಉದ್ದದ ಪುಟ್ಟ ಮಗುವಿನ ಕೈಯಲ್ಲೂ ಮೂರಡಿ ಉದ್ದದ ಮೊಬೈಲು ಫೋನು ಬಂದುಬಿಟ್ಟಿದೆ. `ಏನೋ ಮಗೂಗೆ ಓದು ಕಲಿಯೋದಕ್ಕೆ ತುಂಬ ಅನುಕೂಲ ಆಗ್ತಿದೆಯಂತೆ. ಪುಸ್ತಕದಲ್ಲಿ ಇಲ್ದೇ ಇರೋದೆಲ್ಲ ಅದ್ರಲ್ಲಿ ಬತ್ತದಂತೆ’ ಎಂದು ಅಮಾಯಕ ತಂದೆ, ತಾಯಿ ಭಾವಿಸ್ತಾರೆ. ಮನೆ ಬಿಟ್ಟ ಮೇಲೆ ಮಕ್ಕಳಿಗೆ ಸ್ವಲ್ಪ ಬಿಡುವು ಸಿಕ್ಕಿದರೂ ಸಾಕು ವೀಳ್ಯದೆಲೆ ಬೆನ್ ಮ್ಯಾಲೆ ಸುಣ್ಣ ಸವರಿದ ಹಾಗೆ ಫೋನ್ ಸ್ಕ್ರೀನ್ ಮೇಲೆ ಬೆರಳು ಸವರೋದಕ್ಕೆ ಸುರುವಾಗ್ತದೆ. ಫೇಸ್ ಬುಕ್ ಮೇಲೆ ಏನಿದೆ, ವಾಟ್ಸ್‍ಆ್ಯಪ್‍ಗೆ ಏನೆಲ್ಲ ಬಂದಿದೆ ಎಂದು ನೋಡುತ್ತ ಯಾವುದೋ ಸ್ವರ್ಗದಲ್ಲಿ ವಿಹರಿಸ್ತಾ ಇರ್ತಾರೆ. ಒಟ್ಟಿಗೆ ಹೋಗುವಾಗ ಜತೆಗಿರುವವರಿಗೆ ಆಕ್ಸಿಡೆಂಟ್ ಆಗಿ ನೆಲಕ್ಕೆ ಬಿದ್ದು, `ಕುಡಿಯಲು ನೀರು ಕೊಡಿ’ ಎಂದು ಕೇಳಿದರೆ ನೀರು ಕೊಡುವ ಮೊದಲು, `ವಸಿ ತಡೀರಿ. ಮೊದ್ಲು ನಿಮ್ಮ ಫೋಸು ತಗೋತೀನಿ’ ಎಂದು ಮೊಬೈಲು ಕ್ಯಾಮರಾದಲ್ಲಿ ಅವರ ಬಹು ಭಂಗಿಯ ಚಿತ್ರಗಳನ್ನು ಸೆರೆ ಹಿಡಿದು ಗೆಳೆಯರ ಗ್ರೂಪಿಗೆ ರವಾನೆ ಮಾಡದೆ ಸ್ವಂತ ಮಗನಾದರೂ ಸರಿ ಅಪ್ಪನಿಗೆ ನೀರು ಕೊಡುವುದಿಲ್ಲ.

ಮೊದಮೊದಲು ಶೌಚಾಲಯಕ್ಕೆ ಬಾಗಿಲು ಇಲ್ಲದವರು ಬೇರೆಯವರಿಗೆ ತಮ್ಮ ಇರುವಿಕೆ ತಿಳಿಯಲಿ ಎಂದು ಅದರ ಒಳಗೆ ಕುಳಿತು ಹಾಡುವ ಅಭ್ಯಾಸ ಇತ್ತು. ಆದರೆ ಈಗ ಬಾಗಿಲು ಭದ್ರವಾಗಿದ್ದರೂ ಅವರು ಕಮೋಡ್ ಮೇಲೆ ಕೂಡ ನಿಶ್ಚಿಂತರಾಗಿ, ನಿರ್ಭಾವುಕರಾಗಿ ಕುಳಿತಿರುವುದಿಲ್ಲ. ಕೈಯಲ್ಲಿ ಅಂಟಿಕೊಂಡ ಸ್ಮಾರ್ಟ್‍ಫೋನ್ ಶೌಚಗೃಹದ ಒಳಗೆ ಹೋಗುವಾಗಲೂ ಜತೆ ಬಿಡುವುದಿಲ್ಲ. ಒಂದಷ್ಟು ಹೊತ್ತು ಅಲ್ಲೂ ಸುಮ್ಮಗೆ ಕೂಡದೆ ಕಾಯಕವೇ ಕೈಲಾಸವೆಂಬ ಹಾಗೆ ಫೋನು ಮಾಡುವ ಕೈಂಕರ್ಯವನ್ನು ನಡೆಸುವ ಮಹಾನುಭಾವರಿದ್ದಾರೆ. ಕೆಲವರು ಅಲ್ಲಿಯೂ ಕಣ್ತಪ್ಪಿನಿಂದ ವಿಡಿಯೋ ಕಾಲ್ ಮಾಡುವ ಮೂಲಕ ದಿವ್ಯ ದರ್ಶನ ಮಾಡಿದ ಪ್ರಸಂಗಗಳೂ ಇವೆ ಎಂಬ ವರದಿಗಳಿವೆ. ಈ ಕಾಲದಲ್ಲಿ ಯುಧಿಷ್ಠಿರ ಏನಾದ್ರೂ ಇರ್ತಿದ್ರೆ ಸ್ವರ್ಗಕ್ಕೆ ಹೋಗುವಾಗ ನನ್ನ ಜೊತೆಗೆ ನಾಯೀನೂ ಬರಲಿ ಅಂತ ಖಂಡಿತ ಹೇಳುತ್ತಿರಲಿಲ್ಲ. `ನನ್ನ ಸ್ಮಾರ್ಟ್ ಫೋನು ಕೂಡ ಜತೆಗೆ ಒಯ್ಯೋದಾದ್ರೆ ಮಾತ್ರ ಸ್ವರ್ಗಕ್ಕೆ ಬತ್ತೀನಿ’ ಅನ್ತಿದ್ದ. ತನ್ನಲ್ಲೇ ಮಾತನಾಡಿಕೊಳ್ಳುವುದನ್ನು, ತನ್ನಷ್ಟಕ್ಕೆ ನಗುವುದನ್ನು ಅದು ಮನುಷ್ಯನಿಗೆ ಕಲಿಸಿದೆ.

ಮನುಷ್ಯನ ಜೊತೆಗೆ ಪಾಪ ಪುಣ್ಯಗಳು ಬರುತ್ತವೆ ಎನ್ನುತ್ತಾರೆ. ಈಗ ನೋಡಿದರೆ ನೆರಳಿನಂತೆ ಮೊಬೈಲು ಫೋನು ಕೂಡ ಬರ್ತದೆ ಎನ್ನಬಹುದು. ರತ್ನ ಈಗ ಹಾಡುವುದಾದರೆ, `ಹೆಂಡ ಬುಡು ಅಂದ್ರೆ ಬುಡ್ತೀನಿ, ಎಂಡ್ತಿ ಬುಡು ಅಂದ್ರೂ ಬುಡ್ತೀನಿ, ಸ್ಮಾರ್ಟ್ ಫೋನು ಬುಡು ಅಂದ್ರೆ ಮಾತ್ರ ನನ್ಮಗನ್ ಮುಖಕ್ಕೆ ನಾಲ್ಕ್ ಇಕ್ತೀನಿ’ ಅನ್ನುತ್ತಿದ್ದನಲ್ಲವೆ!

ಆಧುನಿಕ ಫೋನ್ ಕೈ ಸೇರಿದ ಮೇಲೆ ಮನುಷ್ಯನಿಗೆ ಯುಗವೊಂದು ಕ್ಷಣವಾಗಿ ಪರಿವರ್ತನೆಯಾಗಿದೆ. ಕೆಲವೆಡೆ ನೆಟ್‍ವರ್ಕ್ ಸಾಕಷ್ಟು ಇರುವುದಿಲ್ಲ. ಅಲ್ಲಿರುವವರು ಜೀವನದ ಮಹದ್ಭಾಗ್ಯವೇ ದೊರಕದೆ ಹೋದ ಹಾಗೆ ಪರಿತಪಿಸುತ್ತಾರೆ. ಕೆಲವರ ಮನೆಗಳಲ್ಲಿ ನಿರ್ದಿಷ್ಟ ಜಾಗಗಳಲ್ಲಿ ಮಾತ್ರ ಸಂಕೇತ ಸಿಗುತ್ತದೆ. ಗೆಳೆಯನೊಬ್ಬನ ಮನೆಗೆ ಹೋಗಿದ್ದೆ. ಅವನು ಪದೇ ಪದೇ ಶೌಚಾಲಯಕ್ಕೆ ಹೋಗಿ ಬರುತ್ತ ಇದ್ದ. ಬಹುಶಃ ಹೊಟ್ಟೆ ಕೆಟ್ಟಿರಬಹುದು ಎಂದುಕೊಂಡೆ. ಅವನ ಹೆಂಡತಿಯೊಂದಿಗೆ, `ಒಂದೇ ಸವನೆ ಶೌಚಾಲಯಕ್ಕೆ ಹೋಗ್ತಾ ಇದ್ದಾನಲ್ಲ, ಎಷ್ಟು ದಿನದಿಂದ ಈ ರೋಗ? ನಿನ್ನೆ ರಾತ್ರೆ ಹೊಸ ರುಚಿ ಏನಾದ್ರೂ ಮಾಡಿ ಹಾಕಿದ್ದೀರೋ ಹೇಗೆ?’ ಕೇಳಿದೆ. ಜೋರಾಗಿ ನಕ್ಕುಬಿಟ್ಟಳು.

`ತುಂಬ ದಿನವಾಯ್ತು ಕಣಣ್ಣ, ಆದ್ರೂ ಸರಿಯಾಗಿಲ್ಲ’ ಎಂದಳು ಹೆಂಡತಿ. `ಅಯ್ಯೋ ದೇವ್ರೇ, ಹೀಗಾದ್ರೆ ಹೇಗೆ? ಒಳ್ಳೆ ಡಾಕ್ಟರಲ್ಲಿ ತೋರಿಸಬೇಕಿತ್ತು’ ಎಂದೆ ಗಾಬರಿಯಾಗಿ. ಸೆರಗು ಬಾಯಿಗೆ ಅಡ್ಡ ಹಿಡಿದು ಇನ್ನಷ್ಟು ಕಿಸಿ ಕಿಸಿ ನಗತೊಡಗಿದಳು ಹೆಣ್ಣುಮಗಳು. `ಡಾಕ್ಟರಿಗೆ ತೋರಿಸೋವಷ್ಟು ಸೀರಿಯೆಸ್ ಏನೂ ಆಗಿಲ್ಲ. ನಮ್ಮ ಮನೇಲಿ ನೆಟ್‍ವರ್ಕ್ ಸಿಗೋದು ಶೌಚಾಲಯದ ಒಳಗೆ ಮಾತ್ರ. ಆದ್ರಿಂದ ಫೋನ್ ಬಂದಾಗಲೆಲ್ಲ ಅಲ್ಲಿ ಹೋಗಿ ಮಾತನಾಡ್ತಾರೆ. ನೀವು ಅಂದ್ಕಂಡ ಹಂಗೆ ಲೂಸ್ ಗೀಸ್ ಏನೂ ಆಗಿಲ್ಲ ಬುಡ್ರೀ’ ಎಂದಳು. ಮೊಬೈಲು ಫೋನಿನಲ್ಲೇ ಹಣದ ವ್ಯವಹಾರ ಮಾಡಿ ಎಂದು ಕರೆ ಕೊಡುತ್ತಿರುವ ಆಳುವ ಜನರಿಗೆ ಇನ್ನೂ ಮೊಬೈಲಿಗೆ ಸಂಕೇತ ಸಿಗದೆ ಒದ್ದಾಡುವ ಹಳ್ಳಿ ಜನಗಳ ಬಗ್ಗೆ ಗೊತ್ತೇ ಇಲ್ಲವಲ್ಲ ಅನಿಸಿತು.

ಹಳ್ಳಿಯ ಅಜ್ಜಮ್ಮನ ಎಲಡಿಕೆ ಚೀಲದ ಒಳಗೂ ಸ್ಮಾರ್ಟ್‍ಫೋನ್ ಬಂದಿದೆ. ಬೊಕ್ಕು ಬಾಯಲ್ಲಿ ತಾಂಬೂಲ ಚರ್ವಣವನ್ನು ಮೆಲುಕಾಡಿಸುತ್ತ ಅದರಲ್ಲಿ ಬರುವ ಹಾಸ್ಯ ದೃಶ್ಯಗಳನ್ನು ಕಂಡು ಊರಗಲ ಕಣ್ಣರಳಿಸಿ ತನ್ನಲ್ಲೇ ನಗುತ್ತಾಳೆ ಆಕೆ. ಇನ್ನೊಬ್ಬ ಅಜ್ಜಿ ಕಿವಿಗೆ ಶ್ರವಣ ಯಂತ್ರ ಹಾಕಿಸಿಕೊಳ್ಳಲು ಕರ್ಣತಜ್ಞರ ಬಳಿಗೆ ಹೋದಾಗ ಕಿವಿಗೆ ಇಯರ್ ಫೋನು ಹಾಕಿಕೊಂಡು ಮೊಬೈಲಿನಿಂದ ಸಂಗೀತದ ರಸಾಸ್ವಾದನೆ ಮಾಡುತ್ತ ಕುಳಿತಿದ್ದ ನರ್ಸಮ್ಮನನ್ನು ಕಂಡು ಊರಗಲ ಮುಖವರಳಿಸಿತು, `ಏನಮ್ಮ, ಇಷ್ಟು ಚಿಕ್ಕ ವಯಸ್ಸಿಗೇ ನಿಂಗೆ ಕಿವಿಗೆ ಮಿಶನು ಹಾಕೋ ಹಂಗೆ ಆಗೋಯ್ತಾ? ತ್ಚು ತ್ಚು ನನಗೆ ಅರುವತ್ತು ದಾಟಿದ ಮ್ಯಾಕೆ ಕಿವಿ ಹೊಂಟೋಯ್ತು. ನಿನ್ನ ವಯಸ್ಸಿನಾಗೆ ಚೆನ್ನಾಗಿಯೇ ಇದ್ದೆ’ ಎಂದು ಸಂತಾಪ ಸೂಚಿಸಿದಳು. `ನಂಗೆ ಕಿವಿ ಚೆನ್ನಾಗಿಯೇ ಇದೆ ಅಜ್ಜಿ’ ಎನ್ನುತ್ತ ನರ್ಸಮ್ಮ ಇಯರ್ ಫೋನ್ ಹಾಕಿ ಅಜ್ಜಿಗೂ ಪಾಪ್ ಸಂಗೀತದ ಸವಿ ಉಣಿಸಿಬಿಟ್ಟಳು.

ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ರಾತ್ರೆ ಕಾವಲು ಕಾಯಲು ವಾಚ್‍ಮನ್ ನೇಮಕ ಮಾಡುವ ಪದ್ಧತಿ ಕಡಿಮೆಯಾಗುತ್ತಿದೆಯಂತೆ. ಶಾಲೆ, ಕಾಲೇಜಿಗೆ ಹೋಗುವ ಮಕ್ಕಳಿದ್ದರೆ ಸರಿ ರಾತ್ರೆ ಕಳೆದು ಬೆಳಗಿನ ಜಾವದ ವರೆಗೂ ಮೊಬೈಲು ಚಾಟಿಂಗ್ ಮಾಡುತ್ತಲೇ ಅವರಿರುತ್ತಾರೆ. ಇವರು ಯಾವಾಗ ನಿದ್ರೆ ಹೋಗುತ್ತಾರೆ, ಮನೆಗೆ ಎಷ್ಟೊತ್ತಿಗೆ ಕನ್ನ ಕೊರೆದೇನು ಎಂದು ಕಾದು ಕುಳಿತ ಕಳ್ಳರಿದ್ದರೆ ಅವರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಇನ್ನು ಹಾಸಿಗೆಯಿಂದ ಏಳುವುದೂ ಹಾಗೆಯೇ. ಯಾವ ದೇಶದ ಚಿಂತನೆಗೆ ನಿದ್ರೆಗೆಟ್ಟರೋ ತಿಳಿಯದು. ಸೂರ್ಯ ನೆತ್ತಿಗೇರಿ ವಿಶ್ರಮಿಸಿದ ಮೇಲೆಯೇ ಅವರಿಗೆ ಜಗದ ಅರಿವು ಮೂಡುವುದು.

ಮಕ್ಕಳಿಗೆ ಏಕಾಗ್ರತೆ ಇಲ್ಲ, ಯಾವುದಾದರೂ ಯೋಗಾಸನ ಮಾಡಬಹುದೇ ಎಂದು ಯೋಗ ಶಿಕ್ಷಕರ ಬಳಿಗೆ ಬರುವ ತಂದೆ, ತಾಯಿಯ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆಯಂತೆ. ಮೊಬೈಲು ಚಾಟಿಂಗ್ ಕೈಂಕರ್ಯದಲ್ಲಿ ಜಗತ್ತನ್ನೇ ಮರೆತು ತಲ್ಲೀನರಾಗುವ ಅವರಿಗೆ ಅಂತಹ ಯೋಗಾಸನದ ಅವಶ್ಯಕತೆ ಇಲ್ಲವೆಂಬುದು ಅವರ ಗಮನಕ್ಕೆ ಬಂದಿದೆ. ಅದಕ್ಕಿಂತ ದೊಡ್ಡ ಏಕಾಗ್ರತೆಯ ಸಾಧನವಾದರೂ ಬೇರೆ ಏನಿದೆ? ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ಎಂದು ಬುದ್ಧನ ಬಗೆಗೆ ಬರೆದ ಕವಿ ಈಗಲೂ ಇರುತ್ತಿದ್ದರೆ ಜಗವೇ ಶಾಶ್ವತ ಮಲಗಿದರೂ ಎದ್ದೇ ಇರುವ ಚಾಟಿಂಗ್ ಪ್ರಿಯರ ತಲ್ಲೀನತೆಯ ಬಗೆಗೆ ಅಚ್ಚರಿ ಪಡುತ್ತಿದ್ದರು.

ಒಂದು ಹುಡುಗಿಗೂ ಹುಡುಗನಿಗೂ ಪ್ರಣಯಾಂಕುರವಾದರೆ ಎಲ್ಲರಿಗಿಂತ ಹೆಚ್ಚು ಸಂತಸ ಪಡುವವರು ಖಂಡಿತ ಅವರೂ ಅಲ್ಲ, ಅವರ ಹೆತ್ತವರೂ ಅಲ್ಲ. ಮೊಬೈಲ್ ಕಂಪೆನಿಗಳು, ಇಂಟರ್‍ನೆಟ್ ದಾತಾರರು! ಎಷ್ಟೊಂದು ಡಾಟಾಗಳು ಖಾಲಿಯಾಗಬಹುದೋ, ಮೊಬೈಲು ಟವರುಗಳೇ ಕುಸಿದು ಹೋಗಬಹುದೋ ಇವರ ನಡುವೆ ಬಿಡುವಿದ್ದಾಗಲೆಲ್ಲ ನಡೆಯುವ ಸಂವಹನದಿಂದಾಗಿ ಎಂಬುದು ನಮಗೆ ಲೆಕ್ಕಕ್ಕೆ ಸಿಗದಿದ್ದರೂ ನೆಟ್ ಕಂಪೆನಿಗಳು ಸುಗ್ಗಿಯ ಹುಗ್ಗಿಯನ್ನುಂಬುವುದರಲ್ಲಿ ಶಂಕೆಯೇ ಬೇಡ.

ಒಂದು ಕೂಡಿದರೆ ಒಂದು ಮೊತ್ತ ಎಷ್ಟು ಎಂದು ಕೇಳಿದರೆ ಯಾರೂ ಮೆದುಳಿಗೆ ಮೇವು ಹಾಕುವ ಕೆಲಸ ಮಾಡುವುದಿಲ್ಲ. ಮೊಬೈಲು ಬಟನ್ ಒತ್ತಿ ಎರಡು ಎಂಬ ಫಲಿತಾಂಶವನ್ನು ಮುಂದಿಡುತ್ತಾರೆ. ಒಂದು ದಿನ ಮೊಬೈಲು ಡಾಟಾ ಮುಗಿದುಹೋಗಿ ಸಂವಹನ ಕಷ್ಟವಾದರೆ ಅಂಡು ಸುಟ್ಟ ಬೆಕ್ಕಿನ ಹಾಗೆ ಜೀವನದಲ್ಲಿ ಮಹತ್ತರವಾದುದು ಏನನ್ನೋ ಕಳೆದುಕೊಂಡ ಹಾಗೆ ಪರಿತಪಿಸುವ ರೀತಿ, ಡಾಟಾ ಹಾಕಿಸಿದ ಬಳಿಕ ಮೊಗದಲ್ಲಿ ಅರಳುವ ಸುಂದರ ನಗು ಇದನ್ನೆಲ್ಲ ನೋಡಿದರೆ ಈ ಮಾಯಾಂಗನೆ ಎಂಥ ಮೋಡಿ ಮಾಡಿಬಿಟ್ಟಳು! ಎಂಬ ಅಚ್ಚರಿ ಮೂಡುತ್ತದೆ.

*ಮೂಲತಃ ಪುತ್ತೂರಿನ ಲೇಖಕರು ವೃತ್ತಿಯಲ್ಲಿ ಕೃಷಿಕರು; ಬರವಣಿಗೆ ಗಂಭೀರ ಹವ್ಯಾಸ. ದಶಕಗಳಿಂದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 71 ಪುಸ್ತಕಗಳು, ಸಾವಿರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರಿನಲ್ಲಿ ವಾಸ.

ಹೈಲೈಟ್ಸ್
ಮೂರಿಂಚು ಉದ್ದದ ಪುಟ್ಟ ಮಗುವಿನ ಕೈಯಲ್ಲೂ ಮೂರಡಿ ಉದ್ದದ ಮೊಬೈಲು ಫೋನು ಬಂದುಬಿಟ್ಟಿದೆ. `ಏನೋ ಮಗೂಗೆ ಓದು ಕಲಿಯೋದಕ್ಕೆ ತುಂಬ ಅನುಕೂಲ ಆಗ್ತಿದೆಯಂತೆ. ಪುಸ್ತಕದಲ್ಲಿ ಇಲ್ದೇ ಇರೋದೆಲ್ಲ ಅದ್ರಲ್ಲಿ ಬತ್ತದಂತೆ’ ಎಂದು ಅಮಾಯಕ ತಂದೆ, ತಾಯಿ ಭಾವಿಸ್ತಾರೆ.
*
ಕೈಯಲ್ಲಿ ಅಂಟಿಕೊಂಡ ಸ್ಮಾರ್ಟ್‍ಫೋನ್ ಶೌಚಗೃಹದ ಒಳಗೆ ಹೋಗುವಾಗಲೂ ಜತೆ ಬಿಡುವುದಿಲ್ಲ. ಒಂದಷ್ಟು ಹೊತ್ತು ಅಲ್ಲೂ ಸುಮ್ಮಗೆ ಕೂಡದೆ ಕಾಯಕವೇ ಕೈಲಾಸವೆಂಬ ಹಾಗೆ ಫೋನು ಮಾಡುವ ಕೈಂಕರ್ಯವನ್ನು ನಡೆಸುವ ಮಹಾನುಭಾವರಿದ್ದಾರೆ. ಕೆಲವರು ಅಲ್ಲಿಯೂ ಕಣ್ತಪ್ಪಿನಿಂದ ವಿಡಿಯೋ ಕಾಲ್ ಮಾಡುವ ಮೂಲಕ ದಿವ್ಯ ದರ್ಶನ ಮಾಡಿದ ಪ್ರಸಂಗಗಳೂ ಇವೆ.

*
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ಎಂದು ಬುದ್ಧನ ಬಗೆಗೆ ಬರೆದ ಕವಿ ಈಗಲೂ ಇರುತ್ತಿದ್ದರೆ ಜಗವೇ ಶಾಶ್ವತ ಮಲಗಿದರೂ ಎದ್ದೇ ಇರುವ ಚಾಟಿಂಗ್ ಪ್ರಿಯರ ತಲ್ಲೀನತೆಯ ಬಗೆಗೆ ಅಚ್ಚರಿ ಪಡುತ್ತಿದ್ದರು.

Leave a Reply

Your email address will not be published.