ಮೈಸೂರು `ಬಹುರೂಪಿ’ಯ ನಿಜರೂಪ !

ಮೈಸೂರಿನ ‘ಬಹುರೂಪಿ’ ನಾಟಕೋತ್ಸವ ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಂಡು ನೀರಸವಾಗುತ್ತಿದೆ. ‘ಬಟ್ಟೆ, ತಿಂಡಿ, ಕರಕುಶಲ ವಸ್ತುಗಳ ಮೇಳ, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಜನರನ್ನು ಆಕರ್ಷಿಸುವ `ಸಹರಾ’ ವಸ್ತುಪ್ರದರ್ಶನದಂತೆ, ಅವರೆಕಾಯಿ ಮೇಳದಂತೆ ಆಗುತ್ತಿದೆ’ ಎನ್ನುವುದು ಬಹುತೇಕ ಪ್ರಜ್ಞಾವಂತ ರಂಗಕರ್ಮಿಗಳ ಅಳಲು. ರಂಗಾಯಣ 2020ರ ವೇಳೆಗೆ ನಡೆಸುವ 20ನೇ `ಬಹುರೂಪಿ’ಯನ್ನು ಅರ್ಥಪೂರ್ಣವಾಗಿ ಆಚರಿಸಲಿ, ಗುಣಮಟ್ಟದ ನಾಟಕಗಳನ್ನು ತರುವ ಮೂಲಕ ಮತ್ತೆ ರಂಗಾಯಣಕ್ಕೆ ಮೆರುಗು ನೀಡಲಿ ಎನ್ನುವ ಆಶಯ ಹೊತ್ತಿದೆ ಈ ಲೇಖನ.

ಮೈಸೂರಿನ ರಂಗಾಯಣ `ಲಿಂಗ ಸಮಾನತೆ’ ಪರಿಕಲ್ಪನೆ ಇಟ್ಟುಕೊಂಡು ಆಯೋಜಿಸಿದ್ದ 2019ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆಬಿದ್ದಿದೆ. 2019 ಜನವರಿ 12 ರಿಂದ 18ರ ವರೆಗೆ ನಡೆದ ನಾಟಕೋತ್ಸವದಲ್ಲಿ `ಲಿಂಗ ಸಮಾನತೆ’ ಎನ್ನುವುದು ಎರಡು ದಿನ ನಡೆದ ವಿಚಾರ ಸಂಕಿರಣಕ್ಕೆ ಮಾತ್ರ ಸೀಮಿತವಾಗಿತ್ತೇ ಹೊರತು ಇದರ ಬಗ್ಗೆ ಗಂಭೀರವಾಗಿ ಜನರನ್ನು ಚಿಂತನೆಗೆ ಹಚ್ಚುವಂತಹ ಯಾವುದೇ ನಾಟಕಗಳಾಗಲಿ, ಕೊನೆಯ ಪಕ್ಷ ಬೀದಿ ನಾಟಕಗಳಾಗಲಿ ಇರಲಿಲ್ಲ; ಕೇವಲ ಕಾಟಾಚಾರಕ್ಕೆ ತರಾತುರಿಯಲ್ಲಿ `ಸಂತೆಗೆ ಮೂರು ಮೊಳ’ ಸೀರೆ ನೇಯ್ದಂತೆ ಇತ್ತು. ನಾಟಕೋತ್ಸವದ ಉದ್ದೇಶವನ್ನೇ ಕಡೆಗಣಿಸಿ ಉತ್ಸವ ನಡೆದು ರಂಗಾಸಕ್ತರಲ್ಲಿ ನಿರಾಸೆ ಮೂಡಿಸಿತು.

ದೇಶದಲ್ಲಿ ಲಿಂಗ ಅಸಮಾನತೆಯಂತಹ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಅದನ್ನು ಮುಟ್ಟದೆ ತಟ್ಟದೆ ‘ನಾನು, ನನಗೆ ಬೇಕಾದವರು, ನನಗೆ ನೆರವಾಗುವವರು’ ಎನ್ನುವ ಸೂತ್ರಕ್ಕೆ ಗಂಟುಬಿದ್ದ ರಂಗಾಯಣ ಸಿಬ್ಬಂದಿಯ ವರ್ತನೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

ಐದಾರು ನಾಟಕಗಳನ್ನು ಹೊರತುಪಡಿಸಿ ಉತ್ಸವದಲ್ಲಿ ಪ್ರದರ್ಶನಗೊಂಡ ಬಹುತೇಕ ನಾಟಕಗಳು ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಗುಣಮಟ್ಟದ ನಾಟಕಗಳಾಗಿರಲಿಲ್ಲ. ಕೆಲವೊಂದು ನಾಟಕಗಳಿಗೆ ಬೀದಿ ನಾಟಕದ ಛಾಯೆ ಇದ್ದರೆ, ಉಳಿದವು ಹೊಸಬರು ಮೊದಲಬಾರಿಗೆ ರಂಗದ ಮೇಲೆ ಬಂದು ನಾಟಕ ಪ್ರದರ್ಶನ ಮಾಡಿದಂತೆ ಇತ್ತು. ಪರಿಣಾಮ, ‘80 ರೂಪಾಯಿ ಕೊಟ್ಟು ನಾಟಕ ನೋಡಲು ಬಂದ ಹೆಚ್ಚು ಪ್ರೇಕ್ಷಕರು ನಾಟಕ ಮುಗಿದ ನಂತರ ನಿರಾಸೆಯಿಂದ ಹೊರನಡೆದೆರು’ ಎಂದು ರಂಗ ಸಮಾಜದ ಸದಸ್ಯರೊಬ್ಬರು ನೋವಿನಿಂದ ಹೇಳಿದರು.

ರಾಷ್ಟ್ರೀಯ ನಾಟಕೋತ್ಸವದ ಮುಖ್ಯ ಉದ್ದೇಶ ಏನು? ಕನ್ನಡದ ಮಹತ್ವದ ನಾಟಕಗಳ ಜೊತೆ ಅನ್ಯ ಭಾಷೆಯ ಮಹತ್ವದ ನಾಟಕಗಳನ್ನೂ ತೋರಿಸುವ ಮೂಲಕ ಹೊರಗೆ ಏನು ನಡೆಯುತ್ತಿದೆ ಎನ್ನುವುದನ್ನು ಇಲ್ಲಿನ ಪ್ರೇಕ್ಷಕರಿಗೂ ಮನವರಿಕೆ ಮಾಡಿಕೊಡುವುದು ಮುಖ್ಯ. ಹವ್ಯಾಸಿ ನಾಟಕ ತಂಡಗಳು ತಮಗಿರುವ ಹಣಕಾಸಿನ ಮಿತಿಯಲ್ಲಿ ಅನ್ಯ ಭಾಷೆಯ ಮಹತ್ವದ ನಾಟಕಗಳನ್ನು ಕರೆಸಲು ಸಾಧ್ಯವಾಗದ ಕಾರಣ ರಂಗಾಯಣ ನಡೆಸುವ ರಾಷ್ಟ್ರೀಯ ನಾಟಕೋತ್ಸವದ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚು ನಿರೀಕ್ಷೆ ಇರುವುದು ಸಹಜ.

ಆದರೆ ಈ ಬಾರಿ ರಂಗಾಯಣ ಮಾಡಿದ್ದಾದರೂ ಏನು? ತಮ್ಮದೇ ನಿರ್ಮಾಣದ ಮೂರು ನಾಟಕಗಳನ್ನು ಉತ್ಸವದಲ್ಲಿ ತುರುಕಲಾಯ್ತು. ಕಳೆದ ನಾಲ್ಕು ತಿಂಗಳಿನಿಂದಲೂ ವಾರಂತ್ಯ ನಾಟಕವಾಗಿ ಪ್ರದರ್ಶನವಾಗುತ್ತಿದ್ದ ರಂಗಾಯಣ ಸಂಚಾರಿ ಘಟಕದ `ರೆಕ್ಸ್ ಅವರ್ಸ್-ಡೈನೊ ಏಕಾಂಗಿ ಪಯಣ’ ಹಾಗೂ ಈಗಾಗಲೇ ವಾರಾಂತ್ಯ ನಾಟಕವಾಗಿಯೂ, ಜೊತೆಗೆ ರಾಜ್ಯದ್ಯಾಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನನಾಗುತ್ತಿರುವ ಕುವೆಂಪು ಅವರ `ಶ್ರೀ ರಾಮಾಯಣ ದರ್ಶನಂ’ವನ್ನು ಉತ್ಸವದಲ್ಲಿ ದಿನಬಿಟ್ಟು ದಿನ ಹಾಕಿದರು. ಜೊತೆಗೆ ಬಹುರೂಪಿಗಾಗಿಯೇ ರೂಪಿಸಿದ `ಬಹುರಂಗ’ ನಾಟಕವನ್ನು ಪ್ರದರ್ಶಿಸುವ ಮೂಲಕ ರಂಗಾಯಣ `ನಾನು’ ಮಾಡಿದ್ದೇ ಸರಿ ಎಂಬ ಧೋರಣೆಗೆ ಅಂಟಿಕೊಂಡಿತು. ಇದಲ್ಲದೆ ರಂಗ ಸಮಾಜದ ಸದಸ್ಯರು, ಮಾಜಿ ಸದಸ್ಯರು ನಿರ್ದೇಶನ ಮಾಡಿರುವ ನಾಟಕಗಳಿಗೆ ಅವಕಾಶ ಕಲ್ಪಿಸುವ ಮೂಲಕ `ನನಗೆ ಬೇಕಾದವರು’ ಎಂಬ ಧೋರಣೆ ಪ್ರದರ್ಶಿಸಿತು. ಎರಡು ಅಥವಾ ನಾಲ್ಕು ಬಾರಿ ರಂಗದ ಮೇಲೆ ಬಂದಿರುವ ಹೊಸಬರ ನಾಟಕಗಳಿಗೂ ಅವಕಾಶ ಕೊಡುವ ಮೂಲಕ `ತನಗೆ ನೆರವಾಗುವವರು’ ಎಂಬ ಸೂತ್ರಕ್ಕೆ ಬದ್ಧರಾಗಿ ರಂಗಾಸಕ್ತರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗ ಇದಕ್ಕೆಲ್ಲಾ ಉತ್ತರಿಸುವ ಹೊಣೆ ರಂಗಾಯಣದ ಮೇಲಿದೆ.

ನಾಟಕೋತ್ಸವ ನಡೆಸಲು ಸರಕಾರ 70 ಲಕ್ಷ ರೂಪಾಯಿ ಅನುದಾನ ನೀಡುತ್ತದೆ. ಅಲ್ಲದೆ ಪ್ರಾಯೋಜಕರಿಂದಲೂ ಸುಮಾರು 20 ಲಕ್ಷ ರೂಪಾಯಿಯಷ್ಟು ಹಣ ಸಂಗ್ರಹವಾಗುತ್ತದೆ. ಹಾಗಿದ್ದರೂ ಈ ಬಾರಿ ನಾಟಕಗಳ ಟಿಕೆಟ್ ದರವನ್ನು 80 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ನಾಟಕಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ರಂಗಾಯಣದ ಹಿರಿಯ ಕಲಾವಿದರನ್ನು ಪ್ರಶ್ನಿಸಿದರೆ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಹಾಗಾದರೆ ಇಂತಹ ಅವ್ಯವಸ್ಥೆಯ ಹೊಣೆಗಾರಿಕೆಯನ್ನು ಯಾರು ಹೊರುತ್ತಾರೆ?

‘ಸಾಮಾನ್ಯವಾಗಿ ರಾಷ್ಟ್ರೀಯ ನಾಟಕೋತ್ಸವನ್ನು ನಡೆಸುವಾಗ ಫೆಸ್ಟಿವಲ್ ಡೈರೆಕ್ಟರ್, ಕ್ಯೂರಿಯೇಟರ್ ಅಂತ ನೇಮಕ ಮಾಡಲಾಗುತ್ತದೆ. ಅವರು ಎನ್‍ಎಸ್‍ಡಿ ಸೇರಿದಂತೆ ದೇಶದ ಬೇರೆ ಬೇರೆ ನಾಟಕಶಾಲೆಗಳ ಜೊತೆ ಸಂಪರ್ಕವಿಟ್ಟುಕೊಂಡು ಸಾಧ್ಯವಾದರೆ ನಾಟಕಗಳನ್ನು ನೋಡಿ, ಇಲ್ಲದಿದ್ದರೆ ಒಳ್ಳೆಯ ನಾಟಕಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ರಿವ್ಯೂ, ನಾಟಕದ ಡಿವಿಡಿ ತರಿಸಿಕೊಂಡು ನೋಡಿ ನಾಟಕಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ರಂಗಾಯಣದಲ್ಲಿ ಉತ್ಸವಕ್ಕೆ ಮೊದಲು ಕಾಟಾಚಾರಕ್ಕೆ ಹವ್ಯಾಸಿ ರಂಗತಂಡಗಳ ಮುಖ್ಯಸ್ಥರನ್ನು ಕರೆದು ಅಭಿಪ್ರಾಯ ಕೇಳಲಾಗುತ್ತದೆ. ದುರಂತ ಎಂದರೆ ನಾಟಕೋತ್ಸವದಲ್ಲಿ ಏನು ಮಾಡಬೇಕೆಂದು ಮೊದಲೇ ನಿರ್ಧರಿಸಲಾಗಿರುತ್ತದೆ. ಇಂತಹ ಧೋರಣೆ ಸರಿ ಅಲ್ಲ’ ಎನ್ನುತ್ತಾರೆ ಪರಿವರ್ತನ ತಂಡದ ಮುಖ್ಯಸ್ಥ ರಂಗಕರ್ಮಿ ಎಸ್.ಆರ್.ರಮೇಶ್.

ಈ ಬಾರಿ ನಾಟಕೋತ್ಸವಕ್ಕೆ ನಾಟಕಗಳನ್ನು ಆಯ್ಕೆಮಾಡಿಕೊಡಲು ರಚಿಸಿದ್ದ ಸಮಿತಿಯಲಿದ್ದ ಚನ್ನಕೇಶವ ಮತ್ತು ಗಣೇಶ್ ಅವರು ತಾವು ಆಯ್ಕೆಮಾಡಿಕೊಟ್ಟಿದ್ದ ನಾಟಕಗಳೇ ಬೇರೆ, ಇಲ್ಲಿ ಪ್ರದರ್ಶನಕ್ಕೆ ಬಂದಿರುವ ತಂಡಗಳೇ ಬೇರೆ ಎಂದು ಬೇಸರ ಮಾಡಿಕೊಂಡಿದ್ದರು ಎಂದು ರಂಗಸಮಾಜದ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

1989 ಜನವರಿ 14ರ ಸಂಕ್ರಾಂತಿಯ ದಿನ ಬಿ.ವಿ.ಕಾರಂತರ ನೇತೃತ್ವದಲ್ಲಿ ಆರಂಭವಾದ ರಂಗಾಯಣಕ್ಕೆ ಈಗ ಮೂವತ್ತರ ಹರೆಯ. ರಂಗಾಯಣದ ನಿದೇರ್ಶಕರಾಗಿದ್ದ ರಂಗಕರ್ಮಿ ಪ್ರಸನ್ನ ಆರಂಭಿಸಿದ `ಅಕ್ಕ’ ಎಂಬ ಬಹುರೂಪಿಗೆ ಹತ್ತೊಂಬತ್ತರ ಯೌವನ. ಯಾಕೋ ಏನೋ ಬಹುರೂಪಿ ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಾ ಪೇಲವವಾಗುತ್ತಿದೆ.

‘ಬಟ್ಟೆ, ತಿಂಡಿ, ಕರಕುಶಲ ವಸ್ತುಗಳ ಮೇಳ, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಜನರನ್ನು ಆಕರ್ಷಿಸುವ `ಸಹರಾ’ ವಸ್ತು ಪ್ರದರ್ಶನದಂತೆ, ಅವರೆಕಾಯಿ ಮೇಳದಂತೆ ಆಗುತ್ತಿದೆ’ ಎನ್ನುವುದು ಬಹುತೇಕ ಪ್ರಜ್ಞಾವಂತ ರಂಗಕರ್ಮಿಗಳ ಅಳಲು.

‘ನಾಟಕ ಸಮಾಜದಲ್ಲಿ ನಡೆಯುತ್ತಿರುವ ತಲ್ಲಣಗಳಿಗೆ ಕನ್ನಡಿಯಾಗಬೇಕು. ಸಮಾಜದಲ್ಲಿರುವ ಹುಳುಕನ್ನು ತೋರಿಸಬೇಕು. ಸಮಾಜದಲ್ಲಿ ನಡೆಯುತ್ತಿರುವ ಕೊಳಕು ರಾಜಕೀಯವನ್ನೇ ರಂಗಾಯಣವೂ ಮಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ’ ಎಂದು ಹಿರಿಯರೊಬ್ಬರು ಹೇಳಿದ್ದು ಒಟ್ಟಾರೆ ಈ ಬಾರಿಯ ಉತ್ಸವಕ್ಕೆ ಬರೆದ ಭಾಷ್ಯದಂತಿತ್ತು.

ಲಿಂಗ ಸಮಾನತೆಯಂತಹ ಪರಿಕಲ್ಪನೆಯನ್ನು ಇಟ್ಟುಕೊಂಡು ರಾಷ್ಟ್ರೀಯ ನಾಟಕೋತ್ಸವ ಮಾಡುವಾಗು ಕನಿಷ್ಠ ಮೂರು ತಿಂಗಳಿಂದಲಾದರೂ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿತ್ತು. ಇಡೀ ನಾಟಕೋತ್ಸವ ನೋಡಿದರೆ ತರಾತುರಿಯಲ್ಲಿ ಮಾಡಿದಂತೆ ಕಾಣುತ್ತದೆ. ಸರಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಪಡೆಯುವಾಗ ಎಚ್ಚರದಿಂದ ಪ್ರತಿಹೆಜ್ಜೆ ಇಡಬೇಕು. ಅದು ಆಗಿಲ್ಲ. ಇಂತಹ ರಾಷ್ಟ್ರೀಯ ಉತ್ಸವಗಳಲ್ಲಾದರೂ ಸಾಮಾನ್ಯ ಪ್ರೇಕ್ಷಕನಿಗೆ ನಾಟಕದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಟಿಕೆಟ್ ದರವನ್ನು ಕಡಿಮೆ ಮಾಡಬೇಕಿತ್ತು. ಮಹತ್ವದ ನಾಟಕಗಳು ಪ್ರದರ್ಶನಗೊಳ್ಳುವ ಸಮಯದಲ್ಲಿ ಮಾರನೆಯ ದಿನ ಬೆಳಗ್ಗೆಯಾದರೂ ನಾಟಕದ ನಿರ್ದೇಶಕರ ಜೊತೆ ಸಂವಾದ, ಮಾತುಕತೆ ಏರ್ಪಡಿಸಬೇಕಿತ್ತು. ನಾಟಕೋತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಸದಾ ಸಿದ್ಧವಾಗಿರುವ ಮೈಸೂರಿನ ಹವ್ಯಾಸಿ ರಂಗತಂಡಗಳ ಪ್ರಮುಖರನ್ನು ಜೊತೆಯಲ್ಲಿ ಸೇರಿಕೊಳ್ಳಬೇಕಿತ್ತು. ಸರಕಾರದ ಅನುದಾನ, ಪ್ರಯೋಜಕತ್ವದಿಂದ ಬಂದ ಹಣ ಹಾಗೂ ರಂಗತಂಡಗಳಿಗೆ ನೀಡುವ ಸಂಭಾವನೆ ವಿಷಯದಲ್ಲಿ ರಂಗಾಯಣ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎನ್ನುವುದು ಈ ಬಾರಿಯ ಉತ್ಸವದಲ್ಲಿ ಪಾಲ್ಗೊಂಡಿದ್ದ ಬಹುತೇಕ ರಂಗಕರ್ಮಿಗಳ ಅಭಿಪ್ರಾಯ. ರಂಗಾಯಣ 2020ರಲ್ಲಿ ನಡೆಸುವ 20ನೇ ಬಹುರೂಪಿಯನ್ನು ಅರ್ಥಪೂರ್ಣವಾಗಿ ಆಚರಿಸಲಿ. ಗುಣಮಟ್ಟದ ನಾಟಕಗಳನ್ನು ತರುವ ಮೂಲಕ ಮತ್ತೆ ರಂಗಾಯಣಕ್ಕೆ ಮೆರುಗು ನೀಡಲಿ ಎನ್ನುವ ಆಶಯ ರಂಗಾಸಕ್ತರದು.

Leave a Reply

Your email address will not be published.