ಮಹಿಳಾ ಸಂವೇದನೆಗೆ ಬೂಕರ್ ಪ್ರಶಸ್ತಿ

ಅನಾ ಬನ್ರ್ಸ್ ತಾನು ಬರಹಗಾರ್ತಿಯಾಗುವ ಕನಸನ್ನೇನು ಕಂಡವರಲ್ಲ. ಆದರೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆ ಓದು ಬರವಣಿಗೆಗೆ ನೆರವಾಯಿತು. ಈಕೆ ಪ್ರತಿಷ್ಠಿತ `ಮ್ಯಾನ್ ಬೂಕರ್’ ಪ್ರಶಸ್ತಿ ಪಡೆದ ಉತ್ತರ ಐರ್ಲೆಂಡ್‍ನ ಮೊದಲ ಸಾಹಿತಿ.

ಕಣ್ಣೆದುರು ನಡೆಯುತ್ತಿರುವ ಹಿಂಸಾಚಾರ, ಲೈಂಗಿಕ ಶೋಷಣೆ, ಸೈನಿಕರ ಅಟ್ಟಹಾಸದ ವಾತಾವರಣ ಸಹಿಸಿಕೊಳ್ಳಲಾಗುತ್ತಿಲ್ಲ. ಪ್ರತಿರೋಧ ವ್ಯಕ್ತಪಡಿಸುವಷ್ಟು ದೊಡ್ಡ ಶಕ್ತಿಯೂ ಅವರ ಬಳಿ ಇಲ್ಲ. ಅದರಿಂದಾಗುವ ದುಷ್ಟಪರಿಣಾಮಗಳನ್ನು ಸಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ತಮ್ಮ ಮನದೊಳಗೆ ಕುದಿಯುತ್ತಿದ್ದ ಅಪಾರ ವೇದನೆಗಳನ್ನು ಹೊರಹಾಕಲು ಅವರು ಇಚ್ಛಿಸಿದ್ದು ಅಕ್ಷರಗಳ ಮೂಲಕ. ತಮ್ಮ ಸುತ್ತಲಿನ ಘಟನೆಗಳು ಎಂದು ನೇರವಾಗಿ ಎಲ್ಲಿಯೂ ಹೇಳದೆ, ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ ಅವರ ಬರಹದಲ್ಲಿ ಗಟ್ಟಿತನವಿದೆ. ಈ ರೀತಿ ವಿಭಿನ್ನ ಕಥನ ಮೂಲಕ ರಚಿತವಾದ `ಮಿಲ್ಕ್‍ಮ್ಯಾನ್’ ಕಾದಂಬರಿಗಾಗಿ ಐರ್ಲೆಂಡ್‍ನ ಲೇಖಕಿ ಅನಾ ಬನ್ರ್ಸ್ ಅವರಿಗೆ 2018ನೇ ಸಾಲಿನ ಪ್ರತಿಷ್ಠಿತ `ಮ್ಯಾನ್ ಬೂಕರ್’ ಪ್ರಶಸ್ತಿ ಸಂದಿದೆ.

ಬೂಕರ್ ಪ್ರಶಸ್ತಿಯ 50ನೇ ವರ್ಷಾಚರಣೆ ಸಂದರ್ಭದಲ್ಲಿ, ಅನಾ ಈ ಪುರಸ್ಕಾರ ಪಡೆದ ಹದಿನೇಳನೇ ಮಹಿಳೆಯಾಗಿದ್ದಾಳೆ. ಮ್ಯಾನ್-ಬೂಕರ್ ಪ್ರಶಸ್ತಿ ಕಾಮನ್ವೆಲ್ತ್ ರಾಷ್ಟ್ರಗಳ ಅಥವಾ ಐಲ್ರ್ಯಾಂಡ್/ಜಿಂಬಾಬ್ವೆ ದೇಶದ ನಾಗರಿಕರು ಆಂಗ್ಲ ಭಾಷೆಯಲ್ಲಿ ಬರೆದಿರುವ ದೊಡ್ಡ ಗಾತ್ರದ ಕಾದಂಬರಿಗೆ ಕೊಡಮಾಡುವ 50,000 ಪೌಂಡ್‍ನಷ್ಟು ಬೆಲೆಯುಳ್ಳ ಪ್ರಶಸ್ತಿ; ಲಂಡನ್ನಿನ ಗ್ವಿಲ್ಡ್‍ಹಾಲ್ ಪ್ರದೇಶದ ಮ್ಯಾನ್ ಗ್ರೂಪ್ ವತಿಯಿಂದ 1969ರಿಂದ ಪ್ರತಿವರ್ಷ ನೀಡಲಾಗುತ್ತಿದೆ.

2018ರ ಬೂಕರ್ ಕಣದಲ್ಲಿ ಘಟಾನುಘಟಿಗಳಿದ್ದರು: ಈಶಾನ್ಯ ಪೆಸಿಫಿಕ್ ಕಾಡುಗಳಲ್ಲಿ ನಡೆಯುವ ಕಥೆಯನ್ನೊಳಗೊಂಡ ರಿಚರ್ಡ್ ಪವರ್ಸ್‍ರ `ದಿ ಓವರ್ ಸ್ಟೋರಿ’, ಜೀವಾವಧಿ ಶಿಕ್ಷೆಗೆ ಗುರಿಯಾದ ನರ್ತಕಿಯ ಬದುಕಿನ ಕಥೆಯಾದ ರ್ಯಾಚೆಲ್ ಕುಶ್‍ನರ್ ಅವರ `ದಿ ಮಾರ್ಸ್ ರೂಂ’, ತಮ್ಮದೇ ಭಾಷೆಯಲ್ಲಿ ತಾಯಿ ಮಗುವಿನ ಕಥನ ಕಟ್ಟಿದ್ದ ಯುವ ಬರಹಗಾರ್ತಿ ಡೈಸಿ ಜಾನ್ಸರ್‍ರ `ಎವೆರೆಥಿಂಗ್ ಅಂಡರ್’, ಗುಲಾಮನಾಗಿ ದುಡಿಯವ ವ್ಯಕ್ತಿಯ ಬದುಕಿನ ಸಂಘರ್ಷದ ಚಿತ್ರಣವಾದ ಎಸಿ ಎಡ್ಯುಗನ್‍ರ `ವಾಷಿಂಗ್ ಬ್ಯ್ಲಾಕ್’ ಹಾಗೂ ರಾಬಿನ್ ರಾಬಟ್ರ್ಸನ್‍ರ ಕಾವ್ಯನಾಟಕ `ದಿ ಲಾಂಗ್ ಟೇಕ್’… ಇಂತಹ ಕೃತಿಗಳನ್ನು ಹಿಂದಿಕ್ಕಿ `ಮಿಲ್ಕ್‍ಮ್ಯಾನ್’ ಬೂಕರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಅನಾ ಬರವಣಿಗೆ ಹಾದಿ

ಅನಾ ಅವರು 1962ರಲ್ಲಿ ಐರ್ಲೆಂಡ್‍ನ ಬೆಲ್‍ಫಾಸ್ಟ್‍ನಲ್ಲಿ ಜನಿಸಿದರು. 1987ರಲ್ಲಿ ಸೆಂಟ್ ಜಿಮ್ಮಾಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಗಿಸಿದರು. ಬೆಲ್‍ಫಾಸ್ಟ್‍ನಲ್ಲಿ ಇರುವಾಗಲೇ ಬದುಕಿನ ಎಲ್ಲಾ ಮಜಲುಗಳ ಪರಿಚಯವಾಯಿತು. ಸದಾ ಮೌನಿಯಾಗಿರುವ ಮತ್ತು ಹೆಚ್ಚು ಮಾತನ್ನು ಇಷ್ಟ ಪಡದ ಇವರ ವ್ಯಕ್ತಿತ್ವ ಸುತ್ತಲಿನ ಘಟನೆಗಳಿಂದ ತಲ್ಲಣಗೊಂಡಿತ್ತು. ಅಲ್ಲಿ ನಡೆಯುತ್ತಿರುವ ಪ್ರತಿಯೊಂದ ಘಟನೆಯನ್ನೂ ಮನದಲ್ಲಿ ಅಚ್ಛಳಿಯದೇ ದಾಖಲಾಗಿದ್ದವು. ಕೆಲ ವರ್ಷಗಳ ನಂತರ ಇಂಗ್ಲೆಂಡಿಗೆ ತೆರಳಿದ ಅನಾ ಅಲ್ಲಿ ಪೂರ್ವ ಸಸೆಕ್ಸ್‍ನಲ್ಲಿ ವಾಸಿಸಲಾರಂಭಿಸಿದರು. ಲಂಡನ್‍ನ ಯೂನಿವರ್ಸಿಟಿಗೆ ತೆರಳಿದ ನಂತರವೇ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದರು. ಅಲ್ಲಿವರೆಗೂ ಅನಾ ತಾನು ಬರಹಗಾರ್ತಿಯಾಗುವ ಕನಸನ್ನೇನು ಕಂಡವರಲ್ಲ. ಆದರೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆ ಓದು ಬರವಣಿಗೆಗೆ ನೆರವಾಯಿತು.

ಆಕೆ ತಾನು ಬದುಕಿನಲ್ಲಿ ಕಂಡುಂಡ ಅನುಭವಗಳಿಗೆ ಕಾದಂಬರಿ ರೂಪ ನೀಡಿದರು. ನಾಶವಾಗುತ್ತಿರುವ ಕುಟುಂಬ ವ್ಯವಸ್ಥೆ, ಸಂಬಂಧಗಳಲ್ಲಿನ ಬಿರುಕುಗಳು, ಹೊತ್ತಿ ಉರಿಯುವ ಸಮಾಜಗಳೇ ಅವರ ಕೃತಿಗಳ ಜೀವಾಳ. ಐರ್ಲೆಂಡಿನಲ್ಲಿ ಹುಡುಗಿಯರು ಅನುಭವಿಸುವ ಕಷ್ಟಗಳ ಕುರಿತ, ಆ ಬದುಕನ್ನು ಚಿತ್ರಿಸಿದ ಮೊದಲ ಕಾದಂಬರಿ `ನೋ ಬೋನ್ಸ್’ 2001ರಲ್ಲಿ ಪ್ರಕಟವಾಯಿತು. ಮೊದಲ ಕಾದಂಬರಿಯಲ್ಲಿಯೇ ತಮ್ಮೊಳಗಿದ್ದ ಬರಹಗಾರ್ತಿಯನ್ನು ಹೊರಹಾಕಿದ್ದರು. ಅದರಿಂದಾಗಿ ಇದು ಉತ್ತಮ ಕಾದಂಬರಿ ಎಂದು ಸಾಹಿತ್ಯ ವಲಯದಲ್ಲಿ ಮನ್ನಣೆ ಪಡೆದಿದ್ದಲ್ಲದೆ `ದಿ ಆರೆಂಜ್ ಪ್ರೈಜ್’ನ್ನು 2002ರಲ್ಲಿ ಪಡೆಯಿತು. ಆದಾದ ನಂತರ ಇವರ ಎರಡನೆ ಕಾದಂಬರಿ `ಲಿಟಲ್ ಕನ್‍ಸ್ಟ್ರಕ್ಷನ್ಸ್’ 2007ರಲ್ಲಿ ಪ್ರಕಟವಾಯಿತು. ಮೂರನೇ ಕೃತಿ `ಮಿಲ್ಕ್‍ಮ್ಯಾನ್’ ಈ ವರ್ಷ ಹೊರಬಂದಿದೆ. ಐದು ವರ್ಷಗಳ ಕಾಲ ಹೆಣೆದ ಈ ಕಾದಂಬರಿಯ ಪ್ರಕಟಣೆ ಸುಲಭವಾಗಿರಲಿಲ್ಲ, ಅನೇಕ ಪ್ರಕಾಶಕರ ಮನೆಬಾಗಿಲು ತಟ್ಟಿಬೇಕಾಯ್ತು.

ಅನಾ ಬನ್ರ್ಸ್ ತಮ್ಮ ಕುರಿತು ಹೆಚ್ಚೇನೂ ಹೇಳಿಕೊಂಡಿಲ್ಲ. ಆ ಕುರಿತ ಪ್ರಶ್ನೆಗಳಿಗೆ ಅವರ ಮೌನವೇ ಉತ್ತರ. ತಾರಾ ವರ್ಚಸ್ಸಿನಿಂದ ತಮ್ಮ ಕೃತಿಗಳು ಹೆಸರು ಪಡೆಯಬಾರದು ಎನ್ನುವ ಮನೋಭಾವ ಅವರದು. ಮಾತನಾಡಬೇಕಿರುವುದು ಬರಹವೇ ಹೊರತು ಬರಹಗಾರನಲ್ಲ ಎಂಬ ಅವರ ನಿಲುವು ಅಪರೂಪದ್ದು.

ಮಿಲ್ಕ್ ಮ್ಯಾನ್
ಉತ್ತರ ಐರ್ಲೆಂಡ್‍ನ ಕ್ಯಾಥೋಲಿಕ್ ಪ್ರೊಟೆಸ್ಟೆಂಟ್  ಸಮುದಾಯದ ನಡುವೆ ಸಂಭವಿಸಿದ ಹಿಂಸಾಚಾರ ಕುರಿತ ಘಟನೆಯಾಧರಿಸಿ ರಚಿಸಿದ ಕೃತಿ ಇದು. ಈ ಕಾದಂಬರಿಯಲ್ಲಿ ಲೈಂಗಿಕತೆ, ಗಾಸಿಪ್‍ಗಳಿಂದ ಕೂಡಿದ ಹಾಗೂ ಅತೀವ ಒತ್ತಡದಲ್ಲಿ ಬದುಕುತ್ತಿರುವ ಸಮಾಜದ ಚಿತ್ರಣವಿದೆ.
ವಿವಾಹಿತ ಪುರುಷನೊಂದಿಗೆ ಸಂಬಂಧ ಹೊಂದಿದ ಯುವತಿಯೊಬ್ಬಳು ತನ್ನ ನಂಟನ್ನು ಅಮ್ಮನ ಕಣ್ಣಿನಿಂದ ಮುಚ್ಚಿಡಲು ಹೆಣಗುತ್ತಾಳೆ. ಆ ಸಂಬಂಧದ ಬಗ್ಗೆ ಹಬ್ಬುವ ಗಾಸಿಪ್‍ಗಳು ಕಾದಂಬರಿಯ ಜೀವಾಳ; ಹದಿನೆಂಟು ವರ್ಷದ ಯುವತಿಯೊಬ್ಬಳ ನಿರೂಪಣಾ ವಿಧಾನ ಓದುಗರ ಮನ ಸೆಳೆಯುತ್ತದೆ.

Leave a Reply

Your email address will not be published.