ಬಿಜೆಪಿ ವಿರೋಧಿ ಮಹಾಮೈತ್ರಿ

ರಾಮ ಮನೋಹರ ಲೋಹಿಯಾ ಅವರಿಂದ ಕಲಿಯಬೇಕಾದ ಪಾಠವೇನು?

ಭಾರತದ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳ ಮೈತ್ರಿಯುಗ ಆರಂಭವಾದದ್ದು 1967ರಲ್ಲಿ; ನಂತರ 1977ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಮ ಮನೋಹರ ಲೋಹಿಯಾ ಅವರ ಚಿಂತನೆಯ ಹಾದಿಯಲ್ಲಿ ನಡೆಸಿದ ಪ್ರಯತ್ನ, ಪ್ರಯೋಗದ ಫಲವಾಗಿ ಜನತಾ ಪಕ್ಷ ಉದಯಿಸಿತು. ಆಗ ಏರ್ಪಟ್ಟ ಮೈತ್ರಿಯಲ್ಲಿ ಬಂಡಾಯ ಕಾಂಗ್ರೆಸ್ಸಿಗರು, ಸಮಾಜವಾದಿಗಳು, ಜಾತ್ಯಾತೀತ ಬಲಪಂಥೀಯರು ಮತ್ತು ಜನಸಂಘ ಸೇರಿದ್ದವು. ಅವರೆಲ್ಲರೂ ಒಗ್ಗೂಡಿದ್ದು ಕಾಂಗ್ರೆಸ್ಸಿನ ಅರ್ಥಾತ್ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆ ವಿರೋಧಿಸಲು.

ಇದೀಗ 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವಾರು ರಾಜಕೀಯ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ಮಹಾಮೈತ್ರಿಕೂಟ ರೂಪಿಸಲು ಮುಂದಾಗಿವೆ; ಇವರೆಲ್ಲರ ಗುರಿ ಕೋಮುವಾದಿ ಬಿಜೆಪಿ; ವಿಶೇಷವಾಗಿ ನರೇಂದ್ರ ಮೋದಿಯವರನ್ನು ಮಣಿಸುವುದು.

ಈ ಸನ್ನಿವೇಶದಲ್ಲಿ ಮಹಾಘಟಬಂಧನ್ ನಾಯಕರು ರಾಮಮನೋಹರ ಲೋಹಿಯಾ ಅವರ ಅಸಾಮಾನ್ಯ ಪ್ರಯೋಗದಿಂದ, ಐತಿಹಾಸಿಕ ತಿರುವುಗಳಿಂದ ಕಲಿಯಬೇಕಾದ ಪಾಠಗಳೇನು? ಅಲ್ಲಿ ಯಶಸ್ಸಿನ ಸೂತ್ರಗಳಿವೆಯೇ? ಸೋಲಿನ ಸೂಕ್ಷ್ಮಗಳಿವೆಯೇ? ಈ ಕುರಿತು ಹಿರಿಯ ಪತ್ರಕರ್ತ ಅಕ್ಷಯ ಮುಕುಲ್ ಬೆಳಕು ಚೆಲ್ಲಿದ್ದಾರೆ. ಸಮ್ಮಿಶ್ರಲೋಹದ ಚುಂಬಕ ಪುರುಷ ಲೋಹಿಯಾ ಅವರ ಜನ್ಮದಿನದ ಸಂದರ್ಭದಲ್ಲಿ (ಮಾರ್ಚ್ 23) ಈ ವಿಶ್ಲೇಷಣೆ ಹೆಚ್ಚು ಪ್ರಸ್ತುತ ಮತ್ತು ಪ್ರಯೋಜನಕಾರಿ.

ಅದು ಐದು ರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾದಿನ ಅಂದರೆ 2018ರ ಡಿಸೆಂಬರ್ 10.

2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಾರೂಢ ಬಿಜೆಪಿಯನ್ನು ಪದಚ್ಯುತಗೊಳಿಸಲು, ಪ್ರತಿಪಕ್ಷಗಳ ಮಹಾಘಟಬಂಧನ್ ಅಂದರೆ ಮಹಾಮೈತ್ರಿಕೂಟ ರಚಿಸುವ ಮತ್ತೊಂದು ಯತ್ನ ನಡೆಸಲು ಪ್ರಮುಖ ಪ್ರತಿಪಕ್ಷಗಳ ನಾಯಕರ ಮಹತ್ವದ ಸಭೆ ಕರೆಯಲಾಗಿತ್ತು. ದೆಹಲಿಯ ಪಾರ್ಲಿಮೆಂಟ್ ಅನೆಕ್ಸ್‍ನಲ್ಲಿ ಕರೆಯಲಾಗಿದ್ದ ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಆರ್‍ಜೆಡಿಯ ತೇಜಸ್ವಿ ಯಾದವ್ , ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮತ್ತಿತರರು ಭಾಗವಹಿಸಿದ್ದರು.

ಈ ನಾಯಕರು ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದಂತೆ, ಇದು ಸುಲಭಸಾಧ್ಯ ಕೆಲಸವಲ್ಲ ಎಂಬುದರ ಅರಿವಾಗಲು ಇದರ ನೇತೃತ್ವ ವಹಿಸಿದ್ದ ಚಂದ್ರಬಾಬು ನಾಯ್ಡುಗೆ ಹೆಚ್ಚು ಸಮಯ ಬೇಕಾಗಲಿಲ್ಲ. ನಾಯಕರ ಹಾವಭಾವ ನೋಡಿಯೇ ಎಲ್ಲವೂ ಗೊತ್ತಾಗುತ್ತಿತ್ತು. ಏಕೆಂದರೆ ಅವರಲ್ಲಿ ಪರಸ್ಪರ ರಾಜಕೀಯ ಬದ್ಧವೈರಿಗಳಿದ್ದರು. ವೈಯಕ್ತಿಕ ಪ್ರತಿಷ್ಠೆಗಳು ಎದ್ದುಕಾಣುತ್ತಿದ್ದವು. ಮಮತಾ ಹಾಗೂ ಯೆಚೂರಿ ಅವರಿಗೆ ಅಕ್ಕಪಕ್ಕದ ಕುರ್ಚಿ ನಿಗದಿಪಡಿಸಲಾಗಿತ್ತಾದರೂ ಅವರು ಹಾಗೆ ಕುಳಿತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗೂ ಉಂಟೇ ಎಂದುಕೊಂಡರು ನಾಯ್ಡು. ಅನಂತರ ಅವರಿಬ್ಬರ ಮಧ್ಯೆ ಎನ್‍ಸಿಪಿ ನಾಯಕ ಶರದ್ ಪವಾರ್ ಆಸೀನರಾದರು.

ಇನ್ನು ಎಸ್ಪಿ ಹಾಗೂ ಬಿಎಸ್‍ಪಿ ನಾಯಕರು ಸಭೆಯಲ್ಲಿ ಭಾಗವಹಿಸಲೇ ಇಲ್ಲ. ಕಾಂಗ್ರೆಸ್ ನೇತೃತ್ವದಲ್ಲಿ ಒಂದಾಗಲು ಆ ಎರಡೂ ಪಕ್ಷಗಳಿಗೆ ಇಷ್ಟವಿಲ್ಲ. ಈ ಸಭೆಗೆ ಗೈರುಹಾಜರಾಗುತ್ತಿರುವುದಕ್ಕೆ ಇದೇ ಅಸಲಿ ಕಾರಣ ಎಂದು ಕಮ್ಯುನಿಸ್ಟ್ ನಾಯಕರೊಬ್ಬರು ಹೇಳಿದರು.

ಅವರಲ್ಲಿ ಪರಸ್ಪರ ರಾಜಕೀಯ ಬದ್ಧವೈರಿಗಳಿದ್ದರು. ವೈಯಕ್ತಿಕ ಪ್ರತಿಷ್ಠೆಗಳು ಎದ್ದುಕಾಣುತ್ತಿದ್ದವು. ಮಮತಾ ಹಾಗೂ ಯೆಚೂರಿ ಅವರಿಗೆ ಅಕ್ಕಪಕ್ಕದ ಕುರ್ಚಿ ನಿಗದಿಪಡಿಸಲಾಗಿತ್ತಾದರೂ ಅವರು ಹಾಗೆ ಕುಳಿತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗೂ ಉಂಟೇ ಎಂದುಕೊಂಡರು ನಾಯ್ಡು.

ಮಹಾಮೈತ್ರಿಕೂಟಕ್ಕೆ ತಮ್ಮ ಬೆಂಬಲವಿದೆ ಎಂದು ಚುನಾವಣೆ ಫಲಿತಾಂಶ ಹೊರಬಿದ್ದ ದಿನ ಅಖಿಲೇಶ್ ಯಾದವ್ ಹೇಳಿದ್ದು ಹೌದಾದರೂ ಆ ಎರಡೂ ಪಕ್ಷಗಳಿಗೆ ಮೈತ್ರಿಕೂಟದಲ್ಲಿ ಆಸಕ್ತಿ ಅಷ್ಟಕ್ಕಷ್ಟೆ ಎಂಬುದು ವಾಸ್ತವ. ಉತ್ತರಪ್ರದೇಶದ 80 ಸ್ಥಾನಗಳ ಪೈಕಿ ಐದಕ್ಕಿಂತಲೂ ಹೆಚ್ಚು ಸೀಟುಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವ ಇರಾದೆಯೇ ಎಸ್‍ಪಿ-ಬಿಎಸ್‍ಪಿಗೆ ಇಲ್ಲ.

ಇತರ ರಾಜ್ಯಗಳಲ್ಲೂ ಮೈತ್ರಿಯ ಚಿತ್ರಣ ಅಸ್ಪಷ್ಟವಾಗಿಯೇ ಇದೆ. ಉದಾಹರಣೆಗೆ, ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿಯಾಗಬೇಕು ಎಂಬ ಡಿಎಂಕೆ ನಾಯಕ ಸ್ಟಾಲಿನ್ ಸಲಹೆಗೆ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹಾಗೆ ಮಾಡಿದರೆ, ಟಿಎಂಸಿ ಹಾಗೂ ಕಮ್ಯುನಿಸ್ಟರು, ಆಪ್ ಹಾಗೂ ಕಾಂಗ್ರೆಸ್ ತಮ್ಮ ರಾಜ್ಯ ಹಾಗೂ ಪ್ರಾಬಲ್ಯವಿರುವ ಕಡೆಗಳಲ್ಲೂ ಮೈತ್ರಿಗೆ ಸೈ ಅನ್ನಬೇಕಾಗುತ್ತದೆ.

‘ಮೊದಮೊದಲು ನೆಹರು ಅವರ ಪ್ರಭಾವಕ್ಕೊಳಗಾಗಿ ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದ ಲೋಹಿಯಾ, 1940ರ ಆರಂಭದಲ್ಲಿ ಅವರ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳು ಹಾಗೂ ಸಾಮ್ರಾಜ್ಯಶಾಹಿ ಧೋರಣೆಯ ತೀವ್ರ ಟೀಕಾಕಾರರಾಗಿ ಬದಲಾದರು. ಲೋಹಿಯಾರನ್ನು ನಿಯಂತ್ರಿಸಲಾಗದೆ ಸುಸ್ತಾಗಿದ್ದ ನೆಹರು, ಅವರ ಬಗ್ಗೆ ಅಸಮಾಧಾನ ಹೊಂದಿದ್ದರು ಹಾಗೂ ಅತೃಪ್ತಿಯನ್ನು ಹೊರಹಾಕುತ್ತಿದ್ದರು’

ಹೀಗೆ ಇಂಥ ಅನೇಕ ಸಂದಿಗ್ಧ ಮತ್ತು ಸಂಕಟಗಳು ಎದುರಾದ ಹಿನ್ನೆಲೆಯಲ್ಲಿ ಅದನ್ನು ಅಲ್ಲಿಯೇ ಬಿಟ್ಟು, ಈಗಿನ ಬಿಜೆಪಿ ಸರಕಾರದ ಅತಿರೇಕದ ವರ್ತನೆ ಮತ್ತು ನಿರ್ಧಾರಗಳ ಕುರಿತ ಚರ್ಚೆಗೇ ಹೆಚ್ಚು ಒತ್ತು ಕೊಡಲಾಯಿತು. ತಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ಸರಕಾರವನ್ನು ಕಿತ್ತೊಗೆಯಬೇಕಾದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿದ್ದಷ್ಟೇ ಈ ಸಭೆಯ ಫಲಶ್ರುತಿ.

ಬಿಜೆಪಿಯೇತರ ಮಹಾಮೈತ್ರಿಕೂಟವೊಂದು ರೂಪುಗೊಳ್ಳುತ್ತಿರುವ ಹೊತ್ತಿನಲ್ಲೇ ಅದು ರಾಷ್ಟ್ರೀಯ ಸ್ವರೂಪದ್ದಾಗಿರಲಿಕ್ಕಿಲ್ಲ ಎಂಬ ಅಂಶ ಸ್ಪಷ್ಟವಾಗತೊಡಗಿದೆ. ಸಾಧ್ಯವಾದಷ್ಟು ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆ. ಕೆಲವು ರಾಜ್ಯಗಳಲ್ಲಿ ಮೈತ್ರಿಯೇ ಏರ್ಪಡದಿರುವ ಸಾಧ್ಯತೆಯೂ ಇದೆ ಎಂಬುದು ಯೆಚೂರಿ ಅಭಿಪ್ರಾಯ. ಪಶ್ಚಿಮ ಬಂಗಾಳ, ಕೇರಳ ಹಾಗೂ ತ್ರಿಪುರ ಅಂಥ ಕೆಲವು ರಾಜ್ಯಗಳು. ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಇದು ಸಾಧ್ಯವಾಗಬಹುದು ಎನ್ನುತ್ತಾರೆ ಅವರು.

ಚುನಾವಣಾಪೂರ್ವ ಮೈತ್ರಿ ಸಾಧಿಸುವಲ್ಲಿ ಇನ್ನೂ ಅನೇಕ ಅಡೆತಡೆಗಳಿವೆ. ಇತ್ತೀಚೆಗಿನ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಒಂದು ರೀತಿಯ ಅತಿಯಾದ ಆತ್ಮವಿಶ್ವಾಸ ಮನೆಮಾಡಿದ್ದು, ಈ ಹಿನ್ನೆಲೆಯಲ್ಲಿ ತನಗೆ ಹೆಚ್ಚು ಸೀಟುಗಳು ಬೇಕೆಂದು ಪ್ರಾದೇಶಿಕ ಪಕ್ಷಗಳ ಮುಂದೆ ಬೇಡಿಕೆ ಇಡಬಹುದು. ಸ್ಥಾನ ಹಂಚಿಕೆಯಲ್ಲಿ ಕೊಡುಕೊಳ್ಳುವ ಮನೋಭಾವ ಇರಬೇಕಾಗುತ್ತದೆ. ಇನ್ನು ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಲ ಹಾಗೂ ದಿಲ್ಲಿಯಲ್ಲಿ ಆಂತರಿಕ ಕಚ್ಚಾಟವೂ ಮೈತ್ರಿಕೂಟ ರಚಿಸಿಕೊಳ್ಳುವ ಸಾಧ್ಯತೆಗೆ ಅಡ್ಡಿಯಾಗಬಹುದು.

ಒಂದೊಮ್ಮೆ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಹಾಘಟಬಂಧನ್ ರಚನೆ ಸಾಧ್ಯವಾದರೂ ಹಲವು ಸಮಸ್ಯೆಗಳು ಎದುರಾಗುವುದು ದಿಟ. ಕೇವಲ ಬಿಜೆಪಿ ಪದಚ್ಯುತಿಯ ಏಕಮೇವ ಉದ್ದೇಶದಿಂದ ನಾನಾ ಪಕ್ಷಗಳು ಒಂದಾದವು ಎಂದಿಟ್ಟುಕೊಳ್ಳೋಣ. ಹೇಗೋ ಸ್ಥಾನ ಹಂಚಿಕೆ ಸಾಧ್ಯವಾದೀತು. ಆದರೆ ಮುಂದೆ ಚುನಾವಣೆ ಮುಗಿದ ಬಳಿಕ ಹಲವು ಸೈದ್ಧಾಂತಿಕ ಸಮಸ್ಯೆಗಳು ಧುತ್ತೆಂದು ಎದುರಾಗುತ್ತವೆ.

2014ರಲ್ಲಿ ಬಿಜೆಪಿಯು ಸ್ವಂತಬಲದ ಮೇಲೆ ಅಧಿಕಾರಕ್ಕೆ ಬಂದ ಬಳಿಕ ಅದು ಸಂಖ್ಯಾಬಲವನ್ನು ಮೀರಿದ ತಾಕತ್ತನ್ನು ಗಳಿಸಿಕೊಂಡಿದೆ. ಸರಕಾರದ ಪ್ರಭಾವ ಹಾಗು ಹಸ್ತಕ್ಷೇಪ ಎಲ್ಲೆಡೆ ವ್ಯಾಪಿಸಿದೆ. ಮಾಧ್ಯಮ, ನ್ಯಾಯಾಂಗ, ತನಿಖಾ ಸಂಸ್ಥೆಗಳಿಂದ ಹಿಡಿದು ಚುನಾವಣಾ ಆಯೋಗ, ಕೇಂದ್ರ ಜಾಗೃತ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ -ಎಲ್ಲದರಲ್ಲೂ ನಿಯಂತ್ರಣ ಸಾಧಿಸಿದೆ. ದೇಶದ ಶಿಕ್ಷಣ ವ್ಯವಸ್ಥೆ ಮೇಲೂ ಸವಾರಿ ಮಾಡಿದೆ. ಯಾವುದೇ ವಿಚಾರದಲ್ಲಿ ಅಸಮ್ಮತಿ, ವಿರೋಧಕ್ಕೆ ಅವಕಾಶವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ 2019ರ ಚುನಾವಣೆಯು ಪ್ರತಿಪಕ್ಷಗಳಿಗೆ ಕೇವಲ ಅವುಗಳ ಉಳಿವು ಮಾತ್ರವಲ್ಲದೆ ದೇಶದಲ್ಲಿ ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆ.

ಲೋಹಿಯಾ ಅವರು ಕಮ್ಯುನಿಸ್ಟರನ್ನೂ ತಿರಸ್ಕರಿಸಿದ್ದರು. ಮಾಕ್ರ್ಸ್ ಪ್ರಣೀತ ಕಮ್ಯುನಿಸಂ ಪಾಶ್ಚ್ಯಾತ್ಯ ಇತಿಹಾಸದ ನೆಲೆಯಿಂದ ರೂಪುಗೊಂಡಿದ್ದು ಎಂಬ ಆಭಿಪ್ರಾಯ ಅವರದಾಗಿತ್ತು. ಲೋಹಿಯಾ ನಂಬಿದ ಸಮಾಜವಾದವು ಕಮ್ಯುನಿಸಂ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಿಂದ ಸಮಾನದೂರ ಉಳ್ಳದ್ದಾಗಿತ್ತು.

1960ರ ದಶಕದಲ್ಲೂ ಹೆಚ್ಚೂ ಕಡಿಮೆ ಇದೇ ರೀತಿಯ ಪರಿಸ್ಥಿತಿ ಇತ್ತು. 1952, 1957 ಹಾಗೂ 1962ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ದೊರೆತ ಕಾರಣ ಆ ಅವಧಿಯಲ್ಲಿ ದೇಶವು ಹೆಚ್ಚೂ ಕಡಿಮೆ ಏಕಪಕ್ಷ ಆಡಳಿತವನ್ನು ಕಂಡಿತ್ತು. 1967ರಲ್ಲೂ ಅದೇ ಹಾದಿಯಲ್ಲಿ ಸಾಗಿದ್ದಾಗ, ‘ಭಾರತವು ಇದೀಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ’ ಎಂದು ಬ್ರಿಟಿಷ್ ಅಂಕಣಕಾರ ನೆವಿಲ್ಲೆ ಮ್ಯಾಕ್ಸ್‍ವೆಲ್ ಬರೆದಿದ್ದರು. ‘ಜನತಾಂತ್ರಿಕ ಚೌಕಟ್ಟಿನಲ್ಲಿ ಭಾರತವನ್ನು ಅಭಿವೃದ್ಧಿಪಡಿಸುವ ಮಹಾನ್ ಪ್ರಯೋಗವೊಂದು ವಿಫಲವಾಗಿದೆ’ ಎಂದೂ ಅವರು ಹೇಳಿದ್ದರು.

‘ಜೆಪಿ ಹಾಗೂ ಲೋಹಿಯಾ ಅವರು ಹೊದಾಣಿಕೆ ಮಾಡಿಕೊಂಡು ಒಟ್ಟಾಗಿದ್ದಿದ್ದರೆ ದೇಶದ ರಾಜಕಿಯ ಇತಿಹಾಸ ಬೇರೆಯದೇ ಆಗಿರುತ್ತಿತ್ತು’

ಆದರೆ 1967ರ ಚುನಾವಣೆಯ ಫಲಿತಾಂಶದ ಕಥೆ ಬೇರೆಯದೇ ಆಗಿತ್ತು. ಆಗ ಸಂಸತ್ ಹಾಗೂ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದವು. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತವನ್ನೇನೋ ಪಡೆಯಿತಾದರೂ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಅದೇ ಮೊದಲಬಾರಿಗೆ ಅಷ್ಟು ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಗೆದ್ದಿತ್ತು. ಆದರೆ ರಾಜ್ಯಗಳಲ್ಲಿ ಮಾತ್ರ ಅದು ಭಾರಿ ಹೊಡೆತ ತಿಂದಿತ್ತು. ಎಂಟು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತ್ತು. ದಿ ಸ್ಟೇಟ್ಸ್‍ಮನ್ ಪತ್ರಿಕೆಯಲ್ಲಿ ಈ ಚುನಾವಣೆ ಬಗ್ಗೆ ಬರೆಯುತ್ತ, ‘ಇದು 1967ರ ಕ್ರಾಂತಿ’ ಎಂದು ಎರಿಕ್ ಡಿಕೋಸ್ಟಾ ಬಣ್ಣಿಸಿದ್ದಾರೆ. ದೇಶದ ರಾಜಕೀಯ ಇತಿಹಾಸಕ್ಕೆ ಹೊಸ ತಿರುವು ನೀಡಿದ ಚುನಾವಣೆ ಇದು ಎಂಬುದಂತೂ ನಿಜ. ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯ ಕೊನೆಗೊಂಡಿತು. ಕಾಂಗ್ರೆಸ್ಸೇತರ ಪಕ್ಷಗಳು ಪ್ರವರ್ಧಮಾನಕ್ಕೆ ಬರುವ ಕಾಲ ಕೂಡಿಬಂದಿತು.

ಅಕ್ಷಯ ಮುಕುಲ್ ಅವರು ಒಬ್ಬ ಸ್ವತಂತ್ರ ಸಂಶೋಧಕರು; ಎರಡು ದಶಕಗಳಿಂದ ಪತ್ರಕರ್ತ ವೃತ್ತಿಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಹೋಮಿ ಬಾಬಾ ಸಂಸ್ಥೆಯ ಗೌರವ ಸದಸ್ಯರು. ಇಂಡಿಯನ್ ಎಕ್ಸ್‍ಪ್ರೆಸ್, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಬಳಗ ಹಾಗೂ ಎಡಿನ್‍ಬರ್ಗ ಯುನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ‘ಎ ಹಿಸ್ಟಾರಿಕಲ್ ಕಂಪ್ಯಾನಿಯನ್ ಟು ಪೋಸ್ಟ್ ಕಲೋನಿಯಲ್ ಲಿಟರೇಚರ್ ಇನ್ ಇಂಗ್ಲಿಷ್’ ಕೃತಿಗಾಗಿ ಕಾರ್ಯನಿರ್ವಹಿಸಿದ್ದಾರೆ. ‘ಗೀತಾ ಪ್ರೆಸ್ ಅಂಡ್ ದಿ ಮೇಕಿಂಗ್ ಆಫ್ ಹಿಂದು ಇಂಡಿಯಾ’ ಅವರ ಮಹತ್ವದ ಕೃತಿ. ಅವರು ಗುರಗಾಂವ್ನಲ್ಲಿ ಪತ್ನಿ ಜ್ಯೋತಿ, ಮಗಳು ಜಹ್ನವಿ ಮತ್ತು ಡಾಲ್ಮೇಷಿಯನ್ ಬೆಲ್ಲರೊಂದಿಗೆ ವಾಸಿಸುತ್ತಾರೆ

ದೇಶದಲ್ಲಿ ಕಾಂಗ್ರೆಸ್ ಎಂಬ ಹೆಬ್ಬಂಡೆಯನ್ನು ಉರುಳಿಸಿದ ಶ್ರೇಯಸ್ಸು ಸಲ್ಲಬೇಕಾದ ವ್ಯಕ್ತಿ ಬೇರಾರೂ ಅಲ್ಲ. ಅವರೇ ರಾಮ ಮನೋಹರ್ ಲೋಹಿಯಾ. ‘ಕಾಂಗ್ರೆಸ್ ರಾಜ್ ಹಾಗೂ ಅದಕ್ಷ ಮತ್ತು ನಿರ್ವಿಣ್ಣ ಪ್ರತಿಪಕ್ಷದಿಂದಾಗಿ ರಾವi ಮನೋಹರ ಲೋಹಿಯಾ ಅವರು ಎಷ್ಟು ಹತಾಶರಾಗಿದ್ದರೆಂದರೆ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಬೇಕೆಂಬ ಏಕೈಕ ಉದ್ದೇಶ ಹಾಗೂ ನಿರ್ಧಾರವನ್ನು ಅವರು ತಳೆದಿದ್ದರು’ ಎಂದು ‘ದಿ ಬರ್ತ್ ಆಫ್ ನಾನ್ ಕಾಂಗ್ರೆಸಿಸಮ್’ ಎಂಬ ಪುಸ್ತಕದಲ್ಲಿ, ಲೋಹಿಯಾ ಅವರ ನಿಕಟವರ್ತಿ ಹಾಗೂ ಸಮಾಜವಾದಿ ಮಧು ಲಿಮಯೆ ಬರೆದಿದ್ದಾರೆ.

ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ‘ನಾನ್ ಕಾಂಗ್ರೆಸಿಸಮ್’ ತಂತ್ರವನ್ನು 1960ರ ದಶಕದಲ್ಲಿ ಲೋಹಿಯಾ ಅನುಸರಿಸಿದರು. ಹಾಗೆಂದು ಈ ಕೆಲಸವನ್ನು ಅವರು ರಾತ್ರೋರಾತ್ರಿ ಮಾಡಲಿಲ್ಲ. 1962ರ ಚುನಾವಣೆಯ ಬಳಿಕ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಆರಂಭಿಸಿದರು. ಭಾರತೀಯ ಸಂಸ್ಕøತಿ ಹಾಗೂ ಸಮಾಜದ ಆಳವಾದ ಅರಿವು ಲೋಹಿಯಾ ಅವರಿಗಿತ್ತು. ‘ತತ್ವಾಧಾರಿತ ರಾಜಕಾರಣ’ದ ತಳಹದಿಯ ಮೇಲೆ ಹೊಸ ರಾಜಕೀಯ ವ್ಯವಸ್ಥೆಯನ್ನು ಆರಂಭಿಸುವ ದೂರದೃಷ್ಟಿ ಹಾಗೂ ಕನಸನ್ನು ಬಿತ್ತಿದರು. ರಾಜಕೀಯ ನಾಯಕರು ತಮ್ಮನ್ನು ಅನುಸರಿಸುತ್ತಾರೆ ಎಂದು ಆಶಿಸಿದರು. 1967ರ ಚುನಾವಣೆಯ ಮೂಲಕ ಆರಂಭದಲ್ಲಿ ಅವರ ಪ್ರಯತ್ನಗಳಿಗೆ ಯಶಸ್ಸು ದೊರೆಯಿತಾದರೂ ಅನಂತರ ದುರಂತ ಅಂತ್ಯ ಕಂಡಿತು. ಮತ್ತೆ ಕಾಂಗ್ರೆಸ್ ಪಕ್ಷವನ್ನು ಪದಚ್ಯುತಗೊಳಿಸಲು ಅವರ ನಿಧನದ ಬಳಿಕ ಒಂದು ದಶಕ ಬೇಕಾಯಿತು.

ಈ ಕಾಲಘಟ್ಟದಲ್ಲಿ ಲೋಹಿಯಾ ಅವರ ಮಹತ್ವ ಹಾಗೂ ಪ್ರಸ್ತುತತೆಯನ್ನು ಮಹಾಘಟಬಂಧನ್‍ನ ನಾಯಕರು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರೂ ಗುರುತಿಸಿದ್ದಾರೆ. ಇಂದಿನ ಮಹಾಘಟಬಂಧನ್‍ನಲ್ಲಿ ಎಲ್ಲ ನಾಯಕರನ್ನೂ ಒಟ್ಟಾಗಿ ಕರೆದೊಯ್ಯಲು ಲೋಹಿಯಾ ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರು ನಡೆಸಿದ ಪ್ರಯೋಗ ಹಾಗೂ ಅದರಲ್ಲಿ ಕಂಡ ಯಶಸ್ಸಿನಿಂದ ಇಂದಿನ ನಾಯಕರು ಕಲಿಯಬಹುದಾದ ಪಾಠಗಳು ಬೇಕಾದಷ್ಟಿವೆ.

*
ರಾಮ ಮನೋಹರ್ ಲೋಹಿಯಾ ಅವರು 1910ರ ಮಾರ್ಚ್ 23 ರಂದು ಇಂದಿನ ಉತ್ತರಪ್ರದೇಶದ ಅಕ್ಬರ್‍ಪುರದ ಬನಿಯಾ ಕುಟುಂಬದಲ್ಲಿ ಜನಿಸಿದರು. ಚಿಕ್ಕಂದಿನಲ್ಲಿಯೇ ತಂದೆಯೊಂದಿಗೆ ಬಾಂಬೆಗೆ ವಲಸೆ ಹೋದರು. ಅವರ ಅಪ್ಪ ಕೂಡ ಕಾಂಗ್ರೆಸಿಗರಾಗಿದ್ದು ಬ್ರಿಟಿಷ್ ಆಡಳಿತ ವಿರುದ್ಧದ ಹೋರಾಟವನ್ನು ಬೆಂಬಲಿಸುತ್ತಿದ್ದರು. ಹೀಗಾಗಿ ಲೋಹಿಯಾ ಅವರಿಗೆ ಆ ವಯಸ್ಸಿನಲ್ಲಿಯೇ ರಾಜಕೀಯದ ಗಂಧ ಗಾಳಿ ಸೋಕಿತು. 1920ರಲ್ಲಿ ಬಾಲಗಂಗಾಧರ ತಿಲಕ್ ನಿಧನರಾದ ಸಂದರ್ಭದಲ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡುವಂತೆ ಆಗ್ರಹಿಸಿ ತಮ್ಮ ಶಾಲೆಯಲ್ಲಿ ಹರತಾಳ ನಡೆಸಿದರು. ಆಗಿನ್ನೂ ಅವರಿಗೆ ಹತ್ತು ವರ್ಷ.

‘ನಾವು ಸೋತರೂ ನಮ್ಮ ತತ್ತ್ವಾದರ್ಶಗಳಿಂದ ವಿಮುಖರಾಗು ವುದು ಬೇಡ. ಅನ್ಯಾಯದ ವಿರುದ್ಧ ಹೋರಾಡಲು ನೂರು ವರ್ಷಗಳ ಕಾರ್ಯಕ್ರಮ ರೂಪಿಸೋಣ’.

ಬಳಿಕ ಪದವಿ ಅಧ್ಯಯನಕ್ಕಾಗಿ ಕಲ್ಕತ್ತಾದ ವಿದ್ಯಾಸಾಗರ ಕಾಲೇಜು ಸೇರಿದರು. ಆಗಲೂ ವಿದ್ಯಾರ್ಥಿ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಜವಹರಲಾಲ್ ನೆಹರು ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಪರಿಚಯವಾಯಿತು.

ಅನಂತರ ಲೋಹಿಯಾ ಅವರು ಸ್ನಾತಕೋತ್ತರ ಪದವಿಗಾಗಿ ಜರ್ಮನಿಯ ಹಂಬೋಲ್ಟ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಖ್ಯಾತ ಅರ್ಥಶಾಸ್ತ್ರಜ್ಞ ವೆರ್ನರ್ ಸೊಂಬಾರ್ಟ್ ಅವರ ವಿದ್ಯಾರ್ಥಿಯಾದರು. ಲೋಹಿಯಾ ಹೊಸ ಜಾಗತಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಸೊಂಬಾರ್ಟ್ ಅವರ ಮಾರ್ಗದರ್ಶನ ನೆರವಾಯಿತು. ಸಾಮಾಜಿಕ ಕಾರ್ಯಕರ್ತ, ಸಮಾಜಶಾಸ್ತ್ರಜ್ಞ ಹಾಗೂ ಆರ್ಥಶಾಸ್ತ್ರಜ್ಞರಾಗಿ ಅವರಿಗಿದ್ದ ಅನುಭವದ ಲಾಭ ದೊರೆಯಿತು ಹಾಗೂ ಅದನ್ನು ಅನುಸರಿಸುವಂತಾಯಿತು. ಲೋಹಿಯಾ ಅವರು ಜರ್ಮನಿಯ ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ಅತಿ ಹತ್ತಿರದಿಂದ ಗಮನಿಸಿದರು. ಅಲ್ಲದೆ ಅಡಾಲ್ಫ್ ಹಿಟ್ಲರ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಸಭೆಗಳಲ್ಲಿ ಭಾಗವಹಿಸಿದರು.

1930ರಲ್ಲಿ ಧರಸನಾದಲ್ಲಿ ಸತ್ಯಾಗ್ರಹಿಗಳ ಮೇಲೆ ಲಾಠಿಪ್ರಹಾರ ನಡೆದ ಸುದ್ದಿ ತಿಳಿಯುತ್ತಲೇ, ಲೀಗ್ ಆಫ್ ನೇಶನ್ಸ್‍ನ ಅಧಿವೇಶನÀ ನಡೆಯುತ್ತಿದ್ದ ಜಿನೀವಾಗೆ ಲೋಹಿಯಾ ತೆರಳಿದರು. ಅಲ್ಲಿ ಬಿಕಾನೇರ್‍ನ ಮಹಾರಾಜ ಬ್ರಿಟಿಷ್ ಸರಕಾರವನ್ನು ಹಾಡಿಹೊಗಳುತ್ತಿದ್ದುದನ್ನು ಕಂಡು ಆಕ್ರೋಶಗೊಂಡು, ತಾವು ಕುಳಿತಿದ್ದ ಸಂದರ್ಶಕರ ಗ್ಯಾಲರಿಯಿಂದಲೇ ಶಿಳ್ಳೆಯ ಮೂಲಕ ಅವರನ್ನು ಮೂದಲಿಸಿದರು. ಕೂಡಲೇ ಅವರನ್ನು ಅಲ್ಲಿಂದ ಹೊರಕಳಿಸಲಾಯಿತು. ಜಿನಿವಾದ ಹ್ಯೂಮನೈಟ್ ಪತ್ರಿಕೆಗೆ ಅವರು ಧರಸನಾ ಸತ್ಯಾಗ್ರಹ ಕುರಿತು ಪತ್ರ ಬರೆದರು. ಇದರಲ್ಲಿ ತಮ್ಮ ತಂದೆ ಸೇರಿದಂತೆ ಅನೇಕರು ಗಾಯಗೊಂಡಿದ್ದು ಹಾಗೂ ಮಹಾರಾಜರಂಥ ಬ್ರಿಟಿಷರ ತೊತ್ತಾಗಿರುವವರನ್ನು ಲೀಗ್ ಆಫ್ ನೇಶನ್ಸ್‍ಗೆ ಭಾರತದ ಪ್ರತಿನಿಧಿಯಾಗಿ ಕಳಿಸಿರುವ ವಿಷಯವನ್ನು ಬರೆದಿದ್ದರು. ಮರುದಿನ ಆ ಪತ್ರ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದರ ಪ್ರತಿಗಳನ್ನು ಅವರು ಅಧಿವೇಶನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಹಂಚಿದರು.

1933ರಲ್ಲಿ ಥೀಸಿಸ್ ಪೂರ್ಣಗೊಳಿಸಿದ ಬಳಿಕ ಭಾರತಕ್ಕೆ ಮರಳಿದ ಲೋಹಿಯಾ, ಕಾಂಗ್ರೆಸ್ ಪಕ್ಷ ಸೇರಿದರು. ಪಕ್ಷದೊಳಗೇ ಒಂದು ಗುಂಪಾದ ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು; ಅದರ ಮುಖವಾಣಿ ಪತ್ರಿಕೆಯಾದ ‘ಕಾಂಗ್ರೆಸ್ ಸೋಷಲಿಸ್ಟ್’ ನ ಸಂಪಾದಕರಾಗಿದ್ದರು. 1936ರಲ್ಲಿ ಪಕ್ಷದ ವಿದೇಶಾಂಗ ಕಾರ್ಯದರ್ಶಿಯಾಗಿ ಲೋಹಿಯಾರನ್ನು ನೆಹರು ನೇಮಿಸಿದರು. ಲೋಹಿಯಾರ ರಾಜಕೀಯ ಪಯಣದ ವಿವರಗಳನ್ನು ತಮ್ಮ ‘ಬರ್ತ್ ಆಫ್ ನಾನ್ ಕಾಂಗ್ರೆಸಿಸಮ್’ ಕೃತಿಯಲ್ಲಿ ಮಧು ಲಿಮಯೆ ವಿವರಿಸಿದ್ದಾರೆ. ‘ಮೊದಮೊದಲು ನೆಹರು ಅವರ ಪ್ರಭಾವಕ್ಕೊಳಗಾಗಿ ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದ ಲೋಹಿಯಾ, 1940ರ ಆರಂಭದಲ್ಲಿ ಅವರ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳು ಹಾಗೂ ಸಾಮ್ರಾಜ್ಯಶಾಹಿ ಧೋರಣೆಯ ತೀವ್ರ ಟೀಕಾಕಾರರಾಗಿ ಬದಲಾದರು. ಲೋಹಿಯಾರನ್ನು ನಿಯಂತ್ರಿಸಲಾಗದೆ ಸುಸ್ತಾಗಿದ್ದ ನೆಹರು, ಅವರ ಬಗ್ಗೆ ಅಸಮಾಧಾನ ಹೊಂದಿದ್ದರು ಹಾಗೂ ಅತೃಪ್ತಿಯನ್ನು ಹೊರಹಾಕುತ್ತಿದ್ದರು’ ಎಂದು ಲಿಮಯೆ ಬರೆದಿದ್ದಾರೆ.

ಸ್ವಾತಂತ್ರ್ಯಾನಂತರ ಜೆಪಿ, ನಾರಾಯಣ ದೇವ್ ಮತ್ತಿತರರ ಜತೆಗೆ ಕಾಂಗ್ರೆಸ್ ತೊರೆದ ಲೋಹಿಯಾ, ಸೋಷಲಿಸ್ಟ್ ಪಾರ್ಟಿ ಕಟ್ಟಿದರು. ನೆಹರು ಅವರ ನಿರಂತರ ಟೀಕಾಕಾರರಾಗಿದ್ದ ಲೋಹಿಯಾ, ಭಾರತದ ವಿಭಜನೆಯ ತೀವ್ರ ವಿರೋಧಿಯಾಗಿದ್ದರು. ಇದಕ್ಕೆ ನೆಹರು ಮತ್ತು ವಲ್ಲಭಭಾಯಿ ಪಟೇಲರೇ ಕಾರಣ ಎಂದು ದೂರುತ್ತಿದ್ದರು. ಇದನ್ನು ತಮ್ಮ ‘ಗಿಲ್ಟಿ ಮೆನ್ ಆಫ್ ಇಂಡಿಯಾಸ್ ಪಾರ್ಟಿಸನ್’ ಪುಸ್ತಕದಲ್ಲಿ ಅವರು ಹೀಗೆ ಬರೆದಿದ್ದಾರೆ; ‘ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ, ಭಾರತದ ವಿಭಜನೆಯ ವಿಷಯವನ್ನು ಗಾಂಧಿಯವರ ಜತೆ ಚರ್ಚಿಸಲಾಯಿತು. ಇದರಲ್ಲಿ ಲೋಹಿಯಾ, ಜೆಪಿ ಕೂಡ ಇದ್ದರು. ಈ ಸಭೆಯಲ್ಲಿ ಗಾಂಧಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಲೇಬೇಕು. ‘ವಿಭಜನೆಗೆ ಒಪ್ಪಿಕೊಳ್ಳುವ ಮೊದಲು ಅದರ ವಿವರಗಳನ್ನು ನನ್ನ ಗಮನಕ್ಕೆ ತರಲೇ ಇಲ್ಲವಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಗಾಧೀಜಿಯ ಬಗ್ಗೆ ನೆಹರು ಮತ್ತು ಪಟೇಲರಿಗೆ ಆಂತರಿಕವಾಗಿ ಬೇರೆಯದೇ ಆದ ಆಭಿಪ್ರಾಯವಿತ್ತು ಎಂದೂ ಅವರು ಹೇಳಿದ್ದಾರೆ.

‘ಬಿಜೆಪಿಯ ಪೂರ್ವಾವತಾರವಾದ ಜನಸಂಘವೂ ಭಾರತದ ವಿಭಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ತಮ್ಮ ಹಾಗೂ ಜನಸಂಘದ ವಿರೋಧದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಮುಸ್ಲಿಮರನ್ನು ದೇಶದಿಂದ ಹೊರಹಾಕುವ ಬ್ರಿಟಿಷರು ಹಾಗು ಮುಸ್ಲಿಂ ಲೀಗ್‍ನ ಹುನ್ನಾರಕ್ಕೆ ಜನಸಂಘದ ಬೆಂಬಲವಿತ್ತು’ ಎಂಬುದನ್ನು ಲೋಹಿಯಾ ಸ್ಪಷ್ಟಪಡಿಸುತ್ತಾರೆ.

‘ಕಾಂಗ್ರೆಸ್ ಹಾಗೂ ನೆಹರು ಅವರ ಸಮಾಜವಾದವು ಕೇವಲ ಬಾಯಿಮಾತಿನದು. ಕಾಂಗ್ರೆಸ್ ಪಕ್ಷವು ಒಳಗೊಳಗೇ ಬಲಪಂಥೀಯ ಧೋರಣೆ ಹೊಂದಿತ್ತು. ಅದು ಉಳ್ಳವರು, ಉಚ್ಚ ಜಾತಿಯವರು ಹಾಗೂ ಇಂಗ್ಲಿಷ್ ಮಾತನಾಡುವ ಜನರ ಪರ’ ಎಂದೂ ಅವರು ಹೇಳುತ್ತಿದ್ದರು.

ಲೋಹಿಯಾ ಅವರು ಕಮ್ಯುನಿಸ್ಟರನ್ನೂ ತಿರಸ್ಕರಿಸಿದ್ದರು. ಮಾಕ್ರ್ಸ್ ಪ್ರಣೀತ ಕಮ್ಯುನಿಸಂ ಪಾಶ್ಚ್ಯಾತ್ಯ ಇತಿಹಾಸದ ನೆಲೆಯಿಂದ ರೂಪುಗೊಂಡಿದ್ದು ಎಂಬ ಆಭಿಪ್ರಾಯ ಅವರದಾಗಿತ್ತು. ಲೋಹಿಯಾ ನಂಬಿದ ಸಮಾಜವಾದವು ಕಮ್ಯುನಿಸಂ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಿಂದ ಸಮಾನದೂರ ಉಳ್ಳದ್ದಾಗಿತ್ತು.

ಸಮಯ ಕಳೆದಂತೆ ಲೋಹಿಯಾರ ಸಮಾಜವಾದವು ಜಾತಿ ವಿರೋಧಿ ನಿಲುವನ್ನು ಹೆಚ್ಚು ಅಪ್ಪಿಕೊಳ್ಳತೊಡಗಿತು. ‘ಜಾತಿ ಬಿಡಿ’ ಎಂಬುದು ಅವರ ಮುಖ್ಯ ಸಂದೇಶವಾಗಿತ್ತು. ಜನಿವಾರ ಹಾಕಿಕೊಳ್ಳುವುದನ್ನು ಬಿಡಬೇಕೆಂಬುದು ಮಾತ್ರವಲ್ಲದೆ ಜಾತಿಸೂಚಕ ಹೆಸರನ್ನು ತ್ಯಜಿಸಬೇಕು ಎಂದು ಪ್ರತಿಪಾದಿಸುತ್ತಿದ್ದ ಅವರು ಜಾತಿ ವಿರೋಧಿ ಆಂದೋಲನವನ್ನೇ ನಡೆಸಿದರು.

ಇಂಗ್ಲಿಷ್‍ನಂತೆ ಕ್ರಿಕೆಟ್ ಆಟವನ್ನೂ ಲೋಹಿಯಾ ಪ್ರಬಲವಾಗಿ ವಿರೋಧಿಸುತ್ತಿದ್ದರು. ಅದೂ ಕೂಡ ಬ್ರಿಟಿಷರ ಬಳುವಳಿ ಎಂಬುದು ಅವರ ಬಲವಾದ ನಂಬುಗೆಯಾಗಿತ್ತು.

ಆದರೆ ಸೋಷಲಿಸ್ಟ್ ಪಾರ್ಟಿಯ ತತ್ತ್ವ, ಸಿದ್ಧಾಂತಗಳು ಜನರ ಮನಸ್ಸಿಗೆ ನಾಟಿದಂತೆ ಕಾಣಲಿಲ್ಲ. ಏಕೆಂದರೆ ಚುನಾವಣೆಯಲ್ಲಿ ಆ ಪಕ್ಷಕ್ಕೆ ಜನಬೆಂಬಲ ಸಿಗಲಿಲ್ಲ. 1952ರ ಚುನಾವಣೆಯಲ್ಲಿ ಜೆಪಿಯವರ ವೈಯಕ್ತಿಕ ಜನಪ್ರಿಯತೆಗೆ ನೆಹರು ಅವರನ್ನು ಸೋಲಿಸುವ ಶಕ್ತಿ ಇದೆ ಎಂಬ ನಂಬಿಕೆ ಹುಸಿಯಾಯಿತು. ಕಾಂಗ್ರೆಸ್ ಪಕ್ಷವು ನಾಲ್ಕನೇ ಮೂರರಷ್ಟು ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಚುನಾವಣಾ ಫಲಿತಾಂಶವು ಸಮಾಜವಾದಿ ಆಂದೋಲನಕ್ಕೆ ಹಾಗೂ ಅದರ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಹುಟ್ಟುಹಾಕಿದವು. ಹಾಗೆಯೇ ಪಕ್ಷದಲ್ಲಿ ಒಡಕುಂಟಾಯಿತು. ಜೆಪಿ ಅವರಂಥ ಕೆಲವರು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದರೆ, ಪಕ್ಷವು ಪ್ರಬಲ ಪ್ರತಿಪಕ್ಷವಾಗಿ ಮುಂದುವರಿಯಬೇಕು ಎಂದು ಲೋಹಿಯಾ ಮತ್ತು ಅವರ ಬೆಂಬಲಿಗರ ನಿಲುವಾಗಿತ್ತು. ಆ ವೇಳೆಗೆ ಪಕ್ಷದ ಹೆಸರು ಪ್ರಜಾ ಸೋಷಲಿಸ್ಟ್ ಪಾರ್ಟಿ ಎಂದಾಗಿತ್ತು. ಭಾರಿ ಭಿನ್ನಾಭಿಪ್ರಾಯದ ಕಾರಣದಿಂದಾಗಿ 1955ರಲ್ಲಿ ಲೋಹಿಯಾ ಅವರು ಹೊರಬಂದು ಮತ್ತೆ ಸೋಷಲಿಷ್ಟ್ ಪಾರ್ಟಿ ಸ್ಥಾಪಿಸಿದರು. ‘ಜೆಪಿ ಹಾಗೂ ಲೋಹಿಯಾ ಅವರು ಹೊದಾಣಿಕೆ ಮಾಡಿಕೊಂಡು ಒಟ್ಟಾಗಿದ್ದಿದ್ದರೆ ದೇಶದ ರಾಜಕಿಯ ಇತಿಹಾಸ ಬೇರೆಯದೇ ಆಗಿರುತ್ತಿತ್ತು’ ಎಂಬುದು ರಾಜಕೀಯ ವಿಶ್ಲೇೀಷಕರ ಅಭಿಪ್ರಾಯ.

‘ಭಾರತದ ಎಡಪಕ್ಷಗಳ ವೈಫಲ್ಯಕ್ಕೆ ಭಾರತೀಯ ಸಂಸ್ಕøತಿ ಹಾಗೂ ಪರಂಪರೆ ಬಗ್ಗೆ ಅದರ ನಾಯಕರಿಗೆ ಅರಿವಿನ ಕೊರತೆಯೇ ಕಾರಣ ಎಂಬುದು ಲೋಹಿಯಾ ಅವರ ಬಲವಾದ ನಂಬಿಕೆಯಾಗಿತ್ತು. ಮೋದಿ ಅವರು ಕೂಡ ಅಧುನಿಕ ಭಾರತ ನಿರ್ಮಾಣದ ಕಲ್ಪನೆಯನ್ನು ಬಿತ್ತ್ತಿ ಅಧಿಕಾರಕ್ಕೆ ಬಂದವರು. ಆದರೆ ಈ ಆಧುನಿಕತೆಯು ಪಾಶ್ಚ್ಯಾತ್ಯರಿಂದ ಆಮದಾದುದು. ಲೋಹಿಯಾ ಅವರು ದೇಸಿ ಆಧುನಿಕತೆಯ ಪ್ರಬಲ ಪ್ರತಿಪಾದಕರಾಗಿದ್ದರು. ಪಾಶ್ಚಾತ್ಯ ಸಂಸ್ಕøತಿಯ ಅನುಕರಣೆ ಆಧುನಿಕತೆ ಅಲ್ಲ ಎಂದು ಅವರು ಸಾರಿ ಹೇಳುತ್ತಿದ್ದರು’ ಎನ್ನುತ್ತಾರೆ ಯೋಗೇಂದ್ರ ಯಾದವ್.

ತಮ್ಮ ಹೊಸ ಪಕ್ಷದಲ್ಲಿ ದಲಿತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೇರಿಸಿಕೊಳ್ಳಬೇಕೆಂದು ಲೋಹಿಯಾ ಶತಾಯ ಗತಾಯ ಪ್ರಯತ್ನಿಸಿದರು. 1955ರ ಡಿಸೆಂಬರ್ 10 ರಂದು ಅಂಬೇಡ್ಕರ್ ಅವರಿಗೆ ಪತ್ರವೊಂದನ್ನು ಬರೆದು ತಾವು ಪ್ರಾರಂಭಿಸಿರುವ ಹೊಸ ಪತ್ರಿಕೆ ‘ಮ್ಯಾನ್‍ಕೈಂಡ್’ ಗೆ ಲೇಖನ ಬರೆಯುವಂತೆ ವಿನಂತಿಸಿದರು. 1956ರ ಸೆಪ್ಟೆಂಬರ್‍ನಲ್ಲಿ ಲೋಹಿಯಾ ಅವರ ಕೆಲವು ಸಹವರ್ತಿಗಳು ಅಂಬೇಡ್ಕರ್ ಅವರನ್ನು ಭೇಟಿ ಮಾಡಿ, ಅವರ ಆಲ್ ಇಂಡಿಯಾ ಶೆಡೂಲ್ಡ್ ಕಾಸ್ಟ್ ಫೆಡರೇಶನ್ ಹಾಗೂ ಸೋಷಲಿಸ್ಟ್ ಪಾರ್ಟಿ ನಡುವೆ ಸಂಭಾವ್ಯ ಮೈತ್ರಿ ಕುರಿತು ಮಾತುಕತೆ ನಡೆಸಿದರು. ಇದಾದ ಬಳಿಕ ಅಂಬೇಡ್ಕರ್ ಅವರು ಲೋಹಿಯಾಗೆ ಪತ್ರವೊಂದನ್ನು ಬರೆದು ತಮ್ಮ ಮುಂದಿನ ದೆಹಲಿ ಪ್ರವಾಸದ ವೇಳೆ ಭೇಟಿ ಮಾಡುವುದಾಗಿ ತಿಳಿಸಿದರು. ಈ ವಿಷಯವನ್ನು ಲೋಹಿಯಾ ಅವರು ತಮ್ಮ ಬೆಂಬಲಿಗರಿಗೆ ತಿಳಿಸಿದರು. ಅಂಬೇಡ್ಕರ್ ಅವರಿಗೆ ಮತ್ತೆ ಪತ್ರ ಬರೆದು, ‘ನಿಮ್ಮ ಆರೋಗ್ಯದ ಬಗ್ಗೆ ಗಮನ ಇರಲಿ’ ಎಂದು ತಿಳಿಸಿದ್ದರು. ಅಕ್ಟೋಬರ್ 5 ರಂದು ಅಂಬೇಡ್ಕರ್ ಅವರಿಗೆ ಮತ್ತೊಂದು ಪತ್ರ ಬರೆದು ಭೇಟಿಯ ದಿನಾಂಕ ನಿಗದಿಪಡಿಸುವಂತೆ ತಿಳಿಸಿದರು. ಆದರೆ ಡಿಸೆಂಬರ್ 6 ರಂದು ಅವರ ಸಾವಿನ ಸುದ್ದಿ ಬಂದಿತು.

ಅದಾದ ಬಳಿಕ ಲೋಹಿಯಾ ‘ತತ್ತ್ವ ಆಧಾರಿತ’ ರಾಜಕಾರಣಕ್ಕೆ ಮುಂದಾದರು. ಮೌಲ್ಯಾಧಾರಿತ ರಾಜಕಾರಣ ಮಾಡುವಂತೆ ತಮ್ಮ ಅನುಯಾಯಿಗಳಿಗೆ ಕರೆ ನೀಡಿದರು. ತಮ್ಮ ಪಕ್ಷ ಸಾರ್ವಜನಿಕರ ದೇಣಿಗೆಯಿಂದಲೇ ನಡೆಯಬೇಕು ಎಂದು ಪ್ರತಿಪಾದಿಸಿದರು. ಇದರಿಂದಾಗಿ ಪಕ್ಷ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಯಿತು. ಆದರೂ ಲೋಹಿಯಾ ತಾವು ನಂಬಿದ ತತ್ತ್ವಗಳಿಂದ ಹಿಂದೆ ಸರಿಯಲಿಲ್ಲ.

1957ರ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತು. ‘ನಾವು ಅಧಿಕಾರಕ್ಕೆ ಬಾರದಿದ್ದರೂ ಪರವಾಗಿಲ್ಲ’ ಎಂದು ತಮ್ಮ ಪತ್ರಿಕೆಯ ಮುಖವಾಣಿಯಲ್ಲಿ ಲೋಹಿಯಾ ಅವರು ಚುನಾವಣೆಯ ಬಳಿಕ ಬರೆದರು. ‘ನಾವು ಸೋತರೂ ನಮ್ಮ ತತ್ತ್ವಾದರ್ಶಗಳಿಂದ ವಿಮುಖರಾಗುವುದು ಬೇಡ. ಅನ್ಯಾಯದ ವಿರುದ್ಧ ಹೋರಾಡಲು ನೂರು ವರ್ಷಗಳ ಕಾರ್ಯಕ್ರಮ ರೂಪಿಸೋಣ’ ಎಂದೂ ಅವರು ಅದರಲ್ಲಿ ತಿಳಿಸಿದರು.

ವೀಲ್ಸ್ ಆಫ್ ಹಿಸ್ಟರಿ ಎಂಬ ಪುಸ್ತಕದಲ್ಲಿ ಲೋಹಿಯಾ ಅವರು ಈ ಕಾರ್ಯಕ್ರಮದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಸಪ್ತ ಕ್ರಾಂತಿಯ ಪ್ರಸ್ತಾಪವನ್ನು ಅದು ಒಳಗೊಂಡಿದೆ. ಆರ್ಥಿಕ ಸಮಾನತೆ ಆಧಾರಿತ ಸಮಾಜ; ಜಾತಿ ಪದ್ಧತಿ ನಿಮೂಲನೆ; ವಿಚಾರ ಸ್ವಾತಂತ್ರ್ಯ; ಮಹಿಳಾ ದಾಸ್ಯಮುಕ್ತಿ; ರಾಷ್ಟ್ರೀಯ ಸ್ವಾತಂತ್ರ್ಯ; ವರ್ಣ ತಾರತಮ್ಯ ನಿವಾರಣೆ ಹಾಗೂ ಯಾವುದೇ ರೀತಿಯ ಒತ್ತಾಯ ಅಥವಾ ಒತ್ತಡ ಇಲ್ಲದಿರುವಿಕೆ ಇವು ಆ ವಿಷಯಗಳು.

ತಮ್ಮ ಪಕ್ಷದ ಬೆಳವಣಿಗೆಯ ವಿಚಾರದಲ್ಲಿ 1960ರ ಹೊತ್ತಿಗೆ ಲೋಹಿಯಾ ಅವರಿಗೆ ಕಾತರ, ಕಳವಳ ಹೆಚ್ಚಾಗತೊಡಗಿತು. ಆದರೂ ತಾವು ನಂಬಿದ ತತ್ತ್ವಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ತಮ್ಮ ಸಹಚರರಿಗೆ ಹೇಳುತ್ತಿದ್ದರು. ಈಗ ಅವರ ಗಮನ ಮಹಿಳಾ ಸಬಲೀಕರಣದತ್ತ ಹೆಚ್ಚಾಗತೊಡಗಿತು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮಹಿಳೆಯರು, ಆದಿವಾಸಿಗಳು, ಶೂದ್ರರು ಹಾಗೂ ದಲಿತರಿಗೆ ಶೇ.60 ಮೀಸಲು ಒದಗಿಸುವುದರ ಕುರಿತು ಮಾತನಾಡತೊಡಗಿದರು.

1962ರಲ್ಲಿ ಮೂರನೇ ಸಾರ್ವತ್ರಿಕ ಚುನಾವಣೆ ಬಂತು. ಗ್ವಾಲಿಯರ್ ಸಂಸ್ಥಾನದ ವಿಜಯರಾಜೇ ಸಿಂಧಿಯಾ ವಿರುದ್ಧ ದಲಿತ ಮಹಿಳೆಯನ್ನು ನಿಲ್ಲಿಸಿದರು. ಅಲ್ಲದೆ ನೆಹರು ವಿರುದ್ಧ ಸ್ವತಃ ಸ್ಪರ್ಧಿಸಿದರು. ಆದರೆ ಮತ್ತದೇ ನಿರಾಶಾದಾಯಕ ಫಲಿತಾಂಶ. ಈ ಬಾರಿ ಪಕ್ಷಕ್ಕೆ ದೊರಕಿದ್ದು ಕೇವಲ ಆರು ಸ್ಥಾನ. ಲೋಹಿಯಾ ಮತ್ತು ದಲಿತ ಮಹಿಳೆ ಇಬ್ಬರೂ ದೊಡ್ಡ ಮತಗಳ ಅಂತರದಿಂದ ಪರಾಭವಗೊಂಡರು.

ಇದೇ ವೇಳೆ, ಬಹುತೇಕ ಕಾಂಗ್ರೆಸ್ ಪರವಾಗಿದ್ದ ಮಾಧ್ಯಮ ಹಾಗೂ ಬುದ್ಧಿಜೀವಿಗಳ ವರ್ಗ ಲೋಹಿಯಾ ಅವರನ್ನು ಟೀಕಿಸಿದವು. ಇಂಗ್ಲಿಷ್ ಭಾಷೆಯನ್ನು ವಿರೋಧಿಸಿದ್ದಕ್ಕಾಗಿ, ‘ಸಾಂಸ್ಕøತಿಕ ದುರಭಿಮಾನಿ’ ಎಂದು ಜರಿದವು. ನೆಹರು ಮೇಲಿನ ದ್ವೇಷ ಹಾಗೂ ಅವರನ್ನು ಟೀಕಿಸುವುದು ಒಂದು ವ್ಯಾಧಿ ಎಂದು ಹಳಿದವು. ಆದ್ದರಿಂದ, ‘ಫೂಲ್‍ಪುರದಲ್ಲಿ ಲೋಹಿಯಾಗೆ ಆದ ಸೋಲು ನೆಹರು ವಿರುದ್ಧ ಬಾಯಿ ಹರಿದುಕೊಂಡು ನಡೆಸಿದ ನಕಾರಾತ್ಮಕ ಹೋರಾಟದ ಪರಿಣಾಮ’ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಬರೆಯಲಾಗಿತ್ತು.

ಆ ಕಾಲದಲ್ಲಿ ಪ್ರಭಾವಿಯಾಗಿದ್ದ ನೆಹರು ಹಾಗೂ ಮಾಕ್ರ್ಸ್‍ವಾದಿ ಬುದ್ಧಿಜೀವಿವರ್ಗಗಳು ಲೋಹಿಯಾ ಸುತ್ತ ‘ಮೌನದ ಕೋಟೆಯೊಂದನ್ನು ಹೇಗೆ ಕಟ್ಟಿದ್ದವು’ ಎಂಬುದನ್ನು ಯೋಗೇಂದ್ರ ಯಾದವ್ ಅವರು ಲೇಖನವೊದರಲ್ಲಿ ಬರೆದಿದ್ದಾರೆ. ಲೋಹಿಯಾ ಬಗ್ಗೆ ಏನನ್ನೂ ಓದದೇ ಅಥವಾ ತಿಳಿದುಕೊಳ್ಳದೇ ಹೀಗೆ ಅವರ ಧ್ವನಿ ಅಡಗಿಸಿದ್ದು ದುರಂತ ಎಂದೂ ಅವರು ವಿವರಿಸಿದ್ದಾರೆ.

ಅಧಿಕಾರಕ್ಕೆ ಬರುವುದು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿ ಹೋಗಿದೆ ಎಂಬುದನ್ನು ಮೂರನೇ ಚುನಾವಣೆ ಫಲಿತಾಂಶದ ಬಳಿಕ ಮನಗಂಡ ಲೋಹಿಯಾ, ಯಾವುದೇ ಒಂದು ರಾಜಕೀಯ ಪಕ್ಷವು ಕಾಂಗ್ರೆಸ್ ವಿರುದ್ಧ ಗೆಲ್ಲುವುದು ಅಸಾಧ್ಯ. ಹೀಗಾಗಿ ಪ್ರತಿಪಕ್ಷಗಳು ಒಗ್ಗೂಡಬೇಕು ಎಂದು ಪ್ರತಿಪಾದಿಸಿದರು.

ರಾಜಕಾರಣದ ಮುಖ್ಯವಾಹಿನಿಯಲ್ಲಿ ಕಾರಣಾಂತರಗಳಿಂದ ತಿರಸ್ಕøತರಾದರೂ ಲೋಹಿಯಾ ಅವರು ದೇಶದ ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ ಕಲೆ ಮತ್ತು ಸಾಹಿತ್ಯ ವಲಯದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರು ರಾಮ, ಶಿವ ಸಾವಿತ್ರಿ ಎಲ್ಲರ ಬಗ್ಗೆ ಬರೆದರು. ಹಾಗೆಯೇ ರಾಜಕೀಯ ಮೌಲ್ಯಗಳ ಅಧಃಪತನದ ಬಗೆಗೆ ಹೊಂದಿದ್ದಷ್ಟೇ ದುಃಖ ದುಮ್ಮಾನ ದುಗುಡವನ್ನು ಗಂಗಾ ನದಿಯ ದುರ್ಬಳಕೆಯ ಕುರಿತೂ ಹೊಂದಿದ್ದರು. ಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಅವರ ರಾಮಾಯಣ, ಮಹಾಭಾರತ ಕಲಾಕೃತಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಅವರು ಅವುಗಳನ್ನು ರಚಿಸಿದ್ದು ಲೋಹಿಯಾ ಒತ್ತಾಸೆಯ ಮೇಲೆ ಎಂಬ ಸಂಗತಿ ಅನೇಕರಿಗೆ ತಿಳಿದೇ ಇಲ್ಲ. ‘ಬಿರ್ಲಾ, ಟಾಟಾ ಅವರಂಥವರ ಮನೆಗಳ ಗೋಡೆಗಳನ್ನಷ್ಟೇ ಅಲಂಕರಿಸುತ್ತಿದ್ದ ನನ್ನ ಪೇಂಟಿಂಗ್‍ಗಳು ಅಲ್ಲಿಂದ ಆಚೆ ಸಾರ್ವಜನಿಕರ ಸುಪರ್ದಿಗೆ ಬರಲು ಲೋಹಿಯಾ ಅವರೇ ಕಾರಣ’ ಎಂದು ಸ್ವತಃ ಹುಸೇನ್ ಅವರೇ ತಿಳಿಸಿದ್ದಾರೆ. ಅದೇ ರೀತಿ ತಮ್ಮ ಆರಂಭಿಕ ಬರಹಗಳ ಮೇಲೆ ಲೋಹಿಯಾ ಪ್ರಭಾವ ಸಾಕಷ್ಟಿದೆ ಎಂದು ಖ್ಯಾತ ಸಾಹಿತಿ ಅಶೋಕ್ ವಾಜಪೇಯಿ ಕೂಡ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದಾದ್ಯಂತ ಅಸಂಖ್ಯಾತ ಬರಹಗಾರರು ಹಾಗೂ ಕಲಾವಿದರು ಲೋಹಿಯಾ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದೂ ಅವರು ವಿವರಿಸುತ್ತಾರೆ. ಕನ್ನಡದ ಹೆಸರಾಂತ ಸಾಹಿತಿಗಳಾದ ಯು.ಆರ್.ಅನಂತಮೂತಿ, ದೇವನೂರ ಮಹಾದೇವ ಮೊದಲಾದವರೂ ಲೋಹಿಯಾ ಪ್ರಭಾವಕ್ಕೊಳಗಾದವರೇ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಲೋಹಿಯಾ ಪ್ರಭಾವ ಕುರಿತು ಚಂದನ್‍ಗೌಡ ಅವರು ವಿವರಿಸಿದ್ದಾರೆ. ಆಲ್ಬರ್ಟ್ ಐನ್‍ಸ್ಟಿನ್, ಪರ್ಲ್ ಎಸ್ ಬಕ್ ಮೊದಲಾದವರೊಡನೆ ಲೋಹಿಯಾ ಒಡನಾಟ ಇಟ್ಟುಕೊಂಡಿದ್ದರು.

ಹೀಗೆ 1967ರ ಚುನಾವಣೆಯು ಹಲವು ಬದಲಾವಣೆಗೆ ಕಾರಣವಾಯಿತು. ದೇಶವು ಮೊದಲ ಬಾರಿಗೆ ಬಹುಪಕ್ಷೀಯ ಪ್ರಜಾಸತ್ತೆಗೆ ಸಾಕ್ಷಿಯಾಯಿತು. ಶೂದ್ರರು ಹಾಗೂ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಲೋಹಿಯಾ ತಂತ್ರ ಫಲನೀಡಿತು.

ಸಾಹಿತಿಗಳು ಮತ್ತು ಕಲಾವಿದರೊಡನೆಯ ಸಂವಾದದಿಂದ ತಮ್ಮ ವಿಚಾರಧಾರೆ ಹಾಗೂ ಅಭಿಪ್ರಾಯಗಳನ್ನು ಹರಿತಗೊಳಿಸಿಕೊಳ್ಳುತ್ತಿದ್ದರು. ಉದಾಹರಣೆಗೆ, ಇಂಗ್ಲಿಷ್ ಭಾಷೆಗೆ ವಿರೋಧ ವಿಷಯದಲ್ಲಿ ಅನಂತಮೂರ್ತಿ ಅವರು ಲೋಹಿಯಾ ಜತೆ ತೀವ್ರ ವಾಗ್ವಾದಕ್ಕಿಳಿಯುತ್ತಿದ್ದರು. ‘ಹಿಂದಿ ಭಾಷೆಯ ಪರವಾಗಿ ಇಂಗ್ಲಿಷ್ ವಿರುದ್ಧದ ಹೋರಾಟವು ಇತರ ಭಾರತೀಯ ಭಾಷೆಗಳಿಗೆ ಮಾರಕವಾಗುತ್ತದೆ ಎಂಬುದನ್ನು ಈ ರೀತಿ ಸಂವಾದಗಳ ಬಳಿಕ ಲೊಹಿಯಾ ಮನಗಂಡರು’ ಎನ್ನುತ್ತಾರೆ ವಾಜಪೇಯಿ.

ಇಂಗ್ಲಿಷ್‍ನಂತೆ ಕ್ರಿಕೆಟ್ ಆಟವನ್ನೂ ಲೋಹಿಯಾ ಪ್ರಬಲವಾಗಿ ವಿರೋಧಿಸುತ್ತಿದ್ದರು. ಅದೂ ಕೂಡ ಬ್ರಿಟಿಷರ ಬಳುವಳಿ ಎಂಬುದು ಅವರ ಬಲವಾದ ನಂಬುಗೆಯಾಗಿತ್ತು. ಈ ಕುರಿತು ರಾಮಚಂದ್ರ ಗುಹಾ ಅವರು ತಮ್ಮ ಪುಸ್ತಕವೊಂದರಲ್ಲಿ ಹೀಗೆ ಬರೆಯುತ್ತಾರೆ. ‘1960ರಲ್ಲಿ ಬಾಂಬೆಯ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಆಗ ಅಲ್ಲಿಗೆ ಬಂದಿದ್ದ ಲೋಹಿಯಾ, ಪತ್ರಕರ್ತರು ಹಾಗು ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತ ನೆಹರು, ಇಂಗ್ಲಿಷ್ ಹಾಗೂ ಕ್ರಿಕೆಟ್ ಬಗ್ಗೆ ಕಿಡಿ ಕಾರಿದರು. ದೇಸಿ ಕ್ರೀಡೆ ಕಬಡ್ಡಿ ಪರ ಪ್ರಬಲ ವಾದ ಮಂಡಿಸಿದರು. ಆದರೆ ಸಭೆಯ ಬಳಿಕ ಸಮೀಪದ ಪಾನ್ ಅಂಗಡಿಗೆ ಹೋದ ಅವರು ಪಾನ್ ಮೆಲ್ಲುತ್ತ, ‘ಹನೀಫ್ ಮೊಹಮ್ಮದ್ ಇನ್ನೂ ಬ್ಯಾಟ್ ಮಾಡುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದರು. ಅಂದರೆ ಅವರದು ವಿರೋಧಕ್ಕಾಗಿ ವಿರೋಧ ಮನೋಭಾವವಲ್ಲ. ಬದಲಾಗಿ ಅದರ ಹಿಂದೆ ಒಂದು ಉದ್ದೇಶ ಇರುತ್ತದೆ ಎಂಬುದಕ್ಕೆ ಈ ನಿದರ್ಶನ ಸಾಕ್ಷಿ.

‘ಭಾರತದ ಎಡಪಕ್ಷಗಳ ವೈಫಲ್ಯಕ್ಕೆ ಭಾರತೀಯ ಸಂಸ್ಕøತಿ ಹಾಗೂ ಪರಂಪರೆ ಬಗ್ಗೆ ಅದರ ನಾಯಕರಿಗೆ ಅರಿವಿನ ಕೊರತೆಯೇ ಕಾರಣ ಎಂಬುದು ಲೋಹಿಯಾ ಅವರ ಬಲವಾದ ನಂಬಿಕೆಯಾಗಿತ್ತು. ಮೋದಿ ಅವರು ಕೂಡ ಅಧುನಿಕ ಭಾರತ ನಿರ್ಮಾಣದ ಕಲ್ಪನೆಯನ್ನು ಬಿತ್ತ್ತಿ ಅಧಿಕಾರಕ್ಕೆ ಬಂದವರು. ಆದರೆ ಈ ಆಧುನಿಕತೆಯು ಪಾಶ್ಚ್ಯಾತ್ಯರಿಂದ ಆಮದಾದುದು. ಲೋಹಿಯಾ ಅವರು ದೇಸಿ ಆಧುನಿಕತೆಯ ಪ್ರಬಲ ಪ್ರತಿಪಾದಕರಾಗಿದ್ದರು. ಪಾಶ್ಚಾತ್ಯ ಸಂಸ್ಕøತಿಯ ಅನುಕರಣೆ ಆಧುನಿಕತೆ ಅಲ್ಲ ಎಂದು ಅವರು ಸಾರಿ ಹೇಳುತ್ತಿದ್ದರು’ ಎನ್ನುತ್ತಾರೆ ಯೋಗೇಂದ್ರ ಯಾದವ್.

ದೇಶದ ವೈವಿಧ್ಯಮಯ ಸಾಮಾಜಿಕ, ಸಾಂಸ್ಕøತಿಕ ಹಾಗೂ ರಾಜಕೀಯ ಪರಂಪರೆಯನ್ನು ಆಚರಿಸಬೇಕು ಹಾಗು ಪಸರಿಸಬೇಕು ಎನ್ನುತ್ತಿದ್ದ ಲೋಹಿಯಾ, ರಾಮಾಯಣ ಮೇಳ ಆಯೋಜಿಸಲು ಉತ್ಸುಕರಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ‘ನೈಲ್ ನದಿಯ ಬಗ್ಗೆ ಎಮಿಲ್ ಲುಡ್ವಿಗ್ ಅವರು ಅಷ್ಟೊಂದು ಆಪ್ತವಾಗಿ ಬರೆಯಲು ಸಾಧ್ಯವಾಗುವುದಾದರೆ ಗಂಗೆಯ ಕುರಿತು ಬರೆಯಲು ನಮಗೇಕೆ ಆಗುವುದಿಲ್ಲ?’ ಎಂದು ಪ್ರಶ್ನಿಸುತ್ತಾರೆ.

ಬರಿ ರಾಜಕೀಯ, ಕಲೆ, ಸಂಸ್ಕøತಿ, ದೇಸೀಯತೆ ಇವುಗಳ ಬಗೆಗೆ ಮಾತ್ರ ಲೋಹಿಯಾಗೆ ಆಸ್ಥೆ, ಆಸಕ್ತಿ ಇತ್ತು ಎಂದೇನೂ ಅಲ್ಲ. ಪ್ರೀತಿ, ಪ್ರೇಮ, ಪ್ರಣಯ, ಮಾನವ ಸಂಬಂಧ ಕುರಿತೂ ಅವರು ಬಹಳ ಭಾವುಕರಾಗಿದ್ದರು. ಅಲ್ಲದೆ ಇದನ್ನು ಅವರು ಗುಪ್ತವಾಗೇನೂ ಇರಿಸುತ್ತಿರಲಿಲ್ಲ. ಎಲ್ಲವೂ ಮುಕ್ತ ಮುಕ್ತ. ಆ ಸಂದರ್ಭದಲ್ಲಿ ಅವರು ರಮಾ ಮಿತ್ರಾ ಜೊತೆ ಮದುವೆ ಇಲ್ಲದೆಯೇ ಸಹಜೀವನ ನಡೆಸುತ್ತಿದ್ದರು. ಅವರಿಗೆ ಬರೆಯುತ್ತಿದ್ದ ಪತ್ರಗಳಲ್ಲಿ ಇವೆಲ್ಲ ಢಾಳಾಗಿ ಗೋಚರಿಸುತ್ತವೆ. ಅವೆಲ್ಲ ಬಿಡುಬೀಸಾಗಿರುತ್ತಿದ್ದವು ಹಾಗೂ ಹಾಗಾಗೇ ಬಹಿರಂಗಗೊಳ್ಳುತ್ತಿದ್ದವು. ಪ್ರೀತಿ ಪ್ರೇಮದ ವಿಷಯದಲ್ಲಿ ಯಾವ ಸಾಮಾನ್ಯ ಮನುಷ್ಯನಿಗಿಂತ ತಾವೇನೂ ಕಡಿಮೆ ಇಲ್ಲ ಎನ್ನುವಂತಿತ್ತು ಅವರ ವರ್ತನೆ. ಸಂಗಾತಿಯೊಡನೆಯ ಸರಸ, ವಿರಸ, ಜಗಳ ಅಸೂಯೆ ಇತ್ಯಾದಿ ಎಲ್ಲವೂ ಅಲ್ಲಿದ್ದವು.

ಇವೆಲ್ಲದರ ನಡುವೆಯೂ ಸೋಷಲಿಸ್ಟ್ ಪಾರ್ಟಿಯ ಹೋರಾಟ ಮುಂದುವರಿಯಲೇಬೇಕು ಎನ್ನುತ್ತಿದ್ದ ಲೋಹಿಯಾಗೆ ಬರಬರುತ್ತ ತಮ್ಮ ಕೈ ಸೋಲುತ್ತಿದೆಯೇನೋ ಎಂಬ ಭಾವನೆ ಇಣುಕುತ್ತಿತ್ತು. ರಾಜಕಾರಣಿಯಾಗಿ ತಾವು ವಿಫಲರಾಗಿರುವುದಾಗಿ ಒಂದೊಮ್ಮೆ ರಮಾ ಮಿತ್ರಾಗೆ ಬರೆದ ಪತ್ರದಲ್ಲಿ ಅಲವತ್ತುಕೊಂಡಿದ್ದ ಲೋಹಿಯಾ, ಬರಹಗಾರನಾಗಿಯೂ ತನಗೆ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ ಎಂದು ಬೇಸರಿಸಿಕೊಂಡಿದ್ದುಂಟು.

‘1962ರ ಚುನಾವಣೆಯ ಸೋಲಿನ ನಂತರ ಅವರು ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಬದಲಾಯಿಸಕೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿದರಲ್ಲದೆ ಆ ನಿಟ್ಟಿನಲ್ಲಿ ಗಂಭೀರ ಹೆಜ್ಜೆ ಇಡತೊಡಗಿದರು. 1960ರ ಮೊದಲು ಪಕ್ಷದ ಸಿದ್ಧಾಂತ ಕುರಿತಂತೆ ರಾಜಿಗೆ ಬಿಲ್‍ಕುಲ್ ಒಪ್ಪುತ್ತಿರಲಿಲ್ಲ. ಆದರೆ ಅಧಿಕಾರಕ್ಕೆ ಬರುವುದು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿ ಹೋಗಿದೆ ಎಂಬುದನ್ನು ಮೂರನೇ ಚುನಾವಣೆ ಫಲಿತಾಂಶದ ಬಳಿಕ ಮನಗಂಡ ಲೋಹಿಯಾ, ಯಾವುದೇ ಒಂದು ರಾಜಕೀಯ ಪಕ್ಷವು ಕಾಂಗ್ರೆಸ್ ವಿರುದ್ಧ ಗೆಲ್ಲುವುದು ಅಸಾಧ್ಯ. ಹೀಗಾಗಿ ಪ್ರತಿಪಕ್ಷಗಳು ಒಗ್ಗೂಡಬೇಕು ಎಂದು ಪ್ರತಿಪಾದಿಸಿದರು. ಆಡಳಿತದ ಮೇಲೆ ಇರುವ ಹಿಡಿತ ಹಾಗೂ ದೇಶದ ಎಲ್ಲ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಪಕ್ಷ ಹೊಂದಿರುವ ನಿಯಂತ್ರಣದ ಪರಿಣಾಮವಾಗಿ ಕಾಂಗ್ರೆಸ್ಸೇತರ ಪಕ್ಷಗಳಿಗೆ ಅದನ್ನು ಮಣಿಸುವುದು ದುಸ್ತರವಾಗಿದೆ ಎಂಬುದು ಸ್ಪಷ್ಟವಾಗಿತ್ತು.

ಸಮ್ಮಿಶ್ರ ಸರಕಾರದ ಯುಗದಲ್ಲಿ ಸಮಾಜವಾದಿಗಳು ಸಂಪೂರ್ಣವಾಗಿ ಹೇಳಹೆಸರಿಲ್ಲದಂತಾದರು. ಆ ಪಕ್ಷಗಳು ಜಾತಿ ಆಧಾರದಲ್ಲಿ ಹತ್ತು ಹಲವು ಪ್ರಾದೇಶಿಕ ಶಕ್ತಿಗಳಾಗಿ ಹರಿದು ಹಂಚಿಹೋದವು. ಲೋಹಿಯಾ ಅವರ ಅನುಯಾಯಿಯಾಗಿದ್ದ ಲಾಲು ಯಾದವ್ ಹಾಗು ಮುಲಾಯಂ ಯಾದವ್ ಅವರು ಈಗಲೂ ಲೋಹಿಯಾ ಮಂತ್ರವನ್ನು ಪಠಿಸುತ್ತಾರಾದರೂ ಅವರ ತತ್ತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ನಿರಂತರ ಆಡಳಿತ ಹಾಗೂ ಪಕ್ಷದ ಮೇಲೆ ನೆಹರು ಮನೆತನದ ನಿರಂಕುಶ ಹಿಡಿತದಿಂದ ಹತಾಶರಾದ ಲೋಹಿಯಾ, ಈ ಸಮಸ್ಯೆ ನಿವಾರಣೆಗಾಗಿ ಹೊಸ ಮಾರ್ಗೋಪಾಯಗಳ ಹುಡುಕಾಟ ಆರಂಭಿಸಿದರು. ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಮುಖ ಪ್ರತಿಪಕ್ಷಗಳು ಒಂದಾಗುವುದೊಂದೇ ಈಗ ಉಳಿದಿರು ಏಕೈಕ ಉಪಾಯ ಎಂದು ಭಾವಿಸಿದರು’ ಎಂದು ಲಿಮಯೆ ಬರೆದಿದ್ದಾರೆ.

1967ರ ಲೋಹಿಯಾ ಪ್ರಯೋಗವು ಅಂತಿಮವಾಗಿ ವಿಫಲವಾದರೂ ಅದು ದೇಶದ ರಾಜಕೀಯ ಪರಿಸ್ಥಿತಿ ಮೇಲೆ ದೂರಗಾಮಿ ಪರಿಣಾಮ ಉಂಟುಮಾಡಿತು. ಅದು ಸಮ್ಮಿಶ್ರ ಸರಕಾರದ ಯುಗಕ್ಕೆ ನಾಂದಿ ಹಾಡಿತು. ಹಾಗೆಯೇ ಪಕ್ಷಾಂತರ ಸಂಸ್ಕøತಿ ಪ್ರಾರಂಭಕ್ಕೂ ಕಾರಣವಾಯಿತು.

1962ರ ಚುನಾವಣೆಯಲ್ಲಿ ಕಮ್ಯುನಿಸ್ಟರು ಹಾಗೂ ಜನಸಂಘಕ್ಕೆ ದೊರೆತ ಅಲ್ಪ ಯಶಸ್ಸಿನ ಕಾರಣಗಳನ್ನು ಲೋಹಿಯಾ ವಿಶ್ಲೇಷಿಸಿದರು. ಕಮ್ಯುನಿಸ್ಟರ ಕ್ರಾಂತಿಕಾರಿ ಕಿಚ್ಚು ಹಾಗೂ ಜನಸಂಘದ ರಾಷ್ಟ್ರೀಯತೆಯ ಕೆಚ್ಚು ಇವೆರಡನ್ನೂ ಸಮ್ಮಿಳಿತಗೊಳಿಸಿದರೆ ಹೇಗೆಂಬ ಆಲೋಚನೆ ಹೊಳೆಯಿತು. ಇವುಗಳ ಜೊತೆಗೆ ಪ್ರಜಾ ಸೋಷಲಿಸ್ಟ್ ಪಾರ್ಟಿ ಮತ್ತು ಸ್ವತಂತ್ರ ಪಾರ್ಟಿಗಳನ್ನು ಸಂಪರ್ಕಿಸಿ ಕಾಂಗ್ರೆಸ್ಸೇತರ ಪಕ್ಷಗಳ ನಡುವಿನ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದರು. ಇದಕ್ಕನುಗುಣವಾಗಿ ಅವರ ರಾಜಕೀಯ ದೃಷ್ಟಿಕೋನವೂ ಬದಲಾಯಿತು. ಜನಸಂಘವನ್ನು ಅದುವರೆಗೆ ತೆಗಳುತ್ತಿದ್ದ ಅವರು ಇದೀಗ ಆ ಪಕ್ಷದಲ್ಲಿನ ಉತ್ತಮ ಅಂಶಗಳ ಕುರಿತು ಮಾತನಾಡತೊಡಗಿದರು.

ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಏಕೈಕ ಮಾರ್ಗವೆಂದರೆ ಪ್ರತಿಪಕ್ಷಗಳ ಏಕತೆ ಎಂದು ನಿರ್ಧರಿಸಿದ ಲೋಹಿಯಾ, ಚುನಾವಣಾಪೂರ್ವ ಮೈತ್ರಿ ಮೂಲಕ ಪ್ರತಿಪಕ್ಷ ಮತಗಳನ್ನು ಕ್ರೋಡೀಕರಣಗೊಳಿಸುವ ತಂತ್ರ ರೂಪಿಸಿದರು. 1963ರ ಉಪಚುನಾವಣೆಯಲ್ಲಿ ಇದನ್ನು ಮೊದಲ ಸಲ ಒರೆಗೆ ಹಚ್ಚಿದರು. ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಯಿತು. ಮಸಾನಿ, ಕೃಪಲಾನಿ ಹಾಗೂ ಲೋಹಿಯಾ ಗೆಲುವು ಸಾಧಿಸಿದರು.

1966ರಲ್ಲಿ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಮೂರಂಶಗಳ ಸೂತ್ರವನ್ನು ಲೋಹಿಯಾ ಮುಂದಿಟ್ಟರು. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಅದು ಹೆಚ್ಚಿನ ಯಶಸ್ಸನ್ನು ಕಾಣಲಿಲ್ಲ. ಆದರೆ ಈ ರೀತಿಯ ಭೇದಗಳನ್ನು ಮರೆತು ಕನಿಷ್ಠ ಕಾರ್ಯಕ್ರಮದಡಿ ಒಂದಾಗಬೇಕೆಂದು ಲೋಹಿಯಾ ಕರೆನೀಡಿದರು. 1967ರ ಚುನಾವಣೆಯಲ್ಲೂ ಇದು ಫಲಿಸಲಿಲ್ಲ. ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಆದರೆ ಪ್ರಾದೇಶಿಕ ಮಟ್ಟದಲ್ಲಿ ಅಲ್ಲಲ್ಲಿ ಮೈತ್ರಿ ಏರ್ಪಟ್ಟಿತಷ್ಟೇ.

ಚುನಾವಣೆ ಫಲಿತಾಂಶ ಬಂದಾಗ ಪ್ರತಿಪಕ್ಷಗಳ ಅನೇಕ ನಾಯಕರಿಗೆ ಅಚ್ಚರಿಯಾಗಿತ್ತು. ಲೋಹಿಯಾ ಪ್ರಯೋಗ ಸ್ವಲ್ಪಮಟ್ಟಿಗೆ ಕೆಲಸ ಮಾಡಿತ್ತು. ಅವರೂ ಸೇರಿದಂತೆ ಅವರ ಎಸ್‍ಎಸ್‍ಪಿ ಪಕ್ಷ 23 ಸ್ಥಾನಗಳನ್ನು ಗಳಿಸಿತ್ತು. ಆದರೆ ಬಿಹಾರ ಮತ್ತು ಉತ್ತರಪ್ರದೇಶ ವಿಧಾನಸಭೆಗಳಲ್ಲಿ ಉತ್ತಮ ಸಾಧನೆ ಮಾಡಿತು. ಅಲ್ಲಿ ಬಹುಮತ ಗಳಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ. ಬದ್ಧ ರಾಜಕೀಯ ವೈರಿಗಳೆನಿಸಿದ್ದ ಸಿಪಿಐ ಹಾಗೂ ಜನಸಂಘ ಪಕ್ಷಗಳೂ ಕೂಡ ಎಸ್‍ಎಸ್‍ಪಿ ಜತೆ ಸೇರಿ ಸಮ್ಮಿಶ್ರ ಸರಕಾರದ ಪಾಲುದಾರರಾದವು. ಬಿಹಾರದಲ್ಲಿ ಇತರ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿದ್ದರಿಂದ ಅದರ ಲಾಭ ದೊರೆಯಿತು. ಲೋಹಿಯಾ ಅವರ ನಿಕಟವರ್ತಿ ಕರ್ಪೂರಿ ಠಾಕೂರ್ ಉಪಮುಖ್ಯಮಂತ್ರಿಯಾದರು.

ಹೀಗೆ 1967ರ ಚುನಾವಣೆಯು ಹಲವು ಬದಲಾವಣೆಗೆ ಕಾರಣವಾಯಿತು. ದೇಶವು ಮೊದಲ ಬಾರಿಗೆ ಬಹುಪಕ್ಷೀಯ ಪ್ರಜಾಸತ್ತೆಗೆ ಸಾಕ್ಷಿಯಾಯಿತು. ಶೂದ್ರರು ಹಾಗೂ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಲೋಹಿಯಾ ತಂತ್ರ ಫಲನೀಡಿತು. ಇದರೊಂದಿಗೆ ದೇಶದ ರಾಜಕಾರಣವು ಬಹುತ್ವ ಹಾಗೂ ವೈವಿಧ್ಯವನ್ನು ಅಪ್ಪಿ ಒಪ್ಪಿಕೊಳ್ಳುವಂತಾಯಿತು. ಕಾಂಗ್ರೆಸ್ ಪಕ್ಷ ಬಹುಮತ ಉಳಿಸಿಕೊಂಡಿತಾದರೂ 520 ಸ್ಥಾನಗಳ ಪೈಕಿ 283 ಸೀಟುಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಇದರೊಂದಿಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯಕ್ಕೆ ಧಕ್ಕೆ ಉಂಟಾಯಿತು. ಹಾಗೆಯೇ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಇರುವನ್ನು ಸ್ಥಾಪಿಸುವಂತಾಯಿತು.

ಪ್ರಮುಖ ಪ್ರತಿಪಕ್ಷಗಳು ಏನೇ ಹೇಳಿದರೂ ಅವು ಲೋಹಿಯಾ ಅವರಿಂದ ಏನನ್ನೂ ಕಲಿತಿಲ್ಲ ಎಂಬ ಮೋದಿ ಹೇಳಿಕೆಯಂತೂ ಸರಿ.

ಒಟ್ಟಾರೆಯಾಗಿ ಈ ಚುನಾವಣೆಯ ಫಲಿತಾಂಶವು ಲೋಹಿಯಾಗೆ ತೃಪ್ತಿ ತಂದಿತು. ಮೊದಲ ಬಾರಿಗೆ ಹೊಸ ಆಶಾಕಿರಣ ಗೋಚರಿಸಿತು. ‘ಅಧಿಕಾರ ಲಾಲಸೆ, ಭ್ರಷ್ಟಾಚಾರ ಹಾಗೂ ಲೈಸನ್ಸ್‍ರಾಜ್ ವ್ಯವಸ್ಥೆ ಕೊನೆಗೊಂಡು ಸರಳತೆ ಮತ್ತು ಕರ್ತವ್ಯನಿಷ್ಠೆಯಿಂದ ಕೂಡಿದ ಆಡಳಿತದ ದಿನಗಳ ಆರಂಭದ ಸೂಚನೆಗಳು ಗೋಚರಿಸುತ್ತಿವೆ’ ಎಂದು ಅವರು ಹುರುಪಿನಿಂದ ಪ್ರತಿಕ್ರಿಯಿಸಿದರು.

ಆದರೆ ಅವರ ನಿರೀಕ್ಷೆ ಹಾಗೂ ಎಣಿಕೆ ತಪ್ಪಾಗಿತ್ತು. ಆಶಾಗೋಪುರ ತಡವಿಲ್ಲದೆ ಕುಸಿದಿತ್ತು. ಅಧಿಕಾರದ ರುಚಿ ತಮ್ಮ ಪಕ್ಷದ ಸಿಪಾಯಿಗಳನ್ನು ಹೇಗೆ ಬಲುಬೇಗ ಭ್ರಷ್ಟರನ್ನಾಗಿಸಿದೆ ಎಂಬುದನ್ನು ಕಂಡು ಮಮ್ಮಲ ಮರುಗಿದರು. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಲು ಸಾಧ್ಯವಾಗಲಿಲ್ಲ.

ಬಿಂದೇಶ್ವರಿ ಪ್ರಸಾದ್ ಮಂಡಲ್ ಪ್ರಕರಣ ಇದಕ್ಕೆ ಸೊಗಸಾದ ಉದಾಹರಣೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾರಣ ಅಲ್ಲಿಗೇ ಹೋಗುವಂತೆ ಲೋಹಿಯಾ ಸೂಚಿಸಿದರೂ ನಾನಾ ನೆಪವೊಡ್ಡಿ ಅವರು ವಿಧಾನಸಭೆಯಲ್ಲೇ ಉಳಿದರು. ಮಂಡಲ್ ಸೇರಿದಂತೆ ಹಲವರು ಜಾತಿ ರಾಜಕಾರಣಕ್ಕೆ ಇಳಿದು, ಲೋಹಿಯಾ ಬೋಧಿಸಿದ ಜಾತಿರಹಿತ ರಾಜಕಾರಣದ ತತ್ತ್ವಕ್ಕೆ ತಿಲಾಂಜಲಿ ನೀಡಿದರು. ಲೋಹಿಯಾ ಸಿದ್ಧಾಂತವನ್ನು ‘ಮಾರವಾಡಿ ಸಮಾಜ’ ಎಂದು ಹಳಿದರು.

ಇತ್ತ, ಅದೇ ವರ್ಷದ ಸೆಪ್ಟೆಂಬರ್ 30 ರಂದು ಲೋಹಿಯಾ ಅನಾರೋಗ್ಯಕ್ಕೀಡಾಗಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಆದರೆ ಆಪರೇಶನ್ ನಂತರ ಉಂಟಾದ ಸಮಸ್ಯೆಗಳಿಂದಾಗಿ 1967ರ ಅಕ್ಟೋಬರ್ 12 ರಂದು ನಿಧನರಾದರು.

ಮಂಡಲ್ ಅವರು ಕಾಂಗ್ರೆಸ್ ನೆರವಿನೊಂದಿಗೆ ಬಿಹಾರ ಸರಕಾರವನ್ನು ಉರುಳಿಸಿದರು. ಇತರ ರಾಜ್ಯಗಳಲ್ಲೂ ಅದೇ ಗತಿಯಾಯಿತು. ‘ಕೆಲವೊಮ್ಮೆ ಲೋಹಿಯಾ ಅವರು ವಾಸ್ತವಿಕ ದೃಷ್ಟಿಕೋನದಿಂದ ಕೆಲಸ ಮಾಡದೇ ಇದ್ದುದರಿಂದ ಅವರ ಪ್ರಯೋಗ ವಿಫಲವಾಯಿತು’ ಎಂದು ಲಿಮಯೆ ಹೇಳಿದ್ದಾರೆ.

*

1967ರ ಲೋಹಿಯಾ ಪ್ರಯೋಗವು ಅಂತಿಮವಾಗಿ ವಿಫಲವಾದರೂ ಅದು ದೇಶದ ರಾಜಕೀಯ ಪರಿಸ್ಥಿತಿ ಮೇಲೆ ದೂರಗಾಮಿ ಪರಿಣಾಮ ಉಂಟುಮಾಡಿತು. ಅದು ಸಮ್ಮಿಶ್ರ ಸರಕಾರದ ಯುಗಕ್ಕೆ ನಾಂದಿ ಹಾಡಿತು. ಹಾಗೆಯೇ ಪಕ್ಷಾಂತರ ಸಂಸ್ಕøತಿ ಪ್ರಾರಂಭಕ್ಕೂ ಕಾರಣವಾಯಿತು. ‘ಆಯಾರಾಮ್ ಗಯಾರಾಮ್’ ಎಂಬ ಮಾತು ನಾಣ್ಣುಡಿಯಂತಾಗಿದ್ದೇ ಆಗ. ಹರಿಯಾಣದ ಶಾಸಕ ಗಯಾಲಾಲ್ ಎಂಬುವವರು ಕಾಂಗ್ರೆಸ್‍ನಿಂದ ಯುನೈಟೆಡ್ ಫ್ರಂಟ್‍ಗೆ ಪಕ್ಷಾಂತರ ಮಾದಿದರು. ಆದರೆ 24 ಗಂಟೆಯೊಳಗಾಗಿ ಕಾಂಗ್ರೆಸ್‍ಗೆ ಮರಳಿದರು. ಇದು ಕುದುರೆ ವ್ಯಾಪಾರದ ಸಂಸ್ಕøತಿಗೆ ಕಾರಣವಾಯಿತು. ಮುಂದೆ ರಾಜೀವ್ ಗಾಂಧಿಯವರು ಪಕ್ಷಾಂತರ ವಿಷೇಧ ಕಾಯಿದೆ ಜಾರಿಗೆ ತಂದರೂ ಈ ಪಿಡುಗು ನಿಲ್ಲಲಿಲ್ಲ.

ಕಾಂಗ್ರೆಸ್ಸೇತರ ಎಂಬ ಕಲ್ಪನೆ ಕೆಲಕಾಲ ತಣ್ಣಗಾಗಿತ್ತಾದರೂ ತುರ್ತುಪರಿಸ್ಥಿಯ ಬಳಿಕ ಪುನಶ್ಚೇತನಗೊಂಡಿತು. 1977ರ ಚುನಾವÀಣೆ ಸಂದರ್ಭದಲ್ಲಿ, ಲೋಹಿಯಾ ಕಲ್ಪನೆಯ ಕಾಂಗ್ರೆಸ್ಸೇತರ ಕೂಟವು ಜನತಾಪಾರ್ಟಿ ಹೆಸರಿನಲ್ಲಿ ಮತ್ತೆ ರಚನೆಯಾಯಿತು. ಕಾಂಗ್ರೆಸ್ ಬಂಡಾಯಗಾರರು, ಸಮಾಜವಾದಿಗಳು, ಜಾತ್ಯತೀತ ಬಲಪಂಥೀಯರು ಹಾಗೂ ಜನಸಂಘ- ಇವೆಲ್ಲ ಒಂದಾದವು. ಆದರೆ ಈ ಜನತಾ ಸರಕಾರವೂ ಕೆಲ ವರ್ಷಗಳಲ್ಲೇ ಪತನಗೊಂಡಿತು. ಭ್ರಷ್ಟಾಚಾರ, ಕೆಟ್ಟ ಆರ್ಥಿಕ ನಿರ್ವಹಣೆ ಹಾಗೂ ಪಕ್ಷದ ನಾನಾ ಗುಂಪುಗಳ ನಡುವಿನ ತೀವ್ರ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದಕ್ಕೆ ಕಾರಣ.

ದ್ವಿಸದಸ್ಯತ್ವ ಅಂದರೆ ಆರೆಸ್ಸೆಸ್ ಹಾಗೂ ಜನಸಂಘ ಇವೆರಡರ ಸದಸ್ಯತ್ವವನ್ನು ಜನತಾಪಕ್ಷ ನಿಷೇಧಿಸಿದಾಗ ಜನಸಂಘದ ನಾಯಕರು ಪಕ್ಷ ತೊರೆದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಚಿಸಿಕೊಂಡರು. ಒಂದರ್ಥದಲ್ಲಿ ಲೋಹಿಯಾ ಅವರು ಜನಸಂಘವನ್ನು ನ್ಯಾಯಬದ್ಧಗೊಳಿಸಿದರು ಎನ್ನುತ್ತಾರೆ ಸೀತಾರಾಮ್ ಯೆಚೂರಿ. ಲಾಲು ಯಾದವ್ ಅವರ ಆರ್‍ಜೆಡಿ ಹೊರತುಪಡಿಸಿ ಉಳಿದೆಲ್ಲ ಸಮಾಜವಾದಿಗಳು ಜನಸಂಘದ ಜತೆ ರಾಜಕೀಯ ವ್ಯವಹಾರ ಮಾಡಿದ್ದಾರೆ ಎಂದೂ ಅವರು ಹೇಳುತ್ತಾರೆ.

ಸಮ್ಮಿಶ್ರ ಸರಕಾರದ ಯುಗದಲ್ಲಿ ಸಮಾಜವಾದಿಗಳು ಸಂಪೂರ್ಣವಾಗಿ ಹೇಳಹೆಸರಿಲ್ಲದಂತಾದರು. ಆ ಪಕ್ಷಗಳು ಜಾತಿ ಆಧಾರದಲ್ಲಿ ಹತ್ತು ಹಲವು ಪ್ರಾದೇಶಿಕ ಶಕ್ತಿಗಳಾಗಿ ಹರಿದು ಹಂಚಿಹೋದವು. ಲೋಹಿಯಾ ಅವರ ಅನುಯಾಯಿಯಾಗಿದ್ದ ಲಾಲು ಯಾದವ್ ಹಾಗು ಮುಲಾಯಂ ಯಾದವ್ ಅವರು ಈಗಲೂ ಲೋಹಿಯಾ ಮಂತ್ರವನ್ನು ಪಠಿಸುತ್ತಾರಾದರೂ ಅವರ ತತ್ತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದ್ದಾರೆ.

ಲೋಹಿಯಾ ಅವರು ಗಾಂಧೀಜಿಯ ಕನಸು, ನೆಹರು ಅವರ ಬಯಕೆ ಹಾಗೂ ಸುಭಾಷ್‍ಚಂದ್ರ ಬೋಸ್ ಅವರ ಕೃತಿ- ಇವುಗಳನ್ನು ನಂಬಿ ಅದರಂತೆ ನಡೆಯುತ್ತಿದ್ದರು. ಬೆಲೆ ನಿಗದಿ, ಜಾತಿ ನಿರ್ಮೂಲನೆ ಹಾಗೂ ವರ್ಗ-ವರ್ಣ ಸಂಘರ್ಷ ಈ ಕಲ್ಪನೆಗಳು ಇಂದಿಗೂ ಪ್ರಸ್ತುತ.

2018ರ ಡಿಸೆಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಬೂತ್‍ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಅವರು ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಬೇಕಾಗಿತ್ತು. ಆದರೆ ಅವರು ತಮ್ಮ ಮಾತಿನ ಬಹುಪಾಲು ಸಮಯವನ್ನು 2019ರ ಚುನಾವಣೆಗೆ ಪ್ರತಿಪಕ್ಷಗಳು ರಚಿಸಲು ಹೊರಟಿರುವ ಮಹಾಘಟಬಂಧನ್ ಅಂದರೆ ಮಹಾಮೈತ್ರಿಕೂಟ ಕುರಿತು ಮೀಸಲಿಟ್ಟರು:

‘ಇದೀಗ ಅನೇಕ ನಾಯಕರು ಮಹಾಮೈತ್ರಿ ಕುರಿತು ಮಾತನಾಡತೊಡಗಿದ್ದಾರೆ. ಆ ಪೈಕಿ ಅನೇಕ ಪಕ್ಷಗಳ ನಾಯಕರು ತಾವು ರಾಮ್ ಮನೋಹರ್ ಲೋಹಿಯಾ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಾರೆ. ನಿಜ ಏನೆಂದರೆ ಲೋಹಿಯಾ ಅವರು ಕಾಂಗ್ರೆಸ್‍ನ ಕಟ್ಟಾ ವಿರೋಧಿಗಳಾಗಿದ್ದರು. ಆದರೆ ಇದೀಗ ಈ ನಾಯಕರು ಅದೇ ಕಾಂಗ್ರೆಸ್ ಪಕ್ಷದ ಜೊತೆ ಅಪವಿತ್ರ ಹಾಗೂ ಸಮಯಸಾಧಕತನದ ಮೈತ್ರಿ ಮಾಡಿಕೊಳ್ಳುತ್ತಿವೆ. ಇದೇನಾ ಅವು ತಮ್ಮ ಧೀಮಂತ ನಾಯಕನಿಗೆ ಸಲ್ಲಿಸುವ ಗೌರವ?’ ಎಂದು ಅವರು ಪ್ರಶ್ನಿಸಿದರು.

ಆದರೆ ಮೋದಿ ಹೀಗೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರೂ ತಮ್ಮ ಬಿಜೆಪಿ ಕೂಡ ಹಿಂದೆ ಅನೇಕ ಸಂದರ್ಭಗಳಲ್ಲಿ ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿ ಕಾಂಗ್ರೆಸ್ಸೇತರ ಪಕ್ಷಗಳ ಜತೆ ನಂಟು ಬೆಳೆಸಿದ್ದನ್ನು ಮರೆತವರಂತೆ ತೋರುತ್ತದೆ. ಆದರೆ ಅವರ ಈ ಮಾತುಗಳ ಹಿಂದೆ ಮಹಾಘಟಬಂಧನದ ಪರಿಣಾಮದ ಬಗ್ಗೆ ಅವರಿಗೆ ಅಳುಕು ಇದ್ದಂತಿದೆ.

ಇತ್ತ ಪ್ರಮುಖ ಪ್ರತಿಪಕ್ಷಗಳು ಏನೇ ಹೇಳಿದರೂ ಅವು ಲೋಹಿಯಾ ಅವರಿಂದ ಏನನ್ನೂ ಕಲಿತಿಲ್ಲ ಎಂಬ ಮೋದಿ ಹೇಳಿಕೆಯಂತೂ ಸರಿ.

ಆದರೆ ಒಂದಂತೂ ನಿಜ. ಲೋಹಿಯಾ ಅವರಿಂದ ನಾವು ನಿಜವಾಗಿಯೂ ಕಲಿಯಬೇಕಾದುದೇನೆಂದರೆ ಅವರು ಎಲ್ಲಿ ಯಶಸ್ವಿಯಾದರು ಎಂಬುದಕ್ಕಿಂತ ಎಲ್ಲೆಲ್ಲಿ ವಿಫಲರಾದರು ಎಂಬುದನ್ನು ಮನಗಾಣಬೇಕು.

Leave a Reply

Your email address will not be published.