ನಾಗವರ್ಮನ ಕರ್ಣಾಟಕ ಕಾದಂಬರಿ ಯುವಮನಗಳ ವಿಕಾರಗಳಿಗೆ ಕನ್ನಡಿ

ಪ್ರಾಚೀನ ಕನ್ನಡ ಕವಿಗಳಲ್ಲಿ ನಾಗವರ್ಮ ಒಬ್ಬ ಮಹತ್ವದ ಕವಿ. ಕನ್ನಡ ಕಾವ್ಯಲೋಕದಲ್ಲಿ ಲೌಕಿಕ ನೆಲೆಯನ್ನು ಅರಸುವವರಿಗೆ ಒಂದು ಅದ್ಭುತ ಪ್ರಣಯ ಕಾವ್ಯವನ್ನಿತ್ತವನು. ಬಹುಶಃ ಈ ಪ್ರಣಯ ಕಾವ್ಯದ ಪ್ರಭಾವದಿಂದಲೇ ಜನ್ನನ ಯಶೋಧರ ಚರಿತೆ ರಚನೆಯಾಗಿದ್ದಿರಬಹುದು.

ನ್ನಡದಲ್ಲಿ ಬರೆದ ನಾಗವರ್ಮನ ಕಾದಂಬರಿಯ ನವಿರಾದ ಓದು ಓದುಗರಿಗೆ ಸಾಕಷ್ಟು ಜಿಜ್ಞಾಸೆಗಳನ್ನು ತಂದೊಡ್ಡುತ್ತದೆ. ಇದರ ಅನಿವಾರ್ಯತೆಯೂ ಅವಶ್ಯವಾಗಿದೆ. ಕನ್ನಡ ಕವಿಗಳಲ್ಲಿ ಕೆಲವರು ಮುಖ್ಯವಾಗಿ ಚಂಪೂಕಾವ್ಯ ಲೇಖಕರು ಸ್ವಪರಿಚಯದ ವಿಸ್ತಾರತೆಗೆ ಆದ್ಯತೆ ನೀಡಿದ್ದರೆ, ನಾಗವರ್ಮನಂತೂ ಸ್ವವಿಷಯವನ್ನು ಹೇಳಿಕೊಳ್ಳುವುದಿರಲಿ, ದೇವತಾಸ್ತೋತ್ರ, ಕಾವ್ಯವಿಚಾರವನ್ನು ಸಂಗ್ರಹವಾಗಿ ಮಾಡಿದ್ದಾನೆ. ಕಾವ್ಯದ ಮೊದಲನೆಯ ಪದ್ಯದಲ್ಲಿ ಶಿವನ ಜಟೆಯನ್ನಲಂಕರಿಸಿರುವ ಚಂದ್ರನನ್ನೂ, ಎರಡನೆಯದರಲ್ಲಿ ಸರಸ್ವತಿಯನ್ನೂ, ಮೂರನೆಯ ಪದ್ಯದಲ್ಲಿ ಬಾಣನನ್ನು, ನಾಲ್ಕು, ಐದು, ಆರನೆಯ ಪದ್ಯಗಳಲ್ಲಿ ಸಂಸ್ಕೃತ ಕನ್ನಡ ಕಾದಂಬರಿಗಳನ್ನೂ, ಏಳನೆಯ ಪದ್ಯದಲ್ಲಿ ಕೃತಿಪತಿ ನರೇಂದ್ರಚಂದ್ರನನ್ನೂ ಕೊಂಡಾಡಿದ್ದಾನೆ.

ಕವಿಯು ಮೊದಲು ಚಂದ್ರನನ್ನು ಸ್ತುತಿಸುವುದರಿಂದ ಬೆಳದಿಂಗಳ ಚೆಲ್ಲುವ ಚಂದ್ರನೇ ಪ್ರೇಮಕಾವ್ಯಕೆ ಸ್ಫೂರ್ತಿಯಾಗಿದ್ದಿರಬಹುದಾದರೂ, ಚಂದ್ರನ ಬೆಳದಿಂಗಳು ಪ್ರೇಮೋದ್ದೀಪನವಾಗಿ, ಕಾಮವಿಕಾರದ ಕಾರಣವಾಗಿ, ನಾಯಕನ ಸಾವಿಗೆ ಕಾರಣವಾಗಿರುವುದು ಅಚ್ಚರಿಯನ್ನುಂಟುಮಾಡುತ್ತದೆ. ಕಥಾನಾಯಕ ಪುಂಡರೀಕ ಬೆಳದಿಂಗಳ ಪೀಡನೆಯಿಂದ ಸಾಯುವುದೆಂದರೆ ಅದು ಪ್ರೇಮದ ಉತ್ತುಂಗತೆಯೋ? ಕಾಮವಿಕಾರದ ಪರಾಕಾಷ್ಠತೆಯೋ? ಅಥವಾ ಅತಿಪೀಡನೆಗಳು ಸಾವಿಗೆ ಮೂಲವಾಗುವುದನ್ನು ಪ್ರತಿಬಿಂಬಿಸುವ ಕಾವ್ಯವೋ? ಎಂಬ ಜಿಜ್ಞಾಸೆಯೊಂದಿಗೆ ಕಾವ್ಯ ಸಾಗುತ್ತದೆ. ಆದರೆ ಕವಿ ಪ್ರೇಮದ ಪರಾಕಾಷ್ಠತೆಗೆ ಚಂದ್ರನ ಬೆಳದಿಂಗಳನ್ನು ಪ್ರೇರಕವಾಗಿಸಿಕೊಂಡಿದ್ದರೂ, ಪ್ರೇಮಿಯ ಸಾವಿಗೆ ಬೆಳದಿಂಗಳು ಪೀಡನೆಯಾಗಬಾರದಿತ್ತಲ್ಲವೇ? ಲೌಕಿಕಕಾವ್ಯ ರಸಧಾರೆಯಲ್ಲಿ ಚಂದ್ರನನ್ನೂ, ಬೆಳದಿಂಗಳನ್ನೂ ಮೂಲವಾಗಿಸಿಕೊಂಡ ಕಾವ್ಯಗಳಿವೆ. ಆದರೆ ಪ್ರೇಮಿಯ ಸಾವಿಗೆ ಬೆಳದಿಂಗಳು ಕಾರಣವಾದ ಕಾವ್ಯಗಳಿಲ್ಲ.

ಪ್ರಾಚೀನ ಕನ್ನಡ ಕವಿಗಳಲ್ಲಿ ನಾಗವರ್ಮ ಒಬ್ಬ ಮಹತ್ವದ ಕವಿ. ಕನ್ನಡ ಕಾವ್ಯಲೋಕದಲ್ಲಿ ಲೌಕಿಕ ನೆಲೆಯನ್ನು ಅರಸುವವರಿಗೆ ಒಂದು ಅದ್ಭುತ ಪ್ರಣಯ ಕಾವ್ಯವನ್ನಿತ್ತವನು. ಬಹುಶಃ ಈ ಪ್ರಣಯ ಕಾವ್ಯದ ಪ್ರಭಾವದಿಂದಲೇ ಜನ್ನನ ಯಶೋಧರ ಚರಿತೆ ರಚನೆಯಾಗಿದ್ದಿರಬಹುದು.

 

ನಾಮಾಂಕಿತದ ವಿಶೇಷ

ನಾಗವರ್ಮ ತನ್ನ ಕಾದಂಬರಿಯ ಪಾತ್ರಗಳಿಗೆ ಇಟ್ಟ ಹೆಸರುಗಳೇ ಮೋಹಕವಾಗಿವೆ. ಮೋಹಕತೆಗೆ ಮೋಹಕತೆಯೇ ಬೆಸೆದಂತಹ ಅನುಭವವಾಗುತ್ತದೆ. ಅದರಲ್ಲೂ ಮಹಾಶ್ವೇತೆಯ ತಂದೆ ತಾಯಿಯ ಹೆಸರಂತೂ ರಮ್ಯವಾದುದು. ನಾಮಮಾತ್ರದಿಂದಲೇ ಶೃಂಗಾರರಸದ ಉತ್ತುಂಗಶಿಖರವೇರಬಹುದು. ತಂದೆ ಹಂಸ, ತಾಯಿ ಗೌರಿ, ಉಚ್ಛರಿಸಿದರೆ ಎದೆಯ ಕೊಳದಲ್ಲಿ ಪ್ರೇಮ ಹಂಸವೊಂದು ಓಡಾಡಿದಂತಾಗುತ್ತದೆ.

ಇನ್ನು ಮಹಾಶ್ವೇತೆಯ ಹೆಸರು ಶ್ವೇತಕ್ಕಿಂತ ಮಿಗಿಲಾದುದು. ‘ಧವಳಕ್ಕೆ ಧವಳ, ನಿರ್ಮಲಕೆ ನಿರ್ಮಲ’ ಎನ್ನುವಂತೆ ಆಕೆಯ ರೂಪಾತಿಶಯಕ್ಕೂ, ಗುಣಾತಿಶಯಕ್ಕೂ ಅನ್ವರ್ಥಗೊಳಿಸಿದ ನಾಮಗಳು. ಕಾದಂಬರಿ, ಚಂದ್ರಾಪೀಡ, ಪುಂಡರೀಕ ಹೆಸರುಗಳಂತೂ ನಾಲಿಗೆಯ ಮೇಲೆ ಲಾಸ್ಯವಾಡುತ್ತವೆ. ಈತನಿಗಿಂತಲೂ ಪ್ರಾಚೀನನಾದ ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ ಹೆಸರುಗಳು ಇದೇ ಪರಿಯವು. 21ನೇ ಶತಮಾನದಲ್ಲೂ ಗ್ರಾಮೀಣ ಭಾಗಗಳಲ್ಲಿನ ಕೆಲವು ಹೆಸರುಗಳು ಜಾತಿಸೂಚಕವಾಗಿರುವಾಗ ಪ್ರ್ರಾಚೀನಕವಿಗಳ ನಾಮಾಂಕಿತ ಪ್ರಜ್ಞೆ ಘನವ್ಯಕ್ತಿತ್ವಕ್ಕೆ ತಳಕು ಹಾಕಿಕೊಂಡಿರುವುದು ಸ್ತುತ್ಯಾರ್ಹವಾಗಿದೆ. 10ನೇ ಶತಮಾನದ ಕವಿಯೊಬ್ಬ ಪಾತ್ರಗಳಿಗೆ ಇಟ್ಟ ಹೆಸರು ಆತನ ರಸಿಕತೆಯನ್ನು ಪ್ರತಿಬಿಂಬಿಸುತ್ತದೆ.

ಅನುರೂಪತೆಯ ಅನುರಣನ

ಕವಿ ನಾಗವರ್ಮ ಮಹಾಶ್ವೇತೆಯಂತಹ ಅಪೂರ್ವಸುಂದರಿಯ ಸೃಷ್ಟಿಗೆ ಆಕೆಯ ತಂದೆತಾಯಿಯ ವಿವಾಹ ಅನುರೂಪತೆಯನ್ನು ಕಾವ್ಯದಲ್ಲಿ ತಂದಿದ್ದಾನೆ. ಹಂಸ-ಗೌರಿಯ ವಿವಾಹೋತ್ಸವಕೆ ಸಮತೆಯ ನೆಲೆಯನ್ನು ತಂದಿದ್ದಾನೆ.

ಸಮವಂಶದೆ ಸಮರೂಪದೆ
ಸಮವಿಭವದೆ ಸಮವಯೋವಿಲಾಸದೆ ಸಮಸ
ತ್ವಮನದೆ ಸಮಾನುರಾಗದೆ
ಸಮಸಂದತ್ತವರ್ಗೆ ಸಮವಯೋಯೋಗಸುಖಂ

ವಿವಾಹಮಂಗಳ ಕಾರ್ಯವು ಸೂಕ್ತಜೋಡಿಯೊಂದಿಗೆ ನೆರವೇರಿದಾಗ ಮಾತ್ರವೇ ಮಹಾಶ್ವೇತೆಯಂತಹ ರೂಪಸಿಯ ಜನನ ಸಾಧ್ಯವೆಂದು ಬಿಂಬಿಸಲು ವಿವಾಹಯೋಗಕೆ ಸಮತೆಯನ್ನು ತರುತ್ತಾನೆ. ಆದರ್ಶ ಸತಿಪತಿಗಳಾಗಬೇಕಾದರೆ ಸಮಾನವಂಶ, ಸಮಾನರೂಪ, ಸಮಾನವೈಭವ, ಸಮವಯಸ್ಸು, ಸಮಮನಸ್ಸು, ಸಮಾನ ಪ್ರೀತಿ, ಒಟ್ಟಿನಲ್ಲಿ ‘ಸಮ’ ಶಬ್ಧ ಅನುರಣನಗೊಂಡು ಮನಸ್ಸಿಗೆ ಮುದವನ್ನುಂಟುಮಾಡುತ್ತದೆ. ನಾಗವರ್ಮ ಕಲ್ಪಿಸಿದ ಆದರ್ಶ ದಾಂಪತ್ಯದ ಸಮತೆ ಇಂದು ಅಸವiತೆಯ ಕಾರಣಗಳಿಂದ ಜರುಗುವ ವಿವಾಹಗಳು ವಿಚ್ಛೇದನದ ದಿಕ್ಕಿಗೆ ಸಾಗುತ್ತಿವೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆಧುನಿಕ ಸಂಸ್ಕೃತಿಯೊಳಗೆ ವಿವಾಹಬಂಧನಗಳು ತಮ್ಮ ಪೊರೆ ಕಳಚಿಕೊಂಡಿರುವಾಗ ಲಿವಿಂಗ್ ಟುಗೆದರ್ ಸಂಬಂಧದೊಳಗೂ ಇಂತಹ ಸಮತೆಗಳನ್ನು ಗುರುತಿಸಲಾಗುವುದಿಲ್ಲ.

ಹಂಸ-ಗೌರಿಯರ ವಿವಾಹಕೆ ಅನುರೂಪತೆಯ ಮಾನದಂಡವನ್ನಿತ್ತ ನಾಗವರ್ಮನನ್ನು ಕೇಳಲೇಬೇಕಾದ ಪ್ರಶ್ನೆಯೆಂದರೆ ಮಹಾಶ್ವೇತೆ ಮತ್ತು ಪುಂಡರೀಕನ ಅನುರಕ್ತತೆಯ ವಿಷಯದಲ್ಲಿ ಸಮತೆಯನ್ನು ಬದಿಗಿರಿಸಿ ಪ್ರೇಮವೊಂದನ್ನೆ ಮಾನದಂಡವಾಗಿಸಿ ಗಂಧರ್ವಕನ್ನೆಗೂ, ಋಷಿಕುಮಾರನಿಗೂ ಎತ್ತಣ ಸಂಬಂಧ? ಗಂಧರ್ವಕನ್ನೆಗೆ ಗಂಧರ್ವಪುರುಷನನ್ನೆ ಆಯ್ಕೆಯಾಗಿಸದೆ ಋಷಿಕುಮಾರನ ಆಯ್ಕೆಯಲ್ಲಿ, ಅನುರೂಪತೆಯ ವಿಚಾರದಲ್ಲಿ ಕವಿ ಸೋತಿರುವುದು ವೇದ್ಯವಾಗುತ್ತದೆ.

ಶಿವಭಕ್ತಿ ಪಾರಮ್ಯ

10ನೇ ಶತಮಾನದಲ್ಲಿ ಜೈನಧರ್ಮದ ಪ್ರಾಬಲ್ಯವಿದ್ದ ಕಾಲದಲ್ಲಿ ನಾಗವರ್ಮ ಶೈವಧರ್ಮದ ಕವಿಯಾಗಿ, ಶಿವನ ಆರಾಧಕನಾಗಿದ್ದನೆಂಬುದಕ್ಕೆ ಕಾವ್ಯದಲ್ಲಿ ಉಲ್ಲೇಖಗಳಿವೆ. ಸ್ತುತಿಪದ್ಯದಲ್ಲಿ ಚಂದ್ರನನ್ನು ತಲೆಯಲ್ಲಿ ಧರಿಸಿದ್ದ ಶಿವನನ್ನು ಸ್ತುತಿಸಿರುವುದು ಶೈವಧರ್ಮೀಯನೆಂಬುದಕ್ಕೆ ಆಧಾರವಾಗುತ್ತದೆ. ನಾಗವರ್ಮನು ಜೈನನೆಂಬುದಕ್ಕೆ ಅಂತಹ ಅಂತರಪ್ರಮಾಣವಾಗಲಿ, ಬಾಹ್ಯಪ್ರಮಾಣವಾಗಲಿ ಇಲ್ಲ. ಛಂದೋಂಬುಧಿಯ ಉದ್ದಕ್ಕೂ ಕವಿ ಬ್ರಾಹ್ಮಣನೆಂಬುದಕ್ಕೆ ಪ್ರಬಲವಾದ ಆಧಾರಗಳಿವೆ.

ಉದಾಹರಣೆಗೆ ಕವಿ ತಾನು ಪದ್ಮಜಂ ಶಾಸ್ತ್ರದೊಳ್ ಎಂದೂ, ತನ್ನ ಕಾವ್ಯವು ಸನಾತನ ವೇದದಂತೆ ನಿಲ್ಕೆಂದುಂ ಎಂದೂ ಬ್ರಾಹ್ಮಣನಂತೆ ಹೇಳಿಕೊಂಡಿದ್ದಾನೆ. ಛಂದಶಾಸ್ತ್ರವು ‘ಇಂಧುಧರನುಮೆಗೆ ಪೇಳ್ದುದು’ ಎಂದು ಶಿವೋದಿತವಾದದ್ದೆಂದು ಹೇಳಿರುತ್ತಾನೆ. ಅಲ್ಲದೆ ತನಗೆ ಶಿವಾಧಿಕ್ಯದಲ್ಲಿರುವ ವಿಶ್ವಾಸವನ್ನು ವಿಧವಿಧವಾಗಿ ಸೂಚಿಸಿರುತ್ತಾನೆ. ಹೇಗೆಂದರೆ ಗುರುಲಘುಗಳಿಗೆ ಕ್ರಮವಾಗಿ ತ್ರಯಂಬಕ, ಮುರಾಂತಕ ಎಂದೂ, ಕನ್ನಡ ಛಂದಸ್ಸಿನಲ್ಲಿ 2, 3, 4, ಅಂಶಗಳಿಂದ ಹುಟ್ಟುವ ಗಣಗಳಿಗೆ ಕ್ರಮವಾಗಿ ಬ್ರಹ್ಮ, ವಿಷ್ಣು, ರುದ್ರ ಎಂದೂ ನಾಮಕರಣ, ಮಾಡಿರುವುದೂ ಬ್ರಹ್ಮನಿಗಿಂತ ವಿಷ್ಣುವೂ, ವಿಷ್ಣುಗಿಂತ ರುದ್ರನೂ ಅಂದರೆ ಶಿವನೂ ಅಧಿಕವಾಗಿರುವನೆಂಬ ಭಾವವನ್ನು ಕವಿ ಸೂಚಿಸಿದಂತಿದೆ. ಅಲ್ಲದೆ ಕಂದಪದ್ಯದಲ್ಲಿ ಬರುವ ಐದು ತೆರದ ಮಾತ್ರಗಣಗಳಿಗೆ ಗಿರೀಶಂ, ಧೂರ್ಜಟ, ಶರ್ವಂ, ಪುರಾರಿ, ಪುರರಿಪು ಎಂಬ ಶಿವನಾಮಾಕ್ಷರಗಳನ್ನು ಕೊಟ್ಟಿದ್ದಾನೆ. ಈ ಎಲ್ಲಾ ಅಂಶಗಳಿಂದ ಕವಿ ಶೈವಬ್ರಾಹ್ಮಣನೆಂದೂ ತಿಳಿದುಬರುತ್ತದೆ. ತನ್ನ ಪೂರ್ವಜರು ವೈದಿಕ ಬ್ರಾಹ್ಮಣರೆಂದು ತಿಳಿಸಿರುವುದರಿಂದ ಕವಿಯಾಗಲಿ, ಪೂರ್ವಜರಾಗಲಿ ಜೈನಮತಾವಲಂಬಿ ಎಂದೂ ಎಲ್ಲೂ ಹೇಳಿಲ್ಲದಿರುವುದು ಸ್ಪಷ್ಟವಾಗಿದೆ.

ಕಾವ್ಯದ ಒಳಭಾಗದಲ್ಲಿ ಶಿವಾರಾಧನೆಯ ಸಾಕಷ್ಟು ಉಲ್ಲೇಖಗಳಿವೆ. ಮಹಾಶ್ವೇತೆಯು ಪುಂಡರೀಕನಲ್ಲಿ ಅನುರಕ್ತಗೊಂಡು ಋಷಿಕುಮಾರನ ಹಿನ್ನೆಲೆಯನ್ನೂ, ಆತ ಧರಿಸಿದ ಕುಸುಮಮಂಜರಿ ದೊರಕಿದ ಬಗೆಯನ್ನು ಕೇಳಿದಾಗ ಆತ ಕೊಟ್ಟ ಉತ್ತರವಿದು.

ಇಂದು ಚತುರ್ದಶಿಯಪ್ಪುದ
ರಿಂದಂ ಕೈಲಾಸವಾಸಿಯಂ ಕಾಣಲ್ಕಾ
ನಂದದೆ ದಿವದಿಂದಿರ್ಬರು
ಮೊಂದಾಗಿ ಬರುತ್ತಮಿರ್ಪುದಂ ತತ್‍ಕ್ಷಣದೊಳ್.

ಈ ಸಾಲುಗಳಲ್ಲಿ ಕೈಲಾಸವಾಸಿ ಶಿವನ ಉಲ್ಲೇಖವಿದೆ. ಹಾಗೆ ಅಚ್ಛೋದ ಸರೋವರದಲ್ಲಿ ಅಪೂರ್ವ ಸುಂದರಿಯೂ, ನವಯೌವನಶಾಲಿನಿಯೂ, ತೇಜಸ್ವಿನಿಯೂ ಆದ ಒಬ್ಬ ತಾಪವೇಷಧಾರಿಣಿ ಶಿವನನ್ನು ಆರಾಧಿಸುತ್ತಿದ್ದಳೆಂಬ ಉಲ್ಲೇಖವಿದೆ.
ಅಚ್ಛೋದ ಸರೋವರದ ಸೃಷ್ಟಿಯನ್ನು ಕವಿ ವರ್ಣಿಸುವಾಗ ಎಲೆ ತಾರಾಗಂ ಹರಂ ಕಣ್ಣಿಡೆ/ಕರಗಿದುದಂತಲ್ತು ರುದ್ರಾಟ್ಟಹಾಸಂ ಎಂಬಲ್ಲಿ ಶಿವನು ಗಿರಿಜೆಯೊಡನೆ ಸರಸಸಲ್ಲಾಪದಿ ನಕ್ಕ ನಗುವೇ ಜಲಮಾಯ್ತೆಂಬುದು ಶಿವತತ್ವವನ್ನು ಪ್ರತಿನಿಧಿಸುತ್ತದೆ. ಕಾವ್ಯದ ಬಹುತೇಕ ಕಡೆ ಕೈಲಾಸವಾಸಿ, ಗೌರಿವಲ್ಲಭನೆಂದು ಹೆಸರಿಸುತ್ತಾ ಶಿವಭಕ್ತಿ ಪಾರಮ್ಯವನ್ನು ಮೆರೆದಿದ್ದಾನೆ. ಸೃಷ್ಟಿಕ್ರಿಯೆಗೆ ಶಿವನೇ ಕಾರಣವೆನ್ನುವುದು ಕವಿಯ ಉತ್ಪ್ರೇಕ್ಷೆಯ ಮಾತಾಗಿದೆ.

ಪಂಪ, ರನ್ನರ ಸಾಲಿನಲ್ಲಿ ಇದ್ದ ನಾಗವರ್ಮನನ್ನು ಜೈನಕವಿಯೆಂದೇ ಭಾವಿಸುವ ಸಾಧ್ಯತೆಗಳಿದ್ದಾಗ್ಯೂ 10ನೇ ಶತಮಾನದಲ್ಲಿಯೇ ಶೈವಧರ್ಮಿಯ ಕವಿಯೊಬ್ಬನಿದ್ದನೆಂದೂ, ಪ್ರೇಮಕಾವ್ಯದೊಳಗೂ ಶಿವನನ್ನು ಆರಾಧಿಸಬಹುದೆಂದು ಶಿವತತ್ವವನ್ನು ತಂದಿದ್ದಾನೆ. ಈ ಮೂಲಕ 12ನೇ ಶತಮಾನದ ಶಿವಪಾರಮ್ಯ ವಚನಗಳು, ಹರಿಹರನ ರಗಳೆಗಳಲ್ಲಿನ ಶಿವತತ್ವವನ್ನು ಅಳವಡಿಸಿಕೊಂಡು ಜೈನಕವಿ ವಲಯದಿಂದ ಪ್ರತ್ಯೇಕಿತನಾಗಿದ್ದಾನೆ.

ವರ್ಣನೆಗಳ ಸೊಗಸು

ನಾಗವರ್ಮನ ಕಾವ್ಯದಲ್ಲಿ ವರ್ಣನೆಗಳ ಸೊಗಸನ್ನು ನೋಡಬಹುದಾಗಿದೆ. ಕವಿಯ ವರ್ಣನಾ ಸಾಮಥ್ರ್ಯವು ವ್ಯಕ್ತಿಯ ವ್ಯಕ್ತಿತ್ವವನ್ನು ಸೋಲಿಸಿದಂತಿದೆ.

ಕರತಳಮೊಂದರೊಳ್ ಮಣಿಕಮಂಡಲು ನಾಳಸಮೇತಮಪ್ಪ ಕೇ
ಸರಫಲದಂತಿರಿರ್ದುದು ಮನೋಜವಿನಾಶದಿನಳ್ವ ತನ್ಮನೋ
ಹರಿಯ ಪೋದಳ್ದ ಕಣ್ಬನಿಗಳಂತಮಲಸ್ಫಟಿಕಾಕ್ಷಮಾಲೆ ಸುಂ
ದರತರಮಾದುದೊಂದು ಕರಪಲ್ಲವದೊಳ್ ಮುನಿಪಾಗ್ರಗಣ್ಯನಾ

ಇಲ್ಲಿ ಮುನಿಕುಮಾರ ಪುಂಡರೀಕನ ವರ್ಣನೆ ಬರುತ್ತದೆ. ಕೈಯಲ್ಲಿ ಮಣಿಕಮಂಡಲವನ್ನು ಹಿಡಿದಿರುವನು. ಅದು ನಾಳ ಸಮೇತವಾದ ಕೇಸರ ಫಲದಂತಿದೆ. ಕಣ್ಣೀರಿನಂತೆ ಶುದ್ಧವಾದ ಸ್ಫಟಿಕದ ಜಪಸರ ಪುಂಡರೀಕನಿಗೆ ಶೋಭೆಯನ್ನು ತಂದಿದೆ. ಇವನು ಮನ್ಮಥನನ್ನು ಗೆದ್ದವನು ಎನ್ನುವ ಮೂಲಕ ಅವನ ಪರಿಶುದ್ಧತೆಯನ್ನು ಹೊಗಳಲಾಗಿದೆ. ಇಂಥ ಮುನಿಕುಮಾರ ಮಹಾಶ್ವೇತೆಯನ್ನು ಕಂಡು ವಿರಹದಲ್ಲಿ ತೊಳಲಾಡಿಸುವ ಪ್ರಸಂಗ ವ್ಯಂಗ್ಯಮಯವಾಗಿದೆ. ಕವಿ ಇಲ್ಲಿ ಸಂದರ್ಭದ ಕೋಮಲತೆಯನ್ನು ಪ್ರತಿಬಿಂಬಿಸಲು ಹೊರಟು ವಿರೋಧಾಭಾಸ ವ್ಯಕ್ತಿತ್ವವನ್ನು ಸೃಷ್ಟಿಸಿಬಿಟ್ಟಿದ್ದಾನೆ. ಪುಂಡರೀಕ ಮಹಾಶ್ವೇತೆಯರ ಪ್ರಥಮದರ್ಶನಕ್ಕೆ ತನ್ನ ರಮಣೀಯ ವನ್ಯತಟ ವೇದಿಕೆಯನ್ನು ನೀಡುವುದೂ ಆ ಸರೋವರವೇ. ಕಾಮದ ಕಲ್ಮಷ ವಿರೇಚನಕ್ಕೆ ಅಗ್ನಿಕುಂಡವೇರ್ಪಡುವುದೂ ಆ ದಿವ್ಯ ಸಾನ್ನಿಧ್ಯದಲ್ಲಿಯೇ ಎಂಬ ವರ್ಣನೆಗಳಿವೆ.

ವರ್ಣನೆಗಳ ಮೂಲಕವೇ ಋಷಿಕುಮಾರನಂತಹ ವ್ಯಕ್ತಿತ್ವವನ್ನು ಪ್ರೇಮಪಾಶಕ್ಕೆ ಕೆಡವಿದರೆ ಇದು ಸಾಮಾನ್ಯರ ತಪ್ಪುಗಳಿಗೆ ವೇದಿಕೆಯಾಗಬಹುದಲ್ಲವೇ? ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಪ್ರೇಮ/ಕಾಮ ಸೃಷ್ಟಿಸುವ ಮನಸ್ಸಿನ ವಿಕಾರಗಳಿಗೆ ಮನುಷ್ಯಮಾತ್ರನೇ ಬಲಿಯಾಗುವನೆಂಬುದು ಸುಳ್ಳಾಗಿ, ಇಂದ್ರಿಯ ನಿಗ್ರಹದ ತಪಸ್ವಿಗೂ ಈ ಪರಿಯ ಸ್ಥಿತಿಗಳು ಒದಗುವುದು ಪ್ರಸ್ತುತದಲ್ಲಿನ ಮಠಾಧೀಶರ ಹತ್ತು ಹಲವು ಹಗರಣಗಳಿಗೆ ಕನ್ನಡಿ ಹಿಡಿದಂತಿದೆ.

ಆಗಳೊಮ್ಮೆ ವಸಂತದೊಳುಳ್ಳಲರ್ದ ನವನಳಿನ
ಕುಮುದ ಕುವಲಯ ಕಲ್ಹಾರಗಳಿಂ ಕಣ್ಗೊಳಿಪಚ್ಛೋದ
ಸರಸಿಗೆ ಜನನಿವೆರಸು ಮಜ್ಜನಕ್ಕೆಂದು ನಡೆತಂದು ನೋಳ್ಪಲ್ಲಿ
ಮುಂದೆ ಮುನಿಕುಮಾರನೋರ್ವನೆಯ್ತರುತಿರೆ

ಕವಿ ಒಮ್ಮೊಮ್ಮೆ ವರ್ಣನೆಯಲ್ಲಿ ಸರಳತೆಯನ್ನು ಮೆರೆದಿರುವುದಿದೆ. ಪ್ರೇಮದಂತಹ ದೈವೀಶಕ್ತಿಯನ್ನು ಸೃಷ್ಟಿಸಿರುವ ವೇದಿಕೆ ಅಚ್ಛೋದ ಸರೋವರ. ಇದರ ವರ್ಣನೆಯನ್ನು ಸಹಜವಾಗಿ ಚಿತ್ರಿಸಿ ಪ್ರೇಮವನ್ನು ಪರಾಕಾಷ್ಠತೆಯ ನೆಲೆಗೆ ಕೊಂಡೊಯ್ದಿರುವುದು ವಿಶೇಷವಾಗಿದೆ.

ನವಯೌವನದೊಳ್ ಗುಣದೋ
ಷವಿಚಾರಮನಿಂತು ಮಾಡಲೀಯದ ಭಾವೋ
ದ್ಭವನಿಂ ಪರವಶೆಯಾದೆಂ
ನವಕುಸುಮಾಸವದೆ ಸೊರ್ಕಿದಳಿನಿಯ ತೆರದಿಂ

ಕವಿ ಯೌವನಕಾಲಕೆ ಸೃಷ್ಟಿಸುವ ನಾನಾಬಗೆಯ ಮನೋವಿಕಾರಗಳು ವಿಚಾರಶಕ್ತಿಯನ್ನು ಹಾಳುಮಾಡಿ ಭಾವತೀವ್ರತೆಯೇ ಪ್ರಧಾನವಾಗುತ್ತದೆಂಬ ಲೌಕಿಕ ಸತ್ಯವನ್ನು ಮಹಾಶ್ವೇತೆಯ ಪಾತ್ರಚಿತ್ರಣದಲ್ಲಿ ಸೆರೆಹಿಡಿದ ಉಪಮೆಯೊಂದು ಇಂದಿನ ಯುವಮನಸ್ಸುಗಳ ಹಲವು ವಿಕಾರಗಳನ್ನು ಕನ್ನಡಿಸಿದಂತಿದೆ.

ಪ್ರೇಮ-ಕಾಮದ ತೀರ್ವತೆ

ನಾಗವರ್ಮನ ಕಾವ್ಯದಲ್ಲಿ ಪ್ರೇಮ-ಕಾಮದ ಅತಿರೇಕ ವರ್ಣನೆಗಳಿವೆ. ಪ್ರೇಮವೆಂಬುದು ಅದ್ಭುತ ದೈವೀಶಕ್ತಿ. ಅದನ್ನು ಪರೀಕ್ಷೆಯ ಪಾಕಕ್ಕೆ ಅದ್ದಿ ತೆಗೆಯುವುದರಲ್ಲಿ ಕವಿ ನಿಸ್ಸೀಮನೇ ಸರಿ. ಮಹಾಶ್ವೇತೆ ಪುಂಡರೀಕನನ್ನು ನೋಡಿ ಅವನ ಜಪಸರ, ಮಣಿಮಾಲೆಗಳನ್ನು ಪಡೆದುಕೊಂಡು ತನ್ನ ಕೊರಳಿಗೆ ಧರಿಸಿ ವಿಕಾರಕ್ಕೊಳಗಾಗುವುದನ್ನು ಕವಿ ಹೀಗೆ ವರ್ಣಿಸುವುದರಲ್ಲಿ ಪ್ರೇಮದ ಪರಿತಾಪಕ್ಕಿಂತಾ ಕಾಮದ ವ್ಯತಿರಿಕ್ತತೆಯನ್ನು ಗುರುತಿಸಬಹುದು.

ತಡೆದಿರಲಾಗದಿಂತು ಮೊಗಮಜ್ಜನಮಂ ನೆರೆ ಮಾಡಿ ದೇವಿಯರ್
ನಡೆಗೊಳಲಿರ್ದಪರ್ ಮನೆಗೆ ಮಜ್ಜನಕೀಗಳೆ ರಾಜಪುತ್ರಿ ನೀಂ
ನಡೆವುದೆನುತುಮಿಚ್ಛೆಯಣಮಿಲ್ಲದೊಡಂ ತೆಗೆದಳ್ ಕರಂ ಮನಂ
ಕಿಡೆ ಪೊಸತೊಪ್ಪದೊಂದು ಪಿಡಿಗಂಕುಶಮಿಟ್ಟು ಮರಳ್ಚುವಂದದಿಂ

ಕವಿಯ ಈ ಪದ್ಯದಲ್ಲಿ ತಡೆದಿರಲಾಗದಿಂತು ಎಂಬ ಸಾಲಂತೂ ಕಾಮತೀವ್ರತೆಯನ್ನೆ ಅಭಿವ್ಯಕ್ತಿಸುತ್ತದೆ. ಮುಂದುವರಿದಂತೆ ಪೊಸತಪ್ಪದೊಂದು ಪಿಡಿಗಂಕುಶಮಿಟ್ಟು ಮರಳ್ಚುವ ಅಂದರೆ ದಾರಿತಪ್ಪಿದ ಹೆಣ್ಣಾನೆಯನ್ನು ಅಂಕುಶದಿಂದ ಮರಳಿಸಿಕೊಂಡು ಹೋಗುವಂತೆ ಛತ್ರಧಾರಿಣಿಯರು ಮಹಾಶ್ವೇತೆಯನ್ನು ಕರೆದುಕೊಂಡು ಹೋದರೆಂದಿದೆ. ಕ್ಷಣಮಾತ್ರದಿ ಈ ಪರಿಯ ಚಿತ್ತಚಾಂಚಲ್ಯ ಗಂಧರ್ವಕನ್ಯೆಗೆ ಎಷ್ಟು ಒಪ್ಪೀತು? ಜನ್ನನ ಯಶೋಧರ ಚರಿತೆಯಲ್ಲೂ ಕ್ಷಣಮಾತ್ರದಿ ಮನಸಿತ್ತ ಅಮೃತಮತಿಯನ್ನಿಲ್ಲಿ ಸಮೀಕರಿಸಬಹುದು. ಉಪ್ಪರಿಗೆಯ ಮೇಲೆ ಸುಕುಮಾರ ಯಶೋಧರನೊಂದಿಗೆ ಸರ್ವಸುಖಗಳನ್ನು ಅನುಭವಿಸಿ ಮಲಗಿರುವ ಅಮೃತಮತಿ ಎಲ್ಲೋ ಬಿನದಕೆ ಪಾಡುವ ನುಣ್ದನಿ ಕತಕಬೀಜಮಾಗಿ ತಟ್ಟನೆ ಪಸಾಯದಾನಂಗೊಟ್ಟಳ್ ಎಂದು ಉಲ್ಲೇಖಿಸಿ, ಕವಿಯೇ ಚಿತ್ತಮಪಾತ್ರೆ ರಮತೇ ನಾರಿ ಎನ್ನುತ್ತಾನೆ. ಇಲ್ಲಿ ಸ್ತ್ರೀ ಸ್ವಭಾವವೇ ಚಂಚಲತೆಯೇನೋ ಎಂಬುವಷ್ಟರ ಮಟ್ಟಿಗೆ ಅನುಮಾನ ಹುಟ್ಟಿಸುತ್ತದೆ.

ಕನ್ನಡ ಚಂಪೂ ಕವಿಗಳು ಹೀಗೆ ಕಾಮವಿಕಾರಗಳನ್ನು ವಣಿಸುವುದೆಷ್ಟು ಸರಿಯೊ? ಇದು ಲೋಕಾನುಭವವೋ? ಇರಬಹುದೆಂಬ ಶಂಕೆಗೆ ದಾರಿಮಾಡಿಕೊಡುತ್ತದೆ. ಮಹಾಶ್ವೇತೆಯ ಚಿತ್ತಚಾಂಚಲ್ಯವು ವಿವಾಹಪೂರ್ವದಾದ್ದರಿಂದ ವಿನಾಯಿತಿಗೆ ಅಥವಾ ಕ್ಷಮೆಗೆ ಅರ್ಹವಿದೆ. ಆದರೆ ಪುಂಡರೀಕನ ಪ್ರೇಮ/ಕಾಮವಿಕಾರ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ.

ಮಹಾಶ್ವೇತೆಯನ್ನು ಕಂಡು ಮನೋವಿಕಾರಕ್ಕೊಳಗಾದ ಪುಂಡರೀಕನನ್ನು ಇತರ ಮುನಿಗಳು ಪ್ರಶ್ನಿಸಿದರೆ ಈತ ಕೊಡುವ ಉತ್ತರ ಹೀಗಿದೆ.

ಕುಡುಚಪಳೆ ಜಪದಮಣಿಯಂ
ಕುಡದಿನ್ನೊಂದಡಿಯನೊಪ್ಪೊಡಂ ಪೋಗದಿರೆಂ
ದೊಡೆ ಕೇಳ್ದು ಜಪದ ಮಣಿಗೆ
ತ್ತೊಡನೆಯೆ ಹಾರಮನೆ ತೆಗೆದೆದೆನ್ನಯ ಕೊರಲಿಂ

ಪುಂಡರೀಕನ ಈ ಅವಸ್ಥೆ ಸಮಾಜದ ಸ್ವಾಸ್ಥ್ಯ ಕದಲಿಸುವುದಿಲ್ಲವೆ? ಎನಿಸಿದರೂ ಕವಿಯಲ್ಲಿ ಈ ಸೂಕ್ಷ್ಮಗಳಿರಬಹುದು. ಇಂದ್ರಿಯ ನಿಗ್ರಹ ಅಸಾಧ್ಯವೆಂದ ಮೇಲೆ ಲೌಕಿಕ ಜಗತ್ತಿಗೆ ಪ್ರವೇಶಿಸಲು ಅನುಮತಿಸಿದ್ದಾನೆ. ಕುವೆಂಪುರವರು ಹೇಳುವಂತೆ ಸಂಭಾವ್ಯ ಘಟನೆಗಳು ಇಚ್ಛಾಶಕ್ತಿಯ ಅಂತಶ್ಚೇತನದ ಮರ್ಮಸೂತ್ರಗಳು ವ್ಯಕ್ತಿಯ ಹಣೆಬರಹದ ನಿರ್ಣಾಯಕವಾಗಿದೆ ಎಂಬುದನ್ನು ಒಪ್ಪಿಕೊಳ್ಳಬಹುದಾಗಿದೆ.

ಒಬ್ಬ ಕವಿ ಏನನ್ನು ನೋಡುತ್ತಾನೆ? ಯಾರನ್ನು ಯಾಕೆ ನೋಡುತ್ತಾನೆಂಬುದು ಸಹೃದಯರಿಗೆ ಔದಾಸೀನ್ಯದ ವಿಷಯವಾಗುವುದಿಲ್ಲ. ಕವಿಹೃದಯದ ಸಂಸ್ಕಾರ, ವಿದ್ಯೆ, ನಾಗರಿಕತೆ, ಕಾವ್ಯಶಕ್ತಿ, ಕಲ್ಪನಾಸಂಪತ್ತು ಇತ್ಯಾದಿಗಳೊಡನೆ ತೋರ್‍ಬೆರಳು ಒರೆಗಲ್ಲಾಗುವಂತಿರುತ್ತದೆ.

ನಾಗವರ್ಮನ ಕರ್ಣಾಟಕ ಕಾದಂಬರಿ ಹತ್ತು ಹಲವು ಜಿಜ್ಞಾಸೆಗಳನ್ನು ಹುಟ್ಟುಹಾಕುತ್ತದೆಯಾದರೂ ವರ್ತಮಾನದ ಹಲವು ಸಂದರ್ಭಗಳಿಗೂ ಮುಖಾಮುಖಿಯಾಗಿಸಿಕೊಳ್ಳಬಹುದಾಗಿದೆ. ಏನೇ ಆದರೂ ಇದೊಂದು ಮಹಾಪ್ರೇಮಕಾವ್ಯ. ಅದ್ಭುತ ಲೌಕಿಕ ರಸದಲ್ಲಿ ಕಾವ್ಯ ಮಿಂದಿದೆ. ಅದರ ಪರಿಮಳವನ್ನು ಆಘ್ರಾಣಿಸುವ ಸಹೃದಯತೆ ಓದುಗರಲ್ಲಿರಬೇಕಷ್ಟೇ.

*ಲೇಖಕಿ ಕೃಷ್ಣರಾಜನಗರ ತಾಲೂಕಿನ ಹಂಪಾಪುರ ಗ್ರಾಮದವರು; ಪ್ರಸ್ತುತ ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಪ್ರಕಟಿತ ಕೃತಿಗಳು: ‘ಲಹರಿ’ (ಕವನ ಸಂಕಲನ), ‘ಕೃಷ್ಣರಾಜನಗರ ತಾಲೂಕಿನ ಗ್ರಾಮದೇವತೆಗಳ ಸಾಂಸ್ಕೃತಿಕ ಅಧ್ಯಯನ’ (ಸಂಶೋಧನಾ ಗ್ರಂಥ).

Leave a Reply

Your email address will not be published.