ನನ್ನ ಕ್ಲಿಕ್ಸ್

ಪಟ್ಟೆತಲೆ ಹೆಬ್ಬಾತು

ಚುಮುಚುಮು ಚಳಿಗಾಲದಲ್ಲಿ ಮಧ್ಯ ಏಶಿಯಾದಿಂದ ಹೊರಟು ದಕ್ಷಿಣ ಭಾರತ ದಿಕ್ಕಿಗೆ ರೆಕ್ಕೆ ಬಡಿಯುತ್ತದೆ ಈ ಪಕ್ಷಿ. ಇದರ ಹಾರಾಟ ಸುಮಾರು 9300 ಮೀಟರು ಎತ್ತರದಲ್ಲಿ. ಗದಗ ಜಿಲ್ಲೆಯ ಮಾಗಡಿ ಕೆರೆಗೆ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನಾಲ್ಕರಿಂದ ಐದು ಸಾವಿರ ಪಟ್ಟೆತಲೆ ಹೆಬ್ಬಾತುಗಳು ವಲಸೆ ಬರುವುದು ವಿಶೇಷ. ಇವು ಎಪ್ರಿಲ್-ಮೇ ತಿಂಗಳಲ್ಲಿ ಅತಿ ಎತ್ತರದ ಪ್ರದೇಶಗಳಾದ ಲಡಾಕ್ ಮತ್ತು ಮಂಗೋಲಿಯಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.
ಕ್ಯಾಮೆರಾ: ನಿಕಾನ್ ಡಿ500, ಮಸೂರ: 500 ಎಂ.ಎಂ., ಎ-5.6, ಎಸ್-500, ಐ.ಎಸ್.ಓ.-400.
 -ಡಾ.ಎನ್.ವಿಜಯ್ ನಾಗರಾಜ, ನೇತ್ರ ತಜ್ಞರು.

ದಿಟವೇ ನಿನ್ನಿರುವು?

ಇಳಿದಿತ್ತು ಹನಿಯೊಂದು
ಇಳೆಯ ಅಂಗಳದೊಳಗೆ
ಬಣ್ಣ ಬಣ್ಣದ ಕನಸು
ಮಡಿಲ ತುಂಬಿ

ಅರಳುತರಳುತ ಹೊರಳು
ಮರುಳು ಮಾಡಿತು ಜಗಕೆ
ಮಾಯಗಾರನ ಚಿತ್ರ

ಹೂವ ಬಸಿರು

ಎಲ್ಲಿತ್ತು ಇನಿತು ದಿನ
ಮನದ ಕನ್ನಡಿಯೊಳಗೆ
ಮಿಂಚಿ ಮರೆಯಾಗುತಿಹ
ಚಿಗುರು ಕೊನರು

ಬಿಂಬದೊಳಗಿನ ಬಿಂಬ
ಎದೆಗೊಳದ ಬೆಳಕೇ
ದಿಟವಹುದೆ ನಿನ್ನಿರುವು
ಕವಿವ ಇರುಳು

-ನೈರೋಬಿಯಿಂದ ಪ್ರಜ್ಞಾ .

ಕಂದು ಬೆಳವ
ವು ಶುಷ್ಕ ಕೃಷಿಭೂಮಿ ಮತ್ತು ಅದರ ವ್ಯಾಪ್ತಿಯ ಪ್ರದೇಶಗಳಲ್ಲಿ, ಬೆಟ್ಟ, ಬಂಡೆ, ಕುರುಚಲು ಕಾಡುಗಳ ಪೊದೆ ಮರಗಳಲ್ಲಿ ಜೊತೆಯಾಗಿ ವಾಸಿಸುವ ಸಾಧು ಪಕ್ಷಿಗಳಾಗಿವೆ; ದೊಡ್ಡ ಗುಂಪುಗಳಲ್ಲಿ ವಾಸಿಸುವುದಿಲ್ಲ. ನೀರನ್ನು ಅರಸಿ ಬಂದಾಗ ಹೊಳೆ ಅಥವಾ ಕೆರೆಗಳ ಸನಿಹದಲ್ಲಿ ಸಣ್ಣ ಗುಂಪುಗಳಲ್ಲಿ ನೀರಿನ ಅಂಚಿನಲ್ಲಿ ಕುಳಿತು ನೀರನ್ನು ಗುಟುಕರಿಸುತ್ತವೆ. ನೆಲದ ಮೇಲೆ ಬಿದ್ದ ಕಾಳುಗಳನ್ನು ಮೆಯುತ್ತವೆ. ನೀರಿಗಿಳಿದು ಸ್ನಾನ ಮಾಡಲು ಇಷ್ಟ ಪಡುತ್ತವೆ.

 

ಮಿಲನ ಪೂರ್ವದಲ್ಲಿ ಗಂಡು-ಹೆಣ್ಣು ಪ್ರಣಯಾಚರಣೆಯಲ್ಲಿ ತೊಡಗಿ ಗಂಡು ಪ್ರಣಯದ ಗುಟುಕನ್ನು ನೀಡುತ್ತಾ ಪ್ರಚೋದಿಸಿದರೆ ಹೆಣ್ಣು ಗುಟುಕನ್ನು ಸ್ವಿಕರಿಸಲು ಬೇಡಿಕೆಯನ್ನಿಡುತ್ತದೆ. ತಕ್ಷಣ ಗಂಡು ಹಕ್ಕಿಯು ಪ್ರಣಯದ ತುತ್ತನ್ನು ಹೆಣ್ಣು ಹಕ್ಕಿಯ ಕೊಕ್ಕಿನಲ್ಲಿಕ್ಕುತ್ತದೆ. ಇಲ್ಲವೇ ಗಂಡು ಹಕ್ಕಿಯು ಪ್ರಣಯಕ್ಕೆ ಹೆಣ್ಣನ್ನು ಸಂಮೋಹನಗೊಳಿಸಲು ‘ಪ್ರಣಯ ಪ್ರದರ್ಶನ’ ಅಥವಾ ‘ಪುಕ್ಕಗಳನ್ನು ಅರಳಿಸುವಿಕೆ’ಯನ್ನು ತೋರ್ಪಡಿಸುತ್ತದೆ. ನಂತರ ಗಂಡು-ಹೆಣ್ಣುಗಳು ಮಿಲನಗೊಳ್ಳುತ್ತವೆ. ಸಂತಾನಾಭಿವೃದ್ಧಿ ಸಮಯವು ನಿರ್ದಿಷ್ಟ ಕಾಲಮಿತಿ ಹೊಂದಿರುವುದಿಲ್ಲ. ಪೊದೆಗಳಲ್ಲಿ ಕಡ್ಡಿಗಳಿಂದ ಅಡ್ಡಾದಿಡ್ಡಿಯಾದ ವೃತ್ತಾಕಾರ ಗೂಡನ್ನು ಕಟ್ಟಿ ಎರಡು ಬಿಳಿ ಮೊಟ್ಟೆಗಳನ್ನಿಟ್ಟು ಮರಿ ಮಾಡಿಸುತ್ತವೆ.

ಕಂದು ಬೆಳವ ಹಕ್ಕಿ ಸಂಸ್ಕೃತದಲ್ಲಿ ಕಪೋತ, ಲಂಬಾಣಿಯಲ್ಲಿ ಕಯಾ ಎಂದು ಕರೆಯಿಕೊಳ್ಳುತ್ತದೆ. ಆಂಗ್ಲಭಾಷೆಯಲ್ಲಿ ಲಿಟಲ್ ಬ್ರೌನ್ ಡೌ, ಲಾಫಿಂಗ್ ಡೌ, ಸೆನೆಗಲ್ ಡೌ ಎಂಬ ಹೆಸರಿವೆ. ‘ಸ್ಪಿಲೊಪೆಲಿಯಾ ಸೆನಗಾಲೆನ್ಸಿಸ್’ ಎಂಬುದು ಪಕ್ಷಿಶಾಸ್ತ್ರೀಯ ಹೆಸರು; ‘ಕೊಲಂಬಿಫಾರ್ಮಿಸ್’ ಗಣದ ‘ಕೊಲಂಬಿಡೇ’ ಕುಟುಂಬಕ್ಕೆ ಸೇರಿದೆ.

                                                                                                         -ಶಶಿಧರಸ್ವಾಮಿ ಆರ್. ಹಿರೇಮಠ.

Leave a Reply

Your email address will not be published.