ಜೀವನೋದ್ದೇಶದ ಮಹತ್ವ

ಇಪ್ಪತ್ತು ವರ್ಷಗಳ ಕಾಪೆರ್ರೇಟ್ ಅನುಭವದ ಹಿನ್ನೆಲೆಯುಳ್ಳ ಕೃಷ್ಣ ಗಣೇಶ್ ಸಾಮಾಜಿಕ ಬದಲಾವಣೆ ಉಂಟುಮಾಡಲು ಇಚ್ಛಿಸುವ ಯುವ ಪೀಳಿಗೆಗೆ ದಾರಿದೀಪವಾಗಲೆಂಬ ಉದ್ದೇಶ ಈ ಕೃತಿಗಿದೆ.

ಲೇಖಕರು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಹದಿನಾರು ಸಾಧಕರ ಯಶಸ್ಸಿನ ಹಾದಿಯನ್ನು ‘ದಿ ಪವರ್ ಆಫ್ ಪರ್ಪಸ್ ಇನ್ ಲೈಫ್ ‘ ಹೊತ್ತಿಗೆಯಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕಕ್ಕೆ ಭಾರತೀಯ ಸಾಧಕರನ್ನೇ ಆಯ್ಕೆ ಮಾಡಿಕೊಂಡ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ.

ವಹಿವಾಟು ನಡೆಸಲು ಸುಲಭವೆನಿಸುವ ದೇಶಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ಸಮೀಕ್ಷೆಗಳ ನೆರವಿನಿಂದ ಸಿದ್ಧಪಡಿಸುತ್ತದೆ. 183 ದೇಶಗಳನ್ನೊಳಗೊಂಡ ಇಂತಹ ಒಂದು ಸಮೀಕ್ಷೆಯಲ್ಲಿ ದೊಡ್ಡ ರಾಷ್ಟ್ರವಾಗಿರುವ ಭಾರತ 132ನೆಯ ಸ್ಥಾನ ಪಡೆದಿತ್ತು. ಅಂದರೆ, ಅನೇಕ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉದ್ಯಮ ನಡೆಸುವುದು ಕಷ್ಟ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಇಲ್ಲಿ ಉದ್ದಿಮೆಯನ್ನು ಸ್ಥಾಪಿಸಿ, ಯಶಸ್ವಿಯಾಗಿ ನಡೆಸಿಕೊಂಡುಬಂದು, ವಿಶ್ವದ ಅಗ್ರಗಣ್ಯ ಸಂಸ್ಥೆಗಳನ್ನಾಗಿಸಿದ ಈ ಸಾಧಕರ ಮೇಲ್ಪಂಕ್ತಿ ಅನುಕರಣೀಯ. ಹಾಗಾಗಿ ಅಮೆರಿಕ, ಜರ್ಮನಿ, ಅಥವ ಫ್ರಾನ್ಸ್ ದೇಶಗಳ ಉದ್ಯಮಪತಿಗಳ ಬದಲಿಗೆ ಭಾರತೀಯರ ಯಶೋಗಾಥೆಯನ್ನು ದಾಖಲಿಸಿರುವುದಾಗಿ ಲೇಖಕರು ತಿಳಿಸಿದ್ದಾರೆ. ಭಾರತದಲ್ಲಿ ಯಶಸ್ವಿಯಾದವರು ಬೇರೆ ದೇಶಗಳಲ್ಲಿ ಸುಲಭವಾಗಿ ಯಶಸ್ಸುಗಳಿಸಬಲ್ಲರು ಎಂಬುದು ಅವರ ನಂಬಿಕೆ.

ಲೇಖಕರು ಕೆಲಸ ಮಾಡುತ್ತಿದ್ದ, ಬೆಂಗಳೂರಿನ ಏಸ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಂಸ್ ಲಿಮಿಟೆಡ್ (ಎ.ಎಂ.ಎಸ್.ಎಲ್.) ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಾಮದಾಸ್ ತಮ್ಮ ಮುನ್ನುಡಿಯಲ್ಲಿ, ‘ಜೀವನಕ್ಕೊಂದು ಗುರಿಯಿರಬೇಕು, ಅದು ಉನ್ನತ ಮಟ್ಟದ ಅಸ್ತಿತ್ವವನ್ನು ತಲುಪುವ ಗುರಿಯಾಗಿರಬೇಕು’ ಎಂದು ವಿಶದೀಕರಿಸಿದ್ದಾರೆ. ಸಮಾಜವನ್ನು ಬದಲಿಸಲು ನೆರವಾಗುವ ಹಿರಿಯ ಉದ್ದೇಶ ಲೇಖಕರದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪುಸ್ತಕ ವ್ಯಕ್ತಿಯ ‘ಸಹಜ ಸಾಮರ್ಥ್ಯ’ಕ್ಕೆ ಒತ್ತು ನೀಡಿರುವುದನ್ನು ತಿಳಿಯಪಡಿಸಿದ್ದಾರೆ.

ಜನಾಂಗ, ಧರ್ಮ, ಮತ್ತು ದೇಶಗಳ ಹೊರತಾಗಿ ಜನರು ಅಪೇಕ್ಷಿಸುವುದು ಸಂತೋಷವನ್ನು. ಬೇರೆಬೇರೆ ವ್ಯಕ್ತಿಗಳು ಬೇರೆಬೇರೆ ರೀತಿಗಳಲ್ಲಿ ಸಂತಸವನ್ನು ಕಂಡುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಸಂತಸ ಬಹುಕಾಲ ಉಳಿಯುವಂತಹುದಲ್ಲ. ಸಂತೋಷ ಸದಾಕಾಲ ನೆಲೆಸಿರಬೇಕಾದರೆ ಜೀವನೋದ್ದೇಶ ಮುಖ್ಯವಾಗುತ್ತದೆ. ಜೀವನದಲ್ಲಿ ಉದ್ದೇಶ ಹೊಂದಿರುವುದರಿಂದ ಆಗುವ ಅನುಕೂಲಗಳನ್ನು ಲೇಖಕರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

ಜೀವನವು ವ್ಯಕ್ತಿಯ ಸಹಜ ಕೌಶಲ್ಯ/ಸಾಮರ್ಥ್ಯದ ವಿಸ್ತರಣೆಯಾಗಬೇಕು. ಈ ಸಹಜ ಕೌಶಲ್ಯ ಆಸಕ್ತಿಯೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಆಸಕ್ತಿಗನುಗುಣವಾದ ಕೆಲಸವನ್ನು ಹೃದಯಾಂತರಾಳದಿಂದ ಮಾಡಲಾಗುತ್ತದೆ. ಹೀಗೆ ಮಾಡಿದ ಕೆಲಸ ಪರಿಪೂರ್ಣವಾಗಿರುತ್ತದೆ. ಹಾಗಾಗಿ, ಜೀವನದ ಮೂಲ ಉದ್ದೇಶ ಕಂಡುಕೊಳ್ಳುವ ಮೊದಲು ವ್ಯಕ್ತಿ ತನ್ನ ಸಹಜ ಕೌಶಲ್ಯವನ್ನು ಅರಿತುಕೊಳ್ಳಬೇಕಾದದ್ದು ಅತ್ಯವಶ್ಯಕ. ಆತ್ಮಾವಲೋಕನದಿಂದ ಈ ಕೌಶಲ್ಯವನ್ನು ಗುರ್ತಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನೆರವಾಗಬಲ್ಲ ಹತ್ತಾರು ಪ್ರಶ್ನೆಗಳನ್ನು ಲೇಖಕರು ಓದುಗರ ಮುಂದಿಟ್ಟಿದ್ದಾರೆ. ಈ ಪ್ರಕ್ರಿಯೆ ಕಷ್ಟ ನಿಜ. ಆದರೆ ಖಂಡಿತ ಅಸಾಧ್ಯವಲ್ಲ. ಈ ಆಶಾದಾಯಕ ನುಡಿಗಳ ಜೊತೆಗೆ ಬುದ್ಧ, ಮದರ್ ಥೆರೆಸಾ, ಥಾಮಸ್ ಆಲ್ವ ಎಡಿಸನ್, ನಿಕೊಲ ಬೆಸ್ಲ ಮುಂತಾದವರನ್ನು ಉದಾಹರಿಸಿದ್ದಾರೆ.

ಬಜಾಜ್‍ನ ರಾಹುಲ್, ಟೈಟನ್‍ನ ಭಾಸ್ಕರ್ ಭಟ್, ಮಹೀಂದ್ರ ಅಂಡ್ ಮಹೀಂದ್ರದ ಆನಂದ್ ಮಹೀಂದ್ರ, ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ, ಬಯೋಕಾನ್‍ನ ಕಿರಣ್ ಮಜುಂದಾರ್ ಶಾ, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಹೇಮಾ ರವಿಚಂದರ್, ಬಹುಮುಖ ಪ್ರತಿಭೆಯ ಮೋಹನ್‍ದಾಸ್ ಪೈ, ‘ನ್ಯಾನೋ’ ಕಾರಿನ ಜನಕ ರತನ್ ಟಾಟಾ, ಲೀಲಾ ಪ್ಯಾಲೆಸ್ ಹೋಟೆಲ್‍ನ ಕ್ಯಾಪ್ಟನ್ ಕೃಷ್ಣನ್ ನಾಯರ್, ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ‘ಏರ್ ಡೆಕ್ಕನ್’ ಜನಕ ಕ್ಯಾಪ್ಟನ್ ಗೋಪಿನಾಥ್, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಭಾರತ್ ಪೊರ್ಜ್‍ನ ಬಾಬಾಸಾಹೇಬ್ ನೀಲಕಂಠ್ ಕಲ್ಯಾಣಿ, ಐಗೇಟ್‍ನ ಫಣೀಶ್ ಮೂರ್ತಿ, ಎ.ಎಂ.ಎಸ್.ಎಲ್. ಸಂಸ್ಥೆಯ ರಾಮದಾಸ್, ಮತ್ತು ಥರ್ಮಾಕ್ಸ್ ಇಂಡಿಯಾದ ಮಹಿಳಾ ಶಕ್ತಿಗಳಾದ ಅನು ಆಘ ಹಾಗೂ ಮೆಹೆರ್ ಪುದುಂಜಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಅನುಪಮ ಸಾಧನೆಗಳನ್ನು ಈ ಹೊತ್ತಿಗೆಯಲ್ಲಿ ಪರಿಚಯಿಸಲಾಗಿದೆ. ಈ ಎಲ್ಲ ದಿಗ್ಗಜಗಳ ಯಶಸ್ಸಿನ ಹಾದಿ ಸುಗಮವಾದದ್ದೇನೂ ಆಗಿರಲಿಲ್ಲ. ಧ್ಯೇಯದೊಡನೆ ಅಚಲ ಆತ್ಮವಿಶ್ವಾಸ, ದೃಢ ನಿರ್ಧಾರ, ಕಠಿಣ ಪರಿಶ್ರಮ, ಪ್ರತಿಕೂಲ ವಾತಾವರಣವನ್ನು ನಿಭಾಯಿಸುವ ಜಾಣ್ಮೆ, ತಾಳ್ಮೆ, ಮುಂತಾದ ಗುಣಗಳನ್ನು ಮೈಗೂಡಿಸಿಕೊಂಡು ದುರ್ಗಮ ಹಾದಿಯನ್ನು ಹಾಯ್ದು, ಇವರು ದಿಗ್ವಿಜಯ ಸಾಧಿಸಿರುವುದನ್ನು ದಾಖಲಿಸಿದ್ದಾರೆ.

ರಾಜೀವ್ ಬಜಾಜ್ ಹಾಗೂ ಆನಂದ್ ಮಹೀಂದ್ರ ಇವರಿಬ್ಬರೂ ಆಟೊಮೊಬೈಲ್ ಕ್ಷೇತ್ರದಲ್ಲಿ ಸಾಧನೆಗೈದಿದ್ದರೂ ಅವರಿಬ್ಬರ ಮೂಲ ಆಸಕ್ತಿಗಳು, ಕೌಶಲ್ಯಗಳು ಬೇರೆ ಬೇರೆಯಾಗಿದ್ದುದನ್ನು ಲೇಖಕರು ಗುರ್ತಿಸುತ್ತಾರೆ. ತಾಂತ್ರಿಕತೆ ರಾಜೀವರ ಒಲವಾಗಿದ್ದರೆ ವ್ಯವಹಾರ ಚತುರತೆ ಆನಂದರ ಕೌಶಲ್ಯವಾಗಿತ್ತು. ರತನ್ ಟಾಟಾ ಸಹ ಆನಂದರಂತೆ ವ್ಯವಹಾರ ಚತುರರಾಗಿದ್ದರು. ಡಾ.ದೇವಿಶೆಟ್ಟಿಯವರ ಸಾಧನೆ ಸಾಧ್ಯವಾಗಿದ್ದು ಜನಸೇವೆಗಾಗಿ ಸದಾ ಹಾತೊರೆಯುತ್ತಿದ್ದ ಅವರ ಹೃದಯ ಮಿಡಿತದಿಂದ. ಈ ಹೃದಯತಜ್ಞರ ಕಳಕಳಿಯ ಫಲವಾಗಿ ಜನಿಸಿದ ಕೂಸು ‘ಯಶಸ್ವಿನಿ’. ಹೀಗೆ ಇತರರೂ ಸಹ ಉತ್ತುಂಗ ತಲುಪಲು ತಮ್ಮತಮ್ಮ ಸಹಜ ಕೌಶಲ್ಯಗಳನ್ನು ಅರಿತುಕೊಂಡು, ಬಳಸಿಕೊಂಡಿದ್ದಾರೆ.

ಆಲ್ಡ್ಫ್ರೆಡ್ ಹಿಚ್‍ಕಾಕ್, ಚಾರ್ಲಿ ಚಾಪ್ಲಿನ್, ಜೇಮ್ಸ್ ಕಮೆರಾನ್, ಜೆ.ಕೆ.ರೌಲಿಂಗ್, ಸ್ಟೀವ್ ಜಾಬ್ಸ್, ಮೈಕೆಲ್ ಜಾಕ್ಸನ್, ಮಹಾತ್ಮಾ ಗಾಂಧಿ, ರೈಟ್ ಬ್ರದರ್ಸ್, ವಾಲ್ಟ್ ಡಿಸ್ನೆ, ಹೀಗೆ ಅನೇಕ ಸಾಧಕರ ಬಗ್ಗೆ ತಿಳಿಸುತ್ತಾ ಇವರೆಲ್ಲರೂ ತಮ್ಮ ಸಹಜ ಸಾಮರ್ಥವನ್ನು ಸಮರ್ಪಕವಾಗಿ ಬಳಸಿಕೊಂಡುದನ್ನು ಬೆನ್ನುಡಿಯಲ್ಲಿ ತಿಳಿಸಿಕೊಟ್ಟಿದ್ದಾರೆ.

(ಪುಸ್ತಕ ವಿವರ: ‘ದಿ ಪವರ್ ಆಫ್ ಪರ್ಪಸ್ ಇನ್ ಲೈಫ್’, ಲೇ: ಕೃಷ್ಣ ಗಣೇಶ್, ಪ್ರ: ಸಿನಾಮೊಂಟೀಲ್ ಪಬ್ಲಿಶಿಂಗ್, ಬೆಲೆ: ರೂ.410)

Leave a Reply

Your email address will not be published.