ಚೀನಾದ ಪ್ರಗತಿದರ ಹಿಂದಿಕ್ಕಿದ ಭಾರತ

ಜಿಎಸ್‍ಟಿ ಮತ್ತು ನೋಟು ಅಮಾನ್ಯೀಕರಣಗಳ ತಾತ್ಕಾಲಿಕ ಹಿನ್ನಡೆಯನ್ನು ಮೆಟ್ಟಿ ಭಾರತದ ಆರ್ಥಿಕ ಪ್ರಗತಿ ಮುನ್ನುಗ್ಗುತ್ತಿದ್ದರೆ, ಚೀನಾದ ಪ್ರಗತಿ ವರ್ಷದಿಂದ ವರ್ಷಕ್ಕೆ ಕುಂಟುತ್ತಿದೆ.

ಕಳೆದ ವರ್ಷ ಭಾರತದ ಅಭಿವೃದ್ಧಿ ಶೇಕಡಾ 7.3 ರಷ್ಟಿದ್ದರೆ 2019ರಲ್ಲಿ 7.44 ರಷ್ಟಿರುವುದೆಂದು ಅಂದಾಜಿಸಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಚೀನಾದ ಆರ್ಥಿಕ ಬೆಳವಣಿಗೆಯ ದರ ಶೇಕಡಾ 6.6ರಿಂದ 2019ರಲ್ಲಿ ಶೇಕಡಾ 6.2ಕ್ಕೆ ಇಳಿಯಲಿದೆ ಎಂದು ಆರ್ಥಿಕ ಪಂಡಿತರು ಅಂದಾಜು ಮಾಡಿದ್ದಾರೆ.

2018ರ ಕಡೆಯ ಮೂರು ತಿಂಗಳ ತ್ರೈಮಾಸಿಕ ಅವಧಿಯಲ್ಲಿ ಚೀನಾದ ಬೆಳವಣಿಗೆ ಶೇಕಡಾ 6.4ಕ್ಕೆ ಇಳಿದಿದೆ. ಕಳೆದ 28 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಆರ್ಥಿಕ ಪ್ರಗತಿಯ ತ್ರೈಮಾಸಿಕ ಅವಧಿಯಾಗಿದೆ. ಅಂದರೆ 1990ರಿಂದ ಅಮೋಘ ಆರ್ಥಿಕ ಬೆಳವಣಿಗೆ ಕಂಡ ಚೀನಾ ಇದೀಗ ಏದುಸಿರು ಬಿಡುವಂತಾಗಿದೆ. ಸಂಪೂರ್ಣ ನಿಯಂತ್ರಿತ ಆರ್ಥಿಕತೆಯೂ ಅಲ್ಲದ ಹಾಗೂ ಮುಕ್ತ ಮಾರುಕಟ್ಟೆಯ ಸ್ಪರ್ಧಾತ್ಮಕತೆಯೂ ಇಲ್ಲದ ತನ್ನದೇ ಆದ ‘ತ್ರಿಶಂಕು ಆರ್ಥಿಕತೆ’ಯಲ್ಲಿ ಚೀನಾ ಸಿಕ್ಕಿಹಾಕಿಕೊಂಡಿದೆ.

ಆರ್ಥಿಕ ಪ್ರಗತಿಯ ದರ

    China    India
   2012      7.9%     5.4%
   2013      7.8%     6.39%
   2014      7.3%     7.41%
   2015      6.9%     8.16%
   2016      6.7%     7.11%
   2017      6.9%     6.68%
   2018      6.6%     7.3%
   2019     6.2%     7.44%
China and India Flags in puzzle isolated on white background 3D rendering

ಬ್ಯಾಂಕುಗಳು ಹಾಗೂ ಹೂಡಿಕೆ ಸಂಸ್ಥೆಗಳು ಸರ್ಕಾರಿ ವಲಯದಲ್ಲಿದ್ದರೆ ಬಹುತೇಕ ಉತ್ಪಾದನಾ ಕಂಪನಿಗಳು ಖಾಸಗಿಯವರ ಕೈಯಲ್ಲಿವೆ. ದೇಶಾದ್ಯಂತ ಪೂರೈಕೆ ವ್ಯವಸ್ಥೆಯು ಖಾಸಗಿಯಾಗಿದ್ದರೆ ಬೆಲೆ ನಿಯಂತ್ರಣವಿನ್ನೂ ಸರ್ಕಾರದ ಕೈಯಲ್ಲಿದೆ. ಹೀಗೆ ಸರ್ಕಾರಿ-ಖಾಸಗಿಯ ಅಸಹಜ ಸಮ್ಮಿಶ್ರ ಧಾಟಿಯಲ್ಲಿರುವ ಆರ್ಥಿಕ ಕ್ಷೇತ್ರವು ಕಳೆದ ಕೆಲವು ವರ್ಷಗಳಲ್ಲಿ ತನ್ನ ಪ್ರಗತಿಯ ಮಿತಿ ಕಾಣುತ್ತಿದೆ. ದೇಶದ ಒಟ್ಟು ಬೇಡಿಕೆ ಕುಸಿಯುತ್ತಿದ್ದರೆ ಅಮೆರಿಕದ ಟ್ರಂಪ್ ಆಡಳಿತ ವಿಧಿಸಿರುವ ಕಸ್ಟಮ್ಸ್ ಹೇರಿಕೆಯ ನಿಯಂತ್ರಣದಲ್ಲಿ ರಫ್ತು ಕೂಡಾ ಸೊರಗಿದೆ. ಕೇವಲ ಕೈಗಾರಿಕಾ ಉತ್ಪನ್ನಗಳ ರಫ್ತಿನ ಮೇಲೆ ಅವಲಂಬಿತವಾದ ಚೀನಾದ ಆರ್ಥಿಕತೆ ವಿಶ್ವಾದ್ಯಂತ ಸರ್ಕಾರಗಳ ಆಮದು ನಿಷೇಧದ ಕೆಂಗಣ್ಣಿಗೆ ಗುರಿಯಾಗಿದೆ.

ಕಳೆದ ಕೆಲವೆರೆಡು ವರ್ಷಗಳಲ್ಲಿ ಕಡಿಮೆಯಾದ ಖಾಸಗಿ ಹೂಡಿಕೆಯ ಬದಲು ಸರ್ಕಾರಿ ಹೂಡಿಕೆ ಹೆಚ್ಚು ಮಾಡಿದ್ದರೂ ಈ ಹೂಡಿಕೆಯು ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಲಾಗುತ್ತಿಲ್ಲ. ಮೇಲಾಗಿ ಖಾಸಗಿ-ಸರ್ಕಾರಿ ಹೂಡಿಕೆಗಳ ನಡುವೆ ಅಂತರವೇ ಇಲ್ಲದ ರೀತಿಯಲ್ಲಿ ಎಲ್ಲ ಹೂಡಿಕೆಗಳ ಭಾರ ಸರ್ಕಾರಿ ನಿಯಂತ್ರಣದ ಬ್ಯಾಂಕುಗಳ ಮೇಲೆ ಬಿದ್ದಿದೆ. ಈ ಬ್ಯಾಂಕುಗಳ ಸಾಲದ ಹೊರೆಯ ಸಂಪೂರ್ಣ ಚಿತ್ರಣ ಇನ್ನೂ ಗುಟ್ಟಾಗಿಯೇ ಇದ್ದರೂ ಇವುಗಳ ಪರಿಸ್ಥಿತ ಆರೋಗ್ಯಕರವಾಗಿಲ್ಲ ಎಂಬುದು ಮೇಲ್ನೋಟಕ್ಕೇ ಕಾಣಸಿಗುತ್ತಿದೆ.

ಚೀನಾದ ಆರ್ಥಿಕತೆಯನ್ನು ಇನ್ನೂ ಆಳಕ್ಕೆ ಇಳಿದು ನೋಡಿದರೆ ವಿಶ್ವದ ಒಟ್ಟು ಆರ್ಥಿಕತೆಗೇ ಅಪಾಯಕಾರಿಯಾಗಬಲ್ಲ ಅನೇಕ ಗಂಭೀರ ಸಂಗತಿಗಳು ಹೊರಬೀಳುತ್ತವೆ. ಚೀನಾದ ಸರ್ಕಾರಿ ನಿಯಂತ್ರಣದ ಅಂಕಿಅಂಶ ವರದಿಗಳನ್ನು ನಂಬುವಂತಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ಅನುಪಯುಕ್ತ ಸಾಲದ ಮೊತ್ತವನ್ನು ಹೇಗೆ ತೋರಿಸುತ್ತಿವೆ ಹಾಗೂ ಈ ಸಾಲವನ್ನು ಹೇಗೆ ವಾಪಸು ಪಡೆಯಬಲ್ಲವು ಎಂಬುದು ಕೂಡಾ ತಿಳಿಯದಾಗಿದೆ. ಚೀನಾದ ಗ್ರಾಮೀಣ ಭಾಗದಲ್ಲಿನ ಜನರ ಆರ್ಥಿಕ ಪ್ರಗತಿಯ ಮಾನದಂಡವೂ ಇಲ್ಲವಾಗಿದೆ.

ವಾಕ್ ಮತ್ತು ಮಾಧ್ಯಮ ಸ್ವಾತಂತ್ರ್ಯವಿಲ್ಲದ ದೇಶದಲ್ಲಿ ಯಾರಾದರೂ ಅಪ್ರಿಯ ನಿಜಸಂಗತಿಯನ್ನು ಹೇಳಹೊರಟರೆ ಅವರನ್ನು ದೇಶದ್ರೋಹಿಗಳೆಂಬ ಹಣೆಪಟ್ಟಿ ಕಟ್ಟಿ ನಿಲ್ಲಿಸಲಾಗುತ್ತದೆ. ಕೇವಲ ರಫ್ತಿನ ಮೇಲೆ ನಿರ್ಧಾರವಾದ ದೇಶ ಎಲ್ಲಿಯವರೆಗೆ ಸದೃಢವಾಗಿರಬಲ್ಲುದು ಎಂಬ ಪ್ರಶ್ನೆಯೂ ಎಲ್ಲರ ಮುಂದಿದೆ. ಆದರೆ ದೇಶದ ಆರ್ಥಿಕತೆಯೇನಾದರೂ ಕುಸಿದರೆ ಅದರ ಪರಿಣಾಮ ವಿಶ್ವದ ಆರ್ಥಿಕತೆಯ ಮೇಲೂ ಗುರುತರವಾಗಿ ಬೀಳಲಿದೆ. ಚೀನಾದಿಂದ ಆಯಾತ ಮಾಡಿಕೊಳ್ಳುವ ಮತ್ತು ಚೀನಾಕ್ಕೆ ನಿರ್ಯಾತ ಮಾಡುವ ಅಮೆರಿಕವಂತೂ ಚೀನಾದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಕಂಡು ಚಿಂತಾಕ್ರಾಂತವಾಗಿದೆ.

Leave a Reply

Your email address will not be published.