ಕನ್ನಡ ಚಿತ್ರರಂಗದ ಸಾಮರ್ಥ್ಯಕ್ಕೆ ಕನ್ನಡಿ ಕೆ.ಜಿ.ಎಫ್.

ಕೆ.ಜಿ.ಎಫ್. ಒಳ್ಳೆಯ ಚಿತ್ರವೇ? ವಿಭಿನ್ನ ಚಿತ್ರವೇ? ಮಹಾನ್ ಚಿತ್ರವೇ? ಥಟ್ಟನೆ ಹೌದೆನ್ನುವುದು ಕಷ್ಟ. ಆದರೆ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳ ಭಾಷೆಗಳಲ್ಲಿ ಏಕ ಕಾಲದಲ್ಲಿ ತೆರೆ ಕಂಡು ಕನ್ನಡ ಚಿತ್ರರಂಗದ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿರುವ ಈ ಚಿತ್ರ ಕನ್ನಡ ಚಿತ್ರರಂಗದ ಮೇಲೆ ಬೀರಿರುವ ಪರಿಣಾಮ ಅಗಾಧ.

ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕನ್ನಡಿಗರಿಗೆ ಅರಗಿಸಿಕೊಳ್ಳಲಾಗದಷ್ಟು ಹೆಮ್ಮೆ ತಂದಿದೆ. ಹಿಂದಿ, ತಮಿಳು… ಚಿತ್ರಗಳಿಗೆ ಸಮನಾಗಿ ತೊಡೆತಟ್ಟಿ ನಿಂತು, ಕೇವಲ 18 ದಿನಗಳಲ್ಲಿ ಗಳಿಕೆಯಲ್ಲಿ 200 ಕೋಟಿ ರೂಪಾಯಿಗಳನ್ನು ದಾಟಿ, ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ತೋರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಚಿತ್ರ ನಿರ್ಮಾಪಕರು ಹಾಗೂ ಚಿತ್ರೋದ್ಯಮ ದೊಡ್ಡ ಕನಸುಗಳನ್ನು ಕಾಣಲು ದಾರಿ ತೋರಿಸಿದೆ. ಕನ್ನಡ ಚಿತ್ರರಂಗಕ್ಕೆ ಕರ್ನಾಟಕದಾಚೆಗೆ ಮಾರುಕಟ್ಟೆ ಸಾಧ್ಯವೇ ಇಲ್ಲವೆಂದುಕೊಂಡು, ಚಿಕ್ಕಚಿಕ್ಕ ಕನಸುಗಳನ್ನು ಕಟ್ಟಿಕೊಂಡು, ಸೀಮಿತ ಬಜೆಟ್‍ನಲ್ಲಿ ಚಿತ್ರ ಮಾಡಿಕೊಂಡು, ಅಲ್ಪಸ್ವಲ್ಪ ದುಡ್ಡು ಮಾಡಿಕೊಂಡು (ಅಥವಾ ಕಳೆದುಕೊಂಡು) ‘ಬಡವಾ ನೀ ಮಡಗ್ದಂಗಿರು’ ಎಂದು ಸುಮ್ಮನಿರುತ್ತಿದ್ದ ಗಾಂಧಿನಗರಕ್ಕೆ ಹೊಸ ಸಾಧಕಗಳನ್ನು ತೋರಿಸಿದೆ; ಕನಸು ಕಾಣ್ರಪ್ಪ, ದೊಡ್ಡ ದೊಡ್ಡ ಆಕಾಂಕ್ಷೆಗಳನ್ನು ಇಟ್ಟುಕೊಳ್ರಪ್ಪ ಎಂದು ಈ ಚಿತ್ರ ಕಿವಿ ಹಿಂಡಿ ಹೇಳಿದೆ. ಕೆ.ಜಿ.ಎಫ್. ಸುನಾಮಿಗೆ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಗಳು ಬೆರಗಾಗಿವೆ.

ಮುಖ್ಯವಾಗಿ ಚಿತ್ರ ನಿರ್ಮಾಣ ಭಾಷೆಯನ್ನು ಮೀರಿದ್ದು. ಇದೊಂದು ದೃಶ್ಯ ಮಾಧ್ಯಮ. ಇಲ್ಲಿ ಕಥೆ, ಚಿತ್ರಕಥೆ, ನಿರ್ಮಾಣ ಕೌಶಲ್ಯ, ನಿರ್ಮಾಣ ವಿನ್ಯಾಸ, ನಿರ್ದೇಶನ ಮುಖ್ಯವಾದದ್ದು ಎಂಬುದನ್ನು ಎಲ್ಲರಿಗೂ ಈ ಚಿತ್ರ ಮನದಟ್ಟು ಮಾಡಿಕೊಟ್ಟಿದೆ. ಹಾಗೆ ನೋಡಿದರೆ ಯಾವುದೇ ಕಥೆ ಉತ್ತಮವಾಗಿದ್ದರೆ ಅದಕ್ಕೆ ಸಾರ್ವತ್ರಿಕತೆ ಗುಣವಿರುತ್ತದೆ. ನಿರ್ದೇಶಕನಿಗೆ ತನ್ನ ಕಥೆಯಲ್ಲಿ ಹಾಗೂ ನಿರ್ದೇಶನದ ಗುಣಮಟ್ಟದಲ್ಲಿರುವ ನಂಬಿಕೆ ಮುಖ್ಯವಾಗುತ್ತದೆ. ನಾವು ಎಷ್ಟೋ ಇಂಗ್ಲಿಷ್ ಚಿತ್ರಗಳನ್ನು, ಇತರ ಭಾಷೆಯ ಚಿತ್ರಗಳನ್ನು ನೋಡಿ ಆನಂದಿಸುತ್ತೇವೆ. ಆ ಚಿತ್ರಗಳಲ್ಲಿನ ಕಥಾವಸ್ತುಗಳು ನಮ್ಮ ಜೀವನಶೈಲಿಗಿಂತ ಹಾಗೂ ನಾವು ಅನುಭವಿಸುವ ಜೀವನಕ್ಕಿಂತ ವಿಭಿನ್ನವಾಗಿರುತ್ತವೆ. ಆದರೆ ಒಂದು ಚಿತ್ರ ಚೆನ್ನಾಗಿದ್ದರೆ ಭಾಷೆ ಹಾಗೂ ಪ್ರಸ್ತುತತೆಯನ್ನು ಮೀರಿ ನಾವು ಆ ಚಿತ್ರವನ್ನು ಮೆಚ್ಚುತ್ತೇವೆ. ಹಾಗಿದ್ದರೆ ಒಂದು ಚಿತ್ರ ಯಶಸ್ಸು ಪಡೆಯಲು ಏನೂ ಮುಖ್ಯವಾಗುತ್ತದೆ?

ಇದೊಂದು ಕ್ಲಿಷ್ಟ ಪ್ರಶ್ನೆ. ಅಷ್ಟು ಸರಳವಾಗಿ ಉತ್ತರಿಸಬಹುದ್ದಾಗಿದ್ದರೆ ಪ್ರತಿ ವರ್ಷ ನೂರಾರು ಚಿತ್ರಗಳು ನೆಲಕಚ್ಚುತ್ತಿರುಲಿಲ್ಲ. ಚಿತ್ರದ ಯಶಸ್ಸಿಗೆ ಇಂತಹುದೆ ಎಂಬ ಮ್ಯಾಜಿಕ್ ಫಾರ್ಮುಲಾವಿರುವುದಿಲ್ಲ. ಒಂದು ಚಿತ್ರ ಯಶಸ್ಸು ಗಳಿಸಿದ ನಂತರ ಯಶಸ್ಸಿನ ಕಾರಣಗಳ ಅವಲೋಕನ ಮಾಡಬಹುದು. ನಿಜಕ್ಕೂ ಹೇಳಬೇಕೆಂದರೆ ಕೆ.ಜಿ.ಎಫ್.ನಲ್ಲಿ ವಿಮರ್ಶೆಗೆ ಒಳಪಡಿಸುವಂತಹ ಕಥೆಯಿಲ್ಲ. ಆದರೆ ಅದರ ಯಶಸ್ಸಿನ ವಿವಿಧ ಮಜಲುಗಳ ಬಗ್ಗೆ ಮಾತನಾಡಬಹುದು.

ಕೆ.ಜಿ.ಎಫ್. ಕಥೆ ಬಹಳ ಸರಳವಾಗಿದೆ. ಸರಳವೆಂದರೆ ಅತೀ ಸರಳವೆಂದೇ ಹೇಳಬಹುದು. ಅಂತ್ಯವನ್ನು ಉಹಿಸಿಬಿಡಬಹುದು. ಆದರೆ ಅಂತ್ಯ ಹೇಗಿರಬೇಕು ಎಂಬುದರಲ್ಲಿ ಕಥೆಗಾರ ಹಾಗೂ ನಿರ್ದೇಶಕ ತಮ್ಮ ಜಾಣ್ಮೆ ತೋರಿದ್ದಾರೆ. ಚಿತ್ರಕಥೆಯಲ್ಲಿ ರೇಖಾತ್ಮಕವಲ್ಲದ ಶೈಲಿಯನ್ನು ಅನುಸರಿಸುವ ಹಾಗೂ ದೃಶ್ಯನಿರೂಪಣೆಗೆ ತಿಳಿಕಂದು (ಸೆಪಿಯಾ) ಬಣ್ಣವನ್ನು ಬಳಸಿಕೊಳ್ಳುವ ನಿರ್ದೇಶಕ ಚಿತ್ರ ಎಲ್ಲೂ ಬಿಗಿ ತಪ್ಪದಂತೆ ನೋಡಿಕೊಳ್ಳುತ್ತಾನೆ. ಚಿತ್ರದ ಗತಿ ಚೆನ್ನಾಗಿದೆ. ಯಾವುದೇ ಸನ್ನಿವೇಶವೂ ಬೇಸರವಾಗುವುದಿಲ್ಲ. ಎಲ್ಲಾ ಸನ್ನಿವೇಶಗಳೂ ಚುರುಕಾಗಿ, ಚುಟುಕಾಗಿ ಬಂದು ಹೋಗುತ್ತವೆ. ಇದು ಪ್ರೇಕ್ಷಕನನ್ನು ಮನಸ್ಸಿನಲ್ಲಿಟ್ಟುಕೊಂಡು ಅವನ ಅಕಾಂಕ್ಷೆಗಳಿಗೆ ಸ್ಪಂದಿಸುವ ಕಥೆ. ಎಲ್ಲೂ ಅನಿರೀಕ್ಷಿತ ತಿರುವುಗಳಿಲ್ಲ. ಮಾನಸಿಕ ಸಂದಿಗ್ಧತೆಗಳಿಲ್ಲ. ಇದು ನೇರವಾದ ಕಥೆ. ಸಾವಿನಲ್ಲೂ ಘನತೆಯಿರಬೇಕು ಅದಕ್ಕೆ ಹಣವೇ ಮುಖ್ಯ ಎಂಬ ನಂಬಿಕೆಯಿಂದ ಬೆಳೆಯುವ ಕಥಾನಾಯಕನ ಕಥೆ. ಕಾರ್ಮಿಕರ ಶೋಷಣೆಯ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಕಥೆ ಮೊದಲ ಭಾಗಕ್ಕೆ ಮುಗಿಯುವುದಿಲ್ಲ. ಅದರೆ ಅಂತ್ಯಕ್ಕೆ ಬಹಳ ಅನಿರೀಕ್ಷಿತವಾಗಿ, ಥಟ್ಟನೆ ಪರದೆಯೆಳೆಯುವ ನಿರ್ದೇಶಕ, ಪ್ರೇಕ್ಷಕನಲ್ಲಿ ಮುಂದಿನ ಭಾಗದಲ್ಲಿ ಎನಾಗುತ್ತದೆ ಎಂಬ ಕುತೂಹಲ ಉಳಿಯುವಂತೆ ಮಾಡುತ್ತಾನೆ. ಚಿತ್ರ ಮುಗಿದಾಗ ಪ್ರೇಕ್ಷಕನಿಗೆ ನಿರಾಸೆಯಾಗುವುದಿಲ್ಲ.

ಮೇಕಿಂಗ್ (ನಿರ್ಮಾಣ)

ಚಿತ್ರದ ನಿರ್ಮಾಣ ವಿನ್ಯಾಸ ಹಾಗೂ ನಿರ್ಮಾಣ ಮಟ್ಟ ಉತ್ಕೃಷ್ಟವಾಗಿದೆ. ಇಲ್ಲಿ ಚಿತ್ರದ ಪ್ರತಿಯೊಂದು ಫ್ರೇಮ್ ಅನ್ನು ದೃಶ್ಯೀಕರಿಸುವ ರೀತಿ ಮುಖ್ಯವಾಗುತ್ತದೆ. ಚಿತ್ರ ನಿರ್ಮಾಣದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರು ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ನಿರ್ದೇಶಕರ ಪರಿಕಲ್ಪನೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ನಿರ್ಮಾಪಕರು ಹಣ ಹೂಡಿದ್ದಾರೆ. ಚಿತ್ರತಂಡ ಈ ವಿಭಾಗದಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ನಿರ್ದೇಶಕರ ದೃಶ್ಯ ಕಲ್ಪನೆ ಹಾಗೂ ಅದನ್ನು ಸಾಕಾರಗೊಳಿಸಿರುವ ರೀತಿ ಅದ್ಭುತವಾಗಿದೆ. ‘ಮೇಕಿಂಗ್’ ಅನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಹೋಲಿಸಬಹುದು.

ಹೀ-ಮ್ಯಾನ್: ಯಾರಿಂದಲೂ ಒದೆಸಿಕೊಳ್ಳದ, ಎಲ್ಲರಿಗೂ ಒದೆಯುವ ನಾಯಕನ ಕಥೆ ಇದು. ಪ್ರಶಾಂತ್ ನೀಲ್ ಮೊದಲು ನಿರ್ದೇಶಿಸಿದ ‘ಉಗ್ರಂ’ ಚಿತ್ರದಲ್ಲೂ ಸಹ ನಾಯಕನಿಗೆ ಇದೇ ರೀತಿಯ ಇಮೇಜ್ ನೀಡಲಾಗಿದೆ. ಹೀರೋ ಅಗಾಧ ಸಾಮರ್ಥ್ಯವುಳ್ಳವನು -ಬಾಹುಬಲಿ. ಅವನು ಕೈಎತ್ತಿದರೆ ಎಲ್ಲವೂ ಪುಡಿಪುಡಿ. ಜನ ಇಂತಹ ನಾಯಕನನ್ನು ಮೆಚ್ಚುತ್ತಾರೆ. ಆರಾಧಿಸುತ್ತಾರೆ. ನಾಯಕ ನಟನ ರೂಪದಲ್ಲಿತಮ್ಮನ್ನು ಕಲ್ಪಿಸಿಕೊಳ್ಳುವ ಪ್ರೇಕ್ಷಕರಿಗೆ ಇಂತಹ ಪಾತ್ರಗಳು ಮುದ ನೀಡುತ್ತವೆ. ಇದೊಂದು ವಿಫಲವಾಗದ ಸೂತ್ರ.

ದಿ ಐಡಿಯಾ ಆಫ್ ಗೋಲ್ಡ್: ‘ಚಿನ್ನ’ದ ಸುತ್ತ ಹಲವಾರು ಚಿತ್ರಗಳು ಬಂದಿವೆ. ಇದೊಂದು ಆಕರ್ಷಣೀಯ ಕಥಾವಸ್ತು. ಕೆ.ಜಿ.ಎಫ್. ಅನ್ನು ಎಲ್‍ಡೊರಾಡೋಗೆ ಹೋಲಿಸುತ್ತಾ ನಿರ್ದೇಶಕ ಚಿತ್ರದ ಕಥೆಯನ್ನು ನಿರೂಪಿಸುತ್ತಾನೆ. ಹಾಗೆ ನೋಡಿದರೆ ಎಲ್‍ಡೊರಾಡೋ ಕೇವಲ ದಂತಕಥೆಯಾಗಿದ್ದು ಅದನ್ನು ಕಂಡವರಿಲ್ಲ. ಕೆ.ಜಿ.ಎಫ್. ನಿಜವಾಗಿ ಇರುವಂತಹುದ್ದು. ಚಿತ್ರ ‘ಚಿನ್ನ’ದ ಕಲ್ಪನೆಯನ್ನು ಪ್ರೇಕ್ಷಕನ ಮನಸ್ಸಿನಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತದೆ.

ಯಶ್: ನಿರ್ದೇಶಕ ಪ್ರಶಾಂತ್ ನೀಲ್ ರಾಜಮೌಳಿಯಲ್ಲ. ಪ್ರಭಾಸ್ ನಾಯಕನಟನಾಗಿದ್ದರೂ, ರಾಜಮೌಳಿ ಬಾಹುಬಲಿ ಚಿತ್ರದ ಸಂಪೂರ್ಣ ರೂವಾರಿಯಾಗಿದ್ದರು. ಕೆ.ಜಿ.ಎಫ್. ಪ್ರಶಾಂತ್ ನೀಲ್ ಅವರ ಪರಿಕಲ್ಪನೆಯ ಕೂಸಾದರೂ ಸಹ ಯಶ್ ಈ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತು ಸಾಗುತ್ತಾರೆಯೇ, ಉದ್ಯಮ ಮತ್ತು ಪ್ರೇಕ್ಷಕರ ನಿರೀಕ್ಷೆಗಳನ್ನೂ ಮುಟ್ಟುವರೇ ಎಂಬುದು ಪ್ರಶ್ನೆಯಾಗಿತ್ತು. ಯಶ್ ತಮ್ಮ ಪಾತ್ರಕ್ಕೆ ನ್ಯಾಯ ಕಲ್ಪಿಸಿರುವುದು ಮಾತ್ರವಲ್ಲ, ಈಗ ಇಡೀ ದೇಶದ ಮಟ್ಟದಲ್ಲಿ ಮನೆಮಾತಾಗಿದ್ದಾರೆ. ಕನ್ನಡ ನಟನೊಬ್ಬ ಈ ಮಟ್ಟ ತಲುಪಿರುವುದು ಇದೇ ಮೊದಲು.

ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ, ಇತ್ಯಾದಿ: ಕ್ಯಾಮೆರಾ ವಿಭಾಗದ ದಿಗ್ದರ್ಶಕ ಭುವನ ಗೌಡ, ಸಂಗೀತ ನಿರ್ದೇಶಕ ರವಿ ಬಸೂರ್ ಹಾಗೂ ಕಲಾನಿರ್ದೇಶಕ ಶಿವಕುಮಾರ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಈ ಮೇಲಿನ ಅಂಶಗಳನ್ನು ಸಂಕ್ಷಿಪ್ತವಾಗಿ ಯಶಸ್ಸಿನ ಕಾರಣಗಳೆಂದು ಹೇಳಿ ಬಿಡಬಹುದು. ಆದರೆ ನಮ್ಮ ಕಣ್ಣಿಗೆ ಗೋಚರವಾಗದ ನಾವು ಅನುಭವಿಸಬಹುದಾದ ಈ ಚಿತ್ರದ ಯಶಸ್ಸಿನ ಹಿಂದಿನ ಒಂದೆರಡು ಅಂಶಗಳನ್ನು ವಿವರಿಸಲೇಬೇಕಾಗುತ್ತದೆ.

‘ದಿ ಪ್ಯಾಶನ್ ಫಾರ್ ಮೇಕಿಂಗ್ ಸಿನೆಮಾ’: ಒಂದು ಉತ್ತಮ ಚಿತ್ರವನ್ನು ಮಾಡಬೇಕೆಂದು ಚಿತ್ರ ತಂಡಕ್ಕಿದ್ದ ‘ಪ್ಯಾಶನ್’ ಕೆ.ಜಿ.ಎಫ್. ಯಶಸ್ಸಿನ ಹಿಂದಿದೆ. ನಿರ್ಮಾಣಕ್ಕೆ ಚಿತ್ರ ತಂಡ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ. ನಿರ್ದೇಶಕರು ಹಾಗೂ ಇಡೀ ಚಿತ್ರ ತಂಡ ಹಗಲಿರುಳು ಶ್ರಮಿಸಿದ್ದಾರೆ. ಯಶ್ ಈ ಚಿತ್ರದ ನಿರ್ಮಾಣದ ಸಮಯದಲ್ಲಿ ಬೇರೊಂದು ಚಿತ್ರಕ್ಕೆ ಬದ್ಧವಾಗಿರಲಿಲ್ಲ. ನಿರ್ಮಾಣದ ಅವಧಿಯಲ್ಲಿ ರಾಧಿಕಾ ಪಂಡಿತ್ ಅವರನ್ನು ಮದುವೆಯಾಗುವ ಸಂದರ್ಭದಲ್ಲೂ ಉದ್ದವಾಗಿ ಬಿಟ್ಟಿದ್ದ ತಮ್ಮ ದಾಡಿಯನ್ನು ತೆಗೆದಿರಲಿಲ್ಲ.

ತಂಡಕ್ಕೆ ತಮ್ಮ ಪ್ರಯತ್ನದಲ್ಲಿದ್ದ ಗಾಢನಂಬಿಕೆ: ಆರಂಭದಲ್ಲಿ ಕೇವಲ ಕರ್ನಾಟಕ ಮಾರುಕಟ್ಟೆಯನ್ನು ಮಾತ್ರ ನೆಚ್ಚಿಕೊಂಡು ಕೆ.ಜಿ.ಎಫ್. ಅನ್ನು ಕೈಗೆತ್ತಿಕೊಳ್ಳಲಾಯಿತು. ಅದ್ದೂರಿ ಬಜೆಟ್ ತೊಡಗಿಸುವಾಗ ತಂಡಕ್ಕೆ ಚಿತ್ರದ ಗುಣಮಟ್ಟದಲ್ಲಿ ಹಾಗೂ ಅದು ಸಾಧಿಸಬಹುದಾದ ಯಶಸ್ಸಿನ ಬಗ್ಗೆ ಗಾಢನಂಭಿಕೆಯಿತ್ತು. ಅದರ ಪರಿಣಾಮವಾಗಿ ಹಿಂದೆಂದೂ ಯಾವುದೇ ಕನ್ನಡ ಚಿತ್ರವು ವ್ಯಯಿಸದ ಮೊತ್ತವನ್ನು ಈ ಚಿತ್ರಕ್ಕೆ ಹೂಡಲಾಯಿತು. ನಿರ್ಮಾಣ ಹಂತದಲ್ಲಿ ಚಿತ್ರ ಹೊರಹೊಮ್ಮಿದ ರೀತಿ ಚಿತ್ರ ತಂಡಕ್ಕೆ ಹೊಸ ಕನಸುಗಳನ್ನು ಕಟ್ಟಿಕೊಳ್ಳಲು ನೆರವಾಯಿತು. ಬಾಹುಬಲಿ ಖ್ಯಾತಿಯ ರಾಜಮೌಳಿಯವರು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾಗ ಕೆ.ಜಿ.ಎಫ್. ತಂಡ ಅವರಿಗೆ ಚಿತ್ರದ ರಶಸ್‍ಗಳನ್ನು ತೋರಿಸುತ್ತಾರೆ. ಚಿತ್ರದ ಗುಣಮಟ್ಟದ ಬಗ್ಗೆ ಪ್ರಭಾವಿತರಾಗುವ ರಾಜಮೌಳಿ ಹಿಂದಿ ಚಿತ್ರರಂಗದ ಫರಾನ್ ಅಖ್ತರ್ ಹಾಗೂ ರಿತೇಷ್ ಸಿಧ್ವಾನಿಯೊಡನೆ ಮಾತನಾಡಿ ಕೆ.ಜಿ.ಎಫ್. ಹಿಂದಿ ಅವತರಣಿಕೆಯನ್ನು ವಿತರಣೆ ಮಾಡಲು ಒಪ್ಪಿಸುತ್ತಾರೆ. ಹೀಗೆ ಕೆ.ಜಿ.ಎಫ್. ಪ್ಯಾನ್ ಇಂಡಿಯಾ ಸಿನಿಮಾವಾಗುತ್ತದೆ.

ಕೆ.ಜಿ.ಎಫ್. ಒಂದು ಪಿರಿಯಡ್ ಚಿತ್ರ. ಈವರೆಗೆ ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಪಿರಿಯಡ್ ಚಿತ್ರಗಳು ಮಾತ್ರ ಅಚ್ಚುಕಟ್ಟಾಗಿ ಮೂಡಿಬಂದಿವೆ ಎಂದು ಹೇಳಬಹುದು. ಅಂತಹ ಚಿತ್ರಗಳಲ್ಲಿ ಕೆ.ಜಿ.ಎಫ್. ಒಂದಾಗಿದೆ. ಇದುವರೆಗೆ ಕನ್ನಡದಲ್ಲಿ ಬಂದಿರುವ ಪಿರಿಯಡ್ ಚಿತ್ರಗಳು ಉತ್ತಮ ಕಥಾವಸ್ತುವನ್ನು ಹೊಂದಿದ್ದರೂ ಸಹ ಅವುಗಳ ಪೈಕಿ ಹಲವಾರು ಚಿತ್ರಗಳು ನಿರ್ಮಾಣ ಮಟ್ಟದಲ್ಲಿ ಹಿಂದಿದ್ದವು. ಆದರೆ ‘ಮೇಕಿಂಗ್’ ಕೆ.ಜಿ.ಎಫ್.ನ ಅನುಕೂಲಕರ ಅಂಶವಾಗಿದೆ.

ಕೆ.ಜಿ.ಎಫ್. ಬಿಡುಗಡೆಯಾದ ಸಮಯದಲ್ಲೇ ಬಿಡುಗಡೆಯಾದ ಹಿಂದಿ ಚಿತ್ರ ‘ಝೀರೋ’ ಹಾಗೂ ಕೆಲವು ದಿನಗಳ ನಂತರ ಬಿಡುಗಡೆಗೊಂಡ ‘ಸಿಂಬಾ’ 200 ಕೋಟಿ ರೂಪಾಯಿಗಳನ್ನು ಗಳಿಸಿದ್ದರೂ, ಕೆ.ಜಿ.ಎಫ್.ನ ಹೆಗ್ಗಳಿಕೆಯೆಂದರೆ ಈ ಚಿತ್ರ ಸುಮಾರು 2,000 ಪರದೆಗಳಲ್ಲಿ ಬಿಡುಗಡೆಯಾಗಿ, 4,000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿರುವ ಎರಡು ದೊಡ್ಡ ಬ್ಯಾನರ್ ಹಿಂದಿ ಚಿತ್ರಗಳಷ್ಟೇ ಸಮನಾಗಿ ಗಳಿಕೆಯಲ್ಲಿ ನಿಂತಿರುವುದು ಹಾಗೂ ಈ ಚಿತ್ರಗಳಿಗೂ ಮೀರಿದ ಪ್ರಶಂಸೆಯನ್ನು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಪಡೆದಿರುವುದು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸಗಾಳಿ ಬೀಸುತ್ತಿದ್ದು, ಕನ್ನಡ ಚಿತ್ರ ನಿರ್ಮಾಪಕರು ಮಹತ್ವಾಕಾಂಕ್ಷಿಗಳಾಗಲು ಕೆ.ಜಿ.ಎಫ್. ಮುನ್ನುಡಿ ಬರೆದಿದೆ.

Leave a Reply

Your email address will not be published.