ಕಣ್ಮರೆಯ ಅಂಚಿನಲ್ಲಿ ಕಣ್ಣಾಮುಚ್ಚಾಲೆ

ರಾಜಾಶ್ರಯದಲ್ಲಿ ಈ ಆಟವನ್ನು ತಮ್ಮ ಮಕ್ಕಳಿಗೆ ಯುದ್ಧಕಲೆಯೆಂದೇ ಕಲಿಸಲಾಗುತ್ತಿತ್ತು ಎನ್ನುವುದು ವಿಶೇಷ. ಅಂದರೆ ಕತ್ತಲಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸುವ ಕಲೆ ಮತ್ತು ಗ್ರಹಣ ಶಕ್ತಿಯಿಂದಲೇ ಎದುರಾಳಿಯನ್ನು ಪತ್ತೆಹಚ್ಚುವ ಕಲೆ. ಬಳಿಕ ಸಾರ್ವತ್ರಿಕವಾಗಿ ಆಡುವ ಸಂದರ್ಭಗಳಲ್ಲಿಯೂ ಮಕ್ಕಳು ಚುರುಕು ಮತ್ತು ಚಾಣಾಕ್ಷಮತಿಯಾಗಲಿ ಎನ್ನುವ ಕಾರಣಕ್ಕೆ ಆಡಿಸುವುದಿದೆ.

ಣ್ಣಾಮುಚ್ಚೆ ಕಾಡೆಗೂಡೆ
ಉದ್ದಿನಮೂಟೆ ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಬಚ್ಚಿಕೊಳ್ಳಿ…..ಕೂವಾ…

ಇದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೇವೆ. ಜೊತೆಗೆ ಇಂತಹದ್ದೊಂದು ಮನರಂಜನೆಯ ಆಟವನ್ನು ಆಡಿರಲಿಕ್ಕೂ ಸಾಕು. ಆದ್ರೆ ಈಹೊತ್ತಿಗೆ ಇದು ನಮಗಂತೂ ಕೇವಲ ನೆನಪು ಎನಿಸಿದರೆ ಅಚ್ಚರಿಯಿಲ್ಲ. ಈ ಹಿಂದೆಯೇ ಅನೇಕ ಬಾರಿ ಉಲ್ಲೇಖಿಸಿರುವಂತೆ ನಮ್ಮ ಗ್ರಾಮೀಣ ಆಟಗಳ ಸೊಗಸೇ ಚೆಂದ. ಇದಕ್ಕೆ ಯಾರ ತರಬೇತಿಯ ಅಗತ್ಯವೂ ಬೇಕಿಲ್ಲ. ಪುಟಾಣಿಗಳಿಂದ ಹಿಡಿದು ಹದಿಹರೆಯದ ವಯೋಮಾನದ ಎಲ್ಲರೂ ಈ ಆಟಕ್ಕೆ ಪ್ರೇರೇಪಿತರಾಗುತ್ತಾರೆ. ಈ ಆಟದ ಮಹಿಮೆಯೇ ಅಂತದ್ದು. ಅಷ್ಟಕ್ಕೂ ಈ ಕಣ್ಣಾಮುಚ್ಚಾಲೆ ಹೇಗೆ ಹುಟ್ಟಿಕೊಂಡಿತು ಎಂಬುದು ಮಾತ್ರ ನಿಜಕ್ಕೂ ಕೌತುಕದ ಸಂಗತಿ.

ಪೌರಾಣಿಕ ಹಿನ್ನೆಲೆ

ರಾಮಾಯಣ, ಮಹಾಭಾರತ ಕಾಲದಲ್ಲಿಯೇ ಈ ಕಣ್ಣಾಮುಚ್ಚಾಲೆ ಆಟ ಚಾಲ್ತಿಯಲ್ಲಿದ್ದು ಎನ್ನುವುದಕ್ಕೆ ವಾಲ್ಮೀಕಿ ರಾಮಾಯಣವೇ ಆಧಾರ ಒದಗಿಸುತ್ತದೆ. ಅಂದಿನ ಅರಸರ ಮನೆತನದ ಸದಸ್ಯರು ಸಂಜೆ ಹೊತ್ತು ಅರಮನೆಯಲ್ಲಿಯೇ ಈ ಆಟ ಆಡುತ್ತಿದ್ದರು. ಕೆಲವೊಮ್ಮೆ ಪಟ್ಟದರಸಿಯರು ಆಸಕ್ತಿಯಿಂದ ವೀಕ್ಷಿಸುತ್ತಿದ್ದರಲ್ಲದೆ ಕೆಲವೊಮ್ಮೆ ಆಟದಲ್ಲಿ ಸೇರಿಕೊಂಡಿದ್ದ ನಿದರ್ಶನವೂ ಲಭ್ಯವಿದೆ. ಅಂದಿನ ದಿನಗಳಲ್ಲಿ ಜಯಗಳಿಸಿದವರಿಗೆ ದೊಡ್ಡ ಪ್ರಮಾಣದ ಉಡುಗೊರೆಯೂ ಸಿಗುತ್ತಿತ್ತಂತೆ. ರಾಜಮಹಾರಾಜರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ಗುರುಕುಲದಲ್ಲಿಯೂ ಈ ಕಣ್ಣಾಮುಚ್ಚಾಲೆ ಆಟ ಆಡಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಇದು ತಲೆಮಾರುಗಳಿಂದ ಹರಿದು ಬಂದಿದೆ. ಪ್ರಸ್ತುತ ಈ ಆಟ ಹಲವು ರೂಪಾಂತರಗಳನ್ನು ಕಂಡಿದ್ದರೂ ಮನರಂಜನೆಗೆ ಮಾತ್ರ ಕುಂದು ಬಂದಿಲ್ಲ.

ಆಟದಲ್ಲಿ ಎಷ್ಟು ಬಗೆ?

ಕಣ್ಣಾಮುಚ್ಚಾಲೆಯಲ್ಲಿ ಹಲವು ಬಗೆಗಳಿವೆ. ಸಾಮೂಹಿಕವಾಗಿ ಈ ಆಟದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಕನಿಷ್ಟ ನಾಲ್ಕೈದು ಮಂದಿ ಆಡಬಹುದು. ಪ್ರಸ್ತುತ ಕಣ್ಣಾಮುಚ್ಚಾಲೆ ಎನ್ನುವುದು ಕಣ್ಣುಕಟ್ಟಿಕೊಂಡು ಮಡಿಕೆ ಹೊಡೆಯುವ ರೂಪ ಪಡೆದುಕೊಂಡಿದೆ. ಅಲ್ಲದೆ ಸೀಮಿತ ಅಂಗಳದಲ್ಲಿ ಒಬ್ಬರ ಕಣ್ಣಿಗೆ ಬಟ್ಟೆಕಟ್ಟಿ ಅವರನ್ನು ಮೂರ್ನಾಲ್ಕು ಸುತ್ತು ಸುತ್ತಿಸಿ ಬಳಿಕ ಉಳಿದವರನ್ನು ಹಿಡಿಯುವುದು (ಔಟ್ ಮಾಡುವುದು) ಎನ್ನುವ ಒಂಟಿಕಟ್ಟು ಚಾಲ್ತಿಯಲ್ಲಿದೆ. ಮತ್ತೊಂದು ಬಯಲಿನಲ್ಲಿ ಆಡುವ ಚುಣುಮುಣಿ ಆಟ. ಇದಲ್ಲದೆ ಅಡಗಿಕುಳಿತುಕೊಂಡು ಗಂಟೆಗಟ್ಟಲೆ ಸತಾಯಿಸುವ ಚೆಂಗುಂದಿ ಕಣ್ಣಾಮುಚ್ಚಾಲೆ ಆಟವೂ ಕೆಲವೆಡೆ ಅಸ್ತಿತ್ವದಲ್ಲಿದೆ.

ಆಡುವುದು ಹೇಗೆ?

ಹಳ್ಳಿಗಾಡಿನಲ್ಲಿಯೇ ಹೆಚ್ಚು ಕಂಡು ಬರುವ ಈ ಆಟದಲ್ಲಿ ಐದಾರು ಮಂದಿ ಒಟ್ಟಾಗಿ ಆಡುತ್ತಾರೆ. ಆಗಲೇ ಹೇಳಿದಂತೆ ಒಬ್ಬ ಆಟಗಾರ ಟಾಸ್‍ನಲ್ಲಿ ಸೋತವನು. (ಕಣ್ಣಿಗೆ ಬಟ್ಟೆಕಟ್ಟುವುದಿಲ್ಲ) ಕಣ್ಣಾಮುಚ್ಚೆ ಕಾಡೆಗೂಡೆ ಉದಿನಮೂಟೆ ಉರುಳೇಹೋಯ್ತು ನಮ್ಮಯ ಹಕ್ಕಿ ಬಿಟ್ಟೆಬಿಟ್ಟೆ ನಿಮ್ಮಯ ಹಕ್ಕಿ ಬಚ್ಚಿಕೊಳ್ಳಿ… ಎಂದು ಹಾಡುವಷ್ಟರಲ್ಲಿ ಉಳಿದವರು ಅಡಗಿ ಕುಳಿತುಬಿಡುತ್ತಾರೆ. ಈತ ಅವರಲ್ಲಿ ಯಾರಾದರೊಬ್ಬರನ್ನು ಪತ್ತೆ ಹಚ್ಚಿ ಮುಟ್ಟಬೇಕು. ಆಗ ಆತ ಔಟೆಂದು ತಿರ್ಮಾನಿಸಲಾಗುತ್ತದೆ. ಬಳಿಕ ಆತ ಉಳಿದವರನ್ನು ಹುಡುಕಲು ಹಾಡಬೇಕಾಗುತ್ತದೆ. ಮನೆಯ ಹೊರ ಆವರಣದಲ್ಲಿ ಸಿಕ್ಕಸಿಕ್ಕಲ್ಲಿ ಅಡಗಿ ಕುಳಿತು ಸಿಗದಂತೆ ಸತಾಯಿಸುವುದೇ ಆಟದ ವೈಶಿಷ್ಟ್ಯ. ಕೆಲವೊಮ್ಮೆ ಗಂಟೆಗಟ್ಟಲೆ ಈ ಆಟ ಸಾಗುವುದಿದೆ.

ಮತ್ತೊಂದರಲ್ಲಿ ನಿರ್ದಿಷ್ಟ ಜಾಗದಲ್ಲಿ ಒಬ್ಬರ ಕಣ್ಣಿಗೆ ಬಿಗಿಯಾಗಿ ಬಟ್ಟೆಕಟ್ಟಲಾಗುತ್ತದೆ. ಬಳಿಕ ಅವರು ನಿಗದಿತ ಪಟ್ಟೆಯೊಳಗೆ ಇರುವ ಮತ್ತು ಹಿಡಿಯುವವರಿಂದ ತಪ್ಪಿಕೊಳ್ಳುವ ಚಾಣಾಕ್ಷರನ್ನು ಮುಟ್ಟಬೇಕು. ಸಿಕ್ಕವರು ಸೋತಂತೆ. ಒಂದು ವೇಳೆ ಬಟ್ಟೆಕಟ್ಟಿಕೊಂಡವರು ನಿರ್ದಿಷ್ಟ ಪಟ್ಟೆ ದಾಟಿದಲ್ಲಿ ಮತ್ತೊಂದು ಆಟಕ್ಕೆ ಆ ವ್ಯಕ್ತಿಯೇ ದಾಳ. ಜೊತೆಗೆ ಗೆರೆ ದಾಟುವಂತಹ ಸಂದರ್ಭಗಳಲ್ಲಿ ಉಳಿದವರು ಸೀಟಿ (ವಿಷಲ್) ಹೊಡೆಯುವ ಮೂಲಕ ಎಚ್ಚರಿಸುವ ಪದ್ದತಿಯೂ ಇದೆ. ಇಲ್ಲಿಯೂ ಕೆಲವೊಮ್ಮೆ ದೀರ್ಘಾವಧಿಯ ಆಟ ನಡೆಯುವ ಸಂಭವವಿದೆ.

ಇನ್ನೊಂದು ಮಾದರಿಯ ಆಟ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಹೊಡೆಯುವುದು. ಈ ಬಗೆಯ ಆಟದಲ್ಲಿ ಇದೀಗ ವಯಸ್ಕರೂ ಪಾಲ್ಗೊಳ್ಳುವುದಿದೆ. ಗ್ರಾಮೀಣ ಪ್ರದೇಶ ಮಾತ್ರವಲ್ಲ ಪಟ್ಟಣಗಳಲ್ಲಿಯೂ ಯಾವುದೇ ಸಂಘಸಂಸ್ಥೆಗಳು ಆಯೋಜಿಸುವ ಕ್ರೀಡಾಕೂಟಗಳಲ್ಲಿ ಈ ಮಾದರಿಯ ಆಟ ಇದ್ದೇ ಇರುತ್ತದೆ. ನಿರ್ದಿಷ್ಟ ದೂರದಲ್ಲಿ ಮಡಿಕೆ ಅಥವಾ ಆ ಮಾದರಿಯ ವಸ್ತುವೊಂದನ್ನು ಇರಿಸಲಾಗುತ್ತದೆ. ಒಬ್ಬೊಬ್ಬರಾಗಿ ಕಣ್ಣಿಗೆ ಬಟ್ಟೆ ಕಟ್ಟಿಮೊಂಡು ಇಂತಿಷ್ಟು ದೂರದಿಂದ ಕೈಯಲ್ಲಿ ದೊಣ್ಣೆ ಹಿಡಿದು ಬಂದು ಈ ಮಡಿಕೆಯನ್ನು ಹೊಡೆಯಬೇಕು. ಹಾಗೆ ಹೊಡೆದಲ್ಲಿ ಅವರು ವಿಜೇತರು ಎಂದು ಘೋಷಿಸಲಾಗುತ್ತದೆ.

ಆಟದ ಉದ್ದೇಶವೇನು?

ರಾಜಾಶ್ರಯದಲ್ಲಿ ಈ ಆಟವನ್ನು ತಮ್ಮ ಮಕ್ಕಳಿಗೆ ಯುದ್ಧಕಲೆಯೆಂದೇ ಕಲಿಸಲಾಗುತ್ತಿತ್ತು ಎನ್ನುವುದು ವಿಶೇಷ. ಅಂದರೆ ಕತ್ತಲಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸುವ ಕಲೆ ಮತ್ತು ಗ್ರಹಣ ಶಕ್ತಿಯಿಂದಲೇ ಎದುರಾಳಿಯನ್ನು ಪತ್ತೆಹಚ್ಚುವ ಕಲೆ. ಬಳಿಕ ಸಾರ್ವತ್ರಿಕವಾಗಿ ಆಡುವ ಸಂದರ್ಭಗಳಲ್ಲಿಯೂ ಮಕ್ಕಳು ಚುರುಕು ಮತ್ತು ಚಾಣಾಕ್ಷಮತಿಯಾಗಲಿ ಎನ್ನುವ ಕಾರಣಕ್ಕೆ ಆಡಿಸುವುದಿದೆ. ನಗರ ಪ್ರದೇಶದ ಮಕ್ಕಳಿಗೆ ಕಣ್ಣಾಮುಚ್ಚಾಲೆ ಆಟದ ಅರಿವೇ ಇರುವುದಿಲ್ಲ. ಎಂದಾದರು ಗ್ರಾಮೀಣ ಪ್ರದೇಶಕ್ಕೆ ತೆರಳಿದಾಗ ಅಲ್ಲಿನ ಚಿಣ್ಣರ ಜತೆ ಬೆರೆತು ಆಡಿದರೆ ಇದಕ್ಕೊಂದು ಉತ್ತೇಜನ ಸಿಕ್ಕೀತು. ಪೋಷಕರೂ ಕೂಡಾ ಮಕ್ಕಳಿಗೆ ಮೊಬೈಲ್ ಇಲ್ಲವೇ ಕಂಪ್ಯೂಟರ್ ಮುಂದೆ ಕೂರಿಸುವುದಕ್ಕಿಂತ ವಾಸ್ತವತೆ ಅರಿವು ಮಾಡಿಸುವ ಕೆಲಸ ಮಾಡಿಸಬೇಕಿದೆ. ಅದೇನೇ ಇದ್ದರೂ ಈ ಆಟದ ಮೂಲ ಉದ್ದೇಶ ಮಾತ್ರ ಮನರಂಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ಪೂರ್ವಿಕರು ಯಾವುದನ್ನೇ ಕಾರ್ಯಗತಗೊಳಿಸಿದ್ದರೂ ಅದರ ಹಿಂದೆ ಒಂದು ಮಹತ್ತರ ಉದ್ದೇಶ ಮತ್ತು ಗುರಿ ಇದ್ದೇ ಇರುತ್ತದೆ ಎನ್ನುವುದಕ್ಕೆ ಕಣ್ಣಾಮುಚ್ಚಾಲೆಯೂ ಒಂದು ನಿದರ್ಶನ.

ನಾವು ಉಳಿಸಬೇಕಿದೆ

ಹಲವು ಜನಪದ ಕ್ರೀಡೆಗಳಂತೆಯೇ ಇದು ಕೂಡಾ ಅವಸಾನದ ಅಂಚಿನಲ್ಲಿದೆ. ಸಮಾಧಾನಕರ ಸಂಗತಿ ಎಂದರೆ ರೂಪಾಂತರ ಪಡೆದಾದರೂ ಚಾಲ್ತಿಯಲ್ಲಿದೆ ಎನ್ನುವುದು. ಇದಕ್ಕೆ ಉಳಿದ ಆಟಗಳಂತೆ ಯಾವುದೇ ಮೈದಾನದ ಅಗತ್ಯವಿಲ್ಲ. ಹಾಗಾಗಿ ಈಗಿನ ನಮ್ಮ ಪೀಳಿಗೆಯ ಮಕ್ಕಳಿಗೆ ಕಣ್ಣಾಮುಚ್ಚಾಲೆ ಎನ್ನುವ ಆಟ ಇದೆ, ಹೀಗಿತ್ತು ಎಂದು ತಿಳಿಹೇಳಿ ಯಾವತ್ತಾದರೂ ಒಮ್ಮೆ ಆಡಿಸಿದರೆ… ಜೊತೆಗೆ ನಾವೂ ಸೇರಿ ಆಡಿದರೆ ಮನರಂಜನೆಯೊಂದಿಗೆ ಪುರಾತನ ಕ್ರೀಡೆಯೊಂದು ಜೀವಂತವಾಗಿ ಉಳಿಯಲು ನಮ್ಮ ಅಳಿಲು ಸೇವೆ ಕೊಟ್ಟಂತಾಗುತ್ತದೆ. ಹಾಗಾಗಿ ಇನ್ನಾದರೂ ಬನ್ನಿ ಕಣ್ಣಾಮುಚ್ಚೆ… ಕಾಡೆಗೂಡೆ ಎಂದು ಒಟ್ಟಾಗಿ ಹಾಡೋಣ.

ರಾಮಾಯಣದ ಟಚ್ಚೂ ಇದೆ

ಕಣ್ಣಾಮುಚ್ಚೆ.. ಅಂದರೆ ಅಯೋಧ್ಯೆ ಮಹಾರಾಜ `ದಶರಥ’ ಕಣ್ಣು ಮುಚ್ಚಲು. ಕಾಡೇಗೂಡೆ: ಶ್ರೀರಾಮಚಂದ್ರನಿಗೆ ಕಾಡೇ ಮನೆ ಆಯಿತು. ಉದ್ದಿನ ಮೂಟೆ: ಅಹಂಕಾರದಿಂದ ಉದ್ದಿನಬೇಳೆ(ಮೂಟೆ)ಯಂತೆ ಉಬ್ಬಿದ್ದ ರಾವಣನನ್ನು. ಉರುಳೇ ಹೋಯ್ತು: ಯುದ್ದದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ.. ಮೂಟೆ ಉರುಳಿತು. ನಮ್ಮಯ ಹಕ್ಕಿ.. ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ: ಸಾತ್ವಿಕನಾದ ವಿಭೀಷಣ (ರಾವಣನ ಸೋದರ) ಸೀತಾಮಾತೆಯನ್ನು ಗೌರವಾದರಗಳಿಂದ ಶ್ರೀರಾಮನಿಗೆ ತಂದೊಪ್ಪಿಸಿದ. ರಾವಣ ತಿಳಿದಂತೆ ಇದು ನಮ್ಮಯ ಹಕ್ಕಿ ಅಲ್ಲ ನಿಮ್ಮಯ ಹಕ್ಕಿ… ಬಿಟ್ಟು ಕಳಿಸಿಕೊಡುತ್ತಿದ್ದೇವೆ… ಸ್ವೀಕರಿಸಿ ಎಂದು ರಾಮ-ಲಕ್ಷ್ಮಣರಲ್ಲಿ ಬೇಡಿಕೊಳ್ಳುತ್ತಾನೆ.

ಈ ಅರ್ಥದಲ್ಲಿ ಇಡೀ ರಾಮಾಯಣವನ್ನು ಮಕ್ಕಳಾಟದಲ್ಲಿ ಹಳೆಯ ತಲೆಮಾರಿವನವರು ಬೆಸೆದಿದ್ದಾರೆ.

(`ಏಗ್ದಾಗೆಲ್ಲಾ ಐತೆ’ ಎಂಬ ಕೃತಿಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಇದನ್ನು ವಿವರಿಸಿದ್ದಾರೆ)

Leave a Reply

Your email address will not be published.