ಎದೆಯೊಳಗೊಂದು ಹೂವ ಮಾಲೆ

ಈ ಮಳೆಯಲ್ಲಿ ಹೀಗೆ ನೆಂದರೆ
ಸುಡುವ ವಿರಹದುರಿ ಒಂದಷ್ಟು ಹೊತ್ತು
ಕಡಿಮೆಯಾಗಬಹುದೆಂದುಕೊಂಡಿದ್ದೆ
ಹೆಚ್ಚಾಗಿ
ಇನ್ನಷ್ಟು ಬಯಸಿತು ಅವನನ್ನು

ಎದೆಯೊಳಗೇನೋ ಹಿತದ ಅಮಲು
ಮುಟ್ಟಿಲ್ಲ ಇನ್ನೂ… ಬರೀ ನೋಡಿದ್ದಷ್ಟೇ
ಮಾಯಾಜಾಲದ ಹುಡುಗ
ಯಾವಾಗ ಒಳಗೆ ಲಗ್ಗೆ ಹಾಕಿದನೋ
ಗೊತ್ತಾಗಲೇ ಇಲ್ಲ

ಅದೋ ಆ ಕಲ್ಲ ಮೇಲಿನ ಎರಡೆಸಳು
ಹುಲ್ಲಿನ ತುದಿಯಲ್ಲಿ ಮಳೆಬಿಂದುವಾಗಿ
ಈ ತನಕ ನಿಂತಿದ್ದ
ಹತ್ತಿರ ಹೋಗಿ ತಡವಿದರೆ ಅಂಟಿಕೊಂಡು
ಬಿಡಲಾರೆ ಎಂದು
ಒಳಗೆ ಬಂದುಬಿಟ್ಟ

ಸಾವಿರದೊಂದು ನಕ್ಷತ್ರಗಳು ಧಿಗ್ಗನೆ
ಪ್ರಕಾಶಿಸಿಬಿಡುತ್ತವೆ ನನ್ನ ಕಂಡೊಡನೆ
ಅವನ ಕಣ್ಣಲ್ಲಿ
ನಾನೋ ಅವನೆದೆಯ ಮೇಲಿನ
ನಾಜೂಕು ರೋಮಗಳಿಗೆ
ದೂರದಿಂದಲೇ ನಾಚಿ
ರೆಪ್ಪೆ ಕೆಳಗಿಟ್ಟು ಕುಳಿತುಬಿಟ್ಟಿದ್ದೇನೆ

ಹಾಗೋ ಹೀಗೋ ಸುಧಾರಿಸಿಕೊಂಡು
ಒಂದೆರಡಾದರೂ ಮಾತಾಡೋಣವೆಂದುಕೊಂಡರೆ
ಸುಮ್ಮನೆ ನೋಡುತ್ತಾನೆ ಮತ್ತು ನಗುತ್ತಾನೆ
ಮಾತಿಗಿಂತ ಮೌನ ಇಷ್ಟೊಂದು ಹಿತಕಾರಿ
ಅಂತ ತಿಳಿದ ಮೇಲೆ
ಎದೆಯೊಳಗೊಂದು ಹೂವ ಮಾಲೆ

ತತ್ವ, ರಾಜಕಾರಣ,ಸಾಹಿತ್ಯ
ಹುರುಳಿಲ್ಲದ ಎಷ್ಟೊಂದು ಮಾತನಾಡಿದ್ದೆವು ಆ ದಿನ
ಅದುವರೆಗೂ ಈ ಪ್ರೇಮ ದಣಪೆಯಾಚೆ ನಿಂತು
ಮಲ್ಲಿಗೆಹಂಬಿನ ಮೊಗ್ಗು ಕೊಯ್ಯುತ್ತಿತ್ತು
ಮಾತು ನಿಂತ ಕ್ಷಣ ಅವನ ಬೊಗಸೆಗೆ
ಹೂವ ಸುರಿದು
ಮುಡಿಸೆಂದಿತು

ನಾನು ಅವನಿಗಾಗಿ ಮತ್ತೆ ಮತ್ತೆ
ಕಾದಿರುವುದು ನಾಳೆ ಅರಳಲೇಬೇಕಿರುವ
ಹಿತ್ತಲ ಹೊಂಗೆ ಹೂಗಳ ಗೊಂಚಲುಗಳಿಗೆ ಗೊತ್ತು
ಆಗಾಗ ಕಣ್ಣಲ್ಲಿ ನೀರು ಉಕ್ಕಿ
ತಡೆಯಲಾರದಾದಾಗ
ಬೇರೆ ದಾರಿ ಕಾಣದೇ
ಅವನಿಗೊಂದು ಸಂದೇಶ ರವಾನಿಸುತ್ತವೆ
ಅವನ ಮನೆಯ ಸೆರ್ಯಾಮಿಕ್ ಪಾಟಿನ
ಸ್ಪೈಡರ್ ಲಿಲ್ಲಿ ಹೂಗಳಿಗೂ
ಚೈನೀಸ್ ಎವಗ್ರ್ರೀನ್ ಎಲೆಗಳಿಗೂ
ಅವನು ಕಾದಿರುವುದು ಗೊತ್ತಾದಾಗ
ನನಗೆ ಬರುತ್ತದೆ ಸುದ್ದಿ

ಬೇಡಿಕೊಳ್ಳದೆಯೂ ಹೆಳವಿಯ ಮಾಡಿಟ್ಟಿದ್ದಾನೆ ತಂದೆ
ಹಾಗಾಗಿ ಅವನೇ ಬರಬೇಕು ನನ್ನಲ್ಲಿಗೆ
ಬಂದವನು
ಹೀಗೆಲ್ಲ ಮಾಡಿಕೊಂಡರೆ ಹೇಗೆ..? ಎಂದು
ನಾಲ್ಕು ಮಾತು ಅಂದು ನೋಡುತ್ತಾನೆ
ಮೂರು ಹೊತ್ತು ಸಿಟ್ಟು ಮಾಡಿಕೊಂಡು ನೋಡುತ್ತಾನೆ
ಏನೂ ಫಲ ಸಿಕ್ಕದೇ ಮತ್ತೆ ವಾಡಿಕೆಯಂತೆ
ಮುದ್ದು ಉಕ್ಕುವಂತೆ ನೋಡುತ್ತಾನೆ ಮತ್ತು
ನಗುತ್ತಾನೆ
ಕೊನೆಗೆ
ಬಾ ಹತ್ತಿರ ಎಂದು
ತೋಳು ತೆರೆದು ಕೂಡುತ್ತಾನೆ

ಹೀಗೆಲ್ಲ ನಡೆಯುತ್ತಿರುವಾಗ
ಅದೆಷ್ಟೋ ಹೊತ್ತು ನಾನು
ನನ್ನೆಲ್ಲ ಹಾಡುಪಾಡುಗಳನ್ನು
ಅವನೆದೆಗೆ ದಾಟಿಸಿ ನಿರಮ್ಮಳವಾಗಿ ಕುಳಿತಲ್ಲೇ
ನಿದ್ದೆಮಾಡಿಬಿಟ್ಟಿರುತ್ತೇನೆ

ಅಲ್ಲೊಂದು ಕನಸು
ಅವನು ನನ್ನ ಮಗ್ಗುಲಿಗೆ ಕುಳಿತು
ಮಲ್ಲಿಗೆ ಮಾಲೆ ಮುಡಿಸುತ್ತಿರುವಂತೆಯೂ…
ನಾನು ಅವನ ಎದೆಗೊರಗಿ ಪರಿಮಳವನ್ನು
ಅವನ ಉಸಿರೊಳಗೆ ತುಂಬುತ್ತಿರುವಂತೆಯೂ…

ಸೂಜಿಗವನ

ಅವನಿತ್ತ ಸೀರೆ
ಕುಬುಸದ ಕಣ
ಮತ್ತದೇ ಮಲ್ಲಿಗೆ
ದಂಟಿನ ಪರಿಮಳ.
ಆದರೆ ಅದಾವುದೂ
ಅವನ ಆಯ್ಕೆ
ಇಲ್ಲದೆ ಇರಬಹುದು
ಎಂದೆನೆಗೆ ಅನ್ನಿಸಿದ್ದು
ಜೊತೆಯಲ್ಲಿ ಅವನಿತ್ತ
ಕುಂಕುಮದ ಬೊಟ್ಟು.
ಕಾಡಿತ್ತು ಕಾಡಿಗೆ
ಅವನವಳ ಗರತಿ
ಎನ್ನ ಸವತಿಯ ನೆನೆದು.
                     -ಸೂಜಿ

Leave a Reply

Your email address will not be published.