ಊರುಬಿಟ್ಟು ಕಟ್ಟಿಕೊಂಡ ಬದುಕು

ಮೊದಲನೇ ಸಲ ಊರು ಬಿಡುವಾಗ ಅಣ್ಣ ನಮ್ಮ ಜೊತೆಯಲ್ಲಿರಲಿಲ್ಲ. ಎರಡನೇ ಸಲ ಊರು ಬಿಡುವಾಗ ಅಪ್ಪ ಇರಲಿಲ್ಲ; ಅಣ್ಣನೇ ಅಪ್ಪನಾಗಿದ್ದ.

ಮೊದಲು ನಾವಿದ್ದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಂಜಗಾರಿನಲ್ಲಿ. ಆಗ ನಾನು ತೀರಾ ಸಣ್ಣವಳೇ ಇದ್ದೆ. ಅಪ್ಪ ಅಲ್ಲಿ ಪಾಠಶಾಲೆಯಲ್ಲಿ ಮಾಸ್ತರಾಗಿದ್ದ. ಉದ್ದ ಪಡಸಾಲೆಯಂಥ ಆ ಮನೆ, ಎದುರಿಗೆ ದೇವಸ್ಥಾನದಂತೆ ಇರುವ ಪಾಠಶಾಲೆ, ಸ್ವಲ್ಪಸ್ವಲ್ಪ ಮಸುಕಾದ ನೆನಪುಗಳು ಅವೆಲ್ಲ. ಹಾಗಾಗಿ ಬಾಲ್ಯ ಕಳೆದ ಸದಾ ನನ್ನೊಳಗೆ ಕಾಡುವುದು ಎರಡು ಊರು. ಒಂದು ಚಿಕ್ಕಂದಿನಲ್ಲಿ ಓಡಾಡಿದ ತಾರುಗೋಡು ಮತ್ತೊಂದು ಸಿದ್ದಾಪುರ. ಎರಡೂ ಊರುಗಳಲ್ಲಿಯೂ ನನ್ನ ಬಾಲ್ಯದ ಬೆಚ್ಚನೆಯ ನೆನಪುಗಳಿವೆ.

ಅದ್ಯಾವುದೋ ಕಾರಣಕ್ಕಾಗಿ ನಾವೆಲ್ಲ ಬಂಜಗಾರನ್ನು ಬಿಟ್ಟು ಉತ್ತರ ಕನ್ನಡ ಜಿಲ್ಲೆಯ ಇಟಗಿ ಸಮೀಪದ ತಾರಗೋಡಿಗೆ ಹೋಗುವಂಥ ಪ್ರಸಂಗ ಬಂತು. ಇಟಗಿಯಿಂದ 2-3 ಮೈಲಿ ದೂರವಿರುವ ತಾರುಗೋಡು ನನ್ನ ಸೋದರತ್ತೆಯ ಮನೆ. ಆ ಮನೆ, ಆ ಊರು ನನ್ನದೇ ಎಂದು ಅನಿಸುವುದಕ್ಕೆ ಹಲವು ಕಾರಣಗಳಿದ್ದವು. ಅದು ನಾನು ಕಣ್ಣುಬಿಟ್ಟು ನೋಡಿದ ಮೊದಲ ಊರು. ಹಾಗಾಗಿ ಅದೇ ನನ್ನ ಊರು, ನಾ ಹುಟ್ಟಿದ್ದೇ ಅಲ್ಲಿ ಎಂದೆನಿಸಿತ್ತು.

ಹಿಂದೆ ಸಾಲುಸಾಲು ಗುಡ್ಡ, ಎದುರಿಗೆ ಸಮೃದ್ಧವಾಗಿ ನಿಂತ ಅಡಕೆತೋಟ. ಸುತ್ತೆಲ್ಲ ಗಿರಿಶಿಖರಗಳು, ಹಸಿರು ರಾಶಿ. ಅವುಗಳ ನಡುವೆ 7-8 ಮನೆಗಳಿರುವ ಸಾಲುಗೇರಿಯಂಥ ಊರು ತಾರಗೋಡು. ತೋಟದಾಚೆಗೆ ದೊಡ್ಡ ಬೆಟ್ಟವನ್ನು ದಾಟಿ ಒಂದಷ್ಟು ದೂರ ಗುಡ್ಡದ ಹಾದಿಯಲ್ಲೇ ನಡೆದುಹೋದರೆ ದೊಡ್ಡದಾದ ರಸ್ತೆ. ಅದೇ ರಸ್ತೆಯಲ್ಲಿ ಸ್ವಲ್ಪ ದೂರ ನಡೆದರೆ ಊರಿನ ಶಾಲೆ. ಆ ಶಾಲೆಯಲ್ಲಿ 4ನೇ ತರಗತಿಯವರೆಗೆ ಮಾತ್ರ ಇತ್ತು. ಅಲ್ಲಿ ನಾವು ಶಾಲೆಗೆ ಹೋಗುವುದಕ್ಕಿಂತ ಹೆಚ್ಚಾಗಿ ಗುಡ್ಡಬೆಟ್ಟ ಓಡಾಡುತ್ತಿದ್ದುದ್ದೇ ಹೆಚ್ಚು. ಆ ಶಾಲೆಯ ಮೇಷ್ಟ್ರಿಗೂ ಜಮೀನು ತೋಟ ಇದ್ದುದ್ದರಿಂದ ಕೊನೆಕೊಯ್ಲು, ಗದ್ದೆಕೊಯ್ಲು ಎಂದು ತಿಂಗಳುಗಟ್ಟಲೆ ರಜೆ ಕೊಡುತ್ತಿದ್ದರು. ಆಗೆಲ್ಲ ನಮಗೆ 20 ದಿವಸ ರಜ, 15 ದಿವಸ ರಜ ಎಂದು ಖುಷಿಯಿಂದ ಊರಿನ ರಸ್ತೆಯಲ್ಲಿ ಕುಣಿಯುತ್ತಿದ್ದೆವು, ಯಾವ ಭವಿಷ್ಯದ ಹಂಗೂ ಇಲ್ಲದೆ.

ನಾವಿದ್ದ ಆ ಮನೆಗೆ ಭವಂತಿ ಮನೆ ಎಂದೇ ಕರೆಯುತ್ತಿದ್ದರು. ಕರೆಂಟಿಲ್ಲದ ಆ ಮನೆಗೆ ಚಿಮಣಿ ದೀಪವೇ ಬೆಳಕು. ಆ ಮನೆ, ಆ ಗುಡ್ಡ, ಅಡಿಕೆ ತೋಟ, ಬೆಟ್ಟಗುಡ್ಡಗಳು, ಯಾಯ್ರಾರದ್ದೋ ಮನೆಯ ತೋಟದ ಜಂಬೆಹಣ್ಣು, ಬಾಳೆಹಣ್ಣುಗಳನ್ನು ಕದ್ದು ಕೊಯ್ಯುತ್ತಿದ್ದದ್ದು… ಚೌತಿ ಹಬ್ಬದ ದಿವಸ ಶಿವಜ್ಜನ ಮನೆಯ ಎದುರಿಗಿನ ತೋಟದಲ್ಲಿರುವ ಕೆರೆಯಲ್ಲಿ ಮುಳುಗಿಸುತ್ತಿದ್ದ ಊರ ಗಣಪತಿ ಮೂರ್ತಿಗಳನ್ನೆಲ್ಲ ಹೆಕ್ಕಿತಂದು ಮನೆಯೊಳಗೆ ಇಡುತ್ತಿದ್ದ ಅಣ್ಣನ ಪಟಾಲಂ, ಕೊನೆಕೊಯ್ಲು ಸಂದರ್ಭದಲ್ಲಿ ಅಲ್ಲಲ್ಲಿ ಹರಿದು ಬರುವ ಹಿಸುಕುಗಳು, ಹಣ್ಣಡಕೆ, ಕಾಯಡಕೆ ಚೇಳುಗಳು, ಅವನ್ನೆಲ್ಲ ಹೊಡೆದು ಕೋಲಲ್ಲಿ ನೇತಾಡಿಸಿಕೊಂಡು ಬಂದು ನಮ್ಮನ್ನೆಲ್ಲ ಹೆದರಿಸುವ ಊರಿನ ದೊಡ್ಡ ಹುಡುಗರು… ಆ ಊರು ನಮ್ಮದಲ್ಲ ಎಂದು ಯಾವತ್ತೂ ಅನಿಸಿರಲೇ ಇಲ್ಲ.

ಆದರೆ ಕಾರಣಾಂತರಗಳಿಂದ ಆ ಊರನ್ನೂ ಬಿಡುವ ಸಂದರ್ಭ ಬಂತು. ಆದಿನ ನನಗೆ ಸ್ಪಷ್ಟವಾಗಿ ನೆನಪಿದೆ.

ಒಂದಿನ ಸರಿ ರಾತ್ರಿ, ಇಡೀ ಊರು ಮಲಗಿತ್ತು. ನಾವು ಮಾತ್ರ ಎಚ್ಚರವಾಗಿದ್ದೆವು. ಮನೆ ಮುಂದೆ ಲಾರಿ ಬಂದು ನಿಂತಿತ್ತು. ಅದು ಅಪ್ಪನ ಸ್ನೇಹಿತರಾದ ಇಸ್ಮಾಯಿಲ್ ಸಾಬಣ್ಣನ ಲಾರಿಯಾಗಿತ್ತು. ಅಪ್ಪ, ಸಾಬಣ್ಣ ಮತ್ತು ಅವನ ಕಡೆಯವರೆಲ್ಲ ಸೇರಿ ಸಾಮಾನು ಸಾಗಿಸುವ ಭರದಲ್ಲಿದ್ದರು. ಕರೆಂಟ್ ಇರದ ಆ ಮನೆಯಲ್ಲಿ ಇರುವ ಒಂದೆರೆಡು ಲಾಟಿನ್‍ನ ಮಿಣಮಿಣ ಬೆಳಕಲ್ಲಿ ಅತ್ತೆಯ ಮಕ್ಕಳಾದ ಅತ್ತಿಗೆಯಂದಿರಿಬ್ಬರೂ ಅಳುತ್ತ ಕೂತಿದ್ದರು. ಅಪ್ಪ ಅಮ್ಮ ಮೌನವಾಗಿದ್ದರು. ಆಗ ಅಣ್ಣ ನಮ್ಮೊಂದಿಗಿರಲಿಲ್ಲ. ಅವನು ನೆಂಟರೊಬ್ಬರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಹಾಗಾಗಿ ನಾವು ಮೂವರು ಲಾರಿ ಏರಿದೆವು. ಆಗ ಸಮಯ ಎಷ್ಟಿತ್ತೋ ಗೊತ್ತಿಲ್ಲ. ಆದರೆ ಊರಿಗೆ ಊರೇ ಮಲಗಿತ್ತು. ಲಾರಿ ಬಂದದ್ದು, ಸಾಮಾನು ಸಾಗಿಸುವ ಬಡಬಡ ಸದ್ದು, ಲಾರಿ ಹೊರಟಿದ್ದು ಯಾವುದರ ಪರಿವೆಯೂ ಇಲ್ಲದಂತೆ ಮಲಗಿತ್ತು ಆ ಊರು.

ಆ ಹೊತ್ತು ಅಪ್ಪನಿಗೇನು ಭಾವವಿತ್ತೋ ಗೊತ್ತಾಗುತ್ತಿರಲಿಲ್ಲ. ಮೌನವಾಗಿದ್ದ. ನಾವು ಊರು ಬಿಟ್ಟು ಆ ರಾತ್ರಿಯಲ್ಲಿ ಲಾರಿ ಹೋಗುತ್ತಿದ್ದರೆ ನನಗೆ ವಿಚಿತ್ರ ರೀತಿಯ ಭಯ ಕಾಡುತ್ತಿತ್ತು. ಅದೇ ಭಯದಲ್ಲೇ ಅಮ್ಮನ ಕಾಲಮೇಲೆ ಮಲಗಿಬಿಟ್ಟವಳಿಗೆ ಎಚ್ಚರವಾಗಿದ್ದು ಸಿದ್ಧಾಪುರಕ್ಕೆ ಬಂದಮೇಲೆ. ನಾವೆಲ್ಲಿಗೆ ಹೋಗ್ತಾ ಇದ್ದೀವಿ. ಯಾಕೆ ಹೋಗ್ತಾ ಇದ್ದೀವಿ ಯಾವುದೂ ನನಗೆ ಗೊತ್ತಿರಲಿಲ್ಲ. ಅಪ್ಪನ ಹಿಂದೆ ಹೋಗುವುದಷ್ಟೇ ನಮ್ಮ ಕೆಲಸ. ಸಿದ್ಧಾಪುರದಲ್ಲೊಂದು ಚಾಪೆಟ್ಟಿಗೆಯಂತಹ ಸಣ್ಣದಾದ ಬಾಡಿಗೆ ಮನೆಯಲ್ಲಿ ನಮ್ಮ ವಾಸ ಪ್ರಾರಂಭವಾಯಿತು.

ಅಷ್ಟರ ನಂತರ ಆ ಸಿದ್ಧಾಪುರದಲ್ಲೇ ನನ್ನ ಸಂಪೂರ್ಣ ಬಾಲ್ಯ ಕಳೆದದ್ದು. ನಾಲ್ಕನೇ ತರಗತಿಯಿಂದ ಪದವಿಯವರೆಗೂ ನಾನಲ್ಲಿಯೇ ಇದ್ದೆ. ಹಾಗಾಗಿ ಸಿದ್ಧಾಪುರವೇ ನನ್ನೂರು ಎನಿಸಿತ್ತು. ಅಂದರೆ ತಾರಗೋಡಿನ ಸುಂದರ ಪರಿಸರ, ನೀಲಿ ಬೆಟ್ಟಗಳು, ಹಸಿರು ತುಂಬಿದ ಕಾಡು, ಎಲ್ಲಕ್ಕಿಂತ ಮುಖ್ಯವಾಗಿ ಊರಾಚೆಯ ಹೊಳೆ ಇವೆಲ್ಲ ಕಾಡುತ್ತ ಅದು ನನ್ನ ಊರು ಎನಿಸಿದರೂ, ಅದರ ನಂತರ ನನ್ನೂರು ಎಂದು ತುಂಬ ಆಪ್ತವಾಗುವುದು ಸಿದ್ಧಾಪುರವೇ.

ನನ್ನನ್ನು ರೂಪಿಸಿದ ನೆಲವದು. ಬಾಲಿಕೊಪ್ಪ ಶಾಲೆ, ಸಿದ್ಧಿವಿನಾಯಕ ಹೈಸ್ಕೂಲ್, ಮಹಾತ್ಮಾಗಾಂಧಿ ಶತಾಬ್ಧಿ ಕಾಲೇಜು.. ನೆಹರೂ ಮೈದಾನ, ಅದರೆದುರಿಗಿದ್ದ ರಾಘವೇಂದ್ರಸ್ವಾಮಿ ಮಠ, ಪ್ರತಿ ಚೌತಿಹಬ್ಬದಲ್ಲೂ ವಿವಿಧ ರೀತಿಯ ಗಣಪತಿ ಮೂರ್ತಿಗಳು, ಚೌತಿಹಬ್ಬ, ದೀಪಾವಳಿ, ಶಾಲೆಯ ವಾರ್ಷಿಕೋತ್ಸವ, ವರ್ಷಕ್ಕೊಮ್ಮೆ ಬಂದು ಹೋಗುವ ನಾಟಕ ಕಂಪನಿಗಳು, ಇವೆಲ್ಲವೂ ನನ್ನ ರೂಪಿಸುವಲ್ಲಿ ಅವುಗಳದ್ದೇ ಆದ ಕೊಡುಗೆ ನೀಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಬುಧವಾರದ ಸಂತೆಯಂದು ನಡೆಯುವ ಯಕ್ಷಗಾನ. ಆಗೆಲ್ಲ ಅದನ್ನು ಆಟ ಎಂದು ಕರೆಯುತ್ತಿದ್ದರು, ರಾತ್ರಿಬೆಳಗಿನ ತನಕವೂ ನಡೆಯುತ್ತಿತ್ತು. ಆಗ ಹೆಚ್ಚಾಗಿ ಬರುತ್ತಿದ್ದ ಇಡುಗುಂಜಿಮೇಳ, ಮುಲ್ಕಿಮೇಳ, ಕರ್ಕಿಮೇಳ ಇವುಗಳನ್ನು ನೋಡುತ್ತ ರಾಮಾಯಣ, ಮಹಾಭಾರತಗಳನ್ನೆಲ್ಲ ಯಕ್ಷಗಾನದ ಮೂಲಕವೇ ಕಲಿಯುತ್ತ ಹೋದವರು ನಾವೆಲ್ಲ.

ಆದರೆ ಅದು ಕೂಡ ನನ್ನೂರಾಗಿರಲಿಲ್ಲ ಎಂಬುದು ತಿಳಿದದ್ದು ನಾವು ಎರಡನೇ ಸಾರಿ ಊರು ಬಿಡುವ ಪ್ರಸಂಗ ಬಂದಾಗ. ನನ್ನಪ್ಪ ಹಾರ್ಟ್ ಅಟ್ಯಾಕ್‍ನಿಂದ ತೀರಿಕೊಂಡಾಗ ನಾನು ಪಿಯುಸಿ ಓದುತ್ತಿದ್ದೆ. ನನ್ನಣ್ಣ ಬಿಎಸ್‍ಸಿ ಓದುತ್ತಿದ್ದ. ಅಣ್ಣನ ವಿದ್ಯಾಭ್ಯಾಸ ಮುಗಿಸಬೇಕಿತ್ತು. ನಂತರ ಅಣ್ಣ ಧಾರವಾಡದಲ್ಲಿ ಎಂ.ಎ ಮುಗಿಸಿ ಬೆಂಗಳೂರಿನಲ್ಲಿ ನೌಕರಿಗೆ ಸೇರಿದ ಮೇಲೆ, ನಾನು ಅಮ್ಮನೂ ಬೆಂಗಳೂರಿಗೆ ಬಂದೆವು.

ಆ ದಿನವೂ ನನಗೆ ಅಚ್ಚಳಿಯದೇ ನೆನಪಿದೆ. ಅವತ್ತೂ ಒಂದು ಲಾರಿ. ಮೊದಲನೇ ಸಲ ಊರು ಬಿಡುವಾಗ ಅಪ್ಪನ ಕೈ ಹಿಡಿದು ಲಾರಿ ಹತ್ತಿದ್ದೆ. ಅಮ್ಮನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿದ್ದೆ. ಎರಡನೇ ಸಲ ಊರು ಬಿಡುವಾಗ ನಾನೇ ಅಮ್ಮನ ಕೈ ಹಿಡಿದು ಲಾರಿ ಹತ್ತಿದೆ. ವ್ಯತ್ಯಾಸ ಹೇಗಿತ್ತೆಂದರೆ ಮೊದಲನೇ ಸಲ ಊರು ಬಿಡುವಾಗ ಅಣ್ಣ ನಮ್ಮ ಜೊತೆಯಲ್ಲಿರಲಿಲ್ಲ. ಎರಡನೇ ಸಲ ಊರು ಬಿಡುವಾಗ ಅಪ್ಪ ಇರಲಿಲ್ಲ. ಅಣ್ಣನೇ ಅಪ್ಪನಾಗಿದ್ದ.

ಸಿದ್ಧಾಪುರ ಬಿಟ್ಟು ಬೆಂಗಳೂರಿಗೆ ಹೋಗುವಾಗ ಬೆಂಗಳೂರು ಮನಸ್ಸಿನ ತುಂಬ ತುಂಬಿಬಿಟ್ಟಿತ್ತು. ದೊಡ್ಡ ಮಹಾಸಾಗರ, ಅಲ್ಲಿ ಹೋಗಿ ನಾನು ಕೆಲಸ ಮಾಡಬೇಕು. ಒಂದಷ್ಟು ದುಡಿಯಬೇಕು, ದುಡಿದು ನಾವೆಲ್ಲ ಹೊಟ್ಟೆತುಂಬ ಊಟ ಮಾಡಬೇಕು. ಒಳ್ಳೊಳ್ಳೆ ಬಟ್ಟೆ ಹಾಕಿಕೊಳ್ಳಬೇಕು. ಎಲ್ಲರಂತೆ ನಾವೂ ಇರಬೇಕು… ಹೀಗೆ ಕನಸುಗಳು.

ಬೆಂಗಳೂರಿಗೆ ಬಂದು ಈ ಮಹಾ ಸಾಗರದಲ್ಲಿಯೇ ಬದುಕು ಕಟ್ಟಿಕೊಳ್ಳುವಂತಾಯಿತು. ನಾವು ಎಲ್ಲಿಯೋ ಒಂದು ಕಡೆ ಬದುಕು ಕಟ್ಟಿಕೊಳ್ಳಬೇಕಿತ್ತು. ಹಾಗೆ ಬದುಕನ್ನೇನೋ ಕಟ್ಟಿಕೊಂಡೆವು ನಿಜ. ಆದರೆ ಈ ಧಾವಂತದ ಬದುಕಲ್ಲಿ ನಮಗೆ ಖಾಸಗಿ ಜಗತ್ತಿದೆ ಎಂದು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲೇ ಇರದ ಬದುಕಿದು. ಅದೆಲ್ಲವೂ ಅಲ್ಲಿತ್ತು. ಆದರೆ ಅಲ್ಲಿಗೆ ಹೋಗಲು ಕಾರಣವಿಲ್ಲ.

ಆದರೂ ಒಮ್ಮೆಯಾದರೂ ನಾನು ಬಾಲ್ಯ ಕಳೆದ ತಾರಗೋಡಿಗೆ ಹೋಗಿ ಭಟ್ಟನ ಮನೆಯಿಂದ ಪ್ರಾರಂಭಿಸಿ ಮತ್ತೊಂದು ತುದಿಯಲ್ಲಿರುವ ಕಾಶಿಮನೆ ತುದಿಯವರೆಗೂ ನಡೆದುಹೋಗಿ, ಅಲ್ಲಿಂದ ನನ್ನ ಶಾಲೆಯವರೆಗೂ ನಡೆದುಕೊಂಡು ಹೋಗಬೇಕೆಂದು ಬಹಳಷ್ಟು ಸಲ ಅನಿಸುತ್ತಿತ್ತು. ಅದು ಈ ಸಲ ಸ್ವಲ್ಪ ಮಟ್ಟಿಗೆ ತಣಿಯಿತು. ಕಾರಣಾಂತರದಿಂದ ತಾರಗೋಡಿಗೆ ಹೋಗುವ ಪ್ರಸಂಗ ಬಂತು. ಕಾರಲ್ಲೇ ಏರಿಯಲ್ಲಿರುವ ಭಟ್ಟನಮನೆ, ಓಣಿಮನೆ, ಶೇಶಿಮನೆ, ಶಿವಜ್ಜನ ಮನೆಗಳನ್ನೆಲ್ಲ ದಾಟಿ ಕಾಶಿಮನೆಯ ತುದಿಗೆ ಹೋಗಿ ಕಾರುನಿಲ್ಲಿಸಿದೆ. ಒಬ್ಬರು ಅಡಕೆ ಸುಲಿಯುತ್ತ ಕುಳಿತಿದ್ದರು. ಯಾರೊಬ್ಬರಿಗೂ ನನ್ನ ಗುರುತು ಸಿಗಲಿಲ್ಲ. ನಾನಿದ್ದಾಗಿನ ನನ್ನ ಗೆಳೆಯ ಗೆಳತಿಯರಿಗೆಲ್ಲ ಮದುವೆಯಾಗಿ ಅವರ ಮಕ್ಕಳಿಗೂ ಮದುವೆಯಾಗಿರಬೇಕು ಈಗ. ಆಗಿದ್ದ ಅನೇಕ ಹಿರಿಯ ತಲೆಗಳು ಈಗಿಲ್ಲ. ಇರುವ ಕೆಲವೇ ಕೆಲವು ಹಿರಿಯರ ಬೆನ್ನು ಬಾಗಿದೆ, ಕಣ್ಣು ಸರಿ ಕಾಣಿಸದೆ, ಕಿವಿ ಸರಿಯಾಗಿ ಕೇಳಿಸದೆ ಕಿವಿ ಹತ್ತಿರ ಹೋಗಿ ಕೂಗಬೇಕು. ಆದರೂ ನಾನು ಇಂಥವಳು, ಇಂಥವರ ಮಗಳು ಎಂದ ಕೂಡಲೇ ಸಾಕಷ್ಟು ಜನ ಗುರುತಿಸಿದರು. ಪ್ರೀತಿಯಿಂದ ಮೈದಡವಿ ಆಸರಿಗೆ ಕೊಟ್ಟರು. ಊಟಮಾಡಿ ಹೋಗುವಂತೆ ಒತ್ತಾಯಿಸಿದರು. ಅದ್ಯಾಕೋ ಆ ಇಡೀ ಊರು ನೋಡಿ ಬಂದವಳಿಗೆ ಅವತ್ತೆಲ್ಲ ಹೃದಯ ತುಂಬಿಬಂದಂತೆನಿಸಿತು.

ರಾಜ್‍ರ ಒಡಹುಟ್ಟಿದವರು ಸಿನಿಮಾದಲ್ಲಿ ಆ ಗಂಡ-ಹೆಂಡತಿ ಇಬ್ಬರೂ ಊರು ಬಿಟ್ಟ ನಂತರ ಅವರ ತಮ್ಮ ಬಂದು ಅವರನ್ನು ಕರೆದೊಯ್ಯುತ್ತಾನೆ. ಹಾಗೇ ಅವನ ಜೊತೆ ಇಡೀ ಊರೇ ಎದ್ದು ಬರುತ್ತದೆ. ಆದರೆ ಹಾಗೆ ನಮ್ಮನ್ನು ಕರೆಯುವ ಯಾವ ತಮ್ಮನೂ ಅಲ್ಲಿಲ್ಲ. ಯಾಕೆಂದರೆ ಅದು ನಮ್ಮೂರಲ್ಲ. ನಮ್ಮದೇ ಆದ ಮನೆ, ಆಸ್ತಿ, ಜಮೀನು ಹೀಗೆ ಏನೂ ಅಲ್ಲಿಲ್ಲ. ಆದರೂ ನನ್ನೂರು ಅದು. ಯಾಕೆಂದರೆ ಅಲ್ಲಿ ನನ್ನ ಬಾಲ್ಯದ ನೆನಪುಗಳಿವೆ, ಯೌವ್ವನದ ನೆನಪುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಅಪ್ಪನ ನೆನಪುಗಳು ಇಂದಿಗೂ ಜೀವಂತವಾಗಿರಿಸಿಕೊಂಡ ನೆಲ ಅದು. ನೀವು ಐನಕೈ ಶಾಸ್ತ್ರಿಗಳ ಮಕ್ಕಳಲ್ಲವಾ ಎಂದು ಯಾರಾದರೂ ಕೇಳಿದರೆ ಅಥವಾ ನಾವೇ ಐನಕೈ ಶಾಸ್ತ್ರಿಗಳ ಮಕ್ಕಳು ಎಂದು ಹೇಳಿಕೊಳ್ಳುವಾಗ ಅವರು ತೋರಿಸುವ ಪ್ರೀತಿ, ಗೌರವ ಇವೆಲ್ಲವೂ ನನ್ನ ಹೃದಯದಲ್ಲಿ ಹಸಿರುಕ್ಕಿಸುವಾಗ ಅದು ನನ್ನೂರಲ್ಲದೆ ಮತ್ತೇನು ಎಂದುಕೊಳ್ಳುತ್ತಲೇ ಇರುತ್ತೇನೆ.

*ಲೇಖಕಿಯ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ. ಪತ್ರಕರ್ತೆಯಾಗಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ವಿಜಯವಾಣಿ ಪತ್ರಿಕೆಯ ಮಹಿಳಾ ಪುರವಣಿ ಮುಖ್ಯಸ್ಥೆಯಾಗಿದ್ದರು. ಪ್ರಸ್ತುತ ಸರ್ಕಾರೇತರ ಸಂಸ್ಥೆ ಸೆಲ್ಕೊದಲ್ಲಿ ಪ್ರೋಗ್ರಾಂ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published.