ಇ-ಜ್ಞಾನ

ಟೆಕ್ ಸುದ್ದಿ

ಮೊಬೈಲ್ ಫೋನ್ ಪರದೆಯ ಗಾತ್ರವನ್ನು ಸಾಧ್ಯವಾದಷ್ಟೂ ದೊಡ್ಡದಾಗಿಸುವ ಪ್ರಯತ್ನದ ಫಲವಾಗಿ ಮೇಲ್ತುದಿಯಲ್ಲಿ ಕಚ್ಚುಮಾಡಿರುವ ವಿನ್ಯಾಸದ ಪರದೆಗಳನ್ನು (ನಾಚ್ ಡಿಸ್‍ಪ್ಲೇ) ಪರಿಚಯಿಸಲಾಗಿತ್ತು. ಈ ವಿನ್ಯಾಸ ಸಾಮಾನ್ಯ ಬಳಕೆದಾರರನ್ನು ಪೂರ್ಣವಾಗಿ ತಲುಪುವ ಮೊದಲೇ ಇನ್ನೊಂದು ಹೊಸಬಗೆಯ ವಿನ್ಯಾಸ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಸೆಲ್ಫಿ ಕ್ಯಾಮೆರಾ ಹೊರತುಪಡಿಸಿ ಬೇರೆಲ್ಲ ಭಾಗಗಳನ್ನೂ ಟಚ್‍ಸ್ಕ್ರೀನ್ ಪರದೆಯ ಒಳಭಾಗದಲ್ಲೇ ಅಡಕಗೊಳಿಸಿರುವುದು ಈ ವಿನ್ಯಾಸದ ವೈಶಿಷ್ಟ್ಯ. ಸೆಲ್ಫಿ ಕ್ಯಾಮೆರಾಗೆ ಪರದೆಯ ಮೇಲ್ತುದಿಯಲ್ಲೇ ಸಣ್ಣದೊಂದು ರಂಧ್ರವನ್ನು ಕೊರೆಯಲಾಗಿದೆ. ಇದು ಕಾಗದದ ಮೇಲೆ ಪಂಚಿಂಗ್ ಯಂತ್ರದಿಂದ ಮಾಡಿದ ರಂಧ್ರದಂತೆಯೇ ಕಾಣುವುದರಿಂದ ಈ ಬಗೆಯ ಪರದೆಗಳಿಗೆ ‘ಹೋಲ್ ಪಂಚ್ ಡಿಸ್‍ಪ್ಲೇ’ ಎಂದು ಹೆಸರಿಡಲಾಗಿದೆ.

ಆಪ್-ತ ಮಿತ್ರ

ನಾವು ಮಾತಿನಲ್ಲಿ ಹೇಳಿದ್ದನ್ನು ಪಠ್ಯರೂಪಕ್ಕೆ ಪರಿವರ್ತಿಸುವ ತಂತ್ರಜ್ಞಾನಕ್ಕೆ ‘ಸ್ಪೀಚ್ ಟು ಟೆಕ್ಸ್ಟ್’ ಎಂಬ ಹೆಸರಿದೆ (ಧ್ವನಿಯಿಂದ ಪಠ್ಯಕ್ಕೆ ಬದಲಿಸುವ ಸೌಲಭ್ಯ ಎಂಬ ಅರ್ಥದಲ್ಲಿ). ನಮ್ಮ ಮಾತುಗಳನ್ನು ಬೇರೆಯವರಿಂದ ಬರೆಸಿದಂತೆಯೇ (ಉಕ್ತಲೇಖನ) ಕೆಲಸಮಾಡುವುದು ಇದರ ವೈಶಿಷ್ಟ್ಯ. ಈ ತಂತ್ರಜ್ಞಾನವನ್ನು ಬಳಸಿ ಕನ್ನಡದ ಮಾತನ್ನೂ ಗುರುತಿಸುವ ಹಲವು ತಂತ್ರಾಂಶಗಳು ಇದೀಗ ಲಭ್ಯವಿವೆ. ಗೂಗಲ್ ಸಂಸ್ಥೆಯ ‘ಜಿಬೋರ್ಡ್’ ಕೀಲಿಮಣೆ ಇಂತಹ ವ್ಯವಸ್ಥೆಗಳಿಗೊಂದು ಉದಾಹರಣೆ. ಇಂತಹ ಬಹುತೇಕ ತಂತ್ರಾಂಶಗಳು ನಮ್ಮ ಮಾತನ್ನು ಗುರುತಿಸಬೇಕಾದರೆ ನಮ್ಮ ಮೊಬೈಲಿಗೆ ಅಂತರಜಾಲ ಸಂಪರ್ಕ ಇರಬೇಕಾದ್ದು ಕಡ್ಡಾಯ.
ಪ್ಲೇಸ್ಟೋರ್ ಕೊಂಡಿ: tinyurl.com/GboardKan

ಜಾಲಜಗತ್ತು

ವಿಶ್ವವ್ಯಾಪಿ ಜಾಲದಲ್ಲಿ ಯಾವಾಗಲೂ ಬದಲಾವಣೆಯದೇ ಭರಾಟೆ. ಇಲ್ಲಿರುವ ಮಾಹಿತಿಯೂ ವೆಬ್‍ಪುಟ-ಜಾಲತಾಣಗಳೂ ಬಹಳ ಕ್ಷಿಪ್ರವಾಗಿ ಬದಲಾಗುತ್ತಿವೆ, ಕೆಲವೊಮ್ಮೆ ಕಣ್ಮರೆಯೂ ಆಗಿಬಿಡುತ್ತವೆ. ಈಗ ಅಸ್ತಿತ್ವದಲ್ಲೇ ಇಲ್ಲದಿರುವ ವೆಬ್ ಪುಟದಲ್ಲಿ ಹಿಂದೆ ಯಾವತ್ತೋ ನೋಡಿದ ಮಾಹಿತಿಯನ್ನು ಈಗ ಮತ್ತೆ ನೋಡುವಂತಿದ್ದರೆ? ಇದನ್ನು ‘ವೇಬ್ಯಾಕ್ ಮಶೀನ್’ ಎನ್ನುವ ಜಾಲತಾಣ ಸಾಧ್ಯವಾಗಿಸುತ್ತದೆ. ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಪ್ರಾರಂಭವಾದ, ಬೆಳೆದ, ಕಣ್ಮರೆಯಾದ 34,500 ಕೋಟಿಗಿಂತ ಹೆಚ್ಚಿನ ಪುಟಗಳನ್ನು ನಾವಿಲ್ಲಿ ಮತ್ತೆ ನೋಡಬಹುದು. ಒಂದೇ ತಾಣ ಅಥವಾ ಪುಟದ ಸ್ವರೂಪ ಕಾಲಕ್ರಮೇಣ ಬದಲಾದ ರೀತಿಯನ್ನೂ ಇದು ನಮ್ಮೆದುರು ಕಟ್ಟಿಕೊಡುತ್ತದೆ.
ಜಾಲತಾಣದ ಕೊಂಡಿ: archive.org/web

ಟೆಕ್ ಪದ

ಮೊಬೈಲ್ ತಂತ್ರಜ್ಞಾನ ಪರಿಚಯವಾದಾಗಿನಿಂದ ಇಂದಿನವರೆಗೂ ಆಗಿರುವ ಬದಲಾವಣೆಗಳನ್ನು ಹಲವು ತಲೆಮಾರುಗಳನ್ನಾಗಿ (‘ಜನರೇಶನ್’) ವಿಂಗಡಿಸಲಾಗಿದೆ. 2ಜಿ, 3ಜಿ ಇತ್ಯಾದಿ ಹೆಸರುಗಳಲ್ಲಿ ಕಾಣಸಿಗುವ ‘ಜಿ’ ಅಕ್ಷರ ಪ್ರತಿನಿಧಿಸುವುದು ಇದನ್ನೇ. ಸದ್ಯ ನಮ್ಮಲ್ಲಿ ಅನೇಕರು 4ಜಿ ತಂತ್ರಜ್ಞಾನ ಬಳಸುತ್ತಿದ್ದೇವಲ್ಲ, ಇದರ ಮುಂದಿನ ಹಂತವೇ ಇದೀಗ ಅಭಿವೃದ್ಧಿಯಾಗುತ್ತಿರುವ 5ಜಿ ತಂತ್ರಜ್ಞಾನ. ಸದ್ಯ ಭಾರೀ ಎನ್ನಿಸುತ್ತಿರುವ, ಹಲವು ಎಂಬಿಪಿಎಸ್‍ಗಳಲ್ಲಿರುವ ಮೊಬೈಲ್ ಅಂತರಜಾಲ ಸಂಪರ್ಕದ ವೇಗವನ್ನು ಈ ತಂತ್ರಜ್ಞಾನ ಹಲವಾರು ಪಟ್ಟು ಹೆಚ್ಚಿಸಿ ಜಿಬಿಪಿಎಸ್ (ಗಿಗಾಬಿಟ್ಸ್ ಪರ್ ಸೆಕೆಂಡ್) ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ತಜ್ಞರು ಹೇಳುತ್ತಾರೆ. ಇಷ್ಟೆಲ್ಲ ವೇಗದ ಸಂಪರ್ಕ ಬಳಸಿ ಎಚ್‍ಡಿ ಚಲನಚಿತ್ರದಂತಹ ಭಾರೀ ಕಡತಗಳನ್ನೂ ಕೆಲವೇ ಸೆಕೆಂಡುಗಳಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಂತೆ.

ಟೆಕ್ ಸಲಹೆ

ಸಮಾಜಜಾಲಗಳಲ್ಲಿ ಬೇಕಾದಷ್ಟು ಸಮಯ ವ್ಯರ್ಥವಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಕೇಳಸಿಗುವ ದೂರು. ಬೇರೆಯವರು ಹೇಳುವುದೇನು, ಈ ವಿಷಯವನ್ನು ಅನೇಕ ಬಳಕೆದಾರರೂ ಒಪ್ಪುತ್ತಾರೆ. ಫೇಸ್‍ಬುಕ್ ನೋಡುತ್ತ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ಎನ್ನುವುದು ಅವರಲ್ಲಿ ಅನೇಕರ ಅನಿಸಿಕೆ. ಈ ಸಮಸ್ಯೆಗೆ ಫೇಸ್‍ಬುಕ್ ಆಪ್ ತನ್ನದೇ ಆದ ಪರಿಹಾರವೊಂದನ್ನು ಪರಿಚಯಿಸಿದೆ: ‘ಸೆಟಿಂಗ್ಸ್ ಆಂಡ್ ಪ್ರೈವಸಿ’ ಅಡಿಯಲ್ಲಿ ‘ಯುವರ್ ಟೈಮ್ ಆನ್ ಫೇಸ್‍ಬುಕ್’ ಕ್ಲಿಕ್ ಮಾಡಿದರೆ ನಾವು ಪ್ರತಿದಿನವೂ ಫೇಸ್‍ಬುಕ್‍ನಲ್ಲಿ ಎಷ್ಟು ಹೊತ್ತು ಕಳೆಯುತ್ತಿದ್ದೇವೆ ಎಂದು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ನಿರ್ದಿಷ್ಟ ಕಾಲಾವಧಿಯ (ಉದಾ: ದಿನಕ್ಕೆ 30 ನಿಮಿಷ) ನಂತರ ಆ ಕುರಿತ ಸೂಚನೆಯೊಂದು ನಮ್ಮನ್ನು ಎಚ್ಚರಿಸುವಂತೆಯೂ ವ್ಯವಸ್ಥೆ ಮಾಡಿಕೊಳ್ಳಬಹುದು.

ಹಿಂದಿನ ಸಮಾಚಾರ

ಸಮಾಜಜಾಲಗಳ (ಸೋಶಿಯಲ್ ನೆಟ್‍ವರ್ಕ್) ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಫೇಸ್‍ಬುಕ್. ಇದು ಮೊದಲಿಗೆ ಪ್ರಾರಂಭವಾದದ್ದು 2004ರ ಫೆಬ್ರುವರಿ 4ರಂದು. ಫೇಸ್‍ಬುಕ್ ಸ್ಥಾಪಕನೆಂದೇ ಪರಿಚಿತನಾಗಿರುವ ಮಾರ್ಕ್ ಜುಕರ್‍ಬರ್ಗ್ ಈ ತಾಣವನ್ನು ತನ್ನ ಸ್ನೇಹಿತರೊಡನೆ ಸೇರಿ ರೂಪಿಸಿದಾಗ ಅದು ಇಂದಿನಂತೆ ಸಾರ್ವಜನಿಕ ತಾಣ ಆಗಿರಲಿಲ್ಲ. ಹಾರ್‍ವರ್ಡ್ ವಿವಿಯ ವಿದ್ಯಾರ್ಥಿಗಳು ಮಾತ್ರ ಅದನ್ನು ಬಳಸುವುದು ಸಾಧ್ಯವಿತ್ತು. ಅಷ್ಟೇ ಅಲ್ಲ, ಅದರ ಹೆಸರು ಕೂಡ ‘ದ ಫೇಸ್‍ಬುಕ್’ ಎಂದಿತ್ತು. ಮುಂದಿನ ದಿನಗಳಲ್ಲಿ ಈ ತಾಣದ ಹೆಸರಿನ ಜೊತೆಗೆ ಅದರ ಸ್ವರೂಪವೂ ಬದಲಾಯಿತು. ಜನರನ್ನು ಸೇರಿಸುವ ವೇದಿಕೆಯಾಗಿ ಬೆಳೆದಿದ್ದಷ್ಟೇ ಅಲ್ಲ, ಅವರ ಮಾಹಿತಿಯನ್ನು ಬಳಸಿಕೊಂಡು ಸಾಕಷ್ಟು ಲಾಭವನ್ನೂ ಮಾಡಿಕೊಂಡಿತು. 2018ರ ಅಂತ್ಯದಲ್ಲಿದ್ದಂತೆ ಫೇಸ್‍ಬುಕ್‍ನ ಮಾರುಕಟ್ಟೆ ಮೌಲ್ಯ ಸುಮಾರು 40,000 ಕೋಟಿ ಡಾಲರುಗಳು!

Leave a Reply

Your email address will not be published.